ETV Bharat / bharat

ಸಿದ್ದರಾಮಯ್ಯ ವಿರುದ್ಧ ಕೇಸ್​: ಹೈಕೋರ್ಟ್​ ಆದೇಶಕ್ಕೆ ತಡೆ ನೀಡಿದ ಸುಪ್ರೀಂ ಕೋರ್ಟ್​

author img

By ETV Bharat Karnataka Team

Published : Feb 19, 2024, 12:20 PM IST

Updated : Feb 19, 2024, 12:41 PM IST

ಬೆಂಗಳೂರಿನಲ್ಲಿ ರಸ್ತೆ ತಡೆ, ಪ್ರತಿಭಟನೆ ಸಂಬಂಧ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಕ್ರಿಮಿನಲ್​ ಪ್ರಕ್ರಿಯೆ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ. ಇದೇ ವೇಳೆ ಹೈಕೋರ್ಟ್​ ಆದೇಶಕ್ಕೂ ತಡೆ ನೀಡಿದೆ.

Supreme Court  Karnataka CM Siddaramaiah  Court issues notice  ಸಿಎಂ ಸಿದ್ದರಾಮಯ್ಯ  ಸುಪ್ರೀಂ ಕೋರ್ಟ್ ನೋಟಿಸ್
ಸಿಎಂ ಸಿದ್ದರಾಮಯ್ಯ ಅರ್ಜಿಗೆ ಸಂಬಂಧಿತ ಪ್ರತಿವಾದಿಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್

ನವದೆಹಲಿ: 2022ರ ಪ್ರತಿಭಟನೆ ವಿಚಾರದಲ್ಲಿ ತಮ್ಮ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಹೈಕೋರ್ಟ್ ಆದೇಶದ ವಿರುದ್ಧ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರು ಸಲ್ಲಿಸಿರುವ ಅರ್ಜಿಯನ್ನ ಸುಪ್ರೀಂಕೋರ್ಟ್​ ಇಂದು ಕೈಗೆತ್ತಿಗೊಂಡಿತು. ಸಿದ್ದರಾಮಯ್ಯ ಮನವಿಗೆ ಸಂಬಂಧಿಸಿದಂತೆ ಪ್ರತಿವಾದಿಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದ್ದು, ಹೈಕೋರ್ಟ್​ ಆದೇಶಕ್ಕೆ ತಡೆ ನೀಡಿದೆ.

ಪ್ರಕರಣವೇನು?: ಗುತ್ತಿಗೆದಾರ ಸಂತೋಷ್​ ಪಾಟೀಲ್​ ಆತ್ಮಹತ್ಯೆಗೆ ಸಂಬಂಧಿಸಿದಂತೆ ಅಂದು ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪ ಅವರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್​ ಪ್ರತಿಭಟನೆ ನಡೆಸಿತ್ತು. ಈ ವೇಳೆ, ರಸ್ತೆ ತಡೆ ಮಾಡಲಾಗಿತ್ತು. ಇದರಿಂದ ಸಾರ್ಜಜನಿಕರಿಗೆ ಅಡ್ಡಿ ಉಂಟುಮಾಡಿದ ಆರೋಪದಡಿ ಆ ಸಂದರ್ಭದಲ್ಲಿ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್​​ ಸುರ್ಜೇವಾಲಾ ಮತ್ತು ಹಿರಿಯ ನಾಯಕರಾದ ರಾಮಲಿಂಗಾ ರೆಡ್ಡಿ, ಎಂ.ಬಿ.ಪಾಟೀಲ್ ಸೇರಿ ಇತರ ಕಾಂಗ್ರೆಸ್​ ನಾಯಕರ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ​ ದಾಖಲಾಗಿತ್ತು.

ಈ ಸಂಬಂಧ 42ನೇ ಎಸಿಎಂಎಂ ನ್ಯಾಯಾಲಯ (ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ) ಜಾರಿ ಮಾಡಿದ್ದ ಎನ್​​ಬಿಡಬ್ಲ್ಯೂ (ಜಾಮೀನುರಹಿತ ಬಂಧನ ವಾರಂಟ್​​) ಹಾಗೂ ವಿಶೇಷ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಸಿದ್ದರಾಮಯ್ಯ ಸೇರಿ ನಾಲ್ವರು ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್​ ಅರ್ಜಿ ವಜಾಗೊಳಿಸಿತ್ತು. ಇದೇ ಫೆಬ್ರವರಿ 6ರಂದು ಸಿದ್ದರಾಮಯ್ಯ ಸೇರಿ ನಾಲ್ವರಿಗೂ ತಲಾ 10 ಸಾವಿರ ರೂ. ದಂಡ ವಿಧಿಸಿತ್ತು. ಆದರೆ, ಪ್ರಕರಣವನ್ನು ರದ್ದುಗೊಳಿಸಲು ಉಚ್ಛ ನ್ಯಾಯಾಲಯ ನಿರಾಕರಿಸಿತ್ತು. ಜತೆಗೆ, ಮಾರ್ಚ್ 6ರಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್​ಗೆ ಹಾಜರಾಗಲು ಸಿಎಂಗೆ ನ್ಯಾಯಪೀಠ ಸೂಚನೆ ನೀಡಿತ್ತು. ಹೀಗಾಗಿ ತಮ್ಮ ವಿರುದ್ಧದ ಕ್ರಿಮಿನಲ್​ ಪ್ರಕ್ರಿಯೆಯ ಸಿಂಧುತ್ವವನ್ನು ಪ್ರಶ್ನಿಸಿ ಸಿದ್ದರಾಮಯ್ಯ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು.

