ETV Bharat / bharat

ಸಾಂಸ್ಕೃತಿಕ ಪರಂಪರೆಯಿಂದ ಸ್ಯಾಕ್ರಮೆಂಟೊ ಸುಪೀರಿಯರ್ ಕೋರ್ಟ್​ವರೆಗೆ: ಜಯ ಬಡಿಗಾ ಯಶಸ್ಸಿನ ಹಾದಿ - Sacramento Superior Court Bench

author img

By ETV Bharat Karnataka Team

Published : May 22, 2024, 6:15 PM IST

30ನೇ ವಯಸ್ಸಿನಲ್ಲಿ ತಮ್ಮ ಕನಸಿಗೆ ರೆಕ್ಕೆ ಕಟ್ಟಿ ಕಾನೂನು ಅಧ್ಯಯನ ನಡೆಸಿದ, ವಿಜಯವಾಡ ಮೂಲದ ಜಯ ಬಡಿಗಾ ಇದೀಗ ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊ ಸುಪೀರಿಯರ್ ಕೋರ್ಟ್​ನಲ್ಲಿ ಜಡ್ಜ್​ ಆಗಿ ನೇಮಕಗೊಂಡಿದ್ದಾರೆ

jaya-badiga-appointed-as-sacramento-superior-court-bench-judge
jaya-badiga-appointed-as-sacramento-superior-court-bench-judge (Etv bharat kannada)

ಹೈದರಾಬಾದ್​: ಸಾಮಾನ್ಯವಾಗಿ ವಿದೇಶಕ್ಕೆ ವಿದ್ಯಾಭ್ಯಾಸಕ್ಕೆ ಹೋದ ಯುವತಿಯರು ಅಲ್ಲಿಯೇ ಉದ್ಯೋಗ ಪಡೆದು ನೆಲೆಯೂರುವುದು ಸಾಮಾನ್ಯ. ಆದರೆ, ಈ ಕಥೆ ಅದಕ್ಕಿಂತ ಕೊಂಚ ಭಿನ್ನ. 30ನೇ ವಯಸ್ಸಿನಲ್ಲಿ ತಮ್ಮ ಕನಸಿಗೆ ರೆಕ್ಕೆ ಕಟ್ಟಿ ಕಾನೂನು ಅಧ್ಯಯನ ನಡೆಸಿದ, ವಿಜಯವಾಡ ಮೂಲದ ಜಯ ಬಡಿಗಾ ಇದೀಗ ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊ ಸುಪೀರಿಯರ್ ಕೋರ್ಟ್​ನಲ್ಲಿ ಜಡ್ಜ್​ ಆಗಿ ನೇಮಕಗೊಂಡಿದ್ದಾರೆ. ಈ ಗೌರವ ಪಡೆದ ಮೊದಲ ತೆಲುಗು ಮಹಿಳೆ ಕೂಡ ಇವರು. ಇವರ ಈ ಪ್ರಯಾಣದ ಕುರಿತು ಈಟಿವಿ ಭಾರತ್​​ನೊಂದಿಗೆ ಮಾತನಾಡಿದ್ದಾರೆ.

ಬಾಲ್ಯದಲ್ಲೆ ಚಿಗುರೊಡೆದ ಸಮಾಜಸೇವೆ ಭಾವ: ವಿಜಯವಾಡದಲ್ಲಿ ಹುಟ್ಟಿದ ಜಯ ಬೆಳೆದಿದ್ದೆಲ್ಲ ಹೈದರಾಬಾದ್​ನಲ್ಲಿ. ಅವರ ತಂದೆ ರಾಮಕೃಷ್ಣ ಕೈಗಾರಿಕೋದ್ಯಮಿ ಮತ್ತು ಮಾಜಿ ಸಂಸದರು. ತಾಯಿ ಪ್ರೇಮ ಲತಾ ಗೃಹಿಣಿ. ನಾಲ್ಕು ಮಕ್ಕಳಲ್ಲಿ ಮೂರನೇ ಮಗಳಾಗಿರುವ ಜಯ , ಸಿಕಂದ್ರಬಾದ್​ನ ಸೆಂಟ್​ ಅನ್ನಾಸ್​ನಲ್ಲಿ ಶಿಕ್ಷಣ ಪಡೆದರು. ಮಿಷನರಿ ಶಾಲೆಯಲ್ಲಿ ಶಿಕ್ಷಣ ಪಡೆದ ಅವರಿಗೆ ಸಮಾಜ ಸೇವೆಯ ಆಸೆ ಕೂಡ ಹುಟ್ಟಿತು. ಇದರ ಜೊತೆಗೆ ತಂದೆಯೂ ಪ್ರೇರಣೆಯಾದರು. ತಾಯಿಗೆ ಮಗಳು ಕಾನೂನು ಓದಬೇಕು ಎಂದಿದ್ದರರೂ ತಂದೆಗೆ ಇದು ಇಷ್ಟವಿರಲಿಲ್ಲ. ಈ ಹಿನ್ನೆಲೆ ಉಸ್ಮಾನಿಯಾ ಕಾಲೇಜಿನಲ್ಲಿ ರಾಜಕೀಯ ವಿಜ್ಞಾನದಲ್ಲಿ ಪದವಿ ಪಡೆದರು.

