ETV Bharat / bharat

ಉತ್ತರಾಖಂಡ: ಸಿಲ್ಕ್ಯಾರಾ ಸುರಂಗದಲ್ಲಿ ಯಂತ್ರ ಪಲ್ಟಿಯಾಗಿ ಕಾರ್ಮಿಕ ಸಾವು - SILKYARA TUNNEL

author img

By ETV Bharat Karnataka Team

Published : Mar 26, 2024, 4:13 PM IST

ಶಾಟ್‌ಕ್ರೀಟ್ ಯಂತ್ರ ಪಲ್ಟಿಯಾದ ಪರಿಣಾಮ ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರಾ ಸುರಂಗದಲ್ಲಿ ಜರುಗಿದೆ.

Worker dies in Silkyara Tunnel due to overturning of shotcrete machine
ಉತ್ತರಾಖಂಡ: ಸಿಲ್ಕ್ಯಾರಾ ಸುರಂಗದಲ್ಲಿ ಯಂತ್ರ ಪಲ್ಟಿಯಾಗಿ ಕಾರ್ಮಿಕ ಸಾವು

ಉತ್ತರಕಾಶಿ (ಉತ್ತರಾಖಂಡ): ಉತ್ತರಾಖಂಡದಲ್ಲಿ ನಿರ್ಮಾಣವಾಗುತ್ತಿರುವ ಸಿಲ್ಕ್ಯಾರಾ ಸುರಂಗದಲ್ಲಿ ಯಂತ್ರವೊಂದು ಪಲ್ಟಿಯಾಗಿ ಓರ್ವ ಕಾರ್ಮಿಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತನನ್ನು ಗೋವಿಂದ್ ಕುಮಾರ್ (24) ಎಂದು ಗುರುತಿಸಲಾಗಿದೆ.

ಉತ್ತರಕಾಶಿ ಜಿಲ್ಲೆಯಲ್ಲಿ ಚಾರ್ ಧಾಮ್​ ಯೋಜನೆಯಡಿ ಸಿಲ್ಕ್ಯಾರಾ ಸುರಂಗ ನಿರ್ಮಾಣವಾಗುತ್ತಿದೆ. 2023ರ ನವೆಂಬರ್ 12ರಂದು ಇದೇ ಸುರಂಗದಲ್ಲಿ ಭೂಕುಸಿತ ಉಂಟಾಗಿತ್ತು. ಪ್ರಸ್ತುತ ಸುರಂಗದಿಂದ ಮಣ್ಣಿನ ಅವಶೇಷಗಳನ್ನು ತೆಗೆಯುವ ಕೆಲಸ ನಡೆಯುತ್ತಿದೆ. ಇದೇ ವೇಳೆ, ಮಾರ್ಚ್ 25ರಂದು ಶಾಟ್‌ಕ್ರೀಟ್ ಯಂತ್ರ ಪಲ್ಟಿಯಾದ ಪರಿಣಾಮ ಕಾರ್ಮಿಕ ಗೋವಿಂದ್ ಕುಮಾರ್ ಮೃತಪಟ್ಟಿದ್ದಾನೆ.

