ETV Bharat / bharat

ನಾಲ್ಕಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ: ಹೊಗೆಯಿಂದ ಉಸಿರುಗಟ್ಟಿ ಇಬ್ಬರು ಮಕ್ಕಳು ಸೇರಿ ನಾಲ್ವರು ಸಾವು

author img

By PTI

Published : Mar 14, 2024, 10:16 AM IST

ದೆಹಲಿಯಲ್ಲಿ ಭಾರೀ ಬೆಂಕಿ ಅವಘಡ ನಡೆದಿದ್ದು, ಇಬ್ಬರು ಮಕ್ಕಳು ಸೇರಿ ನಾಲ್ವರು ಸಾವಿಗೀಡಾಗಿದ್ದಾರೆ. ಅಗ್ನಿಯನ್ನು ಸದ್ಯ ನಂದಿಸಲಾಗಿದೆ.

ದೆಹಲಿಯಲ್ಲಿ ಭಾರೀ ಬೆಂಕಿ ಅವಘಡ
ದೆಹಲಿಯಲ್ಲಿ ಭಾರೀ ಬೆಂಕಿ ಅವಘಡ

ನವದೆಹಲಿ: ಕಾರು ಪಾರ್ಕಿಂಗ್​ನಲ್ಲಿ ಭಾರೀ ಅಗ್ನಿ ದುರಂತ ಸಂಭವಿಸಿ, ದಟ್ಟ ಹೊಗೆ ಇಡೀ ಕಟ್ಟಡಕ್ಕೆ ಆವರಿಸಿಕೊಂಡ ಹಿನ್ನೆಲೆಯಲ್ಲಿ ಇಬ್ಬರು ಮಕ್ಕಳು, ದಂಪತಿ ಸೇರಿ ನಾಲ್ವರು ಉಸಿರುಗಟ್ಟಿ ಸಾವನ್ನಪ್ಪಿದ ದುರ್ಘಟನೆ ಇಂದು (ಗುರುವಾರ) ಬೆಳಗ್ಗೆ ದೆಹಲಿಯ ಶಾಸ್ತ್ರಿ ನಗರ ಪ್ರದೇಶದಲ್ಲಿ ನಡೆದಿದೆ. ಉಳಿದವರನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಲ್ಲಿನ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಮುಂಜಾನೆ 5 ಗಂಟೆ ಸುಮಾರಿನಲ್ಲಿ ಕಾರು ಪಾರ್ಕಿಂಗ್​ನಲ್ಲಿ ಭಾರೀ ಬೆಂಕಿ ಹೊತ್ತಿಕೊಂಡಿದೆ. ಮಲಗಿದ್ದ ನಿವಾಸಿಗಳು ಹೊರಬರಲಾಗದೇ ಮನೆಯೊಳಗೇ ಸಿಲುಕಿದ್ದಾರೆ. ಹೊಗೆ ಆವರಿಸಿಕೊಂಡು ಉಸಿರಾಡಲು ಒದ್ದಾಡಿದ್ದಾರೆ. ಇದರಿಂದ ನಾಲ್ವರು ಸಾವಿಗೀಡಾಗಿದ್ದಾರೆ. ಮೃತರನ್ನು ಮನೋಜ್ (30), ಅವರ ಪತ್ನಿ ಸುಮನ್ (28) ಮತ್ತು ಐದು ಮತ್ತು ಮೂರು ವರ್ಷದ ಇಬ್ಬರು ಬಾಲಕಿಯರು ಎಂದು ಗುರುತಿಸಲಾಗಿದೆ.

