ETV Bharat / bharat

ಕಾಂಗ್ರೆಸ್‌ನಿಂದ 'ಘರ್‌ ಘರ್‌ ಗ್ಯಾರಂಟಿ' ಘೋಷಣೆ: 8 ಕೋಟಿ ಮನೆಗಳನ್ನು ತಲುಪಲಿರುವ ನೂತನ ಅಭಿಯಾನಕ್ಕೆ ಚಾಲನೆ - Lok Sabha Election 2024

author img

By ETV Bharat Karnataka Team

Published : Apr 4, 2024, 2:20 PM IST

Lok Sabha Election 2024: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ 'ಘರ್ ಘರ್ ಗ್ಯಾರಂಟಿ' ಎಂಬ ನೂತನ ಅಭಿಯಾನಕ್ಕೆ ಚಾಲನೆ ನೀಡಿದರು. 5 ಘೋಷಣೆ, 25 ಗ್ಯಾರಂಟಿಗಳೊಂದಿಗೆ ಕಾಂಗ್ರೆಸ್‌ ದೇಶದ ಮತದಾರರ ಮುಂದೆ ಹೋಗುತ್ತಿದೆ. ವಯನಾಡ್ ಲೋಕಸಭಾ ಕ್ಷೇತ್ರದಿಂದ ಬುಧವಾರ ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ ಅವರು ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಜೊತೆಗೂಡಿ ಮನೆ ಮನೆಗೆ ತೆರಳಿ ಮತದಾರರಿಗೆ ಕಾಂಗ್ರೆಸ್ ಖಾತರಿ ಕಾರ್ಡ್‌ಗಳನ್ನು ವಿತರಿಸಿದರು.

Lok Sabha Election 2024 Door-to-Door Drive Part of Back-to-Basics Approach to Conduct Poll Campaign
Lok Sabha Election 2024 Door-to-Door Drive Part of Back-to-Basics Approach to Conduct Poll Campaign

ನವದೆಹಲಿ: ಕರ್ನಾಟಕ ಮತ್ತು ತೆಲಂಗಾಣ ವಿಧಾನಸಭಾ ಚುನಾವಣೆ ಬಳಿಕ ಖಾತರಿಗಳ ಮೇಲೆ ಬಲವಾದ ನಂಬಿಕೆ ಇಟ್ಟುಕೊಂಡಿರುವ ಕಾಂಗ್ರೆಸ್, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ನೂತನ ಅಭಿಯಾನಕ್ಕೆ ಗ್ರೀನ್​ ಸಿಗ್ನಲ್​ ನೀಡಿದೆ. ಘರ್‌ ಘರ್‌ ಗ್ಯಾರಂಟಿ (ಮನೆ ಮನೆಗೆ ಗ್ಯಾರಂಟಿ) ಎಂಬ ನೂತನ ಅಭಿಯಾನಕ್ಕೆ ಚಾಲನೆ ನೀಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಂಚ್ ನ್ಯಾಯ್ ಪಚ್ಚೀಸ್‌ ಗ್ಯಾರಂಟಿ (5 ನ್ಯಾಯ 25 ಗ್ಯಾರಂಟಿ) ಘೋಷಣೆಯಡಿ ನೀಡಿದ ಎಲ್ಲ ಭರವಸೆಯನ್ನು ದೇಶದ ಎಲ್ಲ ಮನೆ ಮನೆಗೂ ಮುಟ್ಟಿಸಲು ಪಕ್ಷದ ಸದಸ್ಯರೆಲ್ಲರೂ ಶ್ರಮಿಸಬೇಕು ಎಂದು ಮನವಿ ಮಾಡಿದ್ದಾರೆ.

