ETV Bharat / bharat

ಅಯೋಧ್ಯೆ ಬಾಲರಾಮನಿಗೆ ಮೊದಲ ರಾಮನವಮಿ: 19 ಗಂಟೆ ಭಕ್ತರಿಗೆ ದರ್ಶನ ಭಾಗ್ಯ, VIP ಗಳಿಗೆ ನೋ ಎಂಟ್ರಿ - RAMA NAVAMI

author img

By ETV Bharat Karnataka Team

Published : Apr 16, 2024, 10:01 AM IST

ಬುಧವಾರ ಹಿಂದೂ ಭಕ್ತರಿಗೆ ರಾಮನವಮಿ ಹಬ್ಬದ ಸಂಭ್ರಮ. ಹೀಗಾಗಿ ಅಯೋಧ್ಯೆ ಬಾಲರಾಮ ದೇವಾಲಯಲ್ಲಿ ಹೆಚ್ಚಿನ ವ್ಯವಸ್ಥೆಗಳನ್ನು ಮಾಡಲಾಗಿದೆ. ಏನೇನಿರಲಿದೆ, ರಾಮನ ದರ್ಶನ ಸಮಯವೇನು ಇಲ್ಲಿದೆ ಸಂಪೂರ್ಣ ಮಾಹಿತಿ.

ಅಯೋಧ್ಯೆ ಬಾಲರಾಮ
ಅಯೋಧ್ಯೆ ಬಾಲರಾಮ

ಉತ್ತರ ಪ್ರದೇಶ: ನಾಳೆ ಶ್ರೀ ರಾಮನ ಜನ್ಮ ದಿನ. ಅಯೋಧ್ಯೆಯ ಬಾಲರಾಮನಿಗೆ ಇದು ಮೊದಲ ರಾಮನವಮಿ. ಹೀಗಾಗಿ ಅಯೋಧ್ಯೆಯಲ್ಲಿ ನಾಳೆಯ ದಿನ ಬಾಲರಾಮನ ದರ್ಶನಕ್ಕೆ ಭಕ್ತರ ಒಳ ಹರಿವು ಹೆಚ್ಚಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇವಾಲಯದಲ್ಲಿ ಬಾಲರಾಮನಿಗೆ ಬೆಳಗ್ಗೆ 3.30ಕ್ಕೆ ಮಂಗಳಾರತಿಯಾದ ನಂತರ ರಾತ್ರಿ 11ರವರೆಗೆ ಅಂದರೆ ಒಟ್ಟು 19 ಗಂಟೆಗಳ ಕಾಲ ದೇವಸ್ಥಾನ ತೆರೆದಿರುತ್ತದೆ. ಶ್ರೀ ರಾಮನಿಗೆ 'ಭೋಗ್​' ನೈವೇದ್ಯಗಳನ್ನು ಸಮರ್ಪಿಸುವ ಸಮಯದಲ್ಲಿ ದೇವಾಲಯದ ಪರದೆಗಳನ್ನು ತಲಾ ಐದು ನಿಮಿಷಗಳ ಕಾಲ ಎಳೆಯಲಾಗುತ್ತದೆ.

VIPಗಳಿಗೆ ಏಪ್ರಿಲ್​​ 19ರ ನಂತರ ದರ್ಶನ ಭಾಗ್ಯ : ರಾಮನವಮಿ ಹಿನ್ನೆಲೆ ಭಕ್ತರು ಅಧಿಕ ಸಂಖ್ಯೆಯಲ್ಲಿ ಆಗಮಿಸುವುದರಿಂದ ಶ್ರೀ ರಾಮ ಜನ್ಮಭೂಮಿ ಟ್ರಸ್ಟ್ ಗಣ್ಯ ಅಥಿತಿಗಳು ಏಪ್ರಿಲ್​ 19ರ ನಂತರವೇ ರಾಮಲಲ್ಲಾನ ದರ್ಶನಕ್ಕಾಗಿ ಅಯೋಧ್ಯೆಗೆ ಭೇಟಿ ನೀಡುವಂತೆ ಮನವಿ ಮಾಡಿದೆ. ಜತೆಗೆ ರಾಮ ಮಂದಿರ ಪ್ರವೇಶಿಸಲು ಉಳಿದ ಭಕ್ತರು ಅನುಸರಿಸುವ ಮಾರ್ಗವನ್ನೇ ಎಲ್ಲರೂ ಪಾಲಿಸಬೇಕು ಎಂದು ಹೇಳಿದೆ.

