ETV Bharat / bharat

ಮಹಾರಾಷ್ಟ್ರ ಮಾಜಿ ಸಿಎಂ, ಶಿವಸೇನೆ ಹಿರಿಯ ನಾಯಕ ಮನೋಹರ್ ಜೋಶಿ ನಿಧನ: ಮೋದಿ ಸಂತಾಪ

author img

By ETV Bharat Karnataka Team

Published : Feb 23, 2024, 6:37 AM IST

Updated : Feb 23, 2024, 10:15 AM IST

ಮಾಜಿ ಮುಖ್ಯಮಂತ್ರಿ ಹಾಗೂ ಶಿವಸೇನೆಯ ಹಿರಿಯ ನಾಯಕ ಮನೋಹರ್ ಜೋಶಿ (86) ಇಂದು (ಶುಕ್ರವಾರ) ಮಹಾರಾಷ್ಟ್ರದಲ್ಲಿ ನಿಧನರಾದರು.

ಮನೋಹರ್ ಜೋಶಿ ನಿಧನ  ಮಾಜಿ ಮುಖ್ಯಮಂತ್ರಿ ಮನೋಹರ್ ಜೋಶಿ  Former CM Manohar Joshi  Manohar Joshi
ಮಹಾರಾಷ್ಟ್ರ: ಮಾಜಿ ಮುಖ್ಯಮಂತ್ರಿ, ಶಿವಸೇನೆ ಹಿರಿಯ ನಾಯಕ ಮನೋಹರ್ ಜೋಶಿ ನಿಧನ

ಮುಂಬೈ (ಮಹಾರಾಷ್ಟ್ರ): ಮಾಜಿ ಮುಖ್ಯಮಂತ್ರಿ ಹಾಗೂ ಶಿವಸೇನೆಯ ಹಿರಿಯ ನಾಯಕ ಮನೋಹರ್ ಜೋಶಿ (86) ಇಂದು (ಶುಕ್ರವಾರ) ಬೆಳಗ್ಗೆ 3 ಗಂಟೆ ಸುಮಾರಿಗೆ ಹಿಂದೂಜಾ ಆಸ್ಪತ್ರೆಯಲ್ಲಿ ನಿಧನರಾದರು. ಫೆಬ್ರವರಿ 21 ರಂದು ಮನೋಹರ್ ಜೋಶಿ ಅವರಿಗೆ ಹೃದಯಾಘಾತವಾಗಿತ್ತು. ಮುಂಬೈನ ಹಿಂದೂಜಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಮನೋಹರ್ ಜೋಶಿ ಅವರು ಮೃತಪಟ್ಟಿದ್ದಾರೆ.

ಮನೋಹರ ಜೋಶಿಯವರು 2 ಡಿಸೆಂಬರ್ 1937 ರಂದು ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ನಂದಾವಿಯಲ್ಲಿ ಮರಾಠಿ ಮಾತನಾಡುವ ಗಜಾನನ ಕೃಷ್ಣ ಜೋಶಿ ಮತ್ತು ಸರಸ್ವತಿ ಗಜಾನನ ಎಂಬುವರ ಮಗನಾಗಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದರು.

ಕಾನೂನಿನಲ್ಲಿ MA ನಂತರ ಅವರು ಅಧಿಕಾರಿಯಾಗಿ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್​ಗೆ(BMC) ಸೇರಿದ್ದರು. ಆದರೆ, ನಂತರ ಯುವಕರಿಗೆ ಎಲೆಕ್ಟ್ರಿಷಿಯನ್, ಪ್ಲಂಬರ್, ಟಿವಿ / ರೇಡಿಯೋ / ಸ್ಕೂಟರ್ ರಿಪೇರಿ, ಛಾಯಾಗ್ರಹಣ ತರಬೇತಿ ನೀಡುವ ಕಲ್ಪನೆಯೊಂದಿಗೆ ಕೊಹಿನೂರ್ ತಾಂತ್ರಿಕ/ವೃತ್ತಿಪರ ತರಬೇತಿ ಸಂಸ್ಥೆಯನ್ನು ಪ್ರಾರಂಭಿಸಿದರು. ಅಂತಿಮವಾಗಿ, ಮುಂಬೈ, ಪುಣೆ, ನಾಗ್ಪುರ, ನಾಸಿಕ್ ಸೇರಿದಂತೆ ವಿವಿಧೆಡೆ ಕೊಹಿನೂರ್‌ನ ಹಲವು ಶಾಖೆಗಳನ್ನು ಪ್ರಾರಂಭಿಸಿದರು. ನಂತರ ಅವರು ಕನಸ್ಟ್ರಕ್ಷನ್​ ಹಾಗೂ ಬಂಡವಾಳ ಆಧಾರಿತ ವ್ಯವಹಾರಕ್ಕೆ ಪ್ರವೇಶಿಸಿದ್ದರು.

