ETV Bharat / business

ಜಾಗತಿಕವಾಗಿ 50 ಲಕ್ಷ ಪರಿಸರ ಸ್ನೇಹಿ ವಾಹನ ಮಾರಾಟ ಮಾಡಿದ ಹ್ಯುಂಡೈ

author img

By ETV Bharat Karnataka Team

Published : Mar 17, 2024, 3:56 PM IST

ಹ್ಯುಂಡೈ ಮೋಟಾರ್ ಮತ್ತು ಕಿಯಾ ಕಳೆದ 15 ವರ್ಷಗಳಲ್ಲಿ 5 ದಶಲಕ್ಷಕ್ಕೂ ಹೆಚ್ಚು ಪರಿಸರ ಸ್ನೇಹಿ ವಾಹನಗಳನ್ನು ಮಾರಾಟ ಮಾಡಿವೆ.

Hyundai Motor, Kia's sells 5mn eco-friendly cars globally: Report
Hyundai Motor, Kia's sells 5mn eco-friendly cars globally: Report

ಸಿಯೋಲ್: ದಕ್ಷಿಣ ಕೊರಿಯಾದ ಅತಿದೊಡ್ಡ ಕಾರು ತಯಾರಕ ಕಂಪನಿಗಳಾದ ಹ್ಯುಂಡೈ ಮೋಟಾರ್ ಮತ್ತು ಕಿಯಾ ಕಳೆದ 15 ವರ್ಷಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಒಟ್ಟು 5 ದಶಲಕ್ಷಕ್ಕೂ (50 ಲಕ್ಷ) ಹೆಚ್ಚು ಪರಿಸರ ಸ್ನೇಹಿ ವಾಹನಗಳನ್ನು ಮಾರಾಟ ಮಾಡಿವೆ ಎಂದು ಕಂಪನಿಯ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳು (ಎಚ್ಇವಿ), ಪ್ಲಗ್-ಇನ್ ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳು (ಪಿಎಚ್ಇವಿಗಳು), ಎಲೆಕ್ಟ್ರಿಕ್ ವಾಹನಗಳು (ಇವಿಗಳು) ಮತ್ತು ಫ್ಯೂಯೆಲ್ ಸೆಲ್ ಎಲೆಕ್ಟ್ರಿಕ್ ವಾಹನಗಳು (ಎಫ್​​ಸಿಇವಿಗಳು) ಸೇರಿದಂತೆ ಒಟ್ಟು 5.11 ಮಿಲಿಯನ್ ಸಂಖ್ಯೆಯ ಪರಿಸರ ಸ್ನೇಹಿ ಕಾರುಗಳನ್ನು ಎರಡೂ ಕಂಪನಿಗಳು ಜನವರಿ ಅಂತ್ಯದ ವೇಳೆಗೆ ಮಾರಾಟ ಮಾಡಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

2023 ರ ವರ್ಷವೊಂದರಲ್ಲಿಯೇ ಹ್ಯುಂಡೈ ಮೋಟಾರ್ ಮತ್ತು ಅದರ ಸಣ್ಣ ಅಂಗಸಂಸ್ಥೆ ಕಿಯಾ ಒಟ್ಟು 1.36 ಮಿಲಿಯನ್ ಪರಿಸರ ಸ್ನೇಹಿ ವಾಹನಗಳನ್ನು ಮಾರಾಟ ಮಾಡಿದ್ದು, ಸತತ ಎರಡನೇ ವರ್ಷ 1 ಮಿಲಿಯನ್ ಗಡಿಯನ್ನು ತಲುಪಿವೆ. ಒಟ್ಟು ಮಾರಾಟದಲ್ಲಿ ಎಚ್ಇವಿಗಳು ಶೇಕಡಾ 57.8 ರಷ್ಟು ಪಾಲು ಹೊಂದಿದ್ದು, ನಂತರದ ಸ್ಥಾನಗಳಲ್ಲಿ ಇವಿಗಳು (30.8 ಶೇಕಡಾ), ಪಿಎಚ್ಇವಿಗಳು (10.6 ಶೇಕಡಾ) ಮತ್ತು ಎಫ್​​ಸಿಇವಿಗಳು (0.8 ಶೇಕಡಾ) ಇವೆ.

ಕಿಯಾ ಕಂಪನಿಯ ನಿರೋ ಎಚ್ ಇವಿ ಮಾಡಲ್​ನ 6,06,000 ವಾಹನಗಳು ಮಾರಾಟವಾಗಿದ್ದರೆ, ಹ್ಯುಂಡೈನ ಟಕ್ಸನ್ ಹೈಬ್ರಿಡ್ ಮತ್ತು ಕೋನಾ ಎಲೆಕ್ಟ್ರಿಕ್ ಕ್ರಮವಾಗಿ 3,56,000 ಮತ್ತು 3,32,000 ವಾಹನಗಳು ಮಾರಾಟವಾಗಿವೆ ಎಂದು ವರದಿ ತಿಳಿಸಿದೆ. ಜಾಗತಿಕ ಇವಿ ಮಾರುಕಟ್ಟೆಯ ಬೆಳವಣಿಗೆಗೆ ತಮ್ಮ ವಾಹನಗಳ ಮಾರಾಟವು ದೊಡ್ಡ ಮಟ್ಟದ ಕೊಡುಗೆ ನೀಡಿದೆ ಮತ್ತು ಈ ವರ್ಷ ಪರಿಸರ ಸ್ನೇಹಿ ವಾಹನ ಶ್ರೇಣಿಯನ್ನು ವಿಸ್ತರಿಸಲು ಯೋಜಿಸಿರುವುದಾಗಿ ಹ್ಯುಂಡೈ ಮೋಟಾರ್ ಕಂಪನಿ ಹೇಳಿದೆ.

ಹ್ಯುಂಡೈ ಈ ವರ್ಷದ ದ್ವಿತೀಯಾರ್ಧದಲ್ಲಿ ಮಿನಿ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ (ಎಸ್ ಯುವಿ) ಕ್ಯಾಸ್ಪರ್ ನ ಎಲೆಕ್ಟ್ರಿಕ್ ಮಾದರಿಯನ್ನು ಬಿಡುಗಡೆ ಮಾಡಲು ಯೋಜಿಸಿದ್ದು, ಕಿಯಾ ತನ್ನ ಹೊಸ ಎಲೆಕ್ಟ್ರಿಕ್ ಎಸ್ ಯುವಿ ಇವಿ 3 ಅನ್ನು ಮೊದಲಾರ್ಧದಲ್ಲಿ ಅನಾವರಣಗೊಳಿಸಲಿದೆ. ಹ್ಯುಂಡೈ ಮತ್ತು ಕಿಯಾ 2024 ರಲ್ಲಿ ಒಟ್ಟು 1.5 ಮಿಲಿಯನ್ ಯುನಿಟ್ ಪರಿಸರ ಸ್ನೇಹಿ ಕಾರುಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿವೆ.

ಇದನ್ನೂ ಓದಿ : ತಮಿಳುನಾಡಿನಲ್ಲಿ ಟಾಟಾ ಮೋಟರ್ಸ್​ 9 ಸಾವಿರ ಕೋಟಿ ರೂ. ಹೂಡಿಕೆ: 5000 ಉದ್ಯೋಗ ಸೃಷ್ಟಿ ಸಾಧ್ಯತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.