ETV Bharat / bharat

ಈಶ್ವರಪ್ಪನವರು ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತಾರೆ ಎನ್ನುವ ನಂಬಿಕೆ ಇಲ್ಲ: ಶಾಸಕ ಚನ್ನಬಸಪ್ಪ

author img

By ETV Bharat Karnataka Team

Published : Mar 16, 2024, 2:35 PM IST

ಕೆ ಎಸ್​ ಈಶ್ವರಪ್ಪ ಅವರು ಪಕ್ಷವನ್ನು ಹಾಳು ಮಾಡುವಂತಹ ತೀರ್ಮಾನಗಳನ್ನು ಮಾಡುವುದಿಲ್ಲ ಎನ್ನುವ ವಿಶ್ವಾಸವನ್ನು ಶಾಸಕ ಚನ್ನಬಸಪ್ಪ ವ್ಯಕ್ತಪಡಿಸಿದ್ದಾರೆ.

MLA Channabasappa
ಶಾಸಕ ಚನ್ನಬಸಪ್ಪ

ಶಾಸಕ ಚನ್ನಬಸಪ್ಪ

ಶಿವಮೊಗ್ಗ: "ಈಶ್ವರಪ್ಪ ಅವರು ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುತ್ತಾರೆ ಎಂಬ ನಂಬಿಕೆ ನಮಗಿಲ್ಲ. ಯಾಕಂದ್ರೆ, ಅವರು ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಅವರು ಪಕ್ಷವನ್ನು ಹಾಳು ಮಾಡುತ್ತಾರೆ ಎಂಬ ನಂಬಿಕೆ ಇಲ್ಲ. ಆ ಕಾರ್ಯವನ್ನು ಮಾಡುವ ವಿಶ್ವಾಸವಿಲ್ಲ. ನೋವು, ಬೇಸರದಲ್ಲಿ ಅವರು ಹೇಳಿರಬಹುದು. ಆದರೆ ನಮ್ಮ ಹಿರಿಯರು, ರಾಷ್ಟ್ರೀಯ ನಾಯಕರು ಮಾತುಕತೆ ಮಾಡಿ ಪರಿಹಾರ ಮಾಡಿಕೊಳ್ಳುವ ವಿಶ್ವಾಸವಿದೆ" ಎಂದು ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ ಹೇಳಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು, "ಈಶ್ವರಪ್ಪನವರು ಅಂತಹ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ ಎಂದು ನನಗೆ ಅನ್ನಿಸುವುದಿಲ್ಲ. ಅವರು ಸ್ವರ್ಧೆ ಮಾಡುವ ಕುರಿತು ಹೇಳಿರಬಹುದು. ಆದರೆ, ಇನ್ನೂ ಎಲ್ಲ ಮುಗಿದಿಲ್ಲ. ಯಾರು ಯಾವಾಗ ಏನೇನು ಆಗುತ್ತಾರೆ ಗೊತ್ತಿಲ್ಲ. ನಾನು ಶಾಸಕನಾಗುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಆದರೆ ಸಂಘಟನೆ ತೀರ್ಮಾನ ಮಾಡಿತು. ನಂತರ ಎಲ್ಲರೂ ಸೇರಿ ಗೆಲ್ಲಿಸುವಂತಹ ಕೆಲಸ ಮಾಡಿದರು. ಈಶ್ವರಪ್ಪನವರು ಹಿರಿಯರು. ಎಲ್ಲರನ್ನು ಗೆಲ್ಲಿಸಿಕೊಳ್ಳುವಂತಹ ಶಕ್ತಿ ಈಶ್ವರಪ್ಪನವರಿಗೆ ಇದೆ" ಎಂದರು.

"ಸಂಘಟನೆಯನ್ನು ಗೆಲ್ಲಿಸಿಕೊಳ್ಳುವಂತಹ ಶಕ್ತಿ ಅವರಿಗಿದೆ. ಹಾಗಾಗಿ ಅವರು ಸಂಘಟನೆಯ ವಿರುದ್ಧ ಹೋಗುತ್ತಾರೆ ಎಂದು ನನಗನ್ನಿಸುವುದಿಲ್ಲ. ಅವರು ದೊಡ್ಡವರು, ದೊಡ್ಡವರಿಗೆ ಯಾರು ಸಮಾಧಾನ ಮಾಡುತ್ತಾರೆ. ನಾವು ಬಹಳ ಸಣ್ಣವರು. ರಾಜ್ಯದ ಅನೇಕ ಸಮಸ್ಯೆಗಳನ್ನು ಪರಿಹರಿಸಿದವರು ಈಶ್ವರಪ್ಪನವರು. ಪಕ್ಷದ ಹಿರಿಯ ಮುಖಂಡರು ಈಶ್ವರಪ್ಪ ಅವರ ಜೊತೆಗೆ ಮಾತನಾಡಿ ಈ ಸಮಸ್ಯೆಯನ್ನು ಬಗೆಹರಿಸುತ್ತಾರೆ ಎನ್ನುವ ವಿಶ್ವಾಸ ನನಗಿದೆ." ಎಂದರು.

