ETV Bharat / bharat

ನನ್ನ ವಿರುದ್ಧದ ಭ್ರಷ್ಟಾಚಾರ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ: ಹೇಮಂತ್​ ಸೊರೇನ್​

author img

By ETV Bharat Karnataka Team

Published : Feb 5, 2024, 6:14 PM IST

ಜಾರ್ಖಂಡ್​ ಸರ್ಕಾರದ ವಿಶ್ವಾಸಮತ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಸಿಎಂ ಹೇಮಂತ್​ ಸೊರೇನ್​, "ಕೇಂದ್ರ ಸರ್ಕಾರ ಬುಡಕಟ್ಟು ಜನಾಂಗದ ವಿರುದ್ಧವಾಗಿದೆ" ಎಂದು ಆರೋಪಿಸಿದರು. ಇದೇ ಸಂದರ್ಭದಲ್ಲಿ ತಮ್ಮ ವಿರುದ್ಧದ ಆರೋಪಗಳನ್ನು ಬಿಜೆಪಿ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಾಗಿಯೂ ಪ್ರಕಟಿಸಿದರು.

ಹೇಮಂತ್​ ಸೊರೇನ್
ಹೇಮಂತ್​ ಸೊರೇನ್

ರಾಂಚಿ(ಜಾರ್ಖಂಡ್​): ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ(ಇಡಿ) ಬಂಧನದಲ್ಲಿರುವ ಜಾರ್ಖಂಡ್​ ಮಾಜಿ ಮುಖ್ಯಮಂತ್ರಿ ಹೇಮಂತ್​ ಸೊರೇನ್​ ಅವರು ಸೋಮವಾರ ವಿಧಾನಸಭೆಯಲ್ಲಿ ನಡೆದ ವಿಶ್ವಾಸ ಮತಯಾಚನೆಯಲ್ಲಿ ಪಾಲ್ಗೊಂಡಿದ್ದರು. ನೂತನ ಸಿಎಂ ಚಂಪೈ ಸೊರೇನ್ ಪರವಾಗಿ ಅವರು ಮತ ಹಾಕಿದರು. ಇದಕ್ಕೂ ಮುನ್ನ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡುತ್ತಾ, ತಮ್ಮ ವಿರುದ್ಧ ಮಾಡಲಾದ ಆರೋಪಗಳು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ತಿಳಿಸಿದರು.

"ಕೇಂದ್ರ ಸರ್ಕಾರ ಬುಡಕಟ್ಟು ವಿರೋಧಿ": "ಆದಿವಾಸಿಗಳ ಮೇಲೆ ಬಿಜೆಪಿ ಪ್ರಹಾರ ನಡೆಸುತ್ತಿದೆ. ಕೇಂದ್ರ ಸರ್ಕಾರ ಬುಡಕಟ್ಟು ಜನಾಂಗದ ವಿರೋಧಿಯಾಗಿದೆ. ರಾಜ್ಯದಲ್ಲಿ ಬುಡಕಟ್ಟು ಜನಾಂಗದವರು ಮುಖ್ಯಮಂತ್ರಿ ಆಗಿದ್ದನ್ನು ಅದು ಸಹಿಸುತ್ತಿಲ್ಲ. ಆದರೆ, ಬುಡಕಟ್ಟು ರಾಜ್ಯದಲ್ಲಿ ಅದೇ ಜನಾಂಗದವರು ಮಾತ್ರ ಚುಕ್ಕಾಣಿ ಹಿಡಿಯುತ್ತಾ ಎಂಬುದನ್ನು ತಿಳಿದಿರಬೇಕು" ಎಂದು ಸೊರೇನ್ ಕುಟುಕಿದರು.

"ರಾಜ್ಯದಲ್ಲಿ ಬಿಜೆಪಿ ಒಡೆದು ಆಳುವ ತಂತ್ರ ಅನುಸರಿಸಿದರು. ನನ್ನನ್ನು ಸಿಎಂ ಸ್ಥಾನದಿಂದ ಇಳಿಸಲು ಭೂ ಹಗರಣದಲ್ಲಿ ಸಿಲುಕಿಸಿದರು. ನಾನು ಪದತ್ಯಾಗ ಮಾಡಿದರೂ, ಕೊನೆಗೆ ಬುಡಕಟ್ಟು ಜನಾಂಗದ ವ್ಯಕ್ತಿಯೇ ರಾಜ್ಯದ ಸಿಎಂ ಆಗಿದ್ದಾರೆ. ಈ ಮೂಲಕ ಕಮಲ ಪಕ್ಷ ತನ್ನನ್ನು ತಾನು ರಾಜ್ಯದ ಜನರ ಮುಂದೆ ಬೆತ್ತಲು ಮಾಡಿಕೊಂಡಿದೆ" ಎಂದು ಟೀಕಿಸಿದರು.

