ತಮ್ಮ ರಾಷ್ಟ್ರದಲ್ಲಿ ಬಂಡುಕೋರ ಪಡೆಗಳೊಂದಿಗೆ ಸಂಘರ್ಷ: ಗಡಿದಾಟಿ ಭಾರತಕ್ಕೆ ಬಂದ ಮ್ಯಾನ್ಮಾರ್ ಸೈನಿಕರು

author img

By ETV Bharat Karnataka Desk

Published : Jan 20, 2024, 8:26 PM IST

Myanmar army personnel in Mizoram

ಮ್ಯಾನ್ಮಾರ್‌ನಲ್ಲಿನ ಬಂಡುಕೋರ ಪಡೆಗಳು ಮತ್ತು ಜುಂಟಾ ಆಡಳಿತದ ನಡುವೆ ಸಂಘರ್ಷ ಉಲ್ಬಣಗೊಳ್ಳುತ್ತಿದೆ. ಭಾರಿ ಗುಂಡಿನ ಚಕಮಕಿಯಿಂದ ತಪ್ಪಿಸಿಕೊಂಡು ಮ್ಯಾನ್ಮಾರ್ ಸೈನಿಕರು ಗಡಿದಾಟಿ ಮಿಜೋರಾಂಗೆ ಬಂದಿದ್ದಾರೆ.

ನವದೆಹಲಿ: ಮ್ಯಾನ್ಮಾರ್ ಸೇನಾ ಸಿಬ್ಬಂದಿಯನ್ನು ಭಾರತದ ಗಡಿಯು ಮಿಜೋರಾಂ ಪ್ರವೇಶಿಸಿದ್ದಾರೆ. ತಮ್ಮ ದೇಶದಲ್ಲಿರುವ ಬಂಡುಕೋರ ಪಡೆಗಳೊಂದಿಗಿನ ಭಾರಿ ಗುಂಡಿನ ಚಕಮಕಿಯಿಂದ ತಪ್ಪಿಸಿಕೊಂಡು ಮಿಜೋರಾಂಗೆ ಒಳಗೆ ಬಂದಿದ್ದಾರೆ ಎಂದು ತಿಳಿದು ಬಂದಿದೆ. ಮ್ಯಾನ್ಮಾರ್ ಸೇನಾ ಸಿಬ್ಬಂದಿಯನ್ನು ಶೀಘ್ರದಲ್ಲಿಯೇ ಸ್ವದೇಶಕ್ಕೆ ಕಳುಹಿಸಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿದೆ.

ಮ್ಯಾನ್ಮಾರ್‌ನಲ್ಲಿನ ಬಂಡುಕೋರ ಪಡೆಗಳು ಮತ್ತು ಜುಂಟಾ ಆಡಳಿತದ ನಡುವೆ ಸಂಘರ್ಷ ಉಲ್ಬಣಗೊಳ್ಳುತ್ತಿದೆ. ಎರಡು ಪಡೆಗಳ ನಡುವೆ ಗುಂಡಿನ ಚಕಮಕಿ ಬಳಿಕ ಸುಮಾರು 280 - 300 ಮ್ಯಾನ್ಮಾರ್ ಸೇನಾ ಸಿಬ್ಬಂದಿ ಭಾರತಕ್ಕೆ ಪಲಾಯನ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದೆರಡು ದಿನಗಳಲ್ಲಿ ಮ್ಯಾನ್ಮಾರ್ ಭದ್ರತಾ ಸಿಬ್ಬಂದಿ ಮಿಜೋರಾಂ ಪ್ರವೇಶಿಸಿದ್ದಾರೆ. ಶೀಘ್ರವೇ ಎಲ್ಲರನ್ನೂ ವಾಪಸ್ ಕಳುಹಿಸಲಾಗುತ್ತದೆ ಎಂದು ಸರ್ಕಾರದ ಅಧಿಕಾರಿಯೊಬ್ಬರು 'ಈಟಿವಿ ಭಾರತ್​​'ಗೆ ಖಚಿತ ಪಡಿಸಿದ್ದಾರೆ.

