ETV Bharat / bharat

ಸಂದೇಶಖಾಲಿ ಹಿಂಸಾಚಾರ ಪ್ರಕರಣ: ಪ್ರಮುಖ ಆರೋಪಿ ಶೇಖ್ ಷಹಜಹಾನ್ ಬಂಧನ

author img

By ETV Bharat Karnataka Team

Published : Feb 29, 2024, 8:19 AM IST

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ತೃಣಮೂಲ ಕಾಂಗ್ರೆಸ್​ (ಟಿಎಂಸಿ) ನಾಯಕ ಶಹಜಹಾನ್ ಶೇಖ್​ ನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಶೇಖ್ ಷಹಜಹಾನ್ ಬಂಧನ
ಆರೋಪಿ ಶೇಖ್ ಷಹಜಹಾನ್ ಬಂಧನ

ಕೋಲ್ಕತ್ತಾ (ಪಶ್ಚಿಮ ಬಂಗಾಳ) : ಜಾರಿ ನಿರ್ದೇಶನಾಲಯ ಇಲಾಖೆ ಅಧಿಕಾರಿಗಳ ಮೇಲೆ ಹಲ್ಲೆ, ಸಂದೇಶಖಾಲಿ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ, ತೃಣಮೂಲ ಕಾಂಗ್ರೆಸ್ (ಟಿಎಂಪಿ)​ ನಾಯಕ ಶಹಜಹಾನ್ ಶೇಖ್​ ನನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ.

ಆರೋಪಿಯನ್ನು ಇಂದು ಬೆಳಗಿನಜಾವ ಉತ್ತರ 24 ಪರಗಣ ಜಿಲ್ಲೆಯ ಬಸಿರ್‌ಹತ್‌ನ ಮಿನಾಖಾ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಸಿರ್ಹತ್​ಗೆ ಕರೆದುಕೊಂಡು ಹೋಗಿರುವ ಪೊಲೀಸರು ಶಹಜಹಾನ್ ಶೇಖ್​ ನನ್ನು ನ್ಯಾಯಾಲಯದ ಮುಂದೆ ಇಂದು ಹಾಜರುಪಡಿಸಲಿದ್ದಾರೆ. ಬುಧವಾರವಷ್ಟೇ ಷಹಜಹಾನ್ ವಿರುದ್ಧ ಯಾವುದೇ ಕೇಂದ್ರೀಯ ಸಂಸ್ಥೆ ಅಥವಾ ಪೊಲೀಸರು ಕ್ರಮ ಕೈಗೊಳ್ಳಬಹುದು ಮತ್ತು ಆತನ ಬಂಧನಕ್ಕೆ ಯಾವುದೇ ಕಾನೂನು ತಡೆ ಇಲ್ಲ ಎಂದು ಹೈಕೋರ್ಟ್ ಆದೇಶ ಹೊರಡಿಸಿತ್ತು. ಇದರ ಬೆನ್ನೆಲ್ಲೇ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣವಲ್ಲದೆ, ಸಂದೇಶ್​ಖಾಲಿಯಲ್ಲಿ ವಾಸಿಸುವ ಮಹಿಳೆಯರು ಆತನ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾರೆ.

ಪ್ರಕರಣ ಹಿನ್ನೆಲೆ : ಕಳೆದ ತಿಂಗಳು ಜನವರಿ 5 ರಂದು ಪಡಿತರ ವಿತರಣೆಯಲ್ಲಿ ಭ್ರಷ್ಟಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಷಹಜಹಾನ್​ ಶೇಖ್​ ನಿವಾಸದ ಮೇಲೆ ದಾಳಿ ನಡೆಸಲು ತೆರಳಿದ್ದ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಂದ್ರ ಭದ್ರತಾ ಪಡೆಗಳ ತಂಡದ ಮೇಲೆಯೇ ಆತನ ಬೆಂಬಲಿಗರು ದಾಳಿ ನಡೆಸಿದ್ದರು. ಈ ಸಂಘರ್ಷ ತಾರಕಕ್ಕೇರಿ ಇಡಿ ಹಾಗೂ ಕೇಂದ್ರ ಸಶಸ್ತ್ರ ಪಡೆಗಳ ವಾಹನಗಳನ್ನೂ ಧ್ವಂಸಗೊಳಿಸಲಾಗಿತ್ತು. ಮಾಧ್ಯಮದವರ ಮೇಲೂ ಹಲ್ಲೆ ನಡೆದಿತ್ತು. ಕ್ಯಾಮರಾ, ವಾಹನಗಳು ಹಾಗೂ ಇತರ ಉಪಕರಣಗಳನ್ನು ಒಡೆದು ಹಾಕಲಾಗಿತ್ತು. ಬಳಿಕ ಇಡಿ ಹಾಗೂ ಕೇಂದ್ರ ತನಿಖಾ ಸಂಸ್ಥೆಯ ಅಧಿಕಾರಿಗಳು ಹಾಗೂ ಮಾಧ್ಯಮದವರು ಘಟನಾ ಸ್ಥಳದಿಂದ ತೆರಳಿದ್ದರು.

ಇದನ್ನೂ ಓದಿ : ಪಶ್ಚಿಮ ಬಂಗಾಳ: ಟಿಎಂಸಿ ನಾಯಕನ ಬೆಂಬಲಿಗರಿಂದ ಇಡಿ ಅಧಿಕಾರಿಗಳ ಮೇಲೆ ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.