ಲೋಕಸಭೆ ಚುನಾವಣೆಯಲ್ಲಿ 400ರ ಗುರಿ ಸಾಧಿಸಲು 'ಗ್ಯಾನ್' ನತ್ತ ಬಿಜೆಪಿ ಚಿತ್ತ: ಏನಿದು ’ಗ್ಯಾನ್​ ಮೆಗಾ ಪ್ಲಾನ್​’?

author img

By ETV Bharat Karnataka Team

Published : Feb 23, 2024, 9:15 AM IST

Mission 2024: BJP to reach out to 'GYAN' to achieve target of 400 paar in Lok Sabha polls

ಬಡವರು, ಯುವಕರು, ರೈತರು ಹಾಗೂ ಮಹಿಳೆಯರು ಹೀಗೆ ನಾಲ್ಕು ವರ್ಗಗಳನ್ನು ಗುರಿಯಾಗಿಸಿಕೊಂಡು ಬಿಜೆಪಿ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಇದಕ್ಕೆ ಗ್ಯಾನ್​ ಎಂದು ಪ್ರಧಾನಿ ನಾಮಕರಣ ಮಾಡಿದ್ದಾರೆ. ಈ ಅಂಶಗಳನ್ನೇ ಪ್ರಧಾನವಾಗಿರಿಸಿಕೊಂಡು ಈ ಬಾರಿಯ ಲೋಕಸಭೆ ಚುನಾವಣೆ ಎದುರಿಸಲು ಬಿಜೆಪಿ ಸನ್ನದ್ಧವಾಗಿದೆ.

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಬಿಜೆಪಿ ಪಕ್ಷ 370-ಪ್ಲಸ್ ಮತ್ತು ಒಟ್ಟಾರೆ ಎನ್​ಡಿಎ 400 ಸ್ಥಾನಗಳಲ್ಲಿ ಗೆಲ್ಲಲು ಬಿಜೆಪಿ ಪ್ಲಾನ್​ ಹಾಕಿಕೊಂಡಿದೆ. ಈ ಬಾರಿಯೂ ಮೋದಿ ಅವರನ್ನೇ ಪ್ರಧಾನಿಯಾಗಿ ಮುಂದುವರೆಸುವ ಉದ್ದೇಶದಿಂದ ಬಿಜೆಪಿ ಮಿಷನ್​ 2024 ಹಮ್ಮಿಕೊಂಡಿದ್ದು, ಗುರಿ ಸಾಧಿಸಲು ಮುಂದಾಗಿದೆ.

ಅಷ್ಟಕ್ಕೂ ಏನಿದು ಗ್ಯಾನ್​: ಗ್ಯಾನ್​ ಎಂದರೆ ​ 'ಗರೀಬ್' (ಬಡವರು), ಯುವ (ಯುವಕರು), ಅನ್ನದಾತ (ರೈತರು) ಮತ್ತು ನಾರಿ (ಮಹಿಳೆಯರು) ಎಂಬುದಾಗಿದೆ. ಬಡವರು, ಯುವ ಸಮುದಾಯ, ರೈತರು ಮತ್ತು ಮಹಿಳೆಯರನ್ನು ಹೆಚ್ಚೆಚ್ಚು ಮನವೊಲಿಸಿ ಅವರನ್ನ ಪಕ್ಷದತ್ತ ಸೆಳೆಯುವುದು ಹಾಗೂ ಈ ನಾಲ್ಕೂ ಅಂಶಗಳ ಮೇಲೆಯೇ ಹೆಚ್ಚಿನ ಒತ್ತು ನೀಡಿ ಯೋಜನೆ ಜಾರಿ ಹಾಗೂ ಪ್ರಚಾರವನ್ನು ಮಾಡುವುದು ಬಿಜೆಪಿಯ ಮೆಗಾ ಪ್ಲಾನ್​ ಆಗಿದೆ.

