ETV Bharat / bharat

ಅಸ್ಸಾಂನ ಮುಸ್ಲಿಂ ವಿವಾಹ, ವಿಚ್ಛೇದನ ಕಾಯಿದೆ ರದ್ದು: ಅಲ್ಲಿನ ಸರ್ಕಾರದಿಂದ ಐತಿಹಾಸಿಕ ನಿರ್ಧಾರ

author img

By ETV Bharat Karnataka Team

Published : Feb 24, 2024, 10:49 AM IST

Repeal of the Assam Muslim Marriage and Divorce Act (1935): ಅಸ್ಸಾಂನ ಮುಸ್ಲಿಂ ವಿವಾಹ, ವಿಚ್ಛೇದನ ಕಾಯಿದೆ ರದ್ದು ಮಾಡುವ ಅಸ್ಸಾಂ ಸರ್ಕಾರವು ಐತಿಹಾಸಿಕ ನಿರ್ಧಾರ ಕೈಗೊಂಡಿದೆ.

Assam Cabinet  Muslim Marriage and Divorce Act  ಅಸ್ಸೋಂ ಸರ್ಕಾರ  ಮುಸ್ಲಿಂ ವಿವಾಹ ವಿಚ್ಛೇದನ ಕಾಯಿದೆ ರದ್ದು  ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ
Repeal of the Assam Muslim Marriage and Divorce Act (1935)

ಗುವಾಹಟಿ: ಫೆ.24: ಅಸ್ಸಾಂ ಸರ್ಕಾರ ಶುಕ್ರವಾರ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಅಸ್ಸಾಂ ಬಿಜೆಪಿ ನೇತೃತ್ವದ ಸರ್ಕಾರವು ಅಸ್ಸಾಂನ ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ಕಾಯ್ದೆ (1935) ರದ್ದುಗೊಳಿಸಿದೆ.

ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ರಾಜಧಾನಿ ದಿಸ್ಪುರದ ಜನತಾ ಭವನದಲ್ಲಿ ನಡೆದ ಸರ್ಕಾರದ ಮಹತ್ವದ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ರಾಜ್ಯ ಸರ್ಕಾರದ ವಕ್ತಾರ ಮತ್ತು ಸಚಿವ ಜಯಂತ್ ಮಲ್ಲಬರುವಾ ಅವರು, ಸರ್ಕಾರದ ನಿರ್ಧಾರವು ಏಕರೂಪ ನಾಗರಿಕ ಸಂಹಿತೆ ಜಾರಿಗೆ ಒಂದು ದೊಡ್ಡ ಹೆಜ್ಜೆಯಾಗಿದೆ ಎಂದು ಬಣ್ಣಿಸಿದ್ದಾರೆ.

ಸಂಪುಟ ಸಭೆ ಬಳಿಕ ಸಚಿವ ಜಯಂತ್ ಹೇಳಿಕೆ: ''ಇನ್ನು ಮುಂದೆ ಹೊಸ ನಿಯಮಗಳ ಪ್ರಕಾರ ಮುಸ್ಲಿಂ ವಿವಾಹ ಹಾಗೂ ವಿಚ್ಛೇದನ ನೋಂದಣಿಯ ಜವಾಬ್ದಾರಿಯನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ನೋಂದಣಾಧಿಕಾರಿಗೆ ವಹಿಸಲಾಗುವುದು. ಇನ್ನು ಮುಸ್ಲಿಂ ವಿವಾಹ ಹಾಗೂ ವಿಚ್ಛೇದನ ಕಾಯ್ದೆಯಡಿ ನೇಮಕಗೊಂಡಿದ್ದ ರಾಜ್ಯದ 94 ಮುಸ್ಲಿಂ ರಿಜಿಸ್ಟ್ರಾರ್‌ಗಳನ್ನೂ ಅವರ ಹುದ್ದೆಯಿಂದ ಕೈಬಿಡಲಾಗುವುದು. ಜೊತೆಗೆ ಅವರಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರಧನ ನೀಡಲಾಗುವುದು'' ಎಂದು ಸಂಪುಟ ಸಭೆಯ ಬಳಿಕ ಸಚಿವ ಜಯಂತ್ ಮಲ್ಲಬರುವಾ ಈ ವಿಷಯ ತಿಳಿಸಿದರು.

