ETV Bharat / bharat

ಮರಳು ದಂಧೆ ವರದಿ ಮಾಡಲು ಹೋದ ಪತ್ರಕರ್ತನ ಮೇಲೆ ಹಲ್ಲೆ, ಕೊಲೆ ಬೆದರಿಕೆ

author img

By ETV Bharat Karnataka Team

Published : Feb 15, 2024, 1:30 PM IST

ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ಮಲ್ಲಾಡಿ ಎಂಬಲ್ಲಿ ನಡೆಯುತ್ತಿದ್ದ ಮರಳು ದಂಧೆಯ ವರದಿಗೆ ತೆರಳಿದ್ದ ಪತ್ರಕರ್ತನ ಮೇಲೆ ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಲಾಗಿದೆ.

ಮರಳು ದಂಧೆ
ಮರಳು ದಂಧೆ

ಅಮರಾವತಿ(ಆಂಧ್ರಪ್ರದೇಶ) : ಇಲ್ಲಿನ ಪಲ್ನಾಡು ಜಿಲ್ಲೆಯ ಅಮರಾವತಿ ತಾಲೂಕಿನಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಮರಳು ದಂಧೆಯ ಮೇಲೆ ಬೆಳಕು ಚೆಲ್ಲಲು ಹೋಗಿದ್ದ ಖಾಸಗಿ ವಾಹಿನಿಯ ವರದಿಗಾರನ ಮೇಲೆ ದಂಧೆಕೋರರು ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾರೆ. ಪತ್ರಕರ್ತ ಹೇಗೋ ಪ್ರಯತ್ನಪಟ್ಟು ಅಲ್ಲಿಂದ ತಪ್ಪಿಸಿಕೊಂಡು ಬದುಕುಳಿದಿದ್ದಾನೆ.

ಗಂಭೀರವಾಗಿ ಗಾಯಗೊಂಡಿರುವ ಪತ್ರಕರ್ತ ಪರಮೇಶ್ವರ ರಾವ್, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ದೂರು ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸಿದ್ದರೆ. ಕಸಿದುಕೊಂಡಿದ್ದ ಪತ್ರಕರ್ತನ ಮೊಬೈಲ್​ ಅನ್ನು ಮರಳಿ ಪಡೆಯಲಾಗಿದೆ.

ಏನಾಯ್ತು?: ವರದಿಗಾರ ಪರಮೇಶ್ವರ ರಾವ್ ಅವರು, ಬುಧವಾರ(ಫೆಬ್ರವರಿ 14) ಬೆಳಗ್ಗೆ ಪಲ್ನಾಡು ಜಿಲ್ಲೆಯ ಅಮರಾವತಿ ವ್ಯಾಪ್ತಿಯ ಮಲ್ಲಾಡಿ ಎಂಬಲ್ಲಿ ನಡೆಯುತ್ತಿದ್ದ ಮರಳು ದಂಧೆಯನ್ನು ವರದಿ ಮಾಡಲು ತೆರಳಿದ್ದರು. ಅಲ್ಲಿನ ದುಸ್ಥಿತಿಯನ್ನು ಚಿತ್ರೀಕರಿಸಿಕೊಂಡು ವಾಪಸ್​ ಬರುವಾಗ ದಂಧೆಕೋರರು ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಲು ಯಾರಿಗೋ ಫೋನ್​ ಮಾಡುವಾಗ ಮೊಬೈಲ್​ ಕಸಿದುಕೊಂಡು ಮತ್ತೆ ಹಲ್ಲೆ ನಡೆಸಿದ್ದಾರೆ.

ಜಿಲ್ಲಾಧಿಕಾರಿಗಳೇ ಇಲ್ಲಿಗೆ ಬರಲು ಹೆದರುತ್ತಾರೆ. ನಾವು ಆಡಳಿತ ಪಕ್ಷದ ಪರ ಇದ್ದವರು. ಇಲ್ಲಿನ ಶಾಸಕರು ನಮ್ಮ ಬೆಂಬಲಕ್ಕೆ ಇದ್ದಾರೆ. ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ದಾಳಿಕೋರರು ದಬಾಯಿಸಿದ್ದಾರೆ. ಪತ್ರಕರ್ತ ಪರಮೇಶ್ವರ ರಾವ್ ಹರಸಾಹಸಪಟ್ಟು ಓಡಿ ಹೋಗಿದ್ದಾರೆ. ಈ ವೇಳೆ ಅವರ ಮೇಲೆ ಕಲ್ಲು ತೂರಲಾಗಿದೆ. ತಪ್ಪಿಸಿಕೊಂಡು ಬಂದ ವರದಿಗಾರ ಅಮರಾವತಿ ತಲುಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು, ನಂತರ ಪೊಲೀಸರಿಗೆ ದೂರು ನೀಡಿದ್ದಾರೆ.

ಕೊಲೆ ಬೆದರಿಕೆ: ಒಂದು ಹಂತದಲ್ಲಿ ಉದ್ರಿಕ್ತರಾದ ಮರಳು ದಂಧೆಕೋರರು, ಪೆಟ್ರೋಲ್​ ತೆಗೆದುಕೊಂಡು ಬನ್ನಿ, ಈತನನ್ನು ಇಲ್ಲಿಯೇ ಸುಟ್ಟ ಹಾಕೋಣ ಎಂದು ಬೆದರಿಕೆ ಹಾಕಿದರು. ನಾನು ಜೀವ ಉಳಿಸಿಕೊಂಡು ಬಂದಿದ್ದು ಪವಾಡ. ನಿನ್ನನ್ನು ಯಾರು ಉಳಿಸುತ್ತಾರೆ ನೋಡೋಣ ಎಂದು ಧಮ್ಕಿ ಹಾಕಿದರು ಎಂದು ಪತ್ರಕರ್ತ ದೂರಿನಲ್ಲಿ ತಿಳಿಸಿದ್ದಾರೆ.

ಘಟನೆಯ ಬಗ್ಗೆ ಪಲ್ನಾಡು ಜಿಲ್ಲಾ ಎಸ್​ಪಿ ರವಿಶಂಕರ್ ರೆಡ್ಡಿಗೆ ಮಾಹಿತಿ ನೀಡಲಾಗಿದೆ. ಬಳಿಕ ಪೊಲೀಸರು ಮರಳು ದಂಧೆ ಸ್ಥಳಕ್ಕೆ ತಲುಪಿ, ವಿಚಾರಣೆ ನಡೆಸಿದರು. ದಾಳಿಕೋರರು ಕಸಿದುಕೊಂಡಿದ್ದ ಮೊಬೈಲ್​ ಅನ್ನು ಪೊಲೀಸರು ಮರಳಿ ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುವುದು, ಮರಳು ದಂಧೆಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಅಕ್ರಮ ಮರಳು ದಂಧೆಕೋರರ ಅಟ್ಟಹಾಸ: ಕಂದಾಯ ಅಧಿಕಾರಿ ಮೇಲೆ ಟ್ರ್ಯಾಕ್ಟರ್ ಹರಿಸಿ ಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.