ETV Bharat / bharat

ಎನ್​ಡಿಎ ತೆಕ್ಕೆಗೆ ಎಐಎಡಿಎಂಕೆ ತರಲು ಕಸರತ್ತು: ಜಿ.ಕೆ. ವಾಸನ್ ನೇತೃತ್ವದಲ್ಲಿ ಮಾತುಕತೆ

author img

By ETV Bharat Karnataka Team

Published : Feb 4, 2024, 3:56 PM IST

ತಮಿಳುನಾಡಿನಲ್ಲಿ ಎಐಎಡಿಎಂಕೆಯೊಂದಿಗೆ ಮತ್ತೆ ಮೈತ್ರಿ ಸಾಧಿಸಲು ಬಿಜೆಪಿ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ.

Vasan to mediate for AIADMK's return to NDA in TN
Vasan to mediate for AIADMK's return to NDA in TN

ಚೆನ್ನೈ: ಎಐಎಡಿಎಂಕೆ ಮತ್ತು ಬಿಜೆಪಿ ಮಧ್ಯೆ ಮತ್ತೊಮ್ಮೆ ಮೈತ್ರಿ ಏರ್ಪಡಿಸಲು ತಮಿಳು ಮಾನಿಲ ಕಾಂಗ್ರೆಸ್ (ಟಿಎಂಸಿ) ಮುಖಂಡ ಹಾಗೂ ಕೇಂದ್ರದ ಮಾಜಿ ಸಚಿವ ಜಿ.ಕೆ. ವಾಸನ್ ಪ್ರಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಖ್ಯಾತ ಕಾಂಗ್ರೆಸ್ ನಾಯಕ ದಿವಂಗತ ಜಿ.ಕೆ. ಮೂಪನಾರ್ ಅವರ ಪುತ್ರ ವಾಸನ್ ಅವರು ಮಾಜಿ ಮುಖ್ಯಮಂತ್ರಿ ಮತ್ತು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ (ಇಪಿಎಸ್) ಮತ್ತು ಇತರ ಎಐಎಡಿಎಂಕೆ ನಾಯಕರಾದ ಸಿ.ವಿ. ಷಣ್ಮುಗಂ ಮತ್ತು ಕೆ.ಪಿ.ಮುನಿಸ್ವಾಮಿ ಸೇರಿದಂತೆ ಎಐಎಡಿಎಂಕೆಯ ಉನ್ನತ ನಾಯಕರೊಂದಿಗೆ ಅತ್ಯುತ್ತಮ ವೈಯಕ್ತಿಕ ಸಂಬಂಧ ಹೊಂದಿದ್ದಾರೆ ಎಂದು ಬಿಜೆಪಿ ಮೂಲಗಳು ಐಎಎನ್ಎಸ್​ಗೆ ತಿಳಿಸಿವೆ.

ಕೇಂದ್ರ ಬಿಜೆಪಿ ನಾಯಕತ್ವವು ತಮಿಳುನಾಡು ರಾಜಕೀಯದಲ್ಲಿ ಮೇಲುಗೈ ಸಾಧಿಸಲು ಕಾತರಿಸುತ್ತಿದೆ ಮತ್ತು ಶತಾಯ ಗತಾಯ ರಾಜ್ಯದಲ್ಲಿ ಕೆಲ ಸ್ಥಾನಗಳನ್ನು ಗೆಲ್ಲಲು ಹವಣಿಸುತ್ತಿದೆ ಎಂದು ಮೂಲಗಳು ಐಎಎನ್ಎಸ್​ಗೆ ತಿಳಿಸಿವೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಬಿಜೆಪಿ ಇತ್ತೀಚೆಗೆ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಸೂಕ್ತ ಮೈತ್ರಿಯಿಲ್ಲದೆ ತಮಿಳು ನಾಡಿನಲ್ಲಿ ಯಾವುದೇ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ ಎಂದು ಕಂಡುಕೊಂಡಿದೆ. ಹೀಗಾಗಿ ಇದಕ್ಕೆ ಎಐಎಡಿಎಂಕೆಯೊಂದಿಗೆ ಮತ್ತೆ ಮೈತ್ರಿ ಮಾಡಿಕೊಳ್ಳುವುದೇ ಪರಿಹಾರ ಎಂದು ನಿರ್ಧರಿಸಿದೆ.