ಇದೇ ಅಂಶಗಳ ಮೇಲೆ ನಡೆದಿತ್ತು ಪಂಚರಾಜ್ಯ ಚುನಾವಣೆ: ಪಂಚರಾಜ್ಯಗಳ ಚುನಾವಣೆಯಲ್ಲಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್​ಗಢದಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿತ್ತು. ಈ ರಾಜ್ಯಗಳಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮೋದಿ ಅವರು, ಬಡವರು, ಯುವಕರು, ರೈತರು ಮತ್ತು ಮಹಿಳೆಯರಿಗೆ ಸಂಬಂಧಿಸಿದಂತೆ ತಮ್ಮ ಭಾಷಣಗಳಲ್ಲಿ ಹೆಚ್ಚು ಮಾತನಾಡಿದ್ದರು. ಯುವಕರು ಮತ್ತು ಮಹಿಳೆಯರಿಗೆ ಉದ್ಯೋಗ ಹಾಗೂ ಕಲ್ಯಾಣಗಳ ಬಗ್ಗೆ ವಾಗ್ದಾನ ಮಾಡಿದ್ದರು. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಈ ನಾಲ್ಕು ಅಂಶಗಳ ಮೇಲೆಯೇ ಬಿಜೆಪಿ ಕೇಂದ್ರೀಕರಿಸಲು ನಿರ್ಧರಿಸಿದ್ದು, ಈ ಆಧಾರದ ಮೇಲೆಯೇ ತನ್ನ ಕಾರ್ಯತಂತ್ರ ರೂಪಿಸುತ್ತಿದೆ.

ಮೆಗಾ ಪ್ರಚಾರಕ್ಕೆ ಮಹಾ ಪ್ಲಾನ್​: ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಈ ನಾಲ್ಕು ವರ್ಗಗಳ ಮೇಲೆ ಕೇಂದ್ರೀಕರಿಸಿ ಈ ಬಾರಿ ವ್ಯಾಪಕ ಪ್ರಚಾರ ನಡೆಸಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ಚುನಾವಣಾ ಪೂರ್ವದಲ್ಲಿ ಈ ವರ್ಗಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ. ಮಿಷನ್ ಜ್ಞಾನ್ ಮುನ್ನಡೆಸುವ ಮತ್ತು ಗುರಿ ಸಾಧಿಸುವ ಕಾರ್ಯವನ್ನು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುನಿಲ್ ಬನ್ಸಾಲ್, ಉಪಾಧ್ಯಕ್ಷ ಬಿಜಯಂತ್ (ಜೈ) ಪಾಂಡಾ, ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಮತ್ತು ಶಿವಪ್ರಕಾಶ್ ಸೇರಿದಂತೆ ಬಿಜೆಪಿಯ ಪ್ರಮುಖರು ಮತ್ತು ವರಿಷ್ಠರಿಗೆ ನೀಡಲಾಗಿದೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.

ಪಶ್ಚಿಮ ಬಂಗಾಳದಲ್ಲಿ ಮೋದಿ ರಣತಂತ್ರ: ಪ್ರಧಾನಿ ಮೋದಿಯವರು ಈ ಬಾರಿ ಪಶ್ಚಿಮ ಬಂಗಾಳದ ಮೇಲೆಯೂ ಹೆಚ್ಚಿನ ಗಮನ ಹರಿಸಿದ್ದಾರೆ. ಕಳೆದ ಬಾರಿ ಬಂಗಾಳದ 42 ಸ್ಥಾನಗಳಲ್ಲಿ 18 ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸಿತ್ತು. ಈ ಬಾರಿ ಈ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಪಣ ತೊಟ್ಟಿದೆ. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಪಶ್ಚಿಮ ಬಂಗಾಳದಿಂದ, ದೇಶದ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಇದು ಎಂದು ನಡೆಯುತ್ತದೆ ಎಂಬ ಬಗ್ಗೆ ಪಕ್ಷ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.

ದೇಶಾದ್ಯಂತ ಮಹಿಳಾ ಮತದಾರರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾಡುವ ಭಾಷಣದ ಸ್ಥಳವೂ ಮಹತ್ವದ್ದಾಗಿದೆ. ಏಕೆಂದರೆ ಕಳೆದ ಹಲವು ವಾರಗಳಿಂದ ಪಶ್ಚಿಮ ಬಂಗಾಳ ಸಂದೇಶ್​ ಖಾಲಿ ಘಟನೆ ಭಾರಿ ಸದ್ದು ಮಾಡುತ್ತಿದೆ. ನೂರಾರು ಮಹಿಳೆಯರು ಆಡಳಿತಾರೂಢ ಟಿಎಂಸಿ ವಿರುದ್ಧ ಆಕ್ರೋಶಗೊಂಡಿದ್ದು, ಪ್ರತಿಭಟನೆ ಮಾಡುತ್ತಿದ್ದಾರೆ. ಈ ಘಟನೆಯ ಪ್ರಮುಖ ರೂವಾರಿ, ಟಿಎಂಸಿಯ ಶೇಖ್ ಷಹಜಹಾನ್ ಪರಾರಿಯಾಗಿದ್ದಾರೆ ಎಂದು ಅಲ್ಲಿನ ಜನ ಆರೋಪಿಸುತ್ತಿದ್ದಾರೆ.

