ETV Bharat / bharat

ಅಯೋಧ್ಯೆಗೆ ಪೊಲೀಸ್​ ಸರ್ಪಗಾವಲು: 10 ಸಾವಿರ ಸಿಸಿಟಿವಿ ಅಳವಡಿಕೆ, ಎಐ ತಂತ್ರಜ್ಞಾನ, ಡ್ರೋನ್​ ಬಳಕೆ

author img

By ETV Bharat Karnataka Team

Published : Jan 21, 2024, 8:54 PM IST

ಅಯೋಧ್ಯೆಯಲ್ಲಿ ನಾಳಿನ ದಿವ್ಯ ಕಾರ್ಯಕ್ರಮಕ್ಕೆ ಯಾವುದೇ ಭಂಗ ಉಂಟಾಗದಿರಲು ಉತ್ತರಪ್ರದೇಶ ಪೊಲೀಸರು ಸರ್ಪಗಾವಲು ಹಾಕಿದ್ದಾರೆ. 10 ಸಾವಿರ ಸಿಸಿಟಿವಿಗಳನ್ನು ಅಳವಡಿಕೆ ಮಾಡಿದ್ದಾರೆ.

ಅಯೋಧ್ಯೆಗೆ ಪೊಲೀಸ್​ ಸರ್ಪಗಾವಲು
ಅಯೋಧ್ಯೆಗೆ ಪೊಲೀಸ್​ ಸರ್ಪಗಾವಲು

ಅಯೋಧ್ಯೆ (ಉತ್ತರ ಪ್ರದೇಶ): ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದೆ. ದೇಶದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಯಾವುದೇ ಅತಹಿತಕರ ಘಟನೆ ನಡೆಯದಂತೆ ರಾಮಜನ್ಮಭೂಮಿಯಲ್ಲಿ ಪೊಲೀಸ್​ ಸರ್ಪಗಾವಲು ಹಾಕಲಾಗಿದೆ. 10 ಸಾವಿರಕ್ಕೂ ಅಧಿಕ ಸಿಸಿಟಿವಿ ಅಳವಡಿಕೆ, ಡ್ರೋನ್​ಗಳಿಂದ ಇಡೀ ಪ್ರದೇಶದ ಮೇಲೆ ನಿಗಾ ವಹಿಸಲಾಗುತ್ತಿದೆ.

ಅಯೋಧ್ಯೆಯ ಪ್ರಮುಖ ಸ್ಥಳಗಳಲ್ಲಿ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್​) ಹದ್ದಿನ ಕಣ್ಣಿಟ್ಟಿದ್ದರೆ, ಸರಯೂ ನದಿಯಲ್ಲಿ ದೋಣಿಗಳ ಮೂಲಕ ಪೊಲೀಸರು ಗಸ್ತು ತಿರುಗಲಿದ್ದಾರೆ. ಅಯೋಧ್ಯೆಯ ಪೊಲೀಸರು ಭೂಮಿ, ನೀರು ಮತ್ತು ಆಕಾಶದಲ್ಲಿ ಭದ್ರತಾ ವ್ಯವಸ್ಥೆ ರೂಪಿಸಿದ್ದಾರೆ.

ಭದ್ರತೆಗೆ ಎಐ ಬಳಕೆ: ಅತ್ಯಾಧುನಿಕ ತಂತ್ರಜ್ಞಾನವಾದ ಕೃತಕ ಬುದ್ಧಿಮತ್ತೆ(ಎಐ)ಯನ್ನು ಬಳಸಿಕೊಳ್ಳಲಾಗುತ್ತಿದೆ. ವೈಮಾನಿಕ ಭದ್ರತೆಗಾಗಿ ಡ್ರೋನ್​ಗಳನ್ನು ನಿಯೋಜಿಸಲಾಗಿದೆ. ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಅವುಗಳಿಂದ ಸೆರೆ ಹಿಡಿದು ಎಚ್ಚರಿಕೆ ವಹಿಸಲಾಗುವುದು ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.

