ETV Bharat / bharat

ನರಸಿಂಹ ರಾವ್, ಚರಣ್ ಸಿಂಗ್, ಸ್ವಾಮಿನಾಥನ್​ಗೆ ಭಾರತ ರತ್ನ: ಸ್ವಾಗತಿಸಿದ ಖರ್ಗೆ, ಸೋನಿಯಾ

author img

By PTI

Published : Feb 9, 2024, 5:29 PM IST

ಪಿ.ವಿ.ನರಸಿಂಹ ರಾವ್, ಚೌಧರಿ ಚರಣ್ ಸಿಂಗ್ ಮತ್ತು ಡಾ.ಎಂ.ಎಸ್.ಸ್ವಾಮಿನಾಥನ್ ಅವರಿಗೆ 'ಭಾರತ ರತ್ನ' ಘೋಷಿಸಿರುವುದನ್ನು ನಾವು ಸ್ವಾಗತಿಸುತ್ತೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

congress welcome-bharat-ratna-to-narasimha-rao,  Charan Singh, MS Swaminathan
ನರಸಿಂಹ ರಾವ್, ಚರಣ್ ಸಿಂಗ್, ಸ್ವಾಮಿನಾಥನ್​ಗೆ ಭಾರತ ರತ್ನ: ಸ್ವಾಗತಿಸಿದ ಖರ್ಗೆ, ಸೋನಿಯಾ

ನವದೆಹಲಿ: ಮಾಜಿ ಪ್ರಧಾನಿಗಳಾದ ಚೌಧರಿ ಚರಣ್​ ಸಿಂಗ್, ಪಿ.ವಿ.ನರಸಿಂಹ ರಾವ್​ ಮತ್ತು ದೇಶದ ಹಸಿರು ಕ್ರಾಂತಿಯ ಪಿತಾಮಹರೆಂದೇ ಖ್ಯಾತರಾದ ಎಂ.ಎಸ್​.ಸ್ವಾಮಿನಾಥನ್​ ಅವರಿಗೆ ಇಂದು ಪ್ರಧಾನಿ ನರೇಂದ್ರ ಮೋದಿ 'ಭಾರತ ರತ್ನ' ಪ್ರಶಸ್ತಿ ಘೋಷಿಸಿದ್ದಾರೆ. ಈ ಮೂವರಿಗೆ ಸಲ್ಲಿಸಿರುವ ಗೌರವವನ್ನು ಪ್ರತಿಪಕ್ಷ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಿರಿಯ ನಾಯಕಿ ಸೋನಿಯಾ ಗಾಂಧಿ ಸೇರಿ ಹಲವರು​ ಸ್ವಾಗತಿಸಿದ್ದಾರೆ.

ಚೌಧರಿ ಚರಣ್​ ಸಿಂಗ್ 1979-80ರಲ್ಲಿ ಜನತಾ ಪಕ್ಷದಿಂದ ಆಯ್ಕೆಯಾಗಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಪಿ.ವಿ.ನರಸಿಂಹ ರಾವ್ 1991ರಿಂದ 96ರವರೆಗೆ ಕಾಂಗ್ರೆಸ್​ನಿಂದ ಪ್ರಧಾನಿಯಾಗಿದ್ದರು. ಸ್ವಾಮಿನಾಥನ್​ 70-80ರ ದಶಕದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಕಾರ್ಯನಿರ್ವಹಿಸಿ ಹಸಿರು ಕ್ರಾಂತಿಯನ್ನೇ ಮಾಡಿದ್ದಾರೆ. ಇಂದು 'ಭಾರತ ರತ್ನ' ಘೋಷಿಸಿರುವ ಕುರಿತು ಸೋನಿಯಾ ಗಾಂಧಿ, 'ನಾನು ಸ್ವಾಗತಿಸುತ್ತೇನೆ, ಯಾಕಿಲ್ಲ' ಎಂದು ಚುಟುಕಾಗಿ ಪ್ರತಿಕ್ರಿಯಿಸಿದ್ದಾರೆ. ವಿಶೇಷವಾಗಿ ನರಸಿಂಹ ರಾವ್ ಅವರ ಕುರಿತ ಪ್ರಶ್ನೆಗೆ ಸೋನಿಯಾ ಈ ಹೇಳಿಕೆ ನೀಡಿದ್ದಾರೆ.

ಮೂವರು ರಾಷ್ಟ್ರೀಯ ಐಕಾನ್​ಗಳು-ಖರ್ಗೆ: ಮತ್ತೊಂದೆಡೆ, ಕಾಂಗ್ರೆಸ್​ ಅಧ್ಯಕ್ಷ ಖರ್ಗೆ, ''ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪರವಾಗಿ ಪಿ.ವಿ.ನರಸಿಂಹ ರಾವ್, ಚೌಧರಿ ಚರಣ್ ಸಿಂಗ್ ಮತ್ತು ಡಾ.ಎಂ.ಎಸ್.ಸ್ವಾಮಿನಾಥನ್ ಅವರಿಗೆ 'ಭಾರತ ರತ್ನ' ನೀಡುತ್ತಿರುವುದನ್ನು ನಾವು ಸ್ವಾಗತಿಸುತ್ತೇವೆ'' ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ.

