ETV Bharat / bharat

ಐಎನ್‌ಎಲ್‌ಡಿ ಹರಿಯಾಣ ಮುಖ್ಯಸ್ಥ ನಫೆ ಸಿಂಗ್ ರಾಠೀ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

author img

By ETV Bharat Karnataka Team

Published : Feb 26, 2024, 11:04 AM IST

ಎಸ್‌ಯುವಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆಯಲ್ಲಿ ಭಾರತೀಯ ರಾಷ್ಟ್ರೀಯ ಲೋಕದಳದ ಹರಿಯಾಣ ಘಟಕದ ಅಧ್ಯಕ್ಷ ಮತ್ತು ಮಾಜಿ ಶಾಸಕ ನಫೆ ಸಿಂಗ್ ರಾಠೀ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಜಜ್ಜರ್‌ನ ಬಹದ್ದೂರ್‌ಗಢ ಪಟ್ಟಣದಲ್ಲಿ ನಡೆದಿದೆ.

Nafe Singh Rathee  Indian National Lok Dal  INLD Haryana president  ಐಎನ್‌ಎಲ್‌ಡಿ ಹರಿಯಾಣ ಮುಖ್ಯಸ್ಥ ಹತ್ಯೆ  ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು
ಐಎನ್‌ಎಲ್‌ಡಿ ಹರಿಯಾಣ ಮುಖ್ಯಸ್ಥ ನಫೆ ಸಿಂಗ್ ರಾಠೀ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

ಚಂಡೀಗಢ: ಭಾರತೀಯ ರಾಷ್ಟ್ರೀಯ ಲೋಕದಳದ ಹರಿಯಾಣ ಘಟಕದ ಅಧ್ಯಕ್ಷ ನಫೆ ಸಿಂಗ್ ರಾಠೀ ಹಾಗೂ ಅವರ ಭದ್ರತಾ ಸಿಬ್ಬಂದಿಯನ್ನು ಅಪರಿಚಿತ ದುಷ್ಕರ್ಮಿಗಳು ಭಾನುವಾರ ಜಜ್ಜರ್ ಜಿಲ್ಲೆಯಲ್ಲಿ ಗುಂಡಿಕ್ಕಿ ಕೊಂದಿದ್ದಾರೆ. ಮಾಜಿ ಶಾಸಕ ರಾಠೀ ಅವರು ಎಸ್‌ಯುವಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಬಹದ್ದೂರ್‌ಗಢ ಪಟ್ಟಣದ ಬರಾಹಿ ಗೇಟ್ ಬಳಿ ಬಂದ ದುಷ್ಕರ್ಮಿಗಳು ಅವರ ಮೇಲೆ ಗುಂಡಿನ ಮಳೆಗರೆದಿದ್ದಾರೆ.

ದಾಳಿಕೋರರು ಐ10 ಕಾರಿನಲ್ಲಿ ಬಂದು ರಾಠೀ ಪ್ರಯಾಣಿಸುತ್ತಿದ್ದ ಎಸ್‌ಯುವಿ (ಟೊಯೊಟಾ ಫಾರ್ಚುನರ್) ಮೇಲೆ ಗುಂಡು ಹಾರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ದಾಳಿಯಲ್ಲಿ ರಾಠೀ ಮತ್ತು ಅವರ ಭದ್ರತಾ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬ್ರಹ್ಮಶಕ್ತಿ ಸಂಜೀವನಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಿಎಂ, ಗೃಹ ಸಚಿವರ ರಾಜೀನಾಮೆಗೆ ಒತ್ತಾಯ: ಐಎನ್‌ಎಲ್‌ಡಿ ನಾಯಕ ಅಭಯ್ ಚೌಟಾಲಾ ಪ್ರತಿಕ್ರಿಯಿಸಿ, ''ಜಜ್ಜರ್ ಜಿಲ್ಲೆಯಲ್ಲಿ ರಾಠೀ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ. ರಾಠೀ ಅವರಿಗೆ ಜೀವ ಬೆದರಿಕೆ ಇದ್ದರೂ ಭದ್ರತೆ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ'' ಎಂದು ಆರೋಪಿಸಿದ ಅವರು, ''ಮುಖ್ಯಮಂತ್ರಿ ಮತ್ತು ಗೃಹ ಸಚಿವರು ರಾಜೀನಾಮೆ ನೀಡಬೇಕು'' ಎಂದು ಒತ್ತಾಯಿಸಿದ್ದಾರೆ.

ಬಹದ್ದೂರ್‌ಗಢದ ಸಂಜೀವಿನಿ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ಮನೀಶ್ ಶರ್ಮಾ ಅವರು, ''ನಫೆ ಸಿಂಗ್ ರಾಠೀ ಮತ್ತು ಇನ್ನೊಬ್ಬ ವ್ಯಕ್ತಿ ಅನೇಕ ಗುಂಡಿನ ದಾಳಿಯಿಂದ ಆದ ಗಾಯಗಳಿಂದ ಮೃತಪಟ್ಟಿದ್ದಾರೆ' ಎಂದು ದೃಢಪಡಿಸಿದರು. ಇನ್ನೂ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯ ಶರ್ಮಾ ತಿಳಿಸಿದ್ದಾರೆ.

ರಾಠೀ ಸಾವಿಗೆ ಭೂಪೇಂದ್ರ ಹೂಡಾ ಸಂತಾಪ: ಹರಿಯಾಣ ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ಭೂಪೇಂದ್ರ ಹೂಡಾ ಅವರು, ನಫೆ ಸಿಂಗ್ ರಾಠೀ ಸಾವಿಗೆ ಸಂತಾಪ ಸೂಚಿಸಿದ್ದಾರೆ. ''ಹರಿಯಾಣದಲ್ಲಿ ಐಎನ್‌ಎಲ್‌ಡಿ ರಾಜ್ಯಾಧ್ಯಕ್ಷ ನಫೆ ಸಿಂಗ್ ರಾಠೀ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಸುದ್ದಿ ಅತ್ಯಂತ ದುಃಖಕರವಾಗಿದೆ. ಇದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಪ್ರತಿಬಿಂಬಿಸುತ್ತದೆ. ಕಾನೂನು ಸುವ್ಯವಸ್ಥೆ ದಿವಾಳಿಯಾಗಿದೆ ಎಂಬುದನ್ನು ಈ ಘಟನೆ ಸ್ಪಷ್ಟಪಡಿಸಿದೆ. ಇಂದು ರಾಜ್ಯದಲ್ಲಿ ಯಾರೂ ಸುರಕ್ಷಿತವಾಗಿಲ್ಲ. ಅಗಲಿದವರ ಆತ್ಮಕ್ಕೆ ನನ್ನ ಶ್ರದ್ಧಾಂಜಲಿ ಮತ್ತು ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ. ಗುಂಡಿನ ದಾಳಿಯಲ್ಲಿ ಗಾಯಗೊಂಡಿರುವ ಭದ್ರತಾ ಸಿಬ್ಬಂದಿ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೂಡಾ ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಅಭಯ್ ಚೌಟಾಲಾ ಟ್ವೀಟ್​: ಐಎನ್‌ಎಲ್‌ಡಿ ನಾಯಕ ಅಭಯ್ ಚೌಟಾಲಾ ಅವರು ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ, ''ರಾಠೀ ಇತ್ತೀಚೆಗೆ ತನ್ನ ಮೇಲೆ ದಾಳಿ ನಡೆಸುವ ಭಯದ ಹಿನ್ನೆಲೆ ಭದ್ರತೆ ನೀಡುವಂತೆ ಸಿಎಂ, ಗೃಹ ಸಚಿವರು, ಡಿಜಿಪಿ ಮತ್ತು ಕಮಿಷನರ್ ಅವರಿಗೆ ಬೇಡಿಕೆ ಇಟ್ಟಿದ್ದರು. ಆಗ ಸರ್ಕಾರ ರಾಜಕೀಯ ಮಾಡಿ ಭದ್ರತೆ ನೀಡಲಿಲ್ಲ. ಆದರೆ, ಅವರಿಗೆ ಸರ್ಕಾರವು ಸೂಕ್ತ ಭದ್ರತೆ ಒದಗಿಸಲಿಲ್ಲ. ಇದರಲ್ಲಿ ಸರಕಾರವೂ ಅಷ್ಟೇ ತಪ್ಪಿತಸ್ಥ ಅಲ್ಲವೇ? ರಾಜ್ಯಾಧ್ಯಕ್ಷ ಮತ್ತು ಮಾಜಿ ಶಾಸಕ ನಫೆ ಸಿಂಗ್ ಜಿ ಇನ್ನಿಲ್ಲ. ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿರುವುದು ಇಡೀ ಐಎನ್‌ಎಲ್‌ಡಿ ಕುಟುಂಬಕ್ಕೆ ತೀವ್ರ ಆಘಾತವನ್ನುಂಟು ಮಾಡಿದೆ. ನಫೆ ಸಿಂಗ್ ಜಿ ನಮ್ಮ ಪಕ್ಷದ ಭಾಗವಾಗಿರಲಿಲ್ಲ, ನಮ್ಮ ಕುಟುಂಬದ ಭಾಗವಾಗಿದ್ದರು. ಅವರು ನನ್ನ ಸಹೋದರನಿದ್ದಂತೆ. ದೇವರು ನಫೆ ಸಿಂಗ್ ಜಿ ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಕೊಡಲಿ ಎಂದು ಚೌಟಾಲಾ ಟ್ವೀಟ್ ಮಾಡಿದ್ದಾರೆ.

ಸಮಗ್ರ ತನಿಖೆ ಆರಂಭ: ದಾಳಿಯ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದೆ. ಸಿಐಎ ಮತ್ತು ಎಸ್‌ಟಿಎಫ್ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಜಜ್ಜರ್ ಎಸ್ಪಿ ಅರ್ಪಿತ್ ಜೈನ್ ಹೇಳಿದ್ದಾರೆ.

ಇದನ್ನೂ ಓದಿ: ಟ್ರ್ಯಾಕ್ಟರ್, ಬಸ್ ನಡುವೆ ಡಿಕ್ಕಿ: ಆರು ಕಾರ್ಮಿಕರು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.