ಮನೋಹರ್ ಜೋಶಿ ರಾಜಕೀಯ ಜೀವನ: ಮನೋಹರ್ ಜೋಶಿ ಅವರು ಮಹಾರಾಷ್ಟ್ರದ ಖಂಡಾಲಾದಲ್ಲಿ ಕೊಹಿನೂರ್ ಬಿಸಿನೆಸ್ ಸ್ಕೂಲ್ ಮತ್ತು ಕೊಹಿನೂರ್-ಐಎಂಐ ಸ್ಕೂಲ್ ಆಫ್ ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್ ಕೂಡಾ ಸ್ಥಾಪಿಸಿದ್ದರು. ನಂತರ ಅವರು ಜ್ಞಾನೇಶ್ವರ ವಿದ್ಯಾಪೀಠದ ಕುಲಪತಿಯಾಗಿ ಕಾರ್ಯನಿರ್ವಹಿಸಿದ್ದರು. ಅವರು ಶಿವಸೇನೆಯಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗುವ ಮೂಲಕ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ್ದರು. 1972 ರಿಂದ 1989 ರವರೆಗೆ ಮೂರು ಅವಧಿಗೆ ಆಯ್ಕೆಯಾಗಿದ್ದರು. 1976 ರಿಂದ 1977 ರ ಅವಧಿಯಲ್ಲಿ ಮುಂಬೈನ ಮೇಯರ್ ಆಗಿ ಕೆಲಸ ನಿರ್ವಹಿಸಿ ಸೈ ಎನಿಸಿಕೊಂಡಿದ್ದರು. ಮನೋಹರ್ ಜೋಶಿ 1990 ರಲ್ಲಿ ಶಿವಸೇನೆ ಟಿಕೆಟ್‌ನಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು.

1995 ರಲ್ಲಿ ಶಿವಸೇನೆ-ಭಾರತೀಯ ಜನತಾ ಪಕ್ಷ (ಬಿಜೆಪಿ) ಸಮ್ಮಿಶ್ರ ಅಧಿಕಾರಕ್ಕೆ ಬಂದಾಗ ಅವರು ಮಹಾರಾಷ್ಟ್ರದ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾಗಿದ್ದರು. ತಾಂತ್ರಿಕವಾಗಿ, ಶರದ್ ಪವಾರ್ 1978 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಸಮಾಜವಾದಿ) ಸದಸ್ಯರಾಗಿ ಮಹಾರಾಷ್ಟ್ರದಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರವನ್ನು ಮುನ್ನಡೆಸಿದ್ದರು.

ಲೋಕಸಭೆಯ ಸ್ಪೀಕರ್ ಆಗಿ ಸೇವೆ: 1999ರ ಸಾರ್ವತ್ರಿಕ ಚುನಾವಣೆಯಲ್ಲಿ ಸೆಂಟ್ರಲ್ ಮುಂಬೈನಿಂದ ಗೆದ್ದ ಮನೋಹರ್ ಜೋಶಿ ಅವರು ಲೋಕಸಭೆಗೆ ಬಡ್ತಿ ಪಡೆದ್ದರು. ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‌ಡಿಎ) ಆಡಳಿತದ ಅವಧಿಯಲ್ಲಿ ಅವರು 2002ರಿಂದ 2004 ರವರೆಗೆ ಲೋಕಸಭೆಯ ಸ್ಪೀಕರ್ ಆಗಿ ಕೂಡಾ ಕಾರ್ಯನಿರ್ವಹಿಸಿದ್ದರು.

ಇದನ್ನೂ ಓದಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ 30 ಸಿಆರ್‌ಪಿಎಫ್ ಕಮಾಂಡೋಗಳ ಝಡ್ ಪ್ಲಸ್ ಭದ್ರತೆ

ಪ್ರಧಾನಿ ನರೇಂದ್ರ ಮೋದಿ ಟ್ವೀಟ್: ’’ಮನೋಹರ್ ಜೋಶಿ ಅವರ ನಿಧನ ನೋವು ತಂದಿದೆ. ಪುರಸಭೆ ಸಭೆಯಿಂದ ಆರಂಭಿಸಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ ಹೆಗ್ಗಳಿಕೆ ಅವರದ್ದು, ಅವರ ಕುಟುಂಬ ವರ್ಗ ಮತ್ತು ಬೆಂಬಲಿಗರಿಗೆ ದುಃಖ ಭರಿಸುವ ಶಕ್ತಿ ನೀಡಲಿ’’ ಎಂದು ಮೋದಿ ಸಂತಾಪ ಸೂಚಿಸಿದ್ದಾರೆ.

Last Updated : Feb 23, 2024, 10:15 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.