ಬೆಳ್ಳಂಬೆಳಗ್ಗೆ ಶಾಸ್ತ್ರಿ ನಗರ ಪ್ರದೇಶದಲ್ಲಿ ಬೆಂಕಿ ಹೊತ್ತಿಕೊಂಡಿರುವ ಬಗ್ಗೆ ಕರೆ ಬಂದಿತು. ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಅಲ್ಲಿಗೆ ತೆರಳಿದೆ. ಪೊಲೀಸ್ ತಂಡ, ನಾಲ್ಕು ಅಗ್ನಿಶಾಮಕ ವಾಹನಗಳು, ಆಂಬ್ಯುಲೆನ್ಸ್‌ಗಳು ಮತ್ತು ಪಿಸಿಆರ್ ವ್ಯಾನ್‌ಗಳನ್ನು ಸ್ಥಳಕ್ಕೆ ರವಾನಿಸಲಾಯಿತು. ಕಟ್ಟಡದಲ್ಲಿ ಸಿಲುಕಿದ್ದ 9 ಮಂದಿಯನ್ನು ರಕ್ಷಿಸಲಾಯಿತು. ತೀವ್ರ ಉಸಿರಾಟ ತೊಂದರೆಯಿಂದ ನರಳುತ್ತಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅದರಲ್ಲಿ ನಾಲ್ವರು ಸಾವಿಗೀಡಾಗಿದ್ದಾರೆ ಎಂದು ಮಾಹಿತಿ ಬಂದಿದ್ದಾಗಿ ಪೊಲೀಸರು ತಿಳಿಸಿದರು.

ಬೆಂಕಿ ಅವಘಡ ಸಂಭವಿಸಿದ ಕಟ್ಟಡವು ನಾಲ್ಕು ಮಹಡಿಗಳನ್ನು ಹೊಂದಿದ್ದು, ನೆಲ ಮಹಡಿಯಲ್ಲಿ ಕಾರ್ ಪಾರ್ಕಿಂಗ್ ಸೌಲಭ್ಯವಿದೆ. ಅಲ್ಲಿಂದಲೇ ಬೆಂಕಿ ಕಾಣಿಸಿಕೊಂಡಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ. ಹೊಗೆ ಇಡೀ ಕಟ್ಟಡವನ್ನು ಆವರಿಸಿ ಅನಾಹುತಕ್ಕೆ ಕಾರಣವಾಗಿದೆ. ಸದ್ಯ ಬೆಂಕಿಯನ್ನು ನಂದಿಸಲಾಗಿದೆ ಎಂದು ಮಾಹಿತಿ ನೀಡಿದರು.

ವಿದ್ಯುತ್​ ವೈರ್​ ತಗುಲಿ ದುರಂತ: ಉತ್ತರಪ್ರದೇಶದ ಗಾಜಿಪುರದಲ್ಲಿ ಮದುವೆಗೆ ತೆರಳುತ್ತಿದ್ದ ಬಸ್‌ ಮೇಲೆ 11,000 ವೋಲ್ಟ್‌ನ ಹೈಟೆನ್ಷನ್ ಕರೆಂಟ್ ವೈರ್ ಬಿದ್ದ ಪರಿಣಾಮ ಬಸ್‌ಗೆ ಬೆಂಕಿ ಹೊತ್ತಿಕೊಂಡು, ಐವರು ಸಜೀವ ದಹನವಾಗಿರುವ ಘಟನೆ ಇತ್ತೀಚಿಗೆ ನಡೆದಿತ್ತು.

ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ, ಪೊಲೀಸ್​ ವರಿಷ್ಠಾಧಿಕಾರಿ ಸೇರಿದಂತೆ ಹಲವು ಉನ್ನತ ಅಧಿಕಾರಿಗಳು ಆಗಮಿಸಿ, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿದ್ದರು. ಮಾಹಿತಿಯ ಪ್ರಕಾರ, ಮೌ ಜಿಲ್ಲೆಯ ಕಜಾದ ಪ್ರಯಾಣಿಕರು ಮದುವೆಗಾಗಿ ಮರ್ದಾಹ್​ಗೆ ಹೋಗುತ್ತಿದ್ದರು. ಆಗ ಈ ಅವಘಡ ಸಂಭವಿಸಿತ್ತು. ಅಪಘಾತದ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್​, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ ತಲಾ 50 ಸಾವಿರ ಧನಸಹಾಯ ನೀಡಿ ಉಚಿತ ಚಿಕಿತ್ಸೆಗೆ ನೀಡಲು ಸೂಚಿಸಿದ್ದರು.

ಇದನ್ನೂ ಓದಿ: ಬೆಂಗಳೂರಲ್ಲಿ ಹೊತ್ತಿ ಉರಿದ ಸ್ಕ್ರ್ಯಾಪ್​​​​ ಗೋದಾಮು: ಅಕ್ಕಪಕ್ಕದ ಮನೆಗಳಿಗೂ ವ್ಯಾಪಿಸಿದ ಬೆಂಕಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.