ETV Bharat / bharat

ಹುಬ್ಬಳ್ಳಿ ರೈಲ್ವೆ ಭೂಮಿ ಹಗರಣ ಸಂಬಂಧ ಕೇಂದ್ರ ಸಚಿವರೇಕೆ ಮೌನ: ರಣದೀಪ್​ ಸಿಂಗ್ ಸುರ್ಜೇವಾಲ ಪ್ರಶ್ನೆ

author img

By ETV Bharat Karnataka Team

Published : Jan 20, 2024, 7:48 AM IST

ಹುಬ್ಬಳ್ಳಿಯಲ್ಲಿ ರೈಲ್ವೆ ಭೂಮಿಯನ್ನು ಖಾಸಗಿ ಅವರಿಗೆ ಪರೋಕ್ಷವಾಗಿ ಮಾರಾಟ ಮಾಡಲಾಗಿದ್ದು, ಸುಮಾರು 1,300 ಕೋಟಿ ರೂ. ಹಗರಣ ನಡೆದಿದೆ ಎಂದು ರಣದೀಪ್ ಸಿಂಗ್​​ ಸುರ್ಜೇವಾಲ ಆರೋಪಿಸಿದ್ದಾರೆ.

ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಣದೀಪ್ ಸಿಂಗ್​​ ಸುರ್ಜೇವಾಲ
ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಣದೀಪ್ ಸಿಂಗ್​​ ಸುರ್ಜೇವಾಲ

ಬೆಂಗಳೂರು : ''ಹುಬ್ಬಳ್ಳಿಯಲ್ಲಿ ರೈಲ್ವೆ ಇಲಾಖೆಗೆ ಸೇರಿದ 13 ಎಕರೆಯನ್ನು ಖಾಸಗಿಗೆ ಹಸ್ತಾಂತರಿಸುವ ಅವ್ಯವಹಾರವೊಂದು ನಡೆದಿದೆ. ಕರ್ನಾಟಕದ ಜನರ ಆಸ್ತಿಯ ಲೂಟಿ ಮಾಡಲಾಗುತ್ತಿದೆ. ಇದು ಆರು ನೂರು ಕೋಟಿ ಬೆಲೆ ಬಾಳುವ ಭೂಮಿಯಾಗಿದೆ. ಈ ಬಗ್ಗೆ ಕೇಂದ್ರದ ಸಚಿವರೇಕೆ ಸುಮ್ಮನಿದ್ದಾರೆ? ಪ್ರಧಾನಮಂತ್ರಿ, ರೈಲ್ವೆ ಸಚಿವರೂ ಕೂಡ ಏಕೆ ಸುಮ್ಮನಿದ್ದಾರೆ'' ಎಂದು ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಣದೀಪ್ ಸಿಂಗ್​​ ಸುರ್ಜೇವಾಲ ಪ್ರಶ್ನಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಲೋಕಸಭೆ ಚುನಾವಣೆ ಸಂಬಂಧ ಶುಕ್ರವಾರ ನಡೆದ ಸಭೆ ಬಳಿಕ ರಣದೀಪ್ ಸಿಂಗ್​​ ಸುರ್ಜೇವಾಲ ಮಾತನಾಡಿದರು. ''ಹುಬ್ಬಳ್ಳಿ ರೈಲ್ವೆ ಭೂಮಿ ಹಗರಣವು 40 ಪರ್ಸೆಂಟ್ ಕಮಿಷನ್ ಅವ್ಯವಹಾರದ ಮುಂದುವರಿದ ಭಾಗವಾಗಿದೆ. ಬಿಜೆಪಿ ನಾಯಕರು ಇದರ ಬಗ್ಗೆ ಉತ್ತರ ನೀಡಬೇಕು. ಸುಮಾರು 1,300 ಕೋಟಿ ರೂ. ಹಗರಣ ಇದಾಗಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಈ ಬಗ್ಗೆ ಮೌನವಾಗಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಹ ಈ ಬಗ್ಗೆ ಯಾವುದೇ ಚಕಾರ ಎತ್ತಿಲ್ಲ. 13 ಎಕರೆ ರೈಲ್ವೆ ಕ್ವಾಟ್ರಸ್ ಅನ್ನು ಏಕಾಏಕಿ ನೆಲಸಮ ಮಾಡಿ ಅದನ್ನು ಇ-ಟೆಂಡರ್ ಮೂಲಕ 99 ವರ್ಷ ಲೀಸ್ ಕೊಡಲು ಅಂದರೆ ಪರೋಕ್ಷವಾಗಿ ಮಾರಾಟ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ಈ ಜಮೀನಿಗೆ ಮಾರುಕಟ್ಟೆ ದರದ ಪ್ರಕಾರ ಒಂದು ಚದರ್​ ಅಡಿಗೆ 25 ಸಾವಿರ ರೂಪಾಯಿ ಇದೆ'' ಎಂದರು.