ಮತ್ತೊಂದೆಡೆ, ಶಿಲ್ಲಾಂಗ್‌ನಲ್ಲಿ ನಡೆದ ಈಶಾನ್ಯ ಕೌನ್ಸಿಲ್ (ಎನ್‌ಇಸಿ) ಮುಕ್ತಾಯಗೊಂಡಿದೆ. ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಗೃಹ ಸಚಿವ ಅಮಿತ್ ಶಾ ಅವರಿಗೆ ಮಿಜೋರಾಂ ಮುಖ್ಯಮಂತ್ರಿ ಲಾಲ್ದು ಹೋಮ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಲಾಲ್ದು ಹೋಮ, ನೆರೆಯ ದೇಶದಲ್ಲಿ ಪರಿಸ್ಥಿತಿ ಹದಗೆಡುತ್ತಿದ್ದಂತೆ ಕಾಲಕಾಲಕ್ಕೆ ಮ್ಯಾನ್ಮಾರ್ ಸೈನ್ಯ ಸೇರಿದಂತೆ ಮ್ಯಾನ್ಮಾರ್‌ನ ಜನರು ಮಿಜೋರಾಂಗೆ ಬರುತ್ತಾರೆ. ಮಾನವೀಯ ಆಧಾರದ ಮೇಲೆ ನಾವು ಅವರಿಗೆ ಉಳಿಯಲು ಅವಕಾಶ ನೀಡಿದ್ದೇವೆ ಎಂದು ತಿಳಿಸಿದ್ದಾರೆ.

ಇದೇ ವೇಳೆ, ಅಮಿತ್​ ಶಾ ಅವರೊಂದಿಗೆ ಚರ್ಚೆ ವೇಳೆ ಸಿಎಂ ಲಾಲ್ದು ಹೋಮ ಮ್ಯಾನ್ಮಾರ್ ಸೇನೆಯನ್ನು ಅವರ ದೇಶಕ್ಕೆ ವಾಪಸ್ ಕಳುಹಿಸಲು ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮ್ಯಾನ್ಮಾರ್​ ಸೇನೆಯ ವಿಷಯದ ಬಗ್ಗೆ ಕೇಂದ್ರ ಗೃಹ ಸಚಿವರೊಂದಿಗೆ ಲಾಲ್ದುಹೋಮ ಚರ್ಚಿಸಿದ್ದಾರೆ. ಆಗ ಮಿಜೋರಾಂ ಸರ್ಕಾರಕ್ಕೆ ಅಗತ್ಯ ಇರುವ ಎಲ್ಲ ಸಹಕಾರ ನೀಡುವುದಾಗಿ ಅಮಿತ್​ ಶಾ ಭರವಸೆ ನೀಡಿದ್ದಾರೆ ಎಂದು ಸಿಎಂ ಪ್ರಧಾನ ಕಾರ್ಯದರ್ಶಿ ಅಂಗು ಮಾಹಿತಿ ನೀಡಿದ್ದಾರೆ.

ಅಸ್ಸೋಂ ರೈಫಲ್ಸ್ ಅಧಿಕಾರಿಯೊಬ್ಬರು ಮಾತನಾಡಿ, ಎಲ್ಲ ಮ್ಯಾನ್ಮಾರ್ ಸೈನಿಕರನ್ನು ಹಿಂದಕ್ಕೆ ಕಳುಹಿಸಲಾಗುವುದು. ಈ ಹಿಂದೆಯೂ ನಾವು ಭಾರತಕ್ಕೆ ಪ್ರವೇಶಿಸಿದ ಎಲ್ಲ ಸೇನಾ ಸಿಬ್ಬಂದಿ ಕಳುಹಿಸಿದ್ದೇವೆ ಎಂದು ಹೇಳಿದ್ದಾರೆ. ಮ್ಯಾನ್ಮಾರ್‌ನೊಂದಿಗೆ ಹಂಚಿಕೊಂಡಿರುವ ಭಾರತದ ಅಂತರಾಷ್ಟ್ರೀಯ ಗಡಿಯಲ್ಲಿ ಅಸ್ಸೋಂ ರೈಫಲ್ಸ್ ಕಾವಲು ಕಾಯುತ್ತಿದೆ.

