ETV Bharat / business

ಇನ್ಫೊಸಿಸ್‌ ಪ್ರಶಸ್ತಿಗೆ ಹೊಸ ದಿಕ್ಕು; ಇನ್ಫೊಸಿಸ್ ಸೈನ್ಸ್ ಫೌಂಡೇಷನ್‌ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ - Infosys award

author img

By ETV Bharat Karnataka Team

Published : May 15, 2024, 6:12 PM IST

ಇನ್ಮುಂದೆ ಇನ್ಫೊಸಿಸ್ ಪ್ರಶಸ್ತಿ ವೃತ್ತಿಯ ಆರಂಭದ ಹಂತಗಳಲ್ಲಿ ಇರುವವರನ್ನ ಗುರುತಿಸಿ, ಗೌರವಿಸುವ ಕೆಲಸ ಮಾಡಲಿದೆ ಎಂದು ಇನ್ಫಸಿಸ್​ ಸೈನ್ಸ್​ ಫೌಂಡೇಷನ್ ಅಧ್ಯಕ್ಷ ಕ್ರಿಸ್​ ಗೋಪಾಲಕೃಷ್ಣನ್ ಹೇಳಿದರು.

Chris Gopalakrishnan
ಕ್ರಿಸ್ ಗೋಪಾಲಕೃಷ್ಣನ್ (ETV Bharat)

ಬೆಂಗಳೂರು : ಇನ್ಫೊಸಿಸ್‌ ಪ್ರಶಸ್ತಿಗೆ ಹೊಸ ದಿಕ್ಕನ್ನು ಕಲ್ಪಿಸಲಾಗುತ್ತಿದೆ. ಇನ್ಮುಂದೆ ವೃತ್ತಿಯ ಮಧ್ಯಭಾಗದಲ್ಲಿ ಇರುವವರನ್ನು ಗುರುತಿಸಿ, ಅವರನ್ನು ಗೌರವಿಸುವ ಬದಲು ಈ ಪ್ರಶಸ್ತಿ ವೃತ್ತಿಯ ಆರಂಭದ ಹಂತಗಳಲ್ಲಿ ಇರುವವರನ್ನು ಗುರುತಿಸಿ, ಗೌರವಿಸುವ ಕೆಲಸ ಮಾಡಲಿದೆ ಎಂದು ಇನ್ಫೊಸಿಸ್ ಸೈನ್ಸ್ ಫೌಂಡೇಷನ್‌ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ಮಾಹಿತಿ ನೀಡಿದರು.

ಬುಧವಾರ ನಗರದ ಸೌತ್ ಎಂಡ್ ಸರ್ಕಲ್​ನಲ್ಲಿರುವ ಇನ್ಫೊಸಿಸ್ ಸೈನ್ಸ್ ಫೌಂಡೇಷನ್‌ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಭವಿಷ್ಯದಲ್ಲಿ ಸಾಧನೆ ಮಾಡಬಲ್ಲರು ಎನ್ನುವವರನ್ನು ಗೌರವಿಸುವ ಹಾಗೂ ಸಾಮರ್ಥ್ಯ ಇರುವವರನ್ನು ಗುರುತಿಸುವ ಗುರಿಯನ್ನು ಇದು ಹೊಂದಿದೆ. ದೀರ್ಘಾವಧಿಯ ಧನಾತ್ಮಕ ಪರಿವರ್ತನೆಗಳನ್ನು ಕಾಣುವ ಉದ್ದೇಶದಿಂದ ಪ್ರಶಸ್ತಿಗೆ ಆಯ್ಕೆಯಾಗುವವರ ಗರಿಷ್ಠ ವಯೋಮಿತಿಯನ್ನು 40 ವರ್ಷಕ್ಕೆ ಪರಿಷ್ಕರಿಸಲಾಗುತ್ತಿದೆ ಎಂದು ತಿಳಿಸಿದರು.

ಮಾನವ ಕುಲಕ್ಕೆ ಪ್ರಯೋಜನ ತಂದುಕೊಡುವ ಅತ್ಯುತ್ತಮ ಸಂಶೋಧನೆಗಳನ್ನು ಗುರುತಿಸುವುದು ಮತ್ತು ಯುವ ಸಂಶೋಧಕರಿಗೆ, ವಿಜ್ಞಾನಿಗಳಾಗುವ ಬಯಕೆ ಹೊಂದಿರುವವರಿಗೆ ಮಾದರಿ ವ್ಯಕ್ತಿಗಳನ್ನು ಸೃಷ್ಟಿಸಿಕೊಡುವ ಇನ್ಫೊಸಿಸ್ ಪ್ರಶಸ್ತಿಯ ಮೂಲಭೂತ ಗುರಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಸಮನ್ವಯ ಮತ್ತು ಸಂಶೋಧನೆಯ ಲಭ್ಯತೆಯನ್ನು ಹೆಚ್ಚಿಸುವ ಉದ್ದೇಶಕ್ಕೆ ಬಲ ತಂದುಕೊಡುವ ನಿಟ್ಟಿನಲ್ಲಿ ಇನ್ಫೊಸಿಸ್ ಪ್ರಶಸ್ತಿ ಪಡೆಯುವ ಸಂದರ್ಭದಲ್ಲಿ ಭಾರತದ ಹೊರಗಡೆ ನೆಲೆಸಿರುವ ವ್ಯಕ್ತಿಗಳು ಭಾರತದಲ್ಲಿ ತಮ್ಮ ಆಯ್ಕೆಯ ಸಂಸ್ಥೆಯಲ್ಲಿ ಒಂದಿಷ್ಟು ಕಾಲ ಕೆಲಸ ಮಾಡಿರಬೇಕು ಎನ್ನುವ ನಿಯಮವನ್ನು ತರಲಾಗುತ್ತಿದೆ ಎಂದರು.