ಸ್ಕ್ರೀನಿಂಗ್ ಕಮಿಟಿ : ಲೋಕಸಭೆ ಚುನಾವಣೆಯಲ್ಲಿ ಸಚಿವರು ಸ್ಪರ್ಧೆ ಮಾಡುವ ಬಗ್ಗೆ ಸ್ಕ್ರೀನಿಂಗ್ ಸಮಿತಿ ಸಭೆಯಲ್ಲಿ‌ ನಿರ್ಧಾರ ಆಗಲಿದೆ. ಕ್ಷೇತ್ರವಾರು ಇನ್ನೊಮ್ಮೆ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಬ್ಲಾಕ್, ಜಿಲ್ಲಾ ಘಟಕಗಳು ಹಾಗೂ ಶಾಸಕರು, ಪ್ರಮುಖರ ಅಭಿಪ್ರಾಯ ಕೇಳುತ್ತಾರೆ. ವೀಕ್ಷಕರು 28 ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಹೆಸರು ಕೊಟ್ಟರು. ಶನಿವಾರ ಸಂಜೆಯೊಳಗೆ ಅಭ್ಯರ್ಥಿಗಳ ಕುರಿತು ವಿವರಣೆ ಕೊಡಲು ಸೂಚಿಸಲಾಗಿದೆ. ಜಿಲ್ಲೆಗಳಿಗೆ ಹೋಗಿ ಕಾರ್ಯದರ್ಶಿಗಳು ಪ್ರತ್ಯೇಕ ಸರ್ವೆ ಮಾಡಲಿದ್ದಾರೆ. ಸರ್ವೆ ತಂಡ ಕೆಲಸ ಮಾಡಲಿದೆ. ತಿಂಗಳಾಂತ್ಯಕ್ಕೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುತ್ತದೆ ಎಂದು ರಣದೀಪ್ ಸಿಂಗ್​​ ಸುರ್ಜೇವಾಲ ಹೇಳಿದರು.

ಶುಕ್ರವಾರ ನಡೆದ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ, 28 ಲೋಕಸಭಾ ಕ್ಷೇತ್ರಗಳ ಉಸ್ತುವಾರಿ ವಹಿಸಿಕೊಂಡಿರುವ ಸಚಿವರು ತಮ್ಮ ತಮ್ಮ ಲೋಕಸಭಾ ಕ್ಷೇತ್ರಗಳ ಆಕಾಂಕ್ಷಿಗಳು, ಕ್ಷೇತ್ರದ ಗ್ರೌಂಡ್ ರಿಪೋರ್ಟ್, ಕಳೆದ ಮೂರು ಲೋಕಸಭಾ ಚುನಾವಣೆಯಲ್ಲಿ ಪಕ್ಷಾವಾರು ಫಲಿತಾಂಶ ಸೇರಿದಂತೆ ವಿವಿಧ ಮಾಹಿತಿಯಿರುವ ವರದಿಯನ್ನು ಸಲ್ಲಿಸಿದ್ದಾರೆ.

ಲೋಕಸಭಾವಾರು ಸಲ್ಲಿಕೆಯಾಗಿರುವ ಈ ವರದಿಯನ್ನು ಎಲ್ಲ 28 ಸಚಿವರಿಗೆ ಹಂಚಿಕೆ ಮಾಡಿದ್ದು, ಶನಿವಾರ ಸಂಜೆಯೊಳಗೆ ಕ್ಷೇತ್ರಗಳಲ್ಲಿನ ವರದಿಯ ಬಗ್ಗೆ ಅನಿಸಿಕೆ ನೀಡುವಂತೆ ಸೂಚನೆ ನೀಡಲಾಗಿದೆ. ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ಪಡೆಯಿರಿ. ಆಕಾಂಕ್ಷಿಗಳ ಪಟ್ಟಿಯ ಅನಿಸಿಕೆ, ಅಭಿಪ್ರಾಯ ವ್ಯಕ್ತಪಡಿಸಿದ ಬಳಿಕ ಇದೇ ವಿಷಯವನ್ನು ಮುಂದಿಟ್ಟುಕೊಂಡು ಸ್ಥಳೀಯ ನಾಯಕರೊಂದಿಗೆ ಜಿಲ್ಲೆಯ ಸಚಿವರು ಚರ್ಚಿಸಬೇಕು ಎಂದು ಸೂಚಿಸಿದರು.