ಏಪ್ರಿಲ್ 3 ರಂದು ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಪಕ್ಷದ ಮಾಜಿ ಮುಖ್ಯಸ್ಥ ರಾಹುಲ್ ಗಾಂಧಿ, ನಂತರ ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಮನೆ ಮನೆಗೆ ತೆರಳಿ ಕಲ್ಪೆಟ್ಟಾ ಪ್ರದೇಶದ ಮರವಯಲ್ ಕಾಲೋನಿಯಲ್ಲಿ ಮತದಾರರಿಗೆ ಕಾಂಗ್ರೆಸ್ ಖಾತರಿ ಕಾರ್ಡ್‌ಗಳನ್ನು ವಿತರಿಸಿದರು. ಯುವ ನ್ಯಾಯ, ಮಹಿಳಾ ನ್ಯಾಯ, ರೈತ ನ್ಯಾಯ, ಶ್ರಮಿಕ ನ್ಯಾಯ ಹಾಗೂ ಸಮಾನತೆ ನ್ಯಾಯ ಎಂಬ ಐದು ನ್ಯಾಯಗಳ ಘೋಷಣೆ ಸಹಿತ 25 ಗ್ಯಾರಂಟಿಗಳ ಭರವಸೆಗಳನ್ನು ಕಾಂಗ್ರೆಸ್‌ ನೀಡಿದೆ. ಯುವಕರು, ಮಹಿಳೆಯರು, ರೈತರು, ಅಸಂಘಟಿತ ಕಾರ್ಮಿಕರು ಮತ್ತು ಹಿಂದುಳಿದ ಸಮುದಾಯಗಳಿಗೆ ಸಂಬಂಧಿಸಿದ ಸಾಮಾಜಿಕ ನ್ಯಾಯದ 5 ಆಧಾರ ಸ್ತಂಭಗಳನ್ನು ವಿವರಿಸುವ ಕಾರ್ಡ್‌ಗಳಲ್ಲಿ ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರ ಸಹಿ ಇದೆ. ಈಶಾನ್ಯ ದೆಹಲಿ ಲೋಕಸಭಾ ಕ್ಷೇತ್ರದ ಕೈಥವಾಡದ ಉಸ್ಮಾನ್‌ಪುರದಿಂದ ಈ ಅಭಿಯಾನವನ್ನು ಪ್ರಾರಂಭಿಸಲಾಗಿದ್ದು, ದೇಶದಾದ್ಯಂತ 8 ಕೋಟಿ ಮನೆಗಳಿಗೆ ತಲುಪಿ ಗ್ಯಾರಂಟಿ ಬಗ್ಗೆ ಅರಿವು ಮೂಡಿಸುವ ಗುರಿ ಸಹ ಹೊಂದಿದೆ.

ಈ ವೇಳೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ''ನಮ್ಮ 'ಪಂಚ ನ್ಯಾಯ ಪಚ್ಚೀಸ್ ಗ್ಯಾರಂಟಿ' ಅನ್ನು ಜನರಿಗೆ ತಲುಪಿಸಲು ಈ ಗ್ಯಾರಂಟಿ ಕಾರ್ಡ್ ವಿತರಿಸುತ್ತಿದ್ದೇವೆ. ದೇಶದಾದ್ಯಂತ 8 ಕೋಟಿ ಗ್ಯಾರಂಟಿ ಕಾರ್ಡ್‌ಗಳನ್ನು ವಿತರಿಸುವ ಯೋಜನೆ ಹೊಂದಿದ್ದೇವೆ. ನಾವು ನೀಡಿದ ಭರವಸೆಗಳನ್ನೆಲ್ಲ ಈಡೇರಿಸಲಿದ್ದೇವೆ'' ಎಂದು ತಿಳಿಸಿದರು.

ಪ್ರಾದೇಶಿಕ ಭಾಷೆ, ಇಂಗ್ಲಿಷ್​​ನಲ್ಲಿ ಗ್ಯಾರಂಟಿ ಕಾರ್ಡ್​: ''ಮನೆ - ಮನೆಗೆ ತೆರಳಿ ಚುನಾವಣಾ ಪ್ರಚಾರ ಮಾಡುವ ಏಕೈಕ ರಾಜ್ಯ ಕೇರಳ. ಎಲ್ಲ ಲೋಕಸಭಾ ಕ್ಷೇತ್ರಗಳ ಎಲ್ಲ ಮನೆಗಳನ್ನು ತಲುಪಲು ನಾವು ಪ್ರಯತ್ನಿಸುತ್ತೇವೆ. ಗ್ಯಾರಂಟಿ ಕಾರ್ಡ್‌ಗಳನ್ನು ಇಲ್ಲಿ ಮಲಯಾಳಂ ಮತ್ತು ಇಂಗ್ಲಿಷ್‌ನಲ್ಲಿ ಮುದ್ರಿಸಲಾಗಿದೆ. ಅದೇ ರೀತಿ ಇತರ ರಾಜ್ಯಗಳಿಗೆ ಇತರ 13 ಪ್ರಾದೇಶಿಕ ಭಾಷೆಗಳಲ್ಲಿ ಕಾರ್ಡ್‌ಗಳನ್ನು ಮುದ್ರಿಸಲಾಗಿದೆ. ಈ ಅಭಿಯಾನವು ಮತದಾರರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ'' ಎಂದು ಕೇರಳದ ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ಪಿ ವಿಶ್ವನಾಥನ್ ಹೇಳಿದರು.