ಮಗುವಾದ ಬಳಿಕ ಕಾನೂನು ಪದವಿ ಅಧ್ಯಯನ: ಕಾನೂನು ವೃತ್ತಿಗೆ ಬಂದಿದ್ದು, ಅಚಾನಕ್​ ಆಗಿ ಎನ್ನುವ ಜಯ, ಬೊಸ್ಟನ್​ ಯುನಿವರ್ಸಿಟಿಯಲ್ಲಿ ಅಂತಾರಾಷ್ಟ್ರೀಯ ಸಂಬಂಧ ಮತ್ತು ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಇದಾದ ಬಳಿಕ 'WEVE' (ವುಮೆನ್​ ಎಸ್ಕೆಪಿಂಗ್​ ಎ ವೈಲೆಂಟ್​ ಎನ್ವರ್​​​​ಮೆಂಟ್​​)ನ ಚಾರಿಟಿ ಸಂಸ್ಥೆಯಲ್ಲಿ ಕೆಲ ಕಾಲ ಕಾರ್ಯ ನಿರ್ವಹಿಸಿದರು. ಇಲ್ಲಿ ಮಹಿಳೆಯರ ಸಮಸ್ಯೆ ಬಗ್ಗೆ ಆಳವಾಗಿ ಅರ್ಥಮಾಡಿಕೊಂಡರು. ವಿಶೇಷವಾಗಿ ನಮ್ಮ ದೇಶದಿಂದ ಬಂದ ಮಹಿಳೆಯರಿಗೆ ಹೆಚ್ಚಿನ ಕಾನೂನು ಮತ್ತು ನ್ಯಾಯಾಲಯದ ಬಗ್ಗೆ ಜ್ಞಾನವನ್ನು ಹೊಂದಿರುವುದಿಲ್ಲ. ಸ್ಥಳೀಯ ಮಹಿಳೆಯರಲ್ಲಿ ಸದಾ ಸಮಸ್ಯೆಗಳು ಇರುತ್ತದೆ. ಇವುಗಳನ್ನು ಕೇಳಿದ ಮೇಲೆ ನಾನು ಯಾಕೆ ಕಾನೂನು ಅಧ್ಯಯನ ಮಾಡಬಾರದು ಎನಿಸಿತು. ಈ ಹಿನ್ನೆಲೆ ಸಂತಾ ಕ್ಲಾರಾ ಕಾನೂನು ಯುನಿವರ್ಸಿಟಿಯಲ್ಲಿ ಪ್ರವೇಶ ಪಡೆದುಕೊಂಡೆ ಅಂತಾರೆ ಅವರು.

