ETV Bharat / bharat

ರಾಹುಲ್ ಗಾಂಧಿ ಲೋಕಸಭಾ ಸದಸ್ಯತ್ವ ಮರುಸ್ಥಾಪನೆ ಪ್ರಶ್ನಿಸಿ ಅರ್ಜಿ; ವಕೀಲರಿಗೆ ₹ 1 ಲಕ್ಷ ದಂಡ

author img

By ETV Bharat Karnataka Team

Published : Jan 19, 2024, 11:41 PM IST

ರಾಹುಲ್ ಗಾಂಧಿ ಲೋಕಸಭಾ ಸದಸ್ಯತ್ವವನ್ನು ಮರುಸ್ಥಾಪಿಸುವ ಅಧಿಸೂಚನೆಯನ್ನು ರದ್ದುಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದ ವಕೀಲರ ಬಗ್ಗೆ​ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

Etv Bharat
Etv Bharat

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವವನ್ನು ಮರುಸ್ಥಾಪಿಸುವ ಅಧಿಸೂಚನೆಯನ್ನು ರದ್ದುಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದ ವಕೀಲರಿಗೆ ಸುಪ್ರೀಂಕೋರ್ಟ್ ಶುಕ್ರವಾರ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ. ನ್ಯಾಯಮೂರ್ತಿಗಳಾದ ಭೂಷಣ್ ಆರ್ ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠವು ಇದನ್ನು 'ಕ್ಷುಲ್ಲಕ'ವಾದ ಅರ್ಜಿ ಎಂದು ಟೀಕಿಸಿದೆ.

2019ರ ಏಪ್ರಿಲ್​ 13ರಂದು ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಕರ್ನಾಟಕದ ಕೋಲಾದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಭಾಷಣ ಮಾಡುವ ವೇಳೆ ರಾಹುಲ್​ ಗಾಂಧಿ ಮೋದಿ ಉಪನಾಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಕುರಿತು ದಾಖಲಾದ ಕ್ರಿಮಿನಲ್​ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ 2023ರ ಮಾರ್ಚ್​ 24ರಂದು ಸೂರತ್​ನ ಜಿಲ್ಲಾ ನ್ಯಾಯಾಲಯ ರಾಹುಲ್​ ಗಾಂಧಿ ಅವರನ್ನು ದೋಷಿ ಎಂದು ತೀರ್ಪು ನೀಡಿ 2 ವರ್ಷ ಜೈಲು ಶಿಕ್ಷೆ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ವಯನಾಡ್ ಸಂಸದ ಕ್ಷೇತ್ರದ ಸದಸ್ಯ ಸ್ಥಾನದಿಂದ ಅವರನ್ನು ಅನರ್ಹಗೊಳಿಸಿ ಅಧಿಸೂಚನೆ ಹೊರಡಿಸಲಾಗಿತ್ತು.

ಬಳಿಕ ಸೂರತ್​ ನ್ಯಾಯಾಲಯವು ತೀರ್ಪು ಪ್ರಶ್ನಿಸಿ ರಾಹುಲ್​ ಗಾಂಧಿ ಗುಜರಾತ್​ ಹೈಕೋರ್ಟ್​ ಮೊರೆ ಹೋಗಿದ್ದರು. ಹೈಕೋರ್ಟ್​ ಕಳೆ ಹಂತದ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿತ್ತು. ಇದಾದ ಬಳಿಕ ಹೈಕೋರ್ಟ್​ ಆದೇಶವನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. 2023ರ ಅಗಸ್ಟ್​ 4ರಂದು ರಾಹುಲ್​ ಗಾಂಧಿ ವಿರುದ್ಧದ ಆದೇಶಕ್ಕೆ ಸುಪ್ರೀಂ ಕೋರ್ಟ್​ ಮಧ್ಯಂತರ ತಡೆ ನೀಡಿತ್ತು. ಇದರಿಂದ ಲೋಕಸಭಾ ಸದಸ್ಯತ್ವ ಮರುಸ್ಥಾಪಿಸಿ ಆಗಸ್ಟ್ 7ರಂದು ಮರು ಅಧಿಸೂಚನೆ ಹೊರಡಿಸಲಾಗಿತ್ತು. ಈ ಅಧಿಸೂಚನೆಯನ್ನು ರದ್ದುಗೊಳಿಸುವಂತೆ ಕೋರಿದ ವಕೀಲರೊಬ್ಬರು ಅರ್ಜಿ ಸಲ್ಲಿಸಿದ್ದರು.

ಅಮೂಲ್ಯ ಸಮಯ ವ್ಯರ್ಥ - ಸುಪ್ರೀಂ ಕೋರ್ಟ್​: ರಾಹುಲ್ ಗಾಂಧಿ ಲೋಕಸಭಾ ಸದಸ್ಯತ್ವವನ್ನು ಮರುಸ್ಥಾಪಿಸುವ ಅಧಿಸೂಚನೆಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಅರ್ಜಿ ಸಲ್ಲಿಸಿದ ವಕೀಲರ ಬಗ್ಗೆ​ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇದೊಂದು ಕ್ಷುಲ್ಲಕ ಅರ್ಜಿ. ಅಂತಹ ಸ್ವರೂಪದ ಅರ್ಜಿಗಳು ನ್ಯಾಯಾಲಯದ ಮತ್ತು ಇಡೀ ಸುಪ್ರೀಂ ಕೋರ್ಟ್ ನೋಂದಣಿಯ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತವೆ ಎಂದು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿದೆ.

ಅಲ್ಲದೇ, ಎನ್​ಸಿಪಿ ನಾಯಕ ಮೊಹಮ್ಮದ್ ಫೈಜಲ್ ಲೋಕಸಭಾ ಸದಸ್ಯತ್ವ ಮರುಸ್ಥಾಪನೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಇದೇ ರೀತಿಯ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ವಜಾಗೊಳಿಸಲಾಗಿತ್ತು ಎಂಬುವುದನ್ನು ಸುಪ್ರೀಂ ಕೋರ್ಟ್ ಗಮನಿಸಿದೆ. ಪ್ರತಿ ಅರ್ಜಿಯು ನ್ಯಾಯಾಲಯದ ನೋಂದಾವಣೆಯಲ್ಲಿ ಬಹು ಪರಿಶೀಲನಾ ವ್ಯಾಯಾಮಗಳನ್ನು ಮಾಡಬೇಕಾಗಿದೆ. ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳ ನ್ಯಾಯವ್ಯಾಪ್ತಿಯನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಲು ಅಂತಹ ಅರ್ಜಿಯ ಮೇಲೆ ಅನುಕರಣೀಯ ವೆಚ್ಚವನ್ನು ವಿಧಿಸಬೇಕಿದೆ ಎಂದು ಸರ್ವೋಚ್ಛ ನ್ಯಾಯಾಲಯ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.