ETV Bharat / bharat

ಮುಂದೆ ನಾನು ಎಲ್ಲಿಯೂ ಹೋಗಲ್ಲ.. ಎನ್‌ಡಿಎ 400ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ: ಪ್ರಧಾನಿ ಮೋದಿಗೆ ನಿತೀಶ್ ಭರವಸೆ

author img

By ETV Bharat Karnataka Team

Published : Mar 2, 2024, 10:08 PM IST

ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಲ್ಲಿ ಶಾಶ್ವತವಾಗಿ ಇರುತ್ತೇನೆ. ಮುಂದೆ ಎಲ್ಲಿಯೂ ಹೋಗಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

Bihar CM Nitish Kumar Tells PM Modi
ಪ್ರಧಾನಿ ಮೋದಿಗೆ ನಿತೀಶ್ ಭರವಸೆ

ಔರಂಗಾಬಾದ್ (ಬಿಹಾರ): ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್‌ಡಿಎ)ದಲ್ಲಿ ಶಾಶ್ವತವಾಗಿ ಇರುತ್ತೇನೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶನಿವಾರ ಭರವಸೆ ನೀಡಿದ್ದಾರೆ. ಇದೇ ವೇಳೆ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂಬ ವಿಶ್ವಾಸ ನನಗಿದೆ ಎಂದು ಜೆಡಿಯು ವರಿಷ್ಠ ತಿಳಿಸಿದ್ದಾರೆ.

ಔರಂಗಾಬಾದ್ ಜಿಲ್ಲೆಯಲ್ಲಿ ಇಂದು ಪ್ರಧಾನಿ ಮೋದಿ 21,400 ಕೋಟಿ ರೂ.ಗಳ ಯೋಜನೆಗಳ ಚಾಲನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಸಮಾರಂಭದಲ್ಲಿ ಮಾತನಾಡಿ ಸಿಎಂ ನಿತೀಶ್​, ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾನು ಅಭಿನಂದಿಸುತ್ತೇನೆ. ಅವರು ಬಿಹಾರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮುನ್ನಡೆಸುತ್ತಿದ್ದಾರೆ. ಅಂತಹ ಯೋಜನೆಗಳಲ್ಲಿ ತ್ವರಿತಗತಿಯಲ್ಲಿ ಕೆಲಸ ಮಾಡುತ್ತಿರುವುದು ತುಂಬಾ ಸಂತೋಷದ ವಿಷಯ ಎಂದರು.

ನೀವು (ಪ್ರಧಾನಿ ಮೋದಿ) ಹಿಂದೆಯೂ ಬಂದಿದ್ದೀರಿ. ಆದರೆ, ನಾನು ಆಗ ನಮ್ಮೊಂದಿಗೆ ಇರಲಿಲ್ಲ. ಆದರೆ, ಈಗ ನಾನು ನಿಮ್ಮೊಂದಿಗಿದ್ದೇನೆ. ನಾನು ಎಲ್ಲಿಯೂ ಹೋಗುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂಬ ವಿಶ್ವಾಸ ನನಗಿದೆ ಎಂದು ಸಿಎಂ ನಿತೀಶ್ ಹೇಳಿದರು. ಈ ವೇಳೆ, ಪ್ರಧಾನಿ ಮೋದಿ ಅವರು ನಿತೀಶ್ ಅವರತ್ತ ನೋಡುತ್ತಾ ನಸುನಗುತ್ತಿರುವುದು ಕಂಡು ಬಂತು.