ಈ ನಡುವೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾರ್ಚ್ 3 ರಂದು ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಭಾಷಣದಲ್ಲಿ ಅವರು, ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ಮತ್ತು ಸಾಲದ ಖಾತರಿ ಕಾನೂನು ಸೇರಿದಂತೆ ರೈತರ ವಿವಿಧ ಬೇಡಿಕೆಗಳ ಬಗ್ಗೆ ಪ್ರಸ್ತಾಪಿಸಲಿದ್ದಾರೆ. ಸರ್ಕಾರ ಏನೆಲ್ಲ ಕೊಡುಗೆ ನೀಡಿದೆ ಎಂಬ ಬಗ್ಗೆ ವಿವರಣೆ ನೀಡಲಿದ್ದಾರೆ. ಮತ್ತೊಂದು ಕಡೆ ಮಾರ್ಚ್ 4 ರಂದು ಬಿಜೆಪಿ ರಾಷ್ಟ್ರೀಯ ಮುಖ್ಯಸ್ಥ ಜೆಪಿ ನಡ್ಡಾ ಅವರು ನಾಗ್ಪುರದಲ್ಲಿ ಯುವಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಒಬಿಸಿ ಸೆಳೆಯಲು ಬಿಹಾರದಲ್ಲಿ ಶಾ ಚಾಣಕ್ಯ ನೀತಿ: 'GYAN' ಪ್ರಚಾರದ ದೃಷ್ಟಿಯಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾರ್ಚ್ 5 ರಂದು ಪಾಟ್ನಾದಲ್ಲಿ OBC ಮಹಾಸಭಾದಲ್ಲಿ ಮಾತನಾಡಲಿದ್ದಾರೆ. ಈ ಭಾಷಣದಲ್ಲಿ ಅವರು ಹಿಂದುಳಿದ ವರ್ಗಗಳನ್ನು ಗುರಿಯಾಗಿಸಿಕೊಂಡು ಮಾತನಾಡಲಿದ್ದಾರೆ. ಮಾರ್ಚ್ 7 ರಂದು, ನಡ್ಡಾ ಅವರು ಎಸ್‌ಸಿ ಮತದಾರರನ್ನು ಉದ್ದೇಶಿಸಿ ಮಾತನಾಡಲಿದ್ದು, ಅತಿ ದೊಡ್ಡ ಈವೆಂಟ್​​ವೊಂದನ್ನು ಮಾಡಲು ಬಿಜೆಪಿ ಮುಂದಾಗಿದೆ. 'ಮಿಷನ್ ಗ್ಯಾನ್' ಅಡಿಯಲ್ಲಿ ಪಕ್ಷದ ಪ್ರಚಾರವು ಮಾರ್ಚ್ 10 ರೊಳಗೆ ಮುಕ್ತಾಯಗೊಳ್ಳಲಿದೆ. ಅಷ್ಟರೊಳಗೆ ದೇಶಾದ್ಯಂತ ಈ ನಾಲ್ಕು ವರ್ಗಗಳನ್ನು ಗುರಿಯಾಗಿಸಿಕೊಂಡು ಬಿಜೆಪಿ ಕಾರ್ಯತಂತ್ರಗಳನ್ನು ರೂಪಿಸಲಿದೆ.

ಸಮಾಜದ ಪ್ರತಿ ವ್ಯಕ್ತಿ ತಲುಪಲು ಬಿಜೆಪಿ ಸನ್ನಾಹ: ಸಮಾಜದ ಪ್ರತಿಯೊಂದು ವರ್ಗದ ಮತದಾರರಿಂದ ಬೆಂಬಲವನ್ನು ಪಡೆಯುವ ಉದ್ದೇಶದಿಂದ ಬಿಜೆಪಿ ಬಡವರು, ಎಸ್‌ಸಿ / ಎಸ್‌ಟಿ, ಮಹಿಳೆಯರು, ಯುವಕರು ಮತ್ತು ರೈತರಿಗಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಈ ವಿಭಾಗಗಳೊಂದಿಗೆ ನೇರ ಸಂಪರ್ಕವನ್ನು ಸ್ಥಾಪಿಸುವುದು ಮತ್ತು ಅವರ ಕಲ್ಯಾಣ ಮತ್ತು ಯೋಗಕ್ಷೇಮದ ಕಡೆಗೆ ಸರ್ಕಾರದ ಪ್ರಯತ್ನಗಳ ಬಗ್ಗೆ ತಿಳಿಸುವುದು ಪಕ್ಷದ ಹಾಗೂ ಈ ಸಂಬಂಧಿತ ಕಾರ್ಯಕ್ರಮಗಳ ಉದ್ದೇಶವಾಗಿದೆ.