ಕುಟುಂಬದ ಬೆಂಬಲದಿಂದ ಸಾಕಾರ: ನನ್ನ ಪತಿ ಇಂಟೆಲ್​ನಲ್ಲಿ ಹಾರ್ಡ್​​ವೇರ್​ ಇಂಜಿನಿಯರರ್​ ಆಗಿದ್ದು, ಮಗು ಜನಿಸಿದ ಬಳಿಕ ನಾನು ಕಾನೂನು ಪದವಿ ಪಡೆದುಕೊಂಡೆ. ಈ ವೇಳೆ, ನಾನು ಕ್ಯಾಲಿಫೋರ್ನಿಯಾ ಬಾರ್​ ಎಕ್ಸ್​ಗೆ ಸಿದ್ದವಾಗುವುದು ಕಷ್ಟವಾಯಿತು. ಇದೇ ಕಾರಣಕ್ಕೆ ಮಗುವನ್ನು ಇಂಡಿಯಾಕ್ಕೆ ಕಳುಹಿಸಿ, ಪರೀಕ್ಷೆ ಎದುರಿಸಿದೆ. ಪರೀಕ್ಷೆ ಮುಗಿದ ಬಳಿಕ ಮಗುವನ್ನು ಕರೆತಂದೆ. ಫಲಿತಾಂಶದ ದಿನ ಮಗುವನ್ನು ತೊಡೆಯ ಮೇಲೆ ಕೂರಿಸಿಕೊಂಡು ಫಲಿತಾಂಶ ನೋಡಿದೆ. ಈ ವೇಳೆ, ಬಾರ್​ ಕೌನ್ಸಿಲ್​ ರಿಜಿಸ್ಟರ್​ನಲ್ಲಿ ನನ್ನ ಹೆಸರು ಕಂಡ ಬಳಿಕ ನಾನು ವಿಶ್ರಾಂತಿಗೊಂಡೆ. ಕುಟುಂಬದ ಬೆಂಬಲದಿಂದ ಇದು ಸಾಧ್ಯವಾಯಿತು. 2018ರಿಂದ 2022ರವರೆಗೆ ಸ್ವತಂತ್ರವಾಗಿ ಪ್ರಾಕ್ಟಿಸ್​ ಮಾಡಿದೆ. ಬಳಿಕ ಕ್ಯಾಲಿಫೋರ್ನಿಯಾ ಹೆಲ್ತ್​​ ಕೇರ್​ ಸರ್ವಿಸ್​ನಲ್ಲಿ ಆಟರ್ನಿಯಾಗಿ, ಗವರ್ನರ್​ ಕಚೇರಿಯಲ್ಲಿ ತುರ್ತು ಸೇವೆಯಲ್ಲಿ ಕೆಲಸ ಮಾಡಿದೆ. 2022ರಲ್ಲಿ ಉನ್ನತ ಕೋರ್ಟ್​ ಕಮಿಷನರ್​ ಆಗಿ ಕಾರ್ಯ ನಿರ್ವಹಿಸಿದೆ.

ಉದ್ಯೋಗದ ಸವಾಲು: ಎಲ್ಲ ಕಡೆ ಇರುವಂತೆ ಇಲ್ಲೂ ಕೂಡ ಲಿಂಗ ತಾರತಮ್ಯಕ್ಕೆ ಒಳಗಾದೆ. ಆರಂಭಿಕ ದಿನದಲ್ಲಿ ಟೀಕೆಗೆ ಒಳಗಾದೆ. ಇದೆಲ್ಲದರ ಹೊರತಾಗಿ ನನ್ನನ್ನು ನಾನು ಸಾಬೀತು ಮಾಡಿಕೊಂಡೆ. ಸಾಮಾನ್ಯ ಜನರಿಗೆ ಕೋರ್ಟ್​ ದುಬಾರಿಯಾಗಿದೆ. ಅದರಲ್ಲೂ ವಿಚ್ಛೇದನ ಪ್ರಕರಣದಲ್ಲಿ ಮಕ್ಕಳು ಹೆಚ್ಚು ಪರಿಣಾಮಕ್ಕೆ ಒಳಗಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾನು ಕೌಟಂಬಿಕ ಸಮಾಲೋಚನೆಯನ್ನು ಹೆಚ್ಚು ನಡೆಸುತ್ತೇನೆ. ಜನರಿಗೆ ಮಕ್ಕಳ ಕಾನೂನಿನ ಬಗ್ಗೆ ಅರಿವಿಲ್ಲ, ಅವರು ತೊಂದರೆ ಅನುಭವಿಸುತ್ತಿದ್ದಾರೆ ಎಂದರು.

ಕೆಲಸ ಮಾಡುತ್ತಾ, ಮಕ್ಕಳನ್ನು ಬೆಳೆಸುವುದು ದೊಡ್ಡ ಸವಾಲಾಗಿತ್ತು. ಆರಂಭದಲ್ಲಿ ನನ್ನ ತಾಯಿ ಮತ್ತು ಅಜ್ಜಿ ಬೆಂಬಲ ನೀಡಿದರು. ಇದೀಗ ಮಕ್ಕಳು ಬೆಳೆದು ದೊಡ್ಡವರಾಗಿದ್ದಾರೆ.

