ETV Bharat / bharat

'...ಪಾಕಿಸ್ತಾನವನ್ನು ಭಾರತ ಗೌರವದಿಂದ ಕಾಣಬೇಕು': ಕಾಂಗ್ರೆಸ್​ ಮುಖಂಡ ಮಣಿಶಂಕರ್ ಅಯ್ಯರ್ - Mani Shankar Aiyar

author img

By ETV Bharat Karnataka Team

Published : May 10, 2024, 2:01 PM IST

Updated : May 10, 2024, 3:00 PM IST

ಪಾಕಿಸ್ತಾನದ ಬಳಿ ಪರಮಾಣು ಬಾಂಬ್ ಇರುವುದರಿಂದ ಆ ದೇಶವನ್ನು ಭಾರತ ಗೌರವದಿಂದ ಕಾಣಬೇಕು ಎಂದು ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಹೇಳಿದ್ದಾರೆ.

Mani Shankar Aiyar
ಮಣಿಶಂಕರ್ ಅಯ್ಯರ್ ((Image: IANS))

ನವದೆಹಲಿ: ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಕಾಂಗ್ರೆಸ್​ ಪಕ್ಷಕ್ಕೆ ಪದೇ ಪದೆ ಮುಜುಗರ ಉಂಟು ಮಾಡಿದ್ದ ಸ್ಯಾಮ್ ಪಿತ್ರೊಡಾ ಅವರ ನಂತರ ಈಗ ಮತ್ತೊಬ್ಬ ಮುಖಂಡ ಅದೇ ಹಾದಿ ತುಳಿದಿದ್ದಾರೆ. "ಪಾಕಿಸ್ತಾನದ ಬಳಿ ಪರಮಾಣು ಬಾಂಬ್ ಇರುವುದರಿಂದ ಭಾರತ ಆ ದೇಶಕ್ಕೆ ಗೌರವ ನೀಡಬೇಕು" ಎನ್ನುವ ಮೂಲಕ ಪಕ್ಷದ ಹಿರಿಯ ಮುಖಂಡ ಮಣಿಶಂಕರ್ ಅಯ್ಯರ್ ವಿವಾದ ಸೃಷ್ಟಿಸಿದ್ದಾರೆ.

ಸದ್ಯ ವೈರಲ್ ಆಗಿರುವ ಸಂದರ್ಶನವೊಂದರಲ್ಲಿ ಅಯ್ಯರ್, "ಪರಮಾಣು ಬಾಂಬ್ ಹೊಂದಿರುವ ಪಾಕಿಸ್ತಾನಕ್ಕೆ ಭಾರತ ಗೌರವ ನೀಡಬೇಕು! ನಾವು ಅವರಿಗೆ ಗೌರವ ನೀಡದಿದ್ದರೆ, ಅವರು ಭಾರತದ ವಿರುದ್ಧ ಪರಮಾಣು ಬಾಂಬ್ ಬಳಸುವ ಬಗ್ಗೆ ಯೋಚಿಸಬಹುದು" ಎಂದಿದ್ದಾರೆ.

"ಪಾಕಿಸ್ತಾನಕ್ಕೆ ತನ್ನ ಬಾಹುಬಲ ಪ್ರದರ್ಶಿಸುತ್ತಿರುವ ಭಾರತವು, ರಾವಲ್ಪಿಂಡಿಯ ಕಹುಟಾದಲ್ಲಿ ಪಾಕಿಸ್ತಾನವೂ ತನ್ನ ಶಕ್ತಿ ಸಾಧನವನ್ನು (ಪರಮಾಣು ಬಾಂಬ್) ಹೊಂದಿದೆ ಎಂಬುದನ್ನು ಮರೆಯಬಾರದು" ಎಂದು ಹೇಳಿದ್ದಾರೆ.

ಪಾಕಿಸ್ತಾನದ ಬಗ್ಗೆ ಅಯ್ಯರ್ ಅವರ ಹೇಳಿಕೆಗೆ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪಾಕಿಸ್ತಾನದೊಂದಿಗೆ ನಿಕಟ ಸಂಬಂಧ ಹೊಂದಿದೆ ಎಂದು ಆರೋಪಿಸಿದ ಅವರು, "ಭಾರತದ ವಿರುದ್ಧದ ಭಯೋತ್ಪಾದಕ ಚಟುವಟಿಕೆಗಳಲ್ಲಿ ಪಾಕಿಸ್ತಾನ ಭಾಗಿಯಾಗಿದ್ದರೂ, ಅವರನ್ನು ಗೌರವಿಸುವ ಬಗ್ಗೆ ಅಯ್ಯರ್ ಮಾತನಾಡುತ್ತಾರೆ" ಎಂದು ಲೇವಡಿ ಮಾಡಿದರು.

ಭಾರತದ ವಿರುದ್ಧ ಭಯೋತ್ಪಾದಕರಿಗೆ ಆಶ್ರಯ ಮತ್ತು ಬೆಂಬಲ ನೀಡುವ ಪಾಕಿಸ್ತಾನದ ಬಗ್ಗೆ ಕಾಂಗ್ರೆಸ್​ನ ನಿರಂತರ ಸಂಬಂಧಕ್ಕೆ ಅಯ್ಯರ್ ಅವರ ಹೇಳಿಕೆಗಳು ಉದಾಹರಣೆಯಾಗಿವೆ ಎಂದು ಅವರು ಪ್ರತಿಪಾದಿಸಿದರು.

"ಕಾಂಗ್ರೆಸ್​ಗೆ ಪಾಕಿಸ್ತಾನದ ಬೆಂಬಲ ಸಿಕ್ಕಾಗ ಅದರ ನಾಯಕರು 26/11 ಘಟನೆಯ ವಿಷಯದಲ್ಲಿ ಕಸಬ್ ಮತ್ತು ಪಾಕಿಸ್ತಾನಕ್ಕೆ ಕ್ಲೀನ್ ಚಿಟ್ ನೀಡಿದರು. ಶಶಿ ತರೂರ್ ಅವರು ಕಾಶ್ಮೀರ ವಿಷಯದಲ್ಲಿ ಪಾಕಿಸ್ತಾನದ ನಿಲುವನ್ನೇ ಹೋಲುವ ಪದಗಳನ್ನು ಬಳಸಿದ್ದಾರೆ. ಪುಲ್ವಾಮಾ ಮತ್ತು ಪೂಂಚ್ ಭಯೋತ್ಪಾದಕ ದಾಳಿಗಳ ಬಗ್ಗೆ ಅನೇಕ ಕಾಂಗ್ರೆಸ್ ನಾಯಕರು ಹೇಳಿಕೆಗಳನ್ನು ನೀಡಿದ್ದರು. ಈಗ ಮಣಿಶಂಕರ್ ಅಯ್ಯರ್, ಪಾಕಿಸ್ತಾನವನ್ನು ಬೆಂಬಲಿಸುವ ಮೂಲಕ ಭಯೋತ್ಪಾದಕರು ಮತ್ತು ಪಾಕಿಸ್ತಾನದೊಂದಿಗೆ ಕಾಂಗ್ರೆಸ್​ನ ನಂಟನ್ನು ತೋರಿಸಿದ್ದಾರೆ. ಈಗ ಇದಕ್ಕೆ ಮತ್ತೊಂದು ಪುರಾವೆ ಬೆಳಕಿಗೆ ಬಂದಿದೆ." ಎಂದು ಪೂನಾವಾಲಾ ಹೇಳಿದ್ದಾರೆ.

ಅಯ್ಯರ್ ವಿರುದ್ಧ ವಾಗ್ದಾಳಿ ನಡೆಸಿದ ಮತ್ತೊಬ್ಬ ಬಿಜೆಪಿ ನಾಯಕ ಮೇಜರ್ ಸುರೇಂದ್ರ ಪೂನಿಯಾ, "ಮಣಿಶಂಕರ್ ಅಯ್ಯರ್ ಐಎಸ್ಐ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ ಮತ್ತು ಭಾರತವು ಪಾಕಿಸ್ತಾನದ ಆಶ್ರಯದಲ್ಲಿರಬೇಕೆಂದು ಬಯಸುತ್ತಾರೆ! ಪಾಕಿಸ್ತಾನವು ಕಾಂಗ್ರೆಸ್​ನ ವ್ಯವಸ್ಥೆಯೊಳಗೆ ಹಾಸು ಹೊಕ್ಕಾಗಿರುವುದರಿಂದ ಕಾಂಗ್ರೆಸ್ಸಿಗರಿಗೆ ಪಾಕಿಸ್ತಾನದ ಬಗ್ಗೆ ಅಷ್ಟೊಂದು ಪ್ರೀತಿ" ಎಂದಿದ್ದಾರೆ.

ಇದನ್ನೂ ಓದಿ : ಚಾರ್​ಧಾಮ್ ಯಾತ್ರೆ ಆರಂಭ: ಕೇದಾರನಾಥ ದೇವಾಲಯದ ಬಾಗಿಲು ಓಪನ್​ - CHARDHAM YATRA

Last Updated : May 10, 2024, 3:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.