ETV Bharat / bharat

ಕರ್ನಾಟಕದ 4, ಉತ್ತರಪ್ರದೇಶ 10, ಹಿಮಾಚಲದ 1 ರಾಜ್ಯಸಭೆ ಸ್ಥಾನಕ್ಕೆ ಮತದಾನ

author img

By ETV Bharat Karnataka Team

Published : Feb 27, 2024, 10:11 AM IST

ಮೂರು ರಾಜ್ಯಗಳ 15 ರಾಜ್ಯಸಭೆ ಸ್ಥಾನಗಳಿಗೆ ಮತದಾನ ನಡೆಯುತ್ತಿದೆ.

ರಾಜ್ಯಸಭೆ ಚುನಾವಣೆ
ರಾಜ್ಯಸಭೆ ಚುನಾವಣೆ

ನವದೆಹಲಿ: ತೀವ್ರ ಕುತೂಹಲ ಕೆರಳಿಸಿರುವ ರಾಜ್ಯಸಭೆ ಚುನಾವಣೆಯ ಮತದಾನ ಇಂದು (ಮಂಗಳವಾರ) ಬೆಳಗ್ಗೆ 9 ಗಂಟೆಯಿಂದ ಆರಂಭವಾಗಿದೆ. ಕರ್ನಾಟಕ, ಹಿಮಾಚಲಪ್ರದೇಶ, ಉತ್ತರಪ್ರದೇಶದ 15 ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ.

ಉತ್ತರಪ್ರದೇಶದಲ್ಲಿ 10 ಸ್ಥಾನಗಳಿಗೆ 11 ಜನರು ಸ್ಪರ್ಧಿಸಿದ್ದಾರೆ. ಇದರಲ್ಲಿ 8 ಬಿಜೆಪಿ ಮತ್ತು ಮೂರು ಸಮಾಜವಾಗಿ ಪಕ್ಷ (ಎಸ್​ಪಿ)ದ ಅಭ್ಯರ್ಥಿಗಳಿದ್ದಾರೆ. ಹಿಮಾಚಲಪ್ರದೇಶದ 1 ಸ್ಥಾನಕ್ಕೆ ಕಾಂಗ್ರೆಸ್​ ಮತ್ತು ಬಿಜೆಪಿ ಮಧ್ಯೆ ಪೈಪೋಟಿ ಏರ್ಪಟ್ಟಿದ್ದು, ಮತದಾನ ಆರಂಭವಾಗಿದೆ.

ಕರ್ನಾಟಕದಲ್ಲಿನ 4 ಸ್ಥಾನಗಳಿಗೆ ಐವರು ಸ್ಪರ್ಧೆ ಮಾಡುತ್ತಿರುವ ಕಾರಣ ಅವಿರೋಧ ಆಯ್ಕೆ ಬದಲಿಗೆ ಚುನಾವಣೆ ನಡೆಯುತ್ತಿದೆ. ಇದರಲ್ಲಿ ಮೂರು ಕಾಂಗ್ರೆಸ್​, ಬಿಜೆಪಿ ಮತ್ತು ಜೆಡಿಎಸ್​​ ತಲಾ 1 ಸ್ಥಾನಗಳಲ್ಲಿ ಸ್ಪರ್ಧೆ ಮಾಡುತ್ತಿವೆ. ಇಂದು ಸಂಜೆ 4 ಗಂಟೆಯರೆಗೂ ಮತದಾನ ನಡೆಯಲಿದೆ. ತಡರಾತ್ರಿಯೊಳಗೆ ಚುನಾವಣಾ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ.

ಒಟ್ಟಾರೆ 15 ರಾಜ್ಯಗಳ 56 ಸ್ಥಾನಗಳಿಗೆ ಚುನಾವಣೆ ಘೋಷಣೆ ಮಾಡಲಾಗಿತ್ತು. ಅದರಲ್ಲಿ ಈ ಮೂರು ರಾಜ್ಯಗಳು ಹೊರತುಪಡಿಸಿ ಉಳಿದೆಲ್ಲೆಡೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. 41 ಅಭ್ಯರ್ಥಿಗಳ ಈಗಾಗಲೇ ರಾಜ್ಯಸಭೆಗೆ ನೇರವಾಗಿ ನಾಮ ನಿರ್ದೇಶನ ಮಾಡಲಾಗಿದೆ.

