ETV Bharat / bharat

ಸಂಘರ್ಷಕ್ಕೆ ತಿರುಗಿದ ರೈತ ಹೋರಾಟ: ಓರ್ವ ಸಾವು, 12 ಪೊಲೀಸರಿಗೆ ಗಾಯ, 2 ದಿನ ಪ್ರತಿಭಟನೆ ಸ್ಥಗಿತ

author img

By ETV Bharat Karnataka Team

Published : Feb 22, 2024, 7:14 AM IST

ದೆಹಲಿ ಚಲೋ ಹೋರಾಟವು ಬುಧವಾರ ಸಂಘರ್ಷಕ್ಕೆ ತಿರುಗಿದ್ದು, ಓರ್ವ ರೈತ ಕೂಡ ಬಲಿಯಾಗಿದ್ದಾನೆ. ಉದ್ರಿಕ್ತ ರೈತರನ್ನು ಶಾಂತಗೊಳಿಸಲು 2 ದಿನ ಹೋರಾಟಕ್ಕೆ ಬಿಡುವು ನೀಡಲಾಗಿದೆ.

ಸಂಘರ್ಷಕ್ಕೆ ತಿರುಗಿದ ರೈತ ಹೋರಾಟ
ಸಂಘರ್ಷಕ್ಕೆ ತಿರುಗಿದ ರೈತ ಹೋರಾಟ

ಚಂಡೀಗಢ: ಎಂಎಸ್​ಪಿಗೆ ಕಾನೂನು ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿ ಪಂಜಾಬ್​ ಮತ್ತು ಹರಿಯಾಣ ರೈತರು ನಡೆಸುತ್ತಿರುವ ದೆಹಲಿ ಚಲೋ ಹೋರಾಟ ಸಂಘರ್ಷಕ್ಕೆ ತಿರುಗಿದ್ದು, ಓರ್ವ ರೈತ ಸಾವಿಗೀಗಿದ್ದಾನೆ. 12 ಪೊಲೀಸರೂ ಗಾಯಗೊಂಡಿದ್ದು, ಉದ್ವಿಗ್ವ ಸ್ಥಿತಿ ಹಿನ್ನೆಲೆ 2 ದಿನ ಹೋರಾಟವನ್ನು ನಿಲ್ಲಿಸಲು ರೈತ ಮುಖಂಡರು ಕರೆ ನೀಡಿದ್ದಾರೆ.

ಶಂಭು ಮತ್ತು ಖನೌರಿ ಗಡಿಯಲ್ಲಿ ಸಾವಿರಾರು ರೈತರು, ಭದ್ರತಾ ಸಿಬ್ಬಂದಿ ಜೊತೆಗೆ ಸಂಘರ್ಷಕ್ಕೆ ಮುಂದಾಗಿದ್ದಾರೆ. ಇದರಿಂದ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಕೇಂದ್ರ ಸರ್ಕಾರದೊಂದಿಗೆ ನಾಲ್ಕನೇ ಸುತ್ತಿನ ಸಭೆಯ ನಂತರ ಬೇಡಿಕೆಯಂತೆ ಎಂಎಸ್​ಪಿಗೆ ಒಪ್ಪದ ಕಾರಣ ರೈತರು ದೆಹಲಿಗೆ ಮುತ್ತಿಗೆ ಹಾಕಲು ಶಂಭು ಗಡಿಯಲ್ಲಿ ಹಾಕಿರುವ ಬ್ಯಾರಿಕೇಡ್​ಗಳನ್ನು ಮುರಿಯಲು ಯತ್ನಿಸಿದರು. ಇದನ್ನು ತಡೆಯಲು ಪೊಲೀಸರು ಅಶ್ರುವಾಯು ಸಿಡಿಸಿದರು.

ಈ ವೇಳೆ ನಡೆದ ತಿಕ್ಕಾಟದಲ್ಲಿ ಪಂಜಾಬ್‌ನ ಬಟಿಂಡಾ ಜಿಲ್ಲೆಯ ಬಲೋಕೆ ಗ್ರಾಮದ ರೈತ ಸುಭಕರನ್ ಸಿಂಗ್ (21) ಎಂಬಾತ ಸಾವಿಗೀಡಾಗಿದ್ದಾನೆ. ಇನ್ನಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಮೆಣಸಿನ ಪುಡಿಗೆ ಬೆಂಕಿ ಹಚ್ಚಿದ ರೈತರು: ಭದ್ರತೆಗಿದ್ದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಪ್ರತಿಭಟನಾನಿರತ ರೈತರು, ಬಳಿಕ ಅವರನ್ನು ಸುತ್ತುವರೆದು ಮೆಣಸಿನಕಾಯಿ ಪುಡಿಯನ್ನು ಸುರಿದು ಅದಕ್ಕೆ ಬೆಂಕಿ ಹಚ್ಚಿದರು. ಇದರಿಂದ ಹಲವಾರು ಪೊಲೀಸರು, ಉಸಿರಾಟ ತೊಂದರೆ, ಕಣ್ಣಿನ ಉರಿ, ನೋವು ಅನುಭವಿಸಿದರು. ಪ್ರತಿಭಟನಾ ಸ್ಥಳದಲ್ಲಿ ದೊಡ್ಡ ಬೆಂಕಿಯ ಜ್ವಾಲೆಗಳು ಎದ್ದವು. ಇದರಿಂದ ಹೋರಾಟ ಸಂಘರ್ಷದ ರೂಪ ಪಡೆಯುವ ಲಕ್ಷಣಗಳನ್ನು ತೋರಿಸಿತು.