"ರಾಜ್ಯಕ್ಕೆ ಮೋದಿ ಬರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಈ ರೀತಿಯ ಸಂಗತಿಗಳಿಂದ ಪಕ್ಷಕ್ಕೆ ಇರಿಸುಮುರಿಸು ಆಗುತ್ತದೆ. ಅವುಗಳ ಕಾರಣವನ್ನು ಹುಡುಕಿ ಪಕ್ಷದ ಹಿರಿಯರು ಸಮಾಧಾನ ಮಾಡುತ್ತಾರೆ ಎಂಬ ವಿಶ್ವಾಸವಿದೆ. ಹಿಂದೆ ಮೋದಿಯವರೇ ಈಶ್ವರಪ್ಪನವರ ಜೊತೆ ಮಾತನಾಡಿದ್ದನ್ನು ನಾವು ನೋಡಿದ್ದೇವೆ. ಈಶ್ವರಪ್ಪನವರು ಸಾವಿರಾರು ಜನರನ್ನು ಸಮಾಧಾನ ಪಡಿಸಿ, ಪಕ್ಷಕ್ಕೆ ಜೋಡಿಸಿರುವುದನ್ನು ನಾವು ನೋಡಿದ್ದೇವೆ. ಈಶ್ವರಪ್ಪ ಬೇರೆಯವರ ರೀತಿ ನಡೆದುಕೊಳ್ಳುತ್ತಾರೆ ಎಂಬ ನಂಬಿಕೆ ಇಲ್ಲ" ಎಂದರು.

"ನಿನ್ನೆ ಸಹಜವಾಗಿ ಪಕ್ಷದ ಅನೇಕ ಕಾರ್ಯಕರ್ತರು ಅವರ ಸಭೆಗೆ ಹೋಗಿದ್ದಾರೆ. ಇದು ತಪ್ಪಲ್ಲ. ಸರಿಯೋ ತಪ್ಪೋ ಅದರ ಬಗ್ಗೆ ಚರ್ಚೆ ಆಗುತ್ತದೆ. ಈ ಎಲ್ಲದರ ಬಗ್ಗೆ ನಾನು ಚರ್ಚೆ ಮಾಡಲು ಹೋಗಲ್ಲ. ಈಶ್ವರಪ್ಪನವರಿಗೆ ನೋವಾಗಿದೆ. ಅದಕ್ಕೆ ಯಡಿಯೂರಪ್ಪನವರ ವಿರುದ್ಧ ಮಾತನಾಡಿರಬಹುದು.‌ ಅಣೇಕ ಸಂದರ್ಭಗಳಲ್ಲಿ ಅನೇಕ ನಿರ್ಣಯಗಳು ವ್ಯತ್ಯಾಸಗಳಾಗುತ್ತವೆ, ಆಗಿವೆ ಕೂಡ. ಈಶ್ವರಪ್ಪನವರು ಸಂಘಟನೆಯನ್ನು ಉಳಿಸಬೇಕು ಅಂತ ಯೋಚನೆ ಮಾಡಿ ಅನೇಕ ಬಾರಿ ಮುಂದಕ್ಕೆ ಹೋಗಿದ್ದಾರೆ. ಈಶ್ವರಪ್ಪನವರ ಜನ್ಮದಲ್ಲಿ ಬಂಡಾಯದ ಪ್ರಶ್ನೆ ಬರಲ್ಲ. ಅನೇಕ ಸಂದರ್ಭಗಳಲ್ಲಿ ನಮಗೆಲ್ಲ ಅವರು ಶಕ್ತಿ ಕೊಟ್ಟಿದ್ದಾರೆ. ಎಲ್ಲವನ್ನು ಸಹ ಪಕ್ಷದ ಹಿತದೃಷ್ಟಿಯಿಂದ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರುಗಳು ಮಾತನಾಡುತ್ತಾರೆ. ಈಶ್ವರಪ್ಪ ಅವರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ" ಎಂದರು.

ಇದನ್ನೂ ಓದಿ: ಕೆ.ಎಸ್​ ಈಶ್ವರಪ್ಪ ಪಕ್ಷದ ನಿರ್ಣಯ ಮಾನ್ಯ ಮಾಡುತ್ತಾರೆ: ಪ್ರಹ್ಲಾದ್ ಜೋಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.