ETV Bharat / business

ಕೇಂದ್ರದಿಂದ 262 ಲಕ್ಷ ಟನ್ ಗೋಧಿ ಖರೀದಿ: ಎಂಎಸ್​ಪಿಯಡಿ 22 ಲಕ್ಷ ರೈತರಿಗೆ 59 ಸಾವಿರ ಕೋಟಿ ರೂ. ಪಾವತಿ - wheat procurement in full swing

author img

By ETV Bharat Karnataka Team

Published : May 24, 2024, 4:21 PM IST

ಸದ್ಯದ ರಬಿ ಸೀಸನ್​ ನಲ್ಲಿ ಕೇಂದ್ರ ಸರ್ಕಾರವು ಈಗಾಗಲೇ 262.40 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ಖರೀದಿಸಿ ದಾಸ್ತಾನು ಮಾಡಿದೆ.

ಕೇಂದ್ರದಿಂದ 262 ಲಕ್ಷ ಟನ್ ಗೋಧಿ ಖರೀದಿ
ಕೇಂದ್ರದಿಂದ 262 ಲಕ್ಷ ಟನ್ ಗೋಧಿ ಖರೀದಿ (ians)

ನವದೆಹಲಿ : ಪ್ರಸಕ್ತ ರಬಿ ಮಾರುಕಟ್ಟೆ ಋತುವಿನಲ್ಲಿ ಕೇಂದ್ರ ಸರ್ಕಾರ ವಿವಿಧ ರಾಜ್ಯಗಳಲ್ಲಿ ಈಗಾಗಲೇ 262.40 ಲಕ್ಷ ಮೆಟ್ರಿಕ್ ಟನ್ ಗೋಧಿ ಖರೀದಿಸಿ ದಾಸ್ತಾನು ಮಾಡಿದೆ. ಇದು ಕಳೆದ ವರ್ಷದ ಒಟ್ಟು 262.02 ಲಕ್ಷ ಮೆಟ್ರಿಕ್ ಟನ್ ಖರೀದಿ ಮೀರಿಸಿದೆ ಎಂದು ಆಹಾರ ಸಚಿವಾಲಯ ಶುಕ್ರವಾರ ತಿಳಿಸಿದೆ. 2024-25 ರ ಹಿಂಗಾರು ಮಾರುಕಟ್ಟೆ ಋತುವಿನಲ್ಲಿ ಒಟ್ಟು 22.31 ಲಕ್ಷ ರೈತರು ಎಂಎಸ್​ಪಿ ಅಡಿ ಒಟ್ಟಾರೆ 59,715 ಕೋಟಿ ರೂ. ಲಾಭ ಪಡೆದಿದ್ದಾರೆ.

ಮುಖ್ಯವಾಗಿ 5 ರಾಜ್ಯಗಳಿಂದ ಗೋಧಿ ಖರೀದಿ ಮಾಡಲಾಗಿದೆ. ಪಂಜಾಬ್ 124.26 ಲಕ್ಷ ಮೆಟ್ರಿಕ್ ಟನ್ (ಎಲ್ಎಂಟಿ) ದಾಸ್ತಾನಿನೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಹರಿಯಾಣ 71.49 ಎಲ್ಎಂಟಿ ಮತ್ತು ಮಧ್ಯಪ್ರದೇಶ 47.78 ಎಲ್ಎಂಟಿ ದಾಸ್ತಾನಿನೊಂದಿಗೆ ಮೂರನೇ ಸ್ಥಾನದಲ್ಲಿವೆ. ರಾಜಸ್ಥಾನ ಮತ್ತು ಉತ್ತರ ಪ್ರದೇಶ ಕ್ರಮವಾಗಿ 9.66 ಎಲ್ ಎಂಟಿ ಮತ್ತು 9.07 ಎಲ್ ಎಂಟಿಯೊಂದಿಗೆ ನಂತರದ ಸ್ಥಾನದಲ್ಲಿವೆ.

