ಹೈದರಾಬಾದ್(ತೆಲಂಗಾಣ): ಲೋಕಸಭೆ ಚುನಾವಣೆಯ ಬಳಿಕ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದು, ನರೇಂದ್ರ ಮೋದಿ ಅವರೇ ಮುಂದಿನ ಪೂರ್ಣ ಅವಧಿಗೆ ಪ್ರಧಾನಿಯಾಗಿರಲಿದ್ದಾರೆ. ಅವರ ನಾಯಕತ್ವದಲ್ಲೇ ದೇಶವನ್ನು ಮುನ್ನಡೆಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಮೋದಿ ಅವರಿಗೆ 2025ಕ್ಕೆ 75 ವರ್ಷವಾಗಲಿದೆ. ಪಕ್ಷದ ನಿಯಮದಂತೆ ಅವರನ್ನು ಕೆಳಗಿಳಿಸಿ ಅಮಿತ್ ಶಾ ಪ್ರಧಾನಿಯಾಗಲಿದ್ದಾರೆ ಎಂಬ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿಕೆಗೆ ಗೃಹ ಸಚಿವರು ಸ್ಪಷ್ಟನೆ ನೀಡಿದ್ದಾರೆ.
2024ರ ಲೋಕಸಭಾ ಚುನಾವಣೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆಸಲಾಗುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ಮುಂದಿನ 5 ವರ್ಷ ಮೋದಿ ಅವರೇ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ. ಬದಲಾವಣೆಯ ಮಾತೇ ಇಲ್ಲ ಎಂದರು.
75 ವರ್ಷದ ನಿಯಮವಿಲ್ಲ: ಬಿಜೆಪಿ ಸಂವಿಧಾನದಲ್ಲಿ 75 ವರ್ಷದ ನಿಯಮವಿಲ್ಲ. ಇದು ವಿಪಕ್ಷಗಳ ಸುಳ್ಳು ಹೇಳಿಕೆಯಾಗಿದೆ. I.N.D.I.A ಕೂಟದ ಪ್ರತಿ ನಾಯಕರಿಗೂ ಈ ಮಾತನ್ನು ಹೇಳುತ್ತಿದ್ದೇನೆ. ಮುಂದಿನ 5 ವರ್ಷವೂ ಮೋದಿ ಅವರೇ ಪ್ರಧಾನಿಯಾಗಿ ಇರಲಿದ್ದಾರೆ ಎಂದು ನುಡಿದರು.
ಮೋದಿಗೆ 75 ವರ್ಷ ತುಂಬಿದ ಬಳಿಕ ನಾನು ಪ್ರಧಾನಿಯಾಗುವ ಪ್ರಮೇಯವೇ ಬರುವುದಿಲ್ಲ. ಚುನಾವಣೆಯಲ್ಲಿ ನಾನು ಪ್ರಧಾನಿಯಾಗಲು ಮತಯಾಚನೆ ಮಾಡುತ್ತಿಲ್ಲ. ಈ ವಿಚಾರದಲ್ಲಿ ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ ಎಂದರು.
ಕೇಜ್ರಿವಾಲ್ ಹೇಳಿದ್ದೇನು?: ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಜೈಲು ಪಾಲಾಗಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮಧ್ಯಂತರ ಜಾಮೀನಿನ ಮೇಲೆ ಹೊರಬಂದಿದ್ದು, ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದರು.
ಮೋದಿ ಅವರಿಗೆ 2025ರ ಸೆಪ್ಟೆಂಬರ್ 17ಕ್ಕೆ 75 ವರ್ಷ ತುಂಬುತ್ತದೆ. ಪಕ್ಷದಲ್ಲಿರುವ ನಿಯಮದಂತೆ 75 ವರ್ಷ ವಯಸ್ಸಿನವರು ರಾಜಕೀಯದಿಂದ ನಿವೃತ್ತರಾಗಬೇಕು. ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಸುಮಿತ್ರಾ ಮಹಾಜನ್ರಂತೆ ಮೋದಿ ಕೂಡ ನಿವೃತ್ತರಾಗಲಿದ್ದಾರೆ. ಹೀಗಾಗಿ ಚುನಾವಣೆಯಲ್ಲಿ ಅಮಿತ್ ಶಾ ಅವರನ್ನು ಪ್ರಧಾನಿಯನ್ನಾಗಿ ಮಾಡಲು ಮತಯಾಚನೆ ಮಾಡುತ್ತಿದ್ದಾರೆ ಎಂದು ಹೇಳಿದ್ದರು.