ಇನ್ಫೊಸಿಸ್ ಪ್ರಶಸ್ತಿಯನ್ನು ಗುರುತಿಸುವ ವಿಭಾಗಗಳು ಬಹುತೇಕ ಮೊದಲಿನಂತೆಯೇ ಇರಲಿವೆ. ಆದರೆ ಇನ್ನು ಮುಂದೆ ಅರ್ಥಶಾಸ್ತ್ರವನ್ನು ಒಂದು ಪ್ರತ್ಯೇಕ ವಿಭಾಗವಾಗಿ ಗುರುತಿಸಲಾಗುತ್ತದೆ. ಈ ಮೊದಲು ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಪ್ರಶಸ್ತಿಯನ್ನು ಸಮಾಜ ವಿಜ್ಞಾನ ವಿಭಾಗದಲ್ಲಿ ನೀಡಲಾಗುತ್ತಿತ್ತು. 2024ನೆಯ ಸಾಲಿನಿಂದ ಇನ್ಫೊಸಿಸ್ ಪ್ರಶಸ್ತಿಯನ್ನು ಆರು ವಿಭಾಗಗಳಲ್ಲಿ ನೀಡಲಾಗುತ್ತದೆ. ಅರ್ಥಶಾಸ್ತ್ರ, ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ, ಮಾನವಿಕ ಮತ್ತು ಸಮಾಜ ವಿಜ್ಞಾನ, ಜೀವ ವಿಜ್ಞಾನ, ಗಣಿತ ವಿಜ್ಞಾನ ಹಾಗೂ ಭೌತವಿಜ್ಞಾನದ ವಿಷಯಗಳನ್ನಾಗಿ ವಿಂಗಡಿಸಲಾಗಿದೆ ಎಂದು ಅವರು ಹೇಳಿದರು.

15 ವರ್ಷಗಳ ಹಿಂದೆ ಪ್ರಶಸ್ತಿಯನ್ನು ಆರಂಭಿಸಿದಾಗಿನಿಂದ, ಇನ್ಫೊಸಿಸ್ ಸೈನ್ಸ್‌ ಫೌಂಡೇಷನ್ ವಿವಿಧ ಜ್ಞಾನಶಾಖೆಗಳಿಗೆ ಸೇರಿದ ಒಟ್ಟು 92 ಮಂದಿ ಅದ್ಭುತ ಪ್ರತಿಭಾವಂತರನ್ನು ಗುರುತಿಸುವ ಕೆಲಸ ಮಾಡಿದೆ. ವೈಜ್ಞಾನಿಕ ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳುವ ವಿಚಾರದಲ್ಲಿ ಬಹಳ ಪ್ರೀತಿಯನ್ನು ಹೊಂದಿರುವ ಯುವ ವಿದ್ವಾಂಸರನ್ನು ಸೃಷ್ಟಿಸುವುದು ನಮ್ಮ ಉದ್ದೇಶವಾಗಿದೆ.

ಸಮಾಜಕ್ಕೆ ಪ್ರಯೋಜನ ತಂದುಕೊಡುವ ಸಾಮರ್ಥ್ಯ ಇರುವ ರೀತಿಯಲ್ಲಿ ಕೆಲಸವನ್ನು ಬೆಳೆಸುವುದು, ವ್ಯಕ್ತಿಗಳಿಗೆ ಹೆಚ್ಚಿನ ಅವಕಾಶ ಒದಗಿಸಿಕೊಡುವುದು ಕೂಡ ನಮ್ಮ ಉದ್ದೇಶವಾಗಿದೆ. ಈ ಉದ್ದೇಶಗಳೇ ಇನ್ಫೊಸಿಸ್‌ ಪ್ರಶಸ್ತಿಯಲ್ಲಿ ಈಗ ಮಾಡುತ್ತಿರುವ ಬದಲಾವಣೆಗಳಿಗೆ ಮೂಲವಾಗಿದೆ. ಈ ಬದಲಾವಣೆಯು ಮುಂದಿನ ದಿನಗಳಲ್ಲಿ ಸಂಶೋಧನೆಗೆ ಹಾಗೂ ಉತ್ತಮ ಭವಿಷ್ಯ ರೂಪಿಸಲು ಯುವಕರಿಗೆ ಪ್ರಚೋದನೆ ನೀಡುವ ಕೆಲಸ ಮಾಡುವ ನಂಬಿಕೆ ಇದೆ ಎಂದು ಗೋಪಾಲಕೃಷ್ಣನ್ ಆಶಯವನ್ನು ವ್ಯಕ್ತಪಡಿಸಿದರು.

ಇದನ್ನೂ ಓದಿ : ಮುಂದಿನ ತಿಂಗಳು ನಡೆಯುವ CII ಶೃಂಗಸಭೆ ಗಡಿಗಳನ್ನು ಮೀರಿದ ನಾವೀನ್ಯತೆಗೆ ಸಾಕ್ಷಿಯಾಗಲಿದೆ : ಕ್ರಿಸ್ ಗೋಪಾಲಕೃಷ್ಣನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.