ರಾಮ ನವಮಿಯ ದಿನ, ಬ್ರಹ್ಮ ಮುಹೂರ್ತದ ಸಮಯದಲ್ಲಿ ಬೆಳಗ್ಗೆ 3:30ಕ್ಕೆ ಗರ್ಭಗುಡಿ ತೆರೆಯಲಾಗುತ್ತದೆ. ಬಾಲರಾಮನ ದರ್ಶನ ಆ ಸಮಯದಿಂದ ಆರಂಭವಾಗಲಿದ್ದು, ರಾತ್ರಿ 11 ಗಂಟೆಯವರೆಗೆ ಅವಕಾಶ ಕಲ್ಪಿಸಿಕೊಡಲಾಗುತ್ತೆ. ದರ್ಶನಕ್ಕೆ ಭಕ್ತರು ಸರತಿ ಸಾಲಿನಲ್ಲಿ ಬರಬೇಕು ಹಾಗೇ ರಾತ್ರಿ ಕೂಡ ದರ್ಶನ ಇರುವುದರಿಂದ ತಮ್ಮ ಮೊಬೈಲ್ ಫೋನ್ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ತರದಂತೆ ಸೂಚಿಸಲಾಗಿದೆ. ಸುಗ್ರೀವ್ ಕ್ವಿಲಾದಲ್ಲಿ ಟ್ರಸ್ಟ್‌ನಿಂದ ಯಾತ್ರಾರ್ಥಿಗಳಿಗಾಗಿ ಸೇವಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಮತ್ತು ಪ್ರಸಾರ ಭಾರತಿ ದೂರದರ್ಶನದಲ್ಲಿ ರಾಮಮಂದಿರದ ಆಚರಣೆಗಳನ್ನು ನೇರ ಪ್ರಸಾರ ಮಾಡಲಾಗುತ್ತದೆ. ರಾಮ ಟ್ರಸ್ಟ್ ಪ್ರಕಾರ ಅಯೋಧ್ಯೆ ಮುನ್ಸಿಪಲ್​​ ಕಾರ್ಪೊರೇಷನ್​​ ರಾಮ ಮಂದಿರದಲ್ಲಿ ರಾಮನವಮಿ ಆಚರಣೆಯ ನೇರ ಪ್ರಸಾರಕ್ಕಾಗಿ ಅಯೋಧ್ಯೆಯಾದ್ಯಂತ ಸುಮಾರು 100 ಎಲ್ಇಡಿ ಪರದೆಗಳನ್ನು ಹಾಕಲಿದೆ.