ಸದ್ಯಕ್ಕೆ 100 ಕ್ಕೂ ಹೆಚ್ಚು ಮ್ಯಾನ್ಮಾರ್ ಸೇನಾ ಸಿಬ್ಬಂದಿಯನ್ನು ಅವರ ದೇಶಕ್ಕೆ ವಾಪಸ್ ಕಳುಹಿಸಲಾಗಿದೆ. ಇದಕ್ಕೂ ಮೊದಲು ಮ್ಯಾನ್ಮಾರ್ ಸೈನಿಕರನ್ನು ರಕ್ಷಣಾ ಅಧಿಕಾರಿಗಳು ಮಣಿಪುರ - ಮ್ಯಾನ್ಮಾರ್ ಗಡಿಯ ಮೋರೆ ಪ್ರದೇಶಕ್ಕೆ ವಿಮಾನದಲ್ಲಿ ರವಾನಿಸಲಾಗಿತ್ತು. ಅಲ್ಲಿಂದ ಯೋಧರನ್ನು ಮ್ಯಾನ್ಮಾರ್ ಪಟ್ಟಣವಾದ ತಮುಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

2023ರ ನವೆಂಬರ್​ನಲ್ಲಿ ಪೀಪಲ್ಸ್ ಡಿಫೆನ್ಸ್ ಫೋರ್ಸ್​ನೊಂದಿಗೆ ಗುಂಡಿನ ಚಕಮಕಿಯ ನಂತರ 29 ಮ್ಯಾನ್ಮಾರ್ ಸೈನಿಕರು ಮಿಜೋರಾಂಗೆ ಪ್ರವೇಶಿಸಿದ್ದರು. ಆಗಲೂ ಎಲ್ಲರನ್ನೂ ತವರು ರಾಷ್ಟಕ್ಕೆ ಕಳುಹಿಸಲಾಗಿತ್ತು. ಅಲ್ಲದೇ, ಅದೇ ತಿಂಗಳು 5,000ಕ್ಕೂ ಹೆಚ್ಚು ನಾಗರಿಕರು ಸಹ ಗಡಿದಾಟಿ ಮಿಜೋರಾಂಗೆ ಬಂದಿದ್ದರು. ಈಗಾಗಲೇ ಇವರಲ್ಲಿ ಹೆಚ್ಚಿನವರು ತಮ್ಮ ದೇಶಕ್ಕೆ ಮರಳಿದ್ದಾರೆ. ಮಿಜೋರಾಂ ರಾಜ್ಯದ ಚಂಫೈ, ಸಿಯಾಹಾ, ಲಾಂಗ್ ಟ್ಲಾಯ್, ಸೆರ್ಚಿಪ್, ಹ್ನಾಥಿಯಲ್ ಮತ್ತು ಸೈಚುಯಲ್ ಸೇರಿದಂತೆ ಆರು ಜಿಲ್ಲೆಗಳು ಮ್ಯಾನ್ಮಾರ್‌ನೊಂದಿಗೆ 510 ಕಿಮೀ ಉದ್ದದ ಗಡಿ ಹಂಚಿಕೊಂಡಿದೆ.

ಇದನ್ನೂ ಓದಿ: ಪಂಜಾಬ್​​ ಗಡಿಯಲ್ಲಿ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡು ವಶ: ಭಾರಿ ಬಿಗಿ ಭದ್ರತೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.