ಹೋರಾಟ ಎರಡು ದಿನ ಸ್ಥಗಿತ: ಓರ್ವ ರೈತ ಸಾವು, ಭದ್ರತಾ ಸಿಬ್ಬಂದಿ ಗಾಯಗೊಂಡ ಬಳಿಕ ಉದ್ರಿಕ್ತ ರೈತರು ಮತ್ತಷ್ಟು ಹಾನಿ ಉಂಟು ಮಾಡುವ ಸಾಧ್ಯತೆ ಇತ್ತು. ಗಡಿಯಲ್ಲಿ ಪೊಲೀಸರು ಬಿಗಿ ಪಹರೆ ಹಾಕಿದ ಬಳಿಕ ರೈತ ಮುಖಂಡರು ತಕ್ಷಣವೇ ಹೋರಾಟವನ್ನು ನಿಲ್ಲಿಸಲು ಕರೆ ನೀಡಿದರು. ಎರಡು ದಿನ ತಾತ್ಕಾಲಿಕವಾಗಿ ಹೋರಾಟಕ್ಕೆ ವಿರಾಮ ನೀಡುವುದಾಗಿ ಘೋಷಿಸಿದರು.

ಕಳೆದ ಬಾರಿಯೂ ಕೃಷಿ ಕಾಯ್ದೆಗಳ ವಿರುದ್ಧ ನಡೆದ ಹೋರಾಟವು ಸಂಘರ್ಷ ರೂಪಕ್ಕೆ ತಿರುಗಿ ಭಾರಿ ಅನಾಹುತ ಉಂಟು ಮಾಡಿತ್ತು. ಅಂಥದ್ದೇ ಘಟನೆಗಳು ಈ ಬಾರಿ ನಡೆಯಬಾರದು. ಇಲ್ಲವಾದಲ್ಲಿ ದೆಹಲಿ ಚಲೋ ಹೋರಾಟಕ್ಕೆ ಜಯ ಸಿಗುವುದಿಲ್ಲ ಎಂದರಿತ ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಪ್ರತಿಭಟನೆಯನ್ನು ಸದ್ಯಕ್ಕೆ ನಿಲ್ಲಿಸಲು ರೈತರನ್ನು ಕೋರಿದ್ದಾರೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪಂಧೇರ್, ಖನೌರಿ ಗಡಿಯಲ್ಲಿ ನಡೆದ ಸಂಘರ್ಷದಿಂದಾಗಿ ಹೋರಾಟ ಸದ್ಯಕ್ಕೆ ನಿಲ್ಲಿಸಲಾಗಿದೆ. ಪೊಲೀಸರು ರೈತರ ಮೇಲೆ ರಬ್ಬರ್​ ಬುಲೆಟ್​, ಅಶ್ರುವಾಯುಗಳನ್ನು ಸಿಡಿಸಿದ್ದಾರೆ. ಪರಿಸ್ಥಿತಿ ನೋಡಿಕೊಂಡು, ಚರ್ಚಿಸಿದ ಬಳಿಕ ಮುಂದಿನ ನಿರ್ಧಾರವನ್ನು ಶುಕ್ರವಾರ ಸಂಜೆ ಪ್ರಕಟಿಸಲಾಗುವುದು ಎಂದರು.

ಜೆಸಿಬಿ ಬಳಸಿದರೆ ಕ್ರಿಮಿನಲ್​ ಕೇಸ್​: ಪ್ರತಿಭಟನಾ ಸ್ಥಳಗಳಲ್ಲಿ ಜೆಸಿಬಿ, ಪೊಕ್ಲೆನ್​ಗಳು ಮತ್ತು ಮಾರ್ಪಡಿಸಿದ ಟ್ರ್ಯಾಕ್ಟರ್‌ಗಳು ಕಂಡುಬಂದಿದ್ದು, ಇವುಗಳನ್ನು ಬಳಸಿದರೆ, ರೈತರ ವಿರುದ್ಧ ಕ್ರಿಮಿನಲ್​ ಕೇಸ್​ ದಾಖಲಿಸುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಹೋರಾಟನಿರತ ರೈತರು ದೆಹಲಿಗೆ ಬರದಂತೆ ರಸ್ತೆಗಳಲ್ಲಿ ಮೊಳೆಗಳನ್ನು ಅಳವಡಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ರೈತರು ಕಿತ್ತುಹಾಕಲು ಜೆಸಿಬಿ, ಪೊಕ್ಲೆನ್​ಗಳನ್ನು ತಂದಿದ್ದಾರೆ.

ಇದನ್ನೂ ಓದಿ: ಶಂಭು ಗಡಿಯಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ: ಬ್ಯಾರಿಕೇಡ್‌ ಮುರಿಯಲು ರೈತರ ಯತ್ನ, ಅಶ್ರುವಾಯು ಸಿಡಿಸಿದ ಪೊಲೀಸರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.