ಪೊಲೀಸ್​ ಕಣ್ಗಾವಲು: ಅಯೋಧ್ಯೆಗೆ ಭಕ್ತರ ದಂಡೇ ಹರಿದು ಬರುತ್ತಿರುವ ಇಲ್ಲಿನ ಧರ್ಮಪತ್, ರಾಮಪತ್‌ನಿಂದ ಹಿಡಿದು ಹನುಮಾನ್‌ಗಢಿ ಪ್ರದೇಶ, ಅಶರ್ಫಿ ಭವನ ರಸ್ತೆಯವರೆಗೂ ಪೊಲೀಸರು ಗಸ್ತು ತಿರುಗುವುದನ್ನು ಕಾಣಬಹುದು. ಟ್ರಾಫಿಕ್ ನಿಯಂತ್ರಣಕ್ಕೆ, ವಿಶೇಷವಾಗಿ ಗಣ್ಯರ ಆಗಮನದ ವೇಳೆ ಪೊಲೀಸರು ಮುಳ್ಳಿನ ಬ್ಯಾರಿಕೇಡ್​ಗಳನ್ನು ಅಳಡಿಸುತ್ತಿದ್ದಾರೆ.

ಜನವರಿ 22 ರಂದು ನಡೆಯಲಿರುವ ಪ್ರಾಣ ಪ್ರತಿಷ್ಠಾ ಐತಿಹಾಸಿಕ ಕಾರ್ಯಕ್ರಮಕ್ಕೆ, ಉತ್ತರ ಪ್ರದೇಶ ಪೊಲೀಸರು ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ. ಪ್ರತಿ ರಸ್ತೆಗೂ ಪೊಲೀಸರನ್ನು ನಿಯೋಜಿಸಲಾಗಿದೆ. ನಗರವನ್ನು ಕೆಂಪು ವಲಯ, ಹಳದಿ ವಲಯ ಎಂದು ವಿಂಗಡಿಸಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆಯ ಮಹಾನಿರ್ದೇಶಕ (ಡಿಜಿ) ಪ್ರಶಾಂತ್ ಕುಮಾರ್ ಹೇಳಿದರು.

ಬರುವ ಭಕ್ತರಿಗೆ ಮತ್ತು ಕಾರ್ಯಕ್ರಮಕ್ಕೆ ಯಾವುದೇ ಸಮಸ್ಯೆ ಉಂಟಾಗದಂತೆ ಉತ್ತಮ ಭದ್ರತಾ ವ್ಯವಸ್ಥೆಗಳನ್ನು ನೀಡಲಾಗುತ್ತಿದೆ. ತಂತ್ರಜ್ಞಾನವನ್ನು ದೊಡ್ಡ ಪ್ರಮಾಣದಲ್ಲಿ ಬಳಸಲಾಗುತ್ತಿದೆ. ಇಡೀ ಅಯೋಧ್ಯೆಯನ್ನು 10 ಸಾವಿರ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ಇಡಲಾಗಿದೆ. ಇದರಲ್ಲಿ ಎಐ ತಂತ್ರಜ್ಞಾನವನ್ನು ಬಳಸುತ್ತಿದ್ದೇವೆ. ಇದರಿಂದ ಭಕ್ತರ ಮೇಲೆ ಹೆಚ್ಚಿನ ನಿಗಾ ವಹಿಸಲು ಸಾಧ್ಯು ಎಂದು ಅವರು ತಿಳಿಸಿದರು.

ರಾಮಮಂದಿರ ಮತ್ತು ಸುತ್ತಲಿನ ಪ್ರದೇಶದಲ್ಲಿ ಬಹುಭಾಷಾ ಕೌಶಲ್ಯ ಹೊಂದಿರುವ ಪೊಲೀಸ್ ಸಿಬ್ಬಂದಿಯನ್ನು ಸಾಮಾನ್ಯ ಉಡುಪಿನಲ್ಲಿ ನಿಯೋಜಿಸಲಾಗಿದೆ. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳ ಸಹಾಯದಿಂದ ಸರಯೂ ನದಿಯ ಉದ್ದಕ್ಕೂ ಭದ್ರತೆಯನ್ನು ನೀಡಲಾಗಿದೆ ಎಂದು ಅಧಿಕಾರಿ ಮಾಹಿತಿ ಹಂಚಿಕೊಂಡರು.

ಇದನ್ನೂ ಓದಿ: ಮುಸ್ಲಿಮರು ಶಾಹಿ ಈದ್ಗಾ, ಜ್ಞಾನವಾಪಿಯನ್ನು ಹಿಂದುಗಳಿಗೆ ಹಸ್ತಾಂತರಿಸಲಿ: ಪುರಾತತ್ವಶಾಸ್ತ್ರಜ್ಞ ಮೊಹಮದ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.