ಆದರೆ ಬಿಜೆಪಿಯ ರಾಜ್ಯ ನಾಯಕತ್ವವು ಎಐಎಡಿಎಂಕೆ ನಾಯಕತ್ವದೊಂದಿಗೆ ಉತ್ತಮ ಸಂಬಂಧ ಹೊಂದಿಲ್ಲದ ಕಾರಣ, ಬಿಜೆಪಿ ಹೈಕಮಾಂಡ್​ ದೀರ್ಘಕಾಲದಿಂದ ಎನ್​ಡಿಎಗೆ ನಿಷ್ಠರಾಗಿರುವ ಜಿ.ಕೆ. ವಾಸನ್ ಅವರನ್ನು ಸಂಪರ್ಕಿಸಿದೆ ಎಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ, ವಾಸನ್ ಈಗಾಗಲೇ ಎಐಎಡಿಎಂಕೆಯ ಉನ್ನತ ನಾಯಕರನ್ನು ಭೇಟಿ ಮಾಡಿದ್ದಾರೆ ಮತ್ತು ಮೈತ್ರಿಗಾಗಿ ಸೂತ್ರ ಹೆಣೆಯುತ್ತಿದ್ದಾರೆ.

ಜಿ.ಕೆ.ವಾಸನ್ ಅವರು ಪಿಎಂಕೆ ಸ್ಥಾಪಕ ನಾಯಕ ಡಾ.ಎಸ್. ರಾಮದಾಸ್, ಅವರ ಪುತ್ರ ಮತ್ತು ಪಕ್ಷದ ರಾಜ್ಯ ಅಧ್ಯಕ್ಷ ಡಾ. ಅನ್ಬುಮಣಿ ರಾಮದಾಸ್ ಅವರನ್ನು ಈಗಾಗಲೇ ಭೇಟಿ ಮಾಡಿದ್ದಾರೆ. ಪಿಎಂಕೆ ಈಗ ತಮಿಳುನಾಡಿನಲ್ಲಿ ಎನ್​ಡಿಎ ಜೊತೆಗಿಲ್ಲ. ಪಶ್ಚಿಮ ಮತ್ತು ಮಧ್ಯ ತಮಿಳುನಾಡಿನ ಹಲವಾರು ಕ್ಷೇತ್ರಗಳಲ್ಲಿ ವನ್ನಿಯರ್ ಸಮುದಾಯ ಪ್ರಬಲ ರಾಜಕೀಯ ಶಕ್ತಿಯಾಗಿದ್ದು, ಈ ಸಮುದಾಯ ಪಿಎಂಕೆ ಜೊತೆಗಿದೆ. ಹೀಗಾಗಿ ಈ ಪಕ್ಷದೊಂದಿಗೆ ಮೈತ್ರಿ ಬಿಜೆಪಿಗೆ ನಿರ್ಣಾಯಕವಾಗಿದೆ.

ವಾಸನ್ ಇತ್ತೀಚೆಗೆ ನವದೆಹಲಿಗೆ ತೆರಳಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಸೇರಿದಂತೆ ಬಿಜೆಪಿ ಉನ್ನತ ನಾಯಕರನ್ನು ಭೇಟಿಯಾಗಿದ್ದರು. ಏತನ್ಮಧ್ಯೆ, ಫೆಬ್ರವರಿ 12 ರಂದು ಪಕ್ಷದ ಸಾಮಾನ್ಯ ಕಾರ್ಯಕಾರಿ ಮಂಡಳಿ ಸಭೆಯ ನಂತರ 2024 ರ ಸಾರ್ವತ್ರಿಕ ಚುನಾವಣೆಗೆ ಮೈತ್ರಿಯ ಬಗ್ಗೆ ವಾಸನ್ ಘೋಷಣೆ ಮಾಡಲಿದ್ದಾರೆ. ಟಿಎಂಸಿ ತಮಿಳುನಾಡಿನಲ್ಲಿ ಎನ್​ಡಿಎ ಮೈತ್ರಿಕೂಟದಲ್ಲಿದ್ದು, ಅದರಲ್ಲಿಯೇ ಮುಂದುವರಿಯಲಿದೆ. ಆದರೆ ತಮಿಳುನಾಡಿನ ಕೆಲ ಭಾಗಗಳಲ್ಲಿ ಪ್ರಾಬಲ್ಯ ಹೊಂದಿರುವ ಟಿಎಂಸಿ ಮೈತ್ರಿಯ ಬಗ್ಗೆ ಸಾರ್ವಜನಿಕ ಘೋಷಣೆ ಮಾಡುವುದು ಅಗತ್ಯವಾಗಿದೆ.

ಇದನ್ನೂ ಓದಿ : ರಷ್ಯಾದ ಭಾರತೀಯ ರಾಯಭಾರಿ ಕಚೇರಿಯಿಂದ ಪಾಕ್‌ಗೆ ರಹಸ್ಯ ಮಾಹಿತಿ ರವಾನಿಸುತ್ತಿದ್ದ ಆರೋಪಿ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.