ETV Bharat / bharat

ಕಲಬುರಗಿ-ಬೆಂಗಳೂರು, ಮೈಸೂರು-ಚೆನ್ನೈ, ತಿರುವನಂತಪುರ-ಮಂಗಳೂರು ವಂದೇ ಭಾರತ್​ ರೈಲಿಗೆ ಪ್ರಧಾನಿ ಮೋದಿ ಚಾಲನೆ

author img

By ETV Bharat Karnataka Team

Published : Mar 12, 2024, 10:52 AM IST

Updated : Mar 12, 2024, 11:10 AM IST

85 ಸಾವಿರ ಕೋಟಿ ರೂ ವೆಚ್ಚದ ರೈಲ್ವೆ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್​ನ ಅಹಮದಾಬಾದ್​​ನಿಂದ ಚಾಲನೆ ನೀಡಿದರು. 10 ಹೊಸ ವಂದೇ ಭಾರತ್​ ರೈಲುಗಳಿಗೂ ಹಸಿರು ನಿಶಾನೆ ತೋರಿಸಲಾಯಿತು.

ವಂದೇ ಭಾರತ್​ ರೈಲಿಗೆ ಪ್ರಧಾನಿ ಮೋದಿ ಚಾಲನೆ
ವಂದೇ ಭಾರತ್​ ರೈಲಿಗೆ ಪ್ರಧಾನಿ ಮೋದಿ ಚಾಲನೆ

ಅಹಮದಾಬಾದ್: ಕರ್ನಾಟಕದ ಕಲಬುರಗಿ-ಬೆಂಗಳೂರು ಮತ್ತು ತಿರುವನಂತಪುರಂನಿಂದ ಮಂಗಳೂರುವರೆಗೆ ವಿಸ್ತರಿಸಿದ ರೈಲು ಸೇರಿದಂತೆ 10 ಹೊಸ ವಂದೇ ಭಾರತ್​ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಚಾಲನೆ ನೀಡಿದರು. ಜೊತೆಗೆ ದೇಶದ ವಿವಿಧ ಭಾಗಗಳಲ್ಲಿನ 85 ಸಾವಿರ ಕೋಟಿ ರೂಪಾಯಿಗಳ ರೈಲ್ವೆ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು.

ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಮೋದಿ, "ನಾನು ನನ್ನ ಜೀವನವನ್ನು ರೈಲ್ವೆ ಹಳಿಗಳ ಮೇಲೆ ಪ್ರಾರಂಭಿಸಿದೆ. ಹಾಗಾಗಿ ನಮ್ಮ ರೈಲ್ವೆ ಸಂಪರ್ಕ ಎಷ್ಟು ಕೆಟ್ಟದಾಗಿದೆ ಎಂದು ನನಗೆ ಚೆನ್ನಾಗಿ ತಿಳಿದಿದೆ. ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರವು ರೈಲ್ವೆ ಅಭಿವೃದ್ಧಿಗೆ ಹಿಂದಿನ ಸರ್ಕಾರಕ್ಕಿಂತಲೂ 6 ಪಟ್ಟು ಹೆಚ್ಚು ಹಣವನ್ನು ಖರ್ಚು ಮಾಡಿದೆ ಎಂದು ಹೇಳಿದರು.

ಈ ಹಿಂದೆ ಮಂಡಿಸಲಾಗುತ್ತಿದ್ದ ಪ್ರತ್ಯೇಕ ರೈಲ್ವೆ ಬಜೆಟ್ ಅನ್ನು ನಾವು ನಿಲ್ಲಿಸಿದೆವು. ಅದನ್ನು ಕೇಂದ್ರ ಬಜೆಟ್​ನಲ್ಲಿ ಸೇರಿಸಿದೆವು. ಇದರಿಂದ ಸರ್ಕಾರದ ಹಣವನ್ನು ರೈಲ್ವೆ ಅಭಿವೃದ್ಧಿಗೆ ಬಳಸಬಹುದಾಗಿದೆ. ನಾವು ಮಾಡುವ ಅಭಿವೃದ್ಧಿ ಕೆಲಸಗಳು ಚುನಾವಣೆ ಗೆಲ್ಲಲು ಮಾತ್ರ ಅಲ್ಲ, ರಾಷ್ಟ್ರದ ಪ್ರಗತಿಯ ದೃಷ್ಟಿಕೋನ ಹೊಂದಿರುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