ಬಾಲ್ಯವಿವಾಹ ನಿಷೇಧಿಸಲು ಸರ್ಕಾರದ ಕ್ರಮ: ವಿಶೇಷವಾಗಿ ಬಾಲ್ಯವಿವಾಹಗಳನ್ನು ನಿಷೇಧಿಸುವಲ್ಲಿ ಸರ್ಕಾರದ ಈ ಕ್ರಮ ಪ್ರಮುಖ ಪಾತ್ರ ವಹಿಸಲಿದೆ. ಅಸ್ಸಾಂ ಸರ್ಕಾರವು ಈ ಹಳೆಯ ಕಾನೂನನ್ನು ರದ್ದುಗೊಳಿಸಿದೆ. ಇದು ಬ್ರಿಟಿಷರು ಆಗಿನ ಅಸ್ಸಾಂ ರಾಜ್ಯಕ್ಕಾಗಿ ಜಾರಿಗೆ ತಂದ ದೇಶದ ಸ್ವಾತಂತ್ರ್ಯ ಪೂರ್ವದ ಕಾಲದ ನಿಷ್ಕ್ರಿಯ ಕಾನೂನು. ಈ ಕಾನೂನನ್ನು ರದ್ದುಗೊಳಿಸುವ ಮೂಲಕ ಅಸ್ಸಾಂ ಸರ್ಕಾರವು ಮದುವೆಯಾಗಲು ಮಹಿಳೆಯರಿಗೆ 18 ವರ್ಷ ಮತ್ತು ಪುರುಷರಿಗೆ 21 ವರ್ಷ ನಿಗದಿ ಮಾಡಿದೆ. ಈ ಹಿಂದೆ ಇದ್ದ ವಿವಾಹದ ಸಮಸ್ಯೆ ಪರಿಹರಿಸಲು ಮುಂದಾಗಿದೆ ಎಂದು ಸಚಿವ ಜಯಂತ್ ಮಲ್ಲಬರುವಾ ಹೇಳಿದರು.

ಉತ್ತರಾಖಂಡವು ಏಕರೂಪ ನಾಗರಿಕ ಸಂಹಿತೆಯನ್ನು ಅಂಗೀಕರಿಸಿದ ಮೊದಲ ರಾಜ್ಯವಾದ ಕೆಲವು ವಾರಗಳ ನಂತರ, ಅಸ್ಸಾಂ ಸರ್ಕಾರದ ಈ ಕಾಯಿದೆ ರದ್ದುಗೊಳಿಸಿದ ಕ್ರಮವು ಇಡೀ ದೇಶದ ಗಮನವನ್ನು ಸೆಳೆದಿದೆ. ರಾಜ್ಯದಲ್ಲಿ ಯುಸಿಸಿಯನ್ನು ಜಾರಿಗೊಳಿಸುವ ಹಿತಾಸಕ್ತಿಯಿಂದ ಸರ್ಕಾರವು ಈ ನಿಟ್ಟಿನಲ್ಲಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಫೆಬ್ರವರಿ 12 ರಂದು ಮಾಧ್ಯಮಗಳ ಮುಂದೆ ಸುಳಿವು ನೀಡಿದ್ದರು.

ಇದನ್ನೂ ಓದಿ: ಪ್ಯಾರಾಚೂಟ್​ ಸಾಹಸ: ಸೀರೆಯುಟ್ಟು 5,000 ಅಡಿ ಎತ್ತರದಿಂದ ಜಿಗಿದ ಪದ್ಮಶ್ರೀ ಪುರಸ್ಕೃತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.