ಗೋಧಿ ಖರೀದಿ ಮತ್ತು ದಾಸ್ತಾನು ಸಾಮಾನ್ಯವಾಗಿ ಏಪ್ರಿಲ್​ನಿಂದ ಮಾರ್ಚ್ ವರೆಗೆ ನಡೆಯುತ್ತದೆ. ಆದರೆ, ಈ ವರ್ಷ ಕೇಂದ್ರವು ಬೆಳೆ ಆಗಮನದ ಆಧಾರದ ಮೇಲೆ ಖರೀದಿ ಮಾಡಲು ರಾಜ್ಯಗಳಿಗೆ ಅವಕಾಶ ನೀಡಿದೆ. ಹೀಗಾಗಿ ಹೆಚ್ಚಿನ ರಾಜ್ಯಗಳಲ್ಲಿ, ಖರೀದಿಯು ಮಾರ್ಚ್ ಆರಂಭದಲ್ಲಿಯೇ ಪ್ರಾರಂಭವಾಗಿದೆ. 2024-25ರ ಮಾರುಕಟ್ಟೆ ವರ್ಷದಲ್ಲಿ 300 ರಿಂದ 320 ಮಿಲಿಯನ್ ಟನ್ ಗೋಧಿ ಖರೀದಿಸುವ ಗುರಿಯನ್ನು ಸರ್ಕಾರ ನಿಗದಿಪಡಿಸಿದೆ.

2023-24 ರ ಖಾರಿಫ್ ಮಾರುಕಟ್ಟೆ ಯೋಜನೆಯಡಿ 98.26 ಲಕ್ಷ ರೈತರಿಂದ ನೇರವಾಗಿ 489.15 ಎಲ್ಎಂಟಿ ಅಕ್ಕಿಗೆ ಸಮನಾದ 728.42 ಎಲ್ಎಂಟಿ ಭತ್ತವನ್ನು ಸಂಗ್ರಹಿಸಲಾಗಿದೆ. ಇದಕ್ಕಾಗಿ ಎಂಎಸ್​ಪಿ ಯೋಜನೆಯಡಿ ರೈತರಿಗೆ ಒಟ್ಟು 1,60,472 ಕೋಟಿ ರೂಪಾಯಿ ಪಾವತಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.

ಕೇಂದ್ರ ಸರ್ಕಾರದ ದಾಸ್ತಾನಿನಲ್ಲಿ ಗೋಧಿ ಮತ್ತು ಅಕ್ಕಿಯ ಸಂಯೋಜಿತ ದಾಸ್ತಾನು ಈಗ 600 ಎಲ್ಎಂಟಿಯನ್ನು ದಾಟಿದೆ. ಇದು ಪಿಎಂಜಿಕೆಎವೈ ಮತ್ತು ಇತರ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಆಹಾರ ಧಾನ್ಯಗಳ ಅಗತ್ಯತೆಗಳನ್ನು ಪೂರೈಸಲು ಮತ್ತು ಮಾರುಕಟ್ಟೆಯಲ್ಲಿ ಮಧ್ಯಸ್ಥಿಕೆ ವಹಿಸಲು ಸರ್ಕಾರಕ್ಕೆ ಅನುಕೂಲಕರವಾಗಿದೆ.

ಸರ್ಕಾರವು ಗೋಧಿಗೆ ಪ್ರತಿ ಕ್ವಿಂಟಾಲ್​ಗೆ 2,275 ರೂ.ಗಳ ಎಂಎಸ್​ಪಿಯನ್ನು ಘೋಷಿಸಿತ್ತು. ಇದು ಹಿಂದಿನ ಋತುವಿಗೆ ಹೋಲಿಸಿದರೆ ಪ್ರತಿ ಕ್ವಿಂಟಾಲ್​ಗೆ 150 ರೂ. ಏರಿಕೆಯಾಗಿದೆ. ಎಂಎಸ್​ಪಿ ಜೊತೆಗೆ ರಾಜಸ್ಥಾನ ಮತ್ತು ಮಧ್ಯಪ್ರದೇಶಗಳು ತಮ್ಮ ರಾಜ್ಯಗಳಲ್ಲಿ ಖರೀದಿಯನ್ನು ಹೆಚ್ಚಿಸಲು ಪ್ರತಿ ಕ್ವಿಂಟಾಲ್​ಗೆ 125 ರೂ.ಗಳ ಬೋನಸ್ ಘೋಷಿಸಿವೆ.

ಇದನ್ನೂ ಓದಿ : ಭಾರತದ ವೇರೆಬಲ್ ಡಿವೈಸ್​ ಮಾರುಕಟ್ಟೆ ಶೇ 2ರಷ್ಟು ಬೆಳವಣಿಗೆ: 2.56 ಕೋಟಿ ಸಾಧನ ಮಾರಾಟ - wearable device market

ETV Bharat Logo

Copyright © 2024 Ushodaya Enterprises Pvt. Ltd., All Rights Reserved.