ಸಿಎಂ ಅರ್ಜಿಯಲ್ಲೇನಿದೆ?: ಆಪಾದಿತ ಅಪರಾಧವು ಯಾವುದೇ ಮಹತ್ವದ ಅಂಶವನ್ನು ಹೊಂದಿಲ್ಲ. ಪ್ರಸ್ತುತ ಪ್ರಕ್ರಿಯೆಯು ಕಾನೂನಿನ ಪ್ರಕ್ರಿಯೆಯ ದುರುಪಯೋಗವಾಗಿದೆ. ಅಸ್ಪಷ್ಟ ಆರೋಪಗಳ ಆಧಾರದ ಮೇಲೆ ಪ್ರಕ್ರಿಯೆಗಳನ್ನು ಮುಂದುವರಿಸುವುದು ಅನಗತ್ಯ ಕಿರುಕುಳಕ್ಕೆ ಕಾರಣವಾಗುತ್ತದೆ. ಅಂದಿನ ಘಟನೆಯು ಸುಮಾರು ಕೇವಲ ಒಂದು ಗಂಟೆಗಳ ಕಾಲ ನಡೆದಿದೆ. ಮೆರವಣಿಗೆಯ ಯಾವುದೇ ಸದಸ್ಯರ ವಿರುದ್ಧ ಯಾವುದೇ ಹಿಂಸಾತ್ಮಕ ಕ್ರಮ ಅಥವಾ ಕ್ರಿಮಿನಲ್ ಬಲದ ಬಳಕೆಯ ಆಪಾದನೆ ಇಲ್ಲ. ಕಮಿಷನ್​ ಆರೋಪದ ಸಂಬಂಧ ಗುತ್ತಿಗೆದಾರರ ಸಾವಿನ ಕುರಿತು ಅಂದಿನ ಸಚಿವ ಕೆ.ಎಸ್.ಈಶ್ವರಪ್ಪನವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.

ವಿಧಾನಸಭೆಯ ಯಾವುದೇ ಸದಸ್ಯರ ಮೇಲೆ ಅಪರಾಧದ ಆರೋಪ ಹೊರಿಸದ ಇಂತಹ ಕ್ಷುಲ್ಲಕ ಘಟನೆಗಳ ಮೇಲೆ ಪ್ರಾಸಿಕ್ಯೂಷನ್ ಮುಂದುವರಿಸಲು ಅನುಮತಿ ಇರುವುದಿಲ್ಲ. ಸಾರ್ವಜನಿಕರಿಗೆ ಬೆದರಿಕೆಯನ್ನು ಸಾಬೀತುಪಡಿಸಲು ಅಂದಿನ ಜಮಾವಣೆಯು ಯಾವುದೇ ಹಿಂಸಾಚಾರ ಅಥವಾ ಕ್ರಿಮಿನಲ್ ಬಲದ ಬಳಕೆಗೆ ಕಾರಣವಾಗಿಲ್ಲ ಎಂಬ ಅಂಶವನ್ನು ಹೈಕೋರ್ಟ್ ಗಮನಿಸಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಸಿದ್ದರಾಮಯ್ಯ ಸಲ್ಲಿಸಿದ ಮನವಿಯಲ್ಲಿ ಪ್ರತಿಪಾದಿಸಲಾಗಿದೆ.

ಓದಿ: ಚುನಾವಣಾ ಬಾಂಡ್ ರದ್ದತಿಯ ಸುಪ್ರೀಂ ತೀರ್ಪು ಕಾಂಗ್ರೆಸ್ ನಿಲುವನ್ನು ಎತ್ತಿಹಿಡಿದಿದೆ: ಸುರ್ಜೇವಾಲ

Last Updated : Feb 19, 2024, 12:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.