ಗ್ರಾಮ ಪರಿಕ್ರಮ- ಚೌಪಾಲ್​​​: ರೈತರ ಗ್ರಾಮ ಪರಿಕ್ರಮ ಯಾತ್ರೆ ಮತ್ತು ಕಿಸಾನ್ ಚೌಪಾಲ್ ಕಾರ್ಯಕ್ರಮಗಳ ಮೂಲಕ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ದೇಶದ ಉದ್ದಗಲಕ್ಕೂ ಪ್ರಚಾರ ನಡೆಸಲಿದ್ದಾರೆ. ಈ ಮೂಲಕ ಸರ್ಕಾರದ ಉದ್ದೇಶ, ಯೋಜನೆ, ಯೋಚನೆ ಹಾಗೂ ಗುರಿಗಳ ಬಗ್ಗೆ ಮನೆಮನೆಗೆ ಸಂದೇಶ ತಲುಪಿಸುವ ಯೋಜನೆಯನ್ನು ಬಿಜೆಪಿ ಹಮ್ಮಿಕೊಂಡಿದೆ. ಪಕ್ಷದ ಮಹಿಳಾ ಘಟಕ, ಮಹಿಳಾ ಮೋರ್ಚಾ ಕೂಡ ಮಹಿಳಾ ಸ್ವ-ಸಹಾಯ ಗುಂಪುಗಳೊಂದಿಗೆ ಸಂಪರ್ಕ ಸಾಧಿಸಿದ್ದು, ದೇಶದ ಅರ್ಧದಷ್ಟು ಜನಸಂಖ್ಯೆಗೆ ಕೇಂದ್ರದ ಕ್ಷೇಮಾಭಿವೃದ್ಧಿಯ ಬಗ್ಗೆ ಪ್ರಚಾರ ಮಾಡುವ ಪ್ರಯತ್ನ ಮಾಡುತ್ತಿದೆ.

ಪಕ್ಷದ ಯುವ ಮೋರ್ಚಾಗೆ ದೇಶಾದ್ಯಂತ ಯುವ ಚೌಪಾಲ್‌ಗಳನ್ನು ಸ್ಥಾಪಿಸುವ ಜವಾಬ್ದಾರಿಯನ್ನು ವಹಿಸಲಾಗಿದ್ದು, ದಲಿತ ಬಡಾವಣೆಗಳಲ್ಲಿ ಸಂಪರ್ಕ ಮತ್ತು ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಲು ಮತ್ತು ನಡೆಸಲು ಎಸ್‌ಸಿ ಮೋರ್ಚಾಕ್ಕೆ ತಿಳಿಸಲಾಗಿದೆ. ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಗೂ ಮುನ್ನವೇ ಬಿಜೆಪಿ ಸಮಾವೇಶಗಳ ಮೂಲಕ ಮತದಾರರನ್ನು ತಲುಪಲು ಮುಂದಾಗಿದೆ. ಇತ್ತೀಚೆಗೆ ನಡೆದ ಬಿಜೆಪಿ ರಾಷ್ಟ್ರೀಯ ಸಮಾವೇಶದಲ್ಲಿ ಮಾರ್ಚ್ 10ರವರೆಗೆ ಪಕ್ಷದ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದ ಎಲ್ಲಾ ಕಾರ್ಯಕ್ರಮಗಳನ್ನು ರೂಪಿಸಿ ಚರ್ಚಿಸಲಾಗಿದೆ.

ಇದನ್ನು ಓದಿ: ರಾತ್ರಿಯೇ ಶಿವಪುರ ಮಾರ್ಗ ಪರಿಶೀಲಿಸಿದ ಪ್ರಧಾನಿ ಮೋದಿ: ವಾರಾಣಸಿಯಲ್ಲಿ ಇಂದು ಹಲವು ಯೋಜನೆಗಳಿಗೆ ಚಾಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.