''ನಿರುದ್ಯೋಗದ ಸಮಸ್ಯೆ ಇಂದು ಯುವಜನರಲ್ಲಿ ಆತಂಕ ಸೃಷ್ಟಿಸಿದೆ, ಅವಶ್ಯಕ ವಸ್ತುಗಳ ಬೆಲೆ ಏರಿಕೆಗಳಿಂದ ಜನರು ತತ್ತರಿಸಿದ್ದಾರೆ, ಬೆಳೆದ ಬೆಳೆಗೆ ಬೆಲೆ ಇಲ್ಲದೇ ರೈತರು ಸಂಕಷ್ಟದಲ್ಲಿದ್ದಾರೆ, ಅಸಂಘಟಿತ ವಲಯದ ಕಾರ್ಮಿಕರು ಅಸುರಕ್ಷಿತರಾಗಿದ್ದಾರೆ. ಆದರೂ ಆಳುವ ಸರ್ಕಾರ ಈ ಸಮಸ್ಯೆಗಳತ್ತ ಗಮನ ನೀಡುತ್ತಿಲ್ಲ ಎಂದು ಕಾಂಗ್ರೆಸ್​ ಪಕ್ಷ ಹಾಗೂ ನಮ್ಮ ನಾಯಕರು ಹೇಳುತ್ತಲೇ ಬಂದಿದ್ದಾರೆ. ಕಾಂಗ್ರೆಸ್​ ನೀಡಿದ ಗ್ಯಾರಂಟಿಗಳು ಜನರ ಕೈ ಹಿಡಿದಿವೆ. ಹಿಮಾಚಲ ಪ್ರದೇಶ, ಕರ್ನಾಟಕ ಮತ್ತು ತೆಲಂಗಾಣದಲ್ಲಿ ನಾವು ನೀಡಿದ ಭರವಸೆಗಳನ್ನು ಈಡೇರಿಸಿದ್ದೇವೆ. ಉತ್ತಮ ಬೆಂಬಲ ಕೂಡ ವ್ಯಕ್ತವಾಗುತ್ತಿದೆ ಎಂದು ಗುಜರಾತ್ ಉಸ್ತುವಾರಿ ಎಐಸಿಸಿ ಕಾರ್ಯದರ್ಶಿ ಬಿಎಂ ಸಂದೀಪ್ ಕುಮಾರ್ ತಿಳಿಸಿದರು.

ತೆಲಂಗಾಣದಲ್ಲಿ ಆರು ಭರವಸೆಗಳ ಮೂಲಕ ಅಧಿಕಾರ: ''2013ರಲ್ಲಿ ರಾಜ್ಯ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸೋನಿಯಾ ಗಾಂಧಿ ಅವರು ನೀಡಿದ 6 ಭರವಸೆಗಳ ಆಧಾರದ ಮೇಲೆ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಈಗ ರಾಹುಲ್ ಗಾಂಧಿ ಈ ಭರವಸೆಗಳನ್ನು ನೀಡುವುದರಿಂದ ನಮಗೆ ಲಾಭವಾಗಲಿದೆ'' ಎಂದು ಎಐಸಿಸಿ ಕಾರ್ಯದರ್ಶಿ ತೆಲಂಗಾಣದ ಉಸ್ತುವಾರಿ ರೋಹಿತ್ ಚೌಧರಿ ತಿಳಿಸಿದ್ದಾರೆ.

ನಾಳೆ ಕಾಂಗ್ರೆಸ್​ ಪ್ರಣಾಳಿಕೆ ಬಿಡುಗಡೆ: ಶುಕ್ರವಾರ (ಏಪ್ರಿಲ್ 5) ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದ್ದು, 2024ರ ಚುನಾವಣಾ ಪ್ರಣಾಳಿಕೆಯಲ್ಲಿ 5 ನ್ಯಾಯ, 25 ಭರವಸೆಗಳನ್ನು ಸೇರಿಸಲಾಗಿದೆ. ಮೈತ್ರಿಕೂಟದ ಸರ್ಕಾರ ಅಧಿಕಾರಕ್ಕೆ ಬಂದರೆ ಏನು ಮಾಡುತ್ತೇವೆ ಎಂಬುದರ ಕುರಿತು ಶನಿವಾರ ಜೈಪುರ ಮತ್ತು ಹೈದರಾಬಾದ್‌ನಲ್ಲಿ ಬೃಹತ್ ಜಾಥಾ ಉದ್ದೇಶಿಸಿ ಕಾಂಗ್ರೆಸ್​ ನಾಯಕರು ಮಾತನಾಡಲಿದ್ದಾರೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಏ. 6 ರಂದು ಗ್ಯಾರಂಟಿಯ ದಾಖಲೆಯ ಪ್ರತಿಗಳನ್ನು ಬಿಡುಗಡೆ ಮಾಡಲಿದ್ದಾರೆ.

ಇದನ್ನೂ ಓದಿ: ಸೋನಿಯಾ ಗಾಂಧಿ, ಅಶ್ವಿನಿ ವೈಷ್ಣವ್ ಸೇರಿ 14 ರಾಜ್ಯಸಭಾ ಸದಸ್ಯರಿಂದ ಪ್ರಮಾಣ ವಚನ ಸ್ವೀಕಾರ - Sonia Gandhi takes oath

ETV Bharat Logo

Copyright © 2024 Ushodaya Enterprises Pvt. Ltd., All Rights Reserved.