ಪಿಥೋರಗಢ ಜಿಲ್ಲೆಯ ನಿವಾಸಿಯಾಗಿದ್ದ ಗೋವಿಂದ್ ಕುಮಾರ್, ಸಹಾಯಕ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಈ ಘಟನೆ ಕುರಿತು ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ. ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಈ ಬಗ್ಗೆ ಹೊರಠಾಣೆಯ ಪೊಲೀಸ್ ಅಧಿಕಾರಿ ಜಿ.ಎಸ್.ತೋಮರ್ ಪ್ರತಿಕ್ರಿಯಿಸಿ, ಈ ದುರ್ಘಟನೆ ಹೇಗೆ ಸಂಭವಿಸಿತು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಸಿಲ್ಕ್ಯಾರಾ ಸುರಂಗದಲ್ಲಿ ನವೆಂಬರ್ 12ರಂದು ಭೂಕುಸಿತ ಉಂಟಾಗಿತ್ತು. ಈ ಸಂದರ್ಭದಲ್ಲಿ ಸುರಂಗದಲ್ಲಿ ಕೆಲಸ ಮಾಡುತ್ತಿದ್ದ 41 ಕಾರ್ಮಿಕರು ಸಿಕ್ಕಿಬಿದ್ದಿದ್ದರು. 17 ದಿನಗಳ ನಂತರ ಎಲ್ಲ ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿತ್ತು. ರಕ್ಷಣಾ ಕಾರ್ಯಾಚರಣೆಯಲ್ಲಿ ಜಿಲ್ಲಾಡಳಿತ, ಎನ್​ಡಿಆರ್​ಎಫ್​, ಎಸ್​ಡಿಆರ್​ಎಫ್, ಬಿಆರ್​ಒ, ಎನ್​ಹೆಚ್​​ಐಡಿಸಿಎಲ್​ ಮತ್ತು ಐಟಿಬಿಪಿ ಸೇರಿದಂತೆ ಹಲವು ತಂಡಗಳು ತೊಡಗಿಸಿಕೊಂಡಿದ್ದವು. ಕಾರ್ಮಿಕರಿಗೆ ಸಣ್ಣ ಪೈಪ್‌ಗಳ ಮೂಲಕ ಆಮ್ಲಜನಕ, ವಿದ್ಯುತ್​ ಮತ್ತು ಆಹಾರ ಪೂರೈಸಲು ವ್ಯವಸ್ಥೆ ಮಾಡಲಾಗಿತ್ತು.

ಈ ಕಾರ್ಯಾಚರಣೆ ತುಂಬಾ ಕಷ್ಟಕರ ಹಾಗೂ ಕ್ಲಿಷ್ಟವಾಗಿತ್ತು. ಆದ್ದರಿಂದ ಎನ್‌ಎಚ್‌ಐಡಿಸಿಎಲ್ ಅತ್ಯಾಧುನಿಕ ಆಗರ್ ಯಂತ್ರವನ್ನೂ (ಅಮೆರಿಕನ್ ನಿರ್ಮಿತ ಆಗರ್ ಡ್ರಿಲ್ಲಿಂಗ್ ಮೆಷಿನ್) ತರಿಸಲಾಗಿತ್ತು. ಆದರೆ, ಅದರಿಂದಲೂ ರಕ್ಷಣಾ ಕಾರ್ಯ ಸಾಧ್ಯವಾಗದೇ ಇದ್ದಾಗ ಮನುಷ್ಯ ಸಾಮರ್ಥ್ಯದಿಂದಲೇ ರ‍್ಯಾಟ್​ ರಂಧ್ರ ಕೊರೆಯುವ ಕಾರ್ಯ ನಡೆಸಲಾಗಿತ್ತು.

ಈ ಘಟನೆಯ ಎರಡು ತಿಂಗಳ ನಂತರ ಸಿಲ್ಕ್ಯಾರಾ ಸುರಂಗದಲ್ಲಿ ಮತ್ತೆ ಕಾಮಗಾರಿ ಪ್ರಾರಂಭಿಸಲಾಗಿದೆ. ಸದ್ಯ ಸುರಂಗದಲ್ಲಿ ಬಿದ್ದಿರುವ ಅವಶೇಷಗಳನ್ನು ತೆಗೆದುಹಾಕಲು ನಿರ್ಮಾಣ ಸಂಸ್ಥೆಯಾದ ಸ್ವಿಸ್ ಕಂಪನಿಯ ತಾಂತ್ರಿಕ ಸಹಾಯದಿಂದ ಕೆಲಸ ನಡೆಯುತ್ತಿದೆ. ಇದಕ್ಕಾಗಿ ಸುಮಾರು 20 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಇದಕ್ಕಾಗಿ ಈಗ ಡಿಪಿಆರ್ ಸಹ ಸಿದ್ಧಪಡಿಸಲಾಗಿದೆ. ಏಪ್ರಿಲ್ 1 ಅಥವಾ 2ರಿಂದ ಮಣ್ಣಿನ ಅವಶೇಷಗಳನ್ನು ಹೊರತೆಗೆಯುವ ಕಾರ್ಯ ಶುರುವಾಗಲಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ನೆಲಕ್ಕಾಗಿ ನಡೆದ ಹೋರಾಟದಲ್ಲಿ ಪ್ರಾಣ ಕಳೆದುಕೊಂಡಿತೇ ಹುಲಿರಾಯ?; ತಜ್ಞರು ಹೇಳೋದು ಹೀಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.