ಬ್ಲಾಕ್ ಕಾಂಗ್ರೆಸ್, ತಾಲೂಕು ಹಾಗೂ ಜಿಲ್ಲಾ ಅಧ್ಯಕ್ಷ, ಪದಾಧಿಕಾರಿಗಳ ಮುಂದೆ ಈ ಪಟ್ಟಿಯನ್ನು ಇಟ್ಟು ಸಾಧಕ-ಬಾಧಕದ ಬಗ್ಗೆ ಚರ್ಚೆ ನಡೆಸಬೇಕು. ಇದರೊಂದಿಗೆ ಒಂದು ವೇಳೆ ಭಿನ್ನಾಭಿಪ್ರಾಯವಿದ್ದರೆ, ಅಂತಹ ಅಭ್ಯರ್ಥಿಗಳ ವಿಷಯದಲ್ಲಿ ಸ್ಥಳೀಯ ನಾಯಕರೊಂದಿಗೆ ಚರ್ಚಿಸಿ ವಿಶ್ವಾಸಕ್ಕೆ ಪಡೆಯಬೇಕು ಎಂದು ರಣದೀಪ್ ಸಿಂಗ್ ಸುರ್ಜೇವಾಲ ಸೂಚನೆ ನೀಡಿದ್ದಾರೆ.

ಶನಿವಾರ ಸಂಜೆಯೊಳಗೆ ಎಲ್ಲ ಸಚಿವರ ಅಭಿಪ್ರಾಯ ಹಾಗೂ ಮುಂದಿನ ಮೂರು ದಿನದೊಳಗೆ ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯವನ್ನು ಒಗ್ಗೂಡಿಸಿ, ಮತ್ತೊಂದು ವರದಿಯನ್ನು ಸಿದ್ಧಪಡಿಸಲಾಗುವುದು. ಈ ವರದಿಯಲ್ಲಿ 28 ಕ್ಷೇತ್ರಗಳ ಮೊದಲು ಮೂರು ಆಕಾಂಕ್ಷಿಗಳು, ಅವರ ಪಾಸಿಟಿವ್-ನೆಗೆಟಿವ್ ಸೇರಿದಂತೆ ವಿವಿಧ ಅಂಶಗಳನ್ನು ಒಳಗೊಂಡ ಸಮಗ್ರ ವರದಿಯನ್ನು ಕೇಂದ್ರ ಚುನಾವಣಾ ಸಮಿತಿಗೆ ತಿಂಗಳಾಂತ್ಯಕ್ಕೆ ಸಲ್ಲಿಸಲು ತೀರ್ಮಾನಿಸಲಾಗಿದೆ.

ಗ್ಯಾರಂಟಿಗಳನ್ನು ಜನರ ಮುಂದಿಡಿ : ಇನ್ನು ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ ಬಿಜೆಪಿಗರು ಹಿಂದುತ್ವ, ಅಯೋಧ್ಯೆ ರಾಮಮಂದಿರ ವಿಷಯವನ್ನು ಮುಂದಿಟ್ಟುಕೊಂಡು ಮುಂದಿನ ಲೋಕಸಭಾ ಚುನಾವಣೆಗೆ ಹೋಗುವ ಸಾಧ್ಯತೆಯಿದೆ. ಆದ್ದರಿಂದ ಈ ಬಗ್ಗೆ ಎಚ್ಚರದಿಂದ ಇರಬೇಕು. ರಾಜ್ಯ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿಗಳ ಬಗ್ಗೆ ಸ್ಥಳೀಯ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಬ್ಲಾಕ್ ಕಾಂಗ್ರೆಸ್ ಸದಸ್ಯರು ಮನೆಮನೆಗೆ ತೆರಳಿ ನಮ್ಮ ಸರ್ಕಾರದ ಸಾಧನೆಯ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲಿ. ಈ ನಿಟ್ಟಿನಲ್ಲಿ ಉಸ್ತುವಾರಿ ಸಚಿವರು ಕೂಡಲೇ ಕ್ರಮವಹಿಸಬೇಕು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಯಾವುದೇ ಕ್ಷಣದಲ್ಲಿ ನಿಗಮ‌ ಮಂಡಳಿ ಪಟ್ಟಿ ಬಿಡುಗಡೆ, 36 ಶಾಸಕರು, 39 ಕಾರ್ಯಕರ್ತರಿಗೆ ಅವಕಾಶ: ಡಿಸಿಎಂ ಡಿಕೆಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.