10 ವಂದೇ ಭಾರತ್​ ರೈಲಿಗೆ ಚಾಲನೆ: ಕಲಬುರಗಿ-ಸರ್​ ಎಂ ವಿಶ್ವೇಶ್ವರಯ್ಯ ಟರ್ಮಿನಲ್​ ಬೆಂಗಳೂರು, ಅಹಮದಾಬಾದ್-ಮುಂಬೈ ಸೆಂಟ್ರಲ್, ಸಿಕಂದರಾಬಾದ್-ವಿಶಾಖಪಟ್ಟಣಂ, ಮೈಸೂರು-ಡಾ ಎಂಜಿಆರ್ ಸೆಂಟ್ರಲ್ (ಚೆನ್ನೈ), ಪಾಟ್ನಾ-ಲಖನೌ, ನ್ಯೂ ಜಲಪೈಗುರಿ-ಪಾಟ್ನಾ, ಪುರಿ-ವಿಶಾಖಪಟ್ಟಣಂ, ಲಖನೌ-ಡೆಹ್ರಾಡೂನ್, ರಾಂಚಿ-ವಾರಣಾಸಿ ಮತ್ತು ಖಜುರಾಹೊ- ದೆಹಲಿ (ನಿಜಾಮುದ್ದೀನ್) ನಡುವಿನ 10 ಹೊಸ ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಚಾಲನೆ ನೀಡಿದರು.

ಜೊತೆಗೆ ಅಹಮದಾಬಾದ್-ಜಾಮ್‌ನಗರ ವಂದೇ ಭಾರತ್ ರೈಲನ್ನು ದ್ವಾರಕಾವರೆಗೆ, ಅಜ್ಮೀರ್-ದೆಹಲಿ ಸರೈ ರೋಹಿಲ್ಲಾ ರೈಲನ್ನು ಚಂಡೀಗಢದವರೆಗೆ, ಗೋರಖ್‌ಪುರ-ಲಖನೌ ವಂದೇ ಭಾರತ್ ಅನ್ನು ಪ್ರಯಾಗರಾಜ್‌ವರೆಗೆ ಮತ್ತು ತಿರುವನಂತಪುರಂ-ಕಾಸರಗೋಡು ವಂದೇ ಭಾರತ್ ಅನ್ನು ಮಂಗಳೂರಿನವರೆಗೆ ವಿಸ್ತರಿಸಿದ 4 ವಂದೇ ಭಾರತ್ ರೈಲುಗಳಿಗೆ ಇದೇ ವೇಳೆ ಮೋದಿ ಚಾಲನೆ ನೀಡಿದರು. ಇದಲ್ಲದೇ, ಅಸನ್ಸೋಲ್ ಮತ್ತು ಹಟಿಯಾ, ತಿರುಪತಿ ಮತ್ತು ಕೊಲ್ಲಂ ನಿಲ್ದಾಣಗಳನ್ನು ಸಂಪರ್ಕಿಸುವ ಎರಡು ಹೊಸ ಪ್ಯಾಸೆಂಜರ್ ರೈಲುಗಳಿಗೂ ಹಸಿರು ನಿಶಾನೆ ತೋರಿದರು.

ವಿವಿಧ ರೈಲು ನಿಲ್ದಾಣಗಳಲ್ಲಿ 50 ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳನ್ನು ಲೋಕಾರ್ಪಣೆ ಮಾಡಿದರು. ಈ ಕೇಂದ್ರಗಳು ಜನರಿಗೆ ಕೈಗೆಟಕುವ ಮತ್ತು ಗುಣಮಟ್ಟದ ಜೆನೆರಿಕ್ ಔಷಧಗಳನ್ನು ನೀಡಲಿವೆ. ಪ್ರಧಾನಿಯವರು ದೇಶಕ್ಕೆ 51 ಗತಿ ಶಕ್ತಿ ಮಲ್ಟಿ-ಮೋಡಲ್ ಕಾರ್ಗೋ ಟರ್ಮಿನಲ್‌ಗಳನ್ನು ಸಮರ್ಪಿಸಿದರು.

ಇದನ್ನೂ ಓದಿ: ಬಿಜೆಪಿ ಸಿಇಸಿ ಸಭೆ ಮುಕ್ತಾಯ: ಕರ್ನಾಟಕ, ತೆಲಂಗಾಣ ಸೇರಿ 7 ರಾಜ್ಯಗಳ 90 ಅಭ್ಯರ್ಥಿಗಳ ಹೆಸರು ಅಂತಿಮ

Last Updated :Mar 12, 2024, 11:10 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.