ETV Bharat / bharat

ಕಾಶ್ಮೀರದಲ್ಲೇ ಟ್ಯೂಲಿಪ್‍ ತಳಿಗಳ ಬೆಳೆಯುವ ಪ್ರಯೋಗ ಯಶಸ್ವಿ - Tulip Plants

author img

By ETV Bharat Karnataka Team

Published : Apr 6, 2024, 4:48 PM IST

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಸಿಎಸ್‌ಐಆರ್-ಐಐಐಎಂ ಕೇಂದ್ರದಿಂದ ಟ್ಯೂಲಿಪ್‍ ಹೂವುಗಳ ಬೀಜ, ಗೆಡ್ಡೆಗಳ ಉತ್ಪಾದಿಸುವ ಸಂಶೋಧನೆ ನಡೆಯುತ್ತಿದೆ.

The experiment of cultivating tulip plants in Kashmir was successful
ಕಾಶ್ಮೀರದಲ್ಲೇ ಟ್ಯೂಲಿಪ್‍ ತಳಿಗಳ ಬೆಳೆಯುವ ಪ್ರಯೋಗ ಯಶಸ್ವಿ

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಕಾಶ್ಮೀರ.. ಭೂಮಿ ಮೇಲಿನ ಸ್ವರ್ಗ. ತನ್ನ ನೈಸರ್ಗಿಕ ಸೌಂದರ್ಯದಿಂದಲೇ ಕಾಶ್ಮೀರ ಕಣಿವೆಯು ಪ್ರಪಂಚದಾದ್ಯಂತ ಪ್ರಸಿದ್ಧಿ ಪಡೆದಿದೆ. ಕಣಿವೆಯ ಜಲಪಾತಗಳು, ಸಮೃದ್ಧ ಕಾಡುಗಳು ಮತ್ತು ವಿಶಾಲವಾದ ಬಯಲು ಪ್ರದೇಶಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಇಲ್ಲಿನ ಮತ್ತೊಂದು ಆಕರ್ಷಣೆ ಎಂದರೆ ಟ್ಯೂಲಿಪ್‍ ಗಾರ್ಡನ್. 12 ಲಕ್ಷಕ್ಕೂ ಹೆಚ್ಚು ಟ್ಯೂಲಿಪ್‍ ಗಿಡಗಳನ್ನು ನೆಟ್ಟಿದ್ದು, ಇವುಗಳನ್ನು ನೋಡಲು ಲಕ್ಷಾಂತರ ಪ್ರವಾಸಿಗರು ಬರುತ್ತಾರೆ. ಈ ಟ್ಯೂಲಿಪ್‍ಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಈಗ ಸಿಎಸ್‌ಐಆರ್ (Council of Scientific and Industrial Research) ಪುಷ್ಪ ಕೃಷಿ ಮಿಷನ್​ ಅಡಿಯಲ್ಲಿ ಕಣಿವೆಯಲ್ಲಿಯೇ ಈ ಟ್ಯೂಲಿಪ್‍ ತಳಿಗಳ ಉತ್ಪಾದಿಸುವ ಸಂಶೋಧನೆ ನಡೆಯುತ್ತಿದೆ. ಇದರಿಂದ ರೈತರಿಗೆ ಮಾತ್ರವಲ್ಲ, ಸರ್ಕಾರಕ್ಕೂ ಲಾಭವಾಗಲಿದೆ.