''ಮಾಜಿ ಪ್ರಧಾನಿ ಮತ್ತು ಮಾಜಿ ಕಾಂಗ್ರೆಸ್ ಅಧ್ಯಕ್ಷರಾದ ಪಿ.ವಿ.ನರಸಿಂಹ ರಾವ್ ಅವರು ರಾಷ್ಟ್ರ ನಿರ್ಮಾಣಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ. ಅವರ ಸರ್ಕಾರದಲ್ಲಿ ಭಾರತವು ಆರ್ಥಿಕ ಸುಧಾರಣೆಗಳ ಸರಣಿಯೊಂದಿಗೆ ಪರಿವರ್ತಕ ಪ್ರಯಾಣವನ್ನು ಪ್ರಾರಂಭಿಸಿತ್ತು. ಅದು ಮುಂದಿನ ಪೀಳಿಗೆಗೆ ಮಧ್ಯಮ ವರ್ಗವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಅವರು ಭಾರತದ ಪರಮಾಣು ಕಾರ್ಯಕ್ರಮಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ ಮತ್ತು ಹಲವಾರು ವಿದೇಶಾಂಗ ನೀತಿ ಸಾಧನೆಗಳು ಅವರ ಅಧಿಕಾರಾವಧಿಯಲ್ಲಿ ನಡೆದಿವೆ. ಇದರಲ್ಲಿ 'ಪೂರ್ವದ ಕಡೆ ನೋಡಿ' ಎಂಬ ನೀತಿಯೂ ಸೇರಿದೆ. ನಮ್ಮ ರಾಷ್ಟ್ರದ ಸಮೃದ್ಧಿ ಮತ್ತು ಅಭಿವೃದ್ಧಿಯಲ್ಲಿ ಅವರ ಪ್ರಮುಖ ಪಾತ್ರವನ್ನು ಯಾವಾಗಲೂ ಅಚ್ಚುಮೆಚ್ಚಿನದು'' ಎಂದು ಹೇಳಿದ್ದಾರೆ.

''ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರು ತಮ್ಮ ರೈತ ಪರ ನೀತಿಗಳಿಗೆ ಹೆಸರುವಾಸಿಯಾಗಿದ್ದಾರೆ. ದೇಶದ ಕೋಟ್ಯಾಂತರ ರೈತರು, ಅನ್ನದಾತರು ಮತ್ತು ಕೂಲಿ ಕಾರ್ಮಿಕರಿಂದ ಅವರು ಸಾಕಷ್ಟು ಗೌರವಿಸಲ್ಪಟ್ಟಿದ್ದಾರೆ. ಮಣ್ಣಿನ ಮಗನಾಗಿದ್ದ ಅವರಿಂದ ಗ್ರಾಮೀಣ ಭಾರತ ಬಲಪಡಲು ನೆರವಾಗಿದ್ದಾರೆ'' ಎಂದು ಖರ್ಗೆ ತಿಳಿಸಿದ್ದಾರೆ.

''ದಿಗ್ಗಜ ವಿಜ್ಞಾನಿ ಡಾ.ಸ್ವಾಮಿನಾಥನ್ ಅವರು ಕೃಷಿ ವಿಜ್ಞಾನ ಕ್ಷೇತ್ರಕ್ಕೆ ಅವರ ಸಾಟಿಯಿಲ್ಲದ ಕೊಡುಗೆಗಾಗಿ ಹೆಸರುವಾಸಿಯಾಗಿದ್ದಾರೆ. ಹಸಿರು ಕ್ರಾಂತಿಯ ಮೂಲಕ ಭಾರತವನ್ನು ಆಹಾರ ಧಾನ್ಯಗಳಲ್ಲಿ ಸ್ವಾವಲಂಬಿಯನ್ನಾಗಿ ಮಾಡುವಲ್ಲಿ ಅವರ ಪಾತ್ರವು ರಾಷ್ಟ್ರ ನಿರ್ಮಾಣದಲ್ಲಿ ಒಂದು ಮೈಲಿಗಲ್ಲು. ಸಂಸ್ಥೆಗಳ ನಿರ್ಮಾತೃ ಸರ್ವಶ್ರೇಷ್ಠ, ಎಲ್ಲಕ್ಕಿಂತ ಹೆಚ್ಚಾಗಿ ಮಾನವತಾವಾದಿ ಆಗಿದ್ದ ಅವರನ್ನು 'ಆರ್ಥಿಕ ಪರಿಸರ ವಿಜ್ಞಾನದ ಪಿತಾಮಹ' ಎಂದೂ ಕರೆಯಲಾಗುತ್ತದೆ'' ಎಂದು ಅವರು ಉಲ್ಲೇಖಿಸಿದ್ದಾರೆ. ಮುಂದುವರೆದು, ''ಕಾಂಗ್ರೆಸ್ ಪಕ್ಷವು ಇವರ ದೃಷ್ಟಿ, ಇವರ ಕಠಿಣ ಪರಿಶ್ರಮ ಮತ್ತು ರಾಷ್ಟ್ರವು ಯಾವಾಗಲೂ ಗೌರವಿಸುವಂತಹ ಈ 'ರಾಷ್ಟ್ರೀಯ ಐಕಾನ್‌'ಗಳ ಅಸಾಧಾರಣ ಪರಂಪರೆಯನ್ನು ಶ್ಲಾಘಿಸುತ್ತದೆ'' ಎಂದಿದ್ದಾರೆ.

ಇದನ್ನೂ ಓದಿ: ಸ್ವಾಮಿನಾಥನ್​, ಮಾಜಿ ಪ್ರಧಾನಿಗಳಾದ ನರಸಿಂಹರಾವ್, ಚರಣ್​​​​ ಸಿಂಗ್​ಗೆ ಭಾರತ ರತ್ನದ ಗರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.