ತಮ್ಮ ವಿರುದ್ಧ ದಾಖಲಾಗಿರುವ ಭೂ ಅಕ್ರಮ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಕೇಸ್​ ಸಾಬೀತು ಮಾಡಲು ಬಿಜೆಪಿಗೆ ಹೇಮಂತ್​ ಸೊರೇನ್​ ಸವಾಲು ಹಾಕಿದರು. ನನ್ನ ವಿರುದ್ಧ ಮಾಡಲಾಗಿರುವ ಆರೋಪ ನಿಜವಾದಲ್ಲಿ ನಾನು ರಾಜಕೀಯದಿಂದಲೇ ನಿವೃತ್ತಿ ಪಡೆಯುವೆ. ಭ್ರಷ್ಟಾಚಾರ ಆರೋಪವನ್ನು ಸಾಬೀತುಪಡಿಸಿ ಎಂದು ಗುಡುಗಿದರು.

ವಿಶ್ವಾಸಮತದಲ್ಲಿ ಭಾಗಿಗೆ ಅವಕಾಶ: ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಕಾರ್ಯಕಾರಿ ಅಧ್ಯಕ್ಷರಾಗಿರುವ ಹೇಮಂತ್ ಸೊರೇನ್‌ ಅವರಿಗೆ ವಿಶ್ವಾಸಮತ ಪರೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಎಂದು ರಾಂಚಿಯ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅದರಂತೆ ಕೋರ್ಟ್​ ಅನುಮತಿ ನೀಡಿದೆ. ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಹೇಮಂತ್ ಸೊರೇನ್ ಅವರನ್ನು ಜಾರಿ ನಿರ್ದೇಶನಾಲಯವು ಜನವರಿ 31ರಂದು ಬಂಧಿಸಿದೆ. ಫೆಬ್ರವರಿ 2ರಂದು ನ್ಯಾಯಾಲಯ ಅವರನ್ನು 5 ದಿನಗಳ ಕಾಲ ಇಡಿ ಕಸ್ಟಡಿಗೆ ಒಪ್ಪಿಸಿದೆ.

ಪರೀಕ್ಷೆ ಗೆದ್ದ ಚಂಪೈ ಸೊರೇನ್​: ಜಾರ್ಖಂಡ್‌ ನೂತನ ಮುಖ್ಯಮಂತ್ರಿ ಚಂಪೈ ಸೊರೇನ್ ಅವರು ತಮ್ಮ ಸರ್ಕಾರಕ್ಕೆ ಬಹುಮತವಿದೆ ಎಂಬುದನ್ನು ಇಂದು ನಡೆದ ವಿಶ್ವಾಸಮತ ಪರೀಕ್ಷೆಯಲ್ಲಿ ಸಾಬೀತುಪಡಿಸಿದರು. ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಎಣಿಕೆಯಲ್ಲಿ ಜೆಎಂಎಂ-ಕಾಂಗ್ರೆಸ್​-ಆರ್​ಜೆಡಿ ಸಮ್ಮಿಶ್ರ ಸರ್ಕಾರವು 47:29 ಬಹುಮತದೊಂದಿಗೆ ಗೆಲುವು ಸಾಧಿಸಿತು.

ವಿಧಾನಸಭೆಯ ಸ್ಪೀಕರ್ ರವೀಂದ್ರನಾಥ್ ಮಹತೋ ವಿಶ್ವಾಸಮತ ನಿರ್ಣಯ ಮಂಡಿಸಿದರು. 47 ಮತಗಳು ನಿರ್ಣಯದ ಪರವಾಗಿ ಬಂದರೆ, ವಿರುದ್ಧವಾಗಿ 29 ಮತಗಳು ಬಂದವು. ಬಹುಮತಕ್ಕೆ 41 ಸಂಖ್ಯೆ ಬೇಕಾಗಿತ್ತು. ಸದನದಲ್ಲಿ ಮತದಾನದ ವೇಳೆ 77 ಶಾಸಕರು ಹಾಜರಿದ್ದರು. ಇದರಲ್ಲಿ ಜೆಎಂಎಂನ 29, ಕಾಂಗ್ರೆಸ್​ನ 17 ಶಾಸಕರು ಸರ್ಕಾರದ ಪರವಾಗಿ ಮತ ಹಾಕಿದರು. ಸ್ವತಂತ್ರ ಶಾಸಕ ಸರಯು ರಾಯ್ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲಿಲ್ಲ.

ಇದನ್ನೂ ಓದಿ: ವಿಶ್ವಾಸಮತ ಗೆದ್ದ ಸಿಎಂ ಚಂಪೈ ಸೊರೇನ್​: ಜಾರ್ಖಂಡ್​ ರಾಜಕೀಯ ಹೈಡ್ರಾಮಾಕ್ಕೆ ತೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.