ನಮ್ಮ ಸಂಸ್ಕೃತಿಯೇ ಜೀವಾಳ: ಎಲ್ಲಿಯೇ ನಾವು ಇದ್ದರೂ ನಮ್ಮ ಬೇರನ್ನು ಮರೆಯಬಾರದು. ಇದೇ ಕಾರಣಕ್ಕೆ ನಾನು ಇಲ್ಲಿಯೂ ವರಮಹಾಲಕ್ಷ್ಮಿ ವ್ರತವನ್ನು ಆಚರಿಸುತ್ತೇನೆ. ನಮ್ಮ ಸಂಸ್ಕೃತಿಯೊಂದಿಗೆ ನಾವು ಬೆಸೆದು ಕೊಂಡಿರುತ್ತೇನೆ. ತಾಯಿಯಾಗಿ ನಾನು ಮಕ್ಕಳಿಗೆ ನಮ್ಮ ಸಂಸ್ಕೃತಿ ಕುರಿತು ತಿಳಿಸುತ್ತೇನೆ. ಯಾವುದೇ ಮಟ್ಟದಲ್ಲಿ ಕೂಡ ನೀವು ಕುಟುಂಬ ಜೀವನದಲ್ಲೇ ನಿಜವಾದ ಖುಷಿ ಕಾಣಲು ಸಾಧ್ಯ ಎನ್ನುತ್ತಾರೆ.

ನ್ಯಾಯಾಧೀಶರಾಗಿ ಆಯ್ಕೆಗೊಂಡ ಬಗ್ಗೆ: 2021ರಲ್ಲಿ ನಾನು ಇದಕ್ಕೆ ಅರ್ಜಿ ಸಲ್ಲಿಸಿದೆ. ಇದೀಗ ಫಲಿತಾಂಶ ಹೊರ ಬಿದ್ದಿದೆ. ಈ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಲು ಎರಡರಿಂದ ಮೂರು ತಿಂಗಳು ಬೇಕಾಯಿತು. ನಮ್ಮ ಹವ್ಯಾಸದಿಂದ ಪ್ರಾರಂಭಿಸಬೇಕು. ನಾವು ವಕೀಲರಾಗಿ ಎದುರಿಸಿದ ಪ್ರಕರಣಗಳ ಕುರಿತು, ಕಡೇ ಪಕ್ಷ 75 ಜನರ ಜೀವನ ಕುರಿತು ತಿಳಿಸಬೇಕು. ಈ ಅರ್ಜಿ ಸಲ್ಲಿಸುವಾಗ ನಮ್ಮ ಜೀವನ ಮುಕ್ತ ಪುಸ್ತಕವಿದ್ದಂತೆ ಎಂದು ಭಾಸವಾಗುತ್ತದೆ. ಈ ಎಲ್ಲ ಮಾಹಿತಿಗಳನ್ನು ನ್ಯಾಯಾಲಯ ಸಮಿತಿಗೆ ಕಳುಹಿಸಲಾಗುವುದು. ಇಲ್ಲಿ ತಂಡ ಪರಿಶೋಧಿಸುತ್ತದೆ. ಜೊತೆಗೆ ನಾವು ನಮೂದಿಸಿದ 75 ಜನರನ್ನು ಕನಿಷ್ಟ 250 ಮಂದಿ ಪ್ರಶ್ನಿಸುತ್ತಾರೆ, ಇದಾದ ಬಳಿಕ ಸಂದರ್ಶನ ನಡೆಸಲಾಗುವುದು. ಯಾರಾದರೂ ನಕಾರಾತ್ಮಕ ಟೀಕೆ ವ್ಯಕ್ತಪಡಿಸಿದರೆ, ಅದರ ಕುರಿತು ಸಂದರ್ಶನದಲ್ಲಿ ಕೇಳಲಾಗುವುದು. ಇದಾದ ಬಳಿಕ ಅವರಿಗೆ ನಮ್ಮ ಬಗ್ಗೆ ಮನವರಿಕೆ ಆದ ನಂತರವೇ ಸ್ಥಾನ ಖಾಲಿ ಇದ್ದರೆ, ಮತ್ತೊಂದು ಸಂದರ್ಶನ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ರೋಗಿಗಳ ಊಟ ಎಂದು ಜರಿದರೂ ಕಿಚಡಿಯಲ್ಲೇ ಕೋಟಿ ಕೋಟಿ ಲಾಭ ಗಳಿಸಿದ ಯುವತಿ.. ಯಾರೀ ಸಾಧಕಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.