ETV Bharat / bharat

ಟಿಪ್ಪರ್​-ಖಾಸಗಿ ಬಸ್ ನಡುವೆ ಭೀಕರ ಅಪಘಾತ: ಮತದಾನಕ್ಕೆ ಬಂದಿದ್ದ 6 ಮಂದಿ ಸಜೀವ ದಹನ​ - Andhra Pradesh Accident

author img

By ETV Bharat Karnataka Team

Published : May 15, 2024, 10:06 AM IST

Updated : May 15, 2024, 10:21 AM IST

ಜಲ್ಲಿಕಲ್ಲು ತುಂಬಿದ್ದ ಟಿಪ್ಪರ್​ ಮತ್ತು ಖಾಸಗಿ ಬಸ್​ ನಡುವೆ ಭೀಕರ ಅಪಘಾತ ಸಂಭವಿಸಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.

ಹೊತ್ತಿ ಉರಿದ ಖಾಸಗಿ ಬಸ್
ಹೊತ್ತಿ ಉರಿದ ಖಾಸಗಿ ಬಸ್ (ETV Bharat)

ಟಿಪ್ಪರ್​-ಖಾಸಗಿ ಬಸ್ ನಡುವೆ ಭೀಕರ ಅಪಘಾತ (ETV Bharat)

ಪಲ್ನಾಡು(ಆಂಧ್ರ ಪ್ರದೇಶ): ಟಿಪ್ಪರ್​ ಮತ್ತು ಖಾಸಗಿ ಬಸ್​ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ 6 ಜನ ಸಜೀವ ದಹನವಾದ ಘಟನೆ ಮಂಗಳವಾರ ತಡರಾತ್ರಿ ಆಂಧ್ರ ಪ್ರದೇಶದಲ್ಲಿ ನಡೆದಿದೆ.

ಬಾಪಟ್ಲಾ ಜಿಲ್ಲೆಯ ಚಿನಗಂಜಾಂನಿಂದ ಹೈದರಾಬಾದ್‌ಗೆ ಹೊರಟಿದ್ದ ಖಾಸಗಿ ಬಸ್ ಚಿಲಕಲೂರಿಪೇಟೆ ಮಂಡಲದ ಯೂರಿವಾರಿಪಾಲೆಂ ಸಮೀಪ ​ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಟಿಪ್ಪರ್​ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್​ಗೆ ಬೆಂಕಿ ಹೊತ್ತಿಕೊಂಡಿದ್ದು ಚಾಲಕ ಸೇರಿ ಆರು ಜನ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. 20ಕ್ಕೂ ಹೆಚ್ಚಿನ ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.

ಬಸ್‌ನಲ್ಲಿ ಒಟ್ಟು 40 ಪ್ರಯಾಣಿಕರಿದ್ದರು. ಹೆಚ್ಚಿನವರು ಚಿನಗಂಜಾಂ, ಗೊನಸಪುಡಿ ಮತ್ತು ನಿಲಯಪಾಲೆಂ ನಿವಾಸಿಗಳಾಗಿದ್ದಾರೆ. ಇವರೆಲ್ಲರೂ ಮತದಾನಕ್ಕಾಗಿ ಬಂದು ಹೈದರಾಬಾದ್​ಗೆ ವಾಪಸಾಗುತ್ತಿದ್ದರು ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ತಡರಾತ್ರಿ 1.30ರ ಸುಮಾರಿಗೆ ವೇಗವಾಗಿ ಬಂದ ಬಸ್,​ ಜಲ್ಲಿಕಲ್ಲು ಸಾಗಿಸುತ್ತಿದ್ದ ಟಿಪ್ಪರ್​ಗೆ ಡಿಕ್ಕಿಯಾಗಿದೆ. ಕೆಲವೇ ಕ್ಷಣಗಳಲ್ಲಿ ಎರಡೂ ವಾಹನಗಳಿಗೂ ಬೆಂಕಿ ಹೊತ್ತಿಕೊಂಡಿದೆ.

ಒಂದೇ ಕುಟುಂಬದ ಮೂವರು ಸಾವು: ಈ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ನಿಲಯಪಾಲೆಂನ ಕಾಶಿ ಬ್ರಹ್ಮೇಶ್ವರ ರಾವ್ (62), ಪತ್ನಿ ಲಕ್ಷ್ಮಿ (58) ಮತ್ತು ಮೊಮ್ಮಗಳು ಶ್ರೀಸಾಯಿ (9) ಮೃತಪಟ್ಟಿದ್ದಾರೆ. ಉಳಿದಂತೆ ಬಸ್ ಚಾಲಕ ಅಂಜಿ, ಮಧ್ಯಪ್ರದೇಶ ಮೂಲದ ಟಿಪ್ಪರ್ ಚಾಲಕ ಹರಿಸಿಂಗ್ ಕೂಡ ಅಸುನೀಗಿದ್ದಾರೆ. ಮತ್ತೊಬ್ಬ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.

ಈ ಬಗ್ಗೆ ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಅಪಘಾತದ ಬಗ್ಗೆ ಸ್ಥಳೀಯರು ಠಾಣೆಗೆ ಕರೆ ಮಾಡಿ ತಿಳಿಸಿದರು. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸ್​ ಸಿಬ್ಬಂದಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಅತೀ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣವೆಂದು ಮೇಲ್ನೋಟಕ್ಕೆ ತಿಳಿದು ಬಂದಿದೆ, ತನಿಖೆ ನಡೆಸಲಾಗುತ್ತಿದೆ ಎಂದರು.

ಇದನ್ನೂ ಓದಿ: ಡಿವೈಡರ್​ ಹಾರಿ ಟ್ರಕ್​ಗೆ ಗುದ್ದಿದ ಕಾರು​; ಸ್ಥಳದಲ್ಲೇ 6 ಜನ ಸಾವು - UP Road Accident

Last Updated : May 15, 2024, 10:21 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.