ETV Bharat / bharat

ಲೋಕ ಸಮರಕ್ಕೆ ಕಾಂಗ್ರೆಸ್​ ಮೊದಲ ಪಟ್ಟಿ ಬಿಡುಗಡೆ: ರಾಹುಲ್ ಗಾಂಧಿ ಸೇರಿ 39 ಅಭ್ಯರ್ಥಿಗಳ ಹೆಸರು ಪ್ರಕಟ

author img

By ETV Bharat Karnataka Team

Published : Mar 8, 2024, 7:33 PM IST

Updated : Mar 8, 2024, 8:54 PM IST

ಲೋಕಸಭೆ ಚುನಾವಣೆಗೆ ರಾಹುಲ್ ಗಾಂಧಿ ಸೇರಿ 39 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್​ ಘೋಷಿಸಿದೆ.

Congress releases the first list of 39 candidates for Lok Sabha elections
ಲೋಕ ಸಮರಕ್ಕೆ ಕಾಂಗ್ರೆಸ್​ ಮೊದಲ ಪಟ್ಟಿ ಬಿಡುಗಡೆ

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್​ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಮೊದಲ ಪಟ್ಟಿಯಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಛತ್ತೀಸ್‌ಗಢದ ಮಾಜಿ ಸಿಎಂ ಭೂಪೇಶ್ ಬಘೇಲ್ ಸೇರಿ 39 ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗಿದೆ. ಈ ಬಾರಿ ಕೂಡ ಕೇರಳದ ವಯನಾಡಿನಿಂದ ರಾಹುಲ್ ಗಾಂಧಿ ಸ್ಪರ್ಧಿಸಲಿದ್ದಾರೆ

ಲೋಕಸಭಾ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ನೇತೃತ್ವದಲ್ಲಿ ಗುರುವಾರ ಕೇಂದ್ರ ಚುನಾವಣಾ ಸಮಿತಿ (ಸಿಇಸಿ)ಯ ಸಭೆ ನಡೆಸಲಾಗಿತ್ತು. ಇಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ನಾಯಕರಾದ ಪವನ್​