ಇದನ್ನೂ ಓದಿ: ಕೇಂದ್ರ ಸರ್ಕಾರ ಆಮದು, ರಫ್ತು ನೀತಿ ಬದಲಿಸಿ ಕೃಷಿ ಉತ್ಪನ್ನಗಳ ಬೆಲೆ ಕುಗ್ಗಿಸುತ್ತಿದೆ: ರಾಹುಲ್​ ಗಾಂಧಿ

ಬಿಹಾರದ ಜನರು ಈಗ ಆರ್ಥಿಕವಾಗಿ ಹೆಚ್ಚು ಸಬಲರಾಗುತ್ತಾರೆ. ನಾವು 2005 ರಿಂದ ಒಟ್ಟಿಗೆ ಇದ್ದೇವೆ. ಒಟ್ಟಿಗೆ ಸಾಕಷ್ಟು ಕೆಲಸಗಳನ್ನು ಮಾಡಿದ್ದೇವೆ. ಮೊದಲು ಎಲ್ಲಿಯೂ ಯಾವುದೇ ಕೆಲಸ ಆಗಿರಲಿಲ್ಲ. ಆದರೆ, ಈಗ ಬಿಹಾರ ಸಾಕಷ್ಟು ಪ್ರಗತಿ ಸಾಧಿಸುತ್ತಿದೆ. ಇಂದು ರೈಲ್ವೆ, ರಸ್ತೆ ನಿರ್ಮಾಣ ಮತ್ತು ನಮಾಮಿ ಗಂಗೆಯ ಪ್ರಮುಖ ಯೋಜನೆಗಳ ಅಡಿಗಲ್ಲು ಹಾಕಲಾಗುತ್ತಿದೆ. ಅಮಾಸ್​ನಿಂದ ದರ್ಭಾಂಗದವರೆಗೆ ಹೊಸದಾಗಿ ನಾಲ್ಕು ಪಥದ ರಸ್ತೆ ನಿರ್ಮಿಸಬೇಕು. ದಾನಾಪುರ ಬಿಹ್ತಾ ನಡುವೆ ನಾಲ್ಕು ಪಥದ ರಸ್ತೆ ಯೋಜನೆಯೂ ಮುಖ್ಯವಾಗಿದೆ. ಇದರೊಂದಿಗೆ ಬಿಹ್ತಾದಿಂದ ಪಾಟ್ನಾಗೆ ಪ್ರಯಾಣಿಸಲು ಸುಲಭವಾಗುತ್ತದೆ. ಎಲ್ಲ ಕೆಲಸಗಳು ಬೇಗ ಆಗುತ್ತಿರುವುದು ಸಂತಸದ ಸಂಗತಿ ಎಂದು ನಿತೀಶ್ ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯಪಾಲ ರಾಜೇಂದ್ರ ಅರ್ಲೇಕರ್, ಉಪ ಮುಖ್ಯಮಂತ್ರಿಗಳಾದ ಸಮತ್ ಚೌಧರಿ, ವಿಜಯ್ ಕುಮಾರ್ ಸಿನ್ಹಾ ಮತ್ತು ಹಲವಾರು ಕೇಂದ್ರ ಸಚಿವರು ಉಪಸ್ಥಿತರಿದ್ದರು. ಕೆಲ ದಿನಗಳ ಹಿಂದೆ ಜೆಡಿಯು ನಾಯಕರಾದ ನಿತೀಶ್ ಕುಮಾರ್​ ಕಾಂಗ್ರೆಸ್, ಆರ್​ಜೆಡಿ​ಯ ಮಹಾಘಟ ಬಂಧನ್​ನಿಂದ ಹೊರ ಬಂದಿದ್ದಾರೆ. ಮತ್ತೆ ಬಿಜೆಪಿ ನೇತೃತ್ವದ ಎನ್‌ಡಿಎ ಸೇರಿ ಸಿಎಂ ಆಗಿದ್ದಾರೆ. ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಮರಳಿದ ನಂತರ ಪ್ರಧಾನಿ ಮೋದಿ ಇದು ಮೊದಲ ಸಲ ಭೇಟಿ ನೀಡಿದ್ದಾರೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ: 195 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ; ವಾರಾಣಸಿಯಲ್ಲೇ ಮೋದಿ ಸ್ಪರ್ಧೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.