ಭಕ್ತರ ಸುರಕ್ಷತೆಗೆ ಟ್ರಸ್ಟ್​ನಿಂದ ಹಲವು ಕ್ರಮ: ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದು, ಕಾಲ್ತುಳಿತ ಉಂಟಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ಅಧಿಕಾರಿಗಳು ದೇವಾಲಯಕ್ಕೆ ಸುರಕ್ಷಿತ ಆಗಮನ ಮತ್ತು ನಿರ್ಗಮನಕ್ಕೆ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಬಿಸಿಗಾಳಿ ವಾತಾವರಣ ಇರುವುದರಿಂದ ತೆರೆದ ಮಹಡಿಗಳಲ್ಲಿ ಭಕ್ತರಿಗೆ ನೀರು ಮತ್ತು ಚಾಪೆಗಳನ್ನು ಒದಗಿಸಲಾಗುತ್ತಿದೆ. "ನಾವು ಸರ್ಕಾರಿ ಆರೋಗ್ಯ ಕೇಂದ್ರ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚುವರಿ ಹಾಸಿಗೆಗಳೊಂದಿಗೆ ವೈದ್ಯಕೀಯ ಸೌಲಭ್ಯಗಳ 24 ಗಂಟೆಗಳ ಲಭ್ಯತೆಗಾಗಿ ವ್ಯವಸ್ಥೆಯನ್ನು ಮಾಡಿದ್ದೇವೆ. ಸಂಚಾರವನ್ನು ಸುಗಮಗೊಳಿಸಲಾಗಿದೆ ಮತ್ತು ಸಾಕಷ್ಟು ಭದ್ರತಾ ತಪಾಸಣೆಗಳನ್ನು ಇರಿಸಲಾಗಿದೆ. ಟೆಂಟ್‌ಗಳು, ಧರ್ಮಶಾಲೆಗಳು ಮತ್ತು ಯಾತ್ರಾರ್ಥಿಗಳು ತಂಗಿರುವ ಹೋಟೆಲ್‌ಗಳಲ್ಲಿ ಹಾಲು, ಸಕ್ಕರೆ, ಚಹಾ, ಆಹಾರಧಾನ್ಯಗಳು ಮತ್ತು ತರಕಾರಿಗಳಂತಹ ಅಗತ್ಯ ವಸ್ತುಗಳ ಲಭ್ಯತೆ ಮತ್ತು ನಿಯಮಿತ ಪೂರೈಕೆಯನ್ನು ನಾವು ಖಚಿತಪಡಿಸಿಕೊಳ್ಳುತ್ತಿದ್ದೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ವಿಶೇಷ ವ್ಯವಸ್ಥೆಗಳೇನು?: ರಾಮನವಮಿಗೆ ವಿಶೇಷವಾಗಿ ಸರಯೂ ನದಿಯಲ್ಲಿ ಭಕ್ತಾದಿಗಳ ಸ್ನಾನಕ್ಕೆ ಅಧಿಕಾರಿಗಳು ವ್ಯವಸ್ಥೆ ಮಾಡಿದ್ದಾರೆ. ಸಾರ್ವಜನಿಕ ಶೌಚಾಲಯಗಳನ್ನು ಒದಗಿಸಲು ಮತ್ತು ನಿಯಮಿತವಾಗಿ ಶುಚಿಗೊಳಿಸುವಿಕೆಯತ್ತ ವಿಶೇಷ ಗಮನವನ್ನು ನೀಡಲಾಗುತ್ತಿದೆ. 2,000 ಕ್ಕೂ ಹೆಚ್ಚು ನೈರ್ಮಲ್ಯ ಕಾರ್ಮಿಕರನ್ನು ಸ್ವಚ್ಛತೆಗಾಗಿ ನೇಮಿಸಲಾಗಿದೆ. ರಾಮ್​ ಟೆಂಪಲ್​ ಟ್ರಸ್ಟ್‌ನ ಟ್ರಸ್ಟಿ ಅನಿಲ್​ ಮಿಶ್ರಾ ಈ ಬಗ್ಗೆ, "ಭಕ್ತರಿಗೆ ಸುಲಭ ದರ್ಶನವನ್ನು ಖಚಿತಪಡಿಸಿಕೊಳ್ಳಲು ಮತ್ತು ಯಾವುದೇ ಸಮಸ್ಯೆ ಬಂದೊದಗದಂತೆ ಮುಂಚಿತವಾಗಿ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವ್ಯವಸ್ಥೆಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ" ಎಂದು ಹೇಳಿದರು.

ಇದನ್ನೂ ಓದಿ: ಭವ್ಯ ರಾಮ ಮಂದಿರದಲ್ಲಿ ಮೊದಲ ರಾಮನವಮಿ: 4 ದಿನ ಗಣ್ಯರ ವಿಶೇಷ ದರ್ಶನ, ಆರತಿ ಸೇವೆ ರದ್ದು - RAM NAVAMI

ETV Bharat Logo

Copyright © 2024 Ushodaya Enterprises Pvt. Ltd., All Rights Reserved.