ಪುಲ್ವಾಮಾ ಜಿಲ್ಲೆಯ ಬೋನೇರಾದ ಸಿಎಸ್‌ಐಆರ್-ಐಐಐಎಂ (Indian Institute of Integrative Medicine) ಕ್ಷೇತ್ರ ಕೇಂದ್ರವು ಈ ವರ್ಷ ಟ್ಯೂಲಿಪ್‍ ಸಸ್ಯಗಳನ್ನು ನೈಸರ್ಗಿಕವಾಗಿ ಬೆಳೆಸುವ ಪ್ರಯೋಗ ಮಾಡಿದ್ದು, ಅದು ಯಶಸ್ವಿಯಾಗಿದೆ. ಈಗ ಟ್ಯೂಲಿಪ್‍ಗಳನ್ನು ಬೆಳೆಯಲು ಗೆಡ್ಡೆಗಳನ್ನು ಬಳಸಲಾಗುತ್ತಿದೆ. ಅಂದರೆ, ಟ್ಯೂಲಿಪ್‍ಗಳನ್ನು ಬೆಳೆಯಲು ಅಗತ್ಯವಾದ ಗೆಡ್ಡೆಗಳನ್ನು ಇಲ್ಲಿಯೇ ಉತ್ಪಾದಿಸಲಾಗುತ್ತದೆ. ಇದನ್ನು ಮೊದಲು ಪ್ರಯೋಗವಾಗಿ ಬಳಸಲಾಗಿದೆ. ಈಗ ಕೇಂದ್ರದ ಸಂಶೋಧಕರು ಟ್ಯೂಲಿಪ್‍ ಬೀಜಗಳನ್ನೂ ಸಹ ಇಲ್ಲಿಯೇ ಉತ್ಪಾದಿಸಬಹುದು ಎಂಬುದನ್ನು ಕಂಡುಕೊಂಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರ, ಅದರಲ್ಲೂ ವಿಶೇಷವಾಗಿ ಕಾಶ್ಮೀರದ ಹವಾಮಾನವು ಟ್ಯೂಲಿಪ್​ ಉದ್ಯಾನ, ಬೀಜೋತ್ಪಾದನೆಗೆ ತುಂಬಾ ಸೂಕ್ತವಾಗಿದೆ. ಈ ಕುರಿತ ಪ್ರಯೋಗಕ್ಕೆ ಸಂಬಂಧಿಸಿದ ಸಂಶೋಧಕರು, 'ಈಟಿವಿ ಭಾರತ್​' ಜೊತೆ ಮಾತನಾಡಿ, ನಾವು ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಬಾರಿಗೆ ಈ ಪ್ರಯೋಗವನ್ನು ಮಾಡಿದ್ದೇವೆ. ಅದರಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದರು.

ಟ್ಯೂಲಿಪ್‍ ಗಿಡಗಳನ್ನು ಬೆಳೆಸಲು ನಾವು ಅವುಗಳ ಬ್ಯಾಚ್‌ಗಳನ್ನು ಹೊರ ದೇಶಗಳಿಂದ ಆಮದು ಮಾಡಿಕೊಳ್ಳಬೇಕಾಗಿತ್ತು. ಈಗ ನಾವು ಅವುಗಳನ್ನು ಇಲ್ಲಿಯೂ ಉತ್ಪಾದಿಸಬಹುದು. ಈ ನಿಟ್ಟಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಡಾ.ಜಿತೇಂದರ್ ಸಿಂಗ್ ಮತ್ತು ಇಲಾಖೆಯ ನಿರ್ದೇಶಕ ಜಬೀರ್ ಅಹಮದ್ ಉಸ್ತುವಾರಿಯಲ್ಲಿ ಈ ಯಶಸ್ವಿ ಪ್ರಯೋಗವನ್ನು ನಡೆಸಲಾಗಿದೆ ಎಂದು ಹಿರಿಯ ವಿಜ್ಞಾನಿ, ಫೀಲ್ಡ್ ಸ್ಟೇಷನ್ ಪ್ರಭಾರಿ ಡಾ.ಶಾಹಿದ್ ರಸೂಲ್ ಹೇಳಿದರು.

ದೇಶದ ರೈತರ ಆದಾಯವನ್ನು ಹೆಚ್ಚಿಸುವ ಜೊತೆಗೆ ವಿವಿಧ ರೀತಿಯ ಪುಷ್ಪ ಸಸ್ಯಗಳನ್ನು ಬೆಳೆಸಲು ಮತ್ತು ಬಳಸಲು, ಹೂವಿನ ಕೃಷಿ ಕ್ಷೇತ್ರದಲ್ಲಿ ರೈತರು ಮತ್ತು ಯುವಕರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಸಿಎಸ್‌ಐಆರ್ ಪುಷ್ಪ ಕೃಷಿ ಮಿಷನ್​-2020 ಅನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರಾರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಕಾಶ್ಮೀರ ಕಣಿವೆಯ ರೈತರು ಟ್ಯೂಲಿಪ್‍ ಗೆಡ್ಡೆಗಳ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಜೀವನೋಪಾಯ ಮತ್ತು ದೈನಂದಿನ ಅವಕಾಶಗಳನ್ನು ವಿಸ್ತರಿಸಲು ಮತ್ತು ದೇಶದ ವಿವಿಧ ಪ್ರವಾಸಿ ಪ್ರದೇಶಗಳಲ್ಲಿ ಟ್ಯೂಲಿಪ್‍ ಕೃಷಿಗೆ ಹೆಚ್ಚಿನ ಉತ್ತೇಜನ ಸಿಗುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ: ಗುಡ್​ ನ್ಯೂಸ್​: ಎಲ್ ನಿನೋ ಕ್ಷೀಣಿಸುತ್ತಿರುವುದು ಮಾನ್ಸೂನ್‌ಗೆ ಅನುಕೂಲಕರ: ನೈರುತ್ಯ ಮುಂಗಾರು ಚುರುಕಾಗುವ ಸಾಧ್ಯತೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.