ಕುಪೇಂದ್ರ ರೆಡ್ಡಿ ಪ್ರತಿಕ್ರಿಯೆ: ಕರ್ನಾಟಕದ ಜೆಡಿಎಸ್​ ಅಭ್ಯರ್ಥಿಯಾದ ಕುಪೇಂದ್ರ ರೆಡ್ಡಿ ಮತದಾನಕ್ಕೂ ಮುನ್ನ ಮಾತನಾಡಿ, ರಾಜ್ಯದಲ್ಲಿ ಅಡ್ಡ ಮತದಾನವಾಗುವ ಸಾಧ್ಯತೆ ಇದೆ. ನಾವು ಯಾರನ್ನೂ ಬೆದರಿಸಿ ಮತ ಕೇಳಿಲ್ಲ. ಹಾಗೊಂದು ವೇಳೆ ಮಾಡಿದ್ದರೆ, ಕಾಂಗ್ರೆಸ್​ ಚುನಾವಣಾ ಆಯೋಗಕ್ಕೆ ದೂರು ನೀಡಲಿ. ಅಚ್ಚರಿಯ ಫಲಿತಾಂಶ ಬರುವುದು ಖಂಡಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇತ್ತ, ಉತ್ತರಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್​, ಮಾಜಿ ಸಿಎಂ ಅಖಿಲೇಶ್​ ಯಾದವ್​ ಅವರು ತಮ್ಮ ಹಕ್ಕನ್ನು ಮತ ಕೇಂದ್ರದಲ್ಲಿ ಚಲಾಯಿಸಿದರು. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮಾತನಾಡಿ, ಮೂವರೂ ಎಸ್‌ಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ. ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಏನು ಬೇಕಾದರೂ ಮಾಡಲು ಹಿಂಜರಿಯುವುದಿಲ್ಲ. ಇತರರಿಗೆ ಖೆಡ್ಡಾ ತೋಡಲು ಮುಂದಾದವರು ಅವರೇ ಅದರಲ್ಲಿ ಬೀಳುತ್ತಾರೆ. ಇದು ಫಲಿತಾಂಶದ ಬಳಿಕ ಗೊತ್ತಾಗಲಿದೆ ಎಂದು ಹೇಳಿದರು.

ಮತದಾನ ಪ್ರಕ್ರಿಯೆ ಹೀಗಿರುತ್ತದೆ

  • ಚುನಾವಣಾಧಿಕಾರಿ ನೀಡುವ ನೇರಳ ಸ್ಕೆಚ್​ ಪೆನ್ನಿಂದ ಮಾತ್ರ ಮತದಾನವನ್ನು ಗುರುತಿಸಬೇಕು.
  • ಪ್ರಥಮ ಪ್ರಾಶಸ್ತ್ಯವಾಗಿ ಆಯ್ಕೆ ಮಾಡುವ ಅಭ್ಯರ್ಥಿಯ ಹೆಸರಿನ ಎದುರು '1' ಎಂಬ ಅಂಕಿಯನ್ನು ಬರೆಯುವ ಮೂಲಕ ಮತ ನೀಡಬೇಕು.
  • ಅಂಕಿಗಳಲ್ಲಿ ಮಾತ್ರ ಮತವನ್ನು ನಮೂದಿಸಬೇಕು. ಪದಗಳಲ್ಲಿ ಬರೆದರೆ ಅದು ಅಸಿಂಧುವಾಗಲಿದೆ.
  • ಅಭ್ಯರ್ಥಿಗಳು ಎಷ್ಟೇ ಇದ್ದರೂ, ಪ್ರಾಶಸ್ತ್ಯ ಮತವಾಗಿ 1 ರಿಂದ ಆರಂಭಿಸಿ 6 ವರೆಗೂ ಮತ ನೀಡಬಹುದು.
  • ಮತಪತ್ರದಲ್ಲಿ ಹೆಸರು, ಯಾವುದೇ ಪದ, ಸಹಿ, ಹೆಬ್ಬೆಟ್ಟಿನ ಗುರುರು ಹಾಕುವಂತಿಲ್ಲ
  • ಮತದಾನದ ಬಳಿಕ ಅದನ್ನು ಆಯಾ ರಾಜಕೀಯ ಪಕ್ಷಗಳ ಅಧಿಕೃತ ಏಜೆಂಟ್‌ರಿಗೆ ಮಾತ್ರ ತೋರಿಸಬೇಕು. ನಂತರ ಮತ ಪತ್ರವನ್ನು ಮತಪೆಟ್ಟಿಗೆಯಲ್ಲಿ ಹಾಕಬೇಕು.
  • ಪಕ್ಷೇತರ ಮತದಾರರು ಯಾವುದೇ ರಾಜಕೀಯ ಪಕ್ಷಗಳಿಗೆ ಸೇರದ ಕಾರಣ ಅವರು ಮತಪತ್ರವನ್ನು ನೇರವಾಗಿ ಮತಪೆಟ್ಟಿಗೆಗೆ ಹಾಕಬಹುದು.

ಇದನ್ನೂ ಓದಿ: ರಾಜ್ಯಸಭೆ ಚುನಾವಣೆ: ನಾಳೆ ಬೆಳಗ್ಗೆ 9ರಿಂದ 4 ಗಂಟೆವರೆಗೆ ಮತದಾನ; ಸಂಜೆ 5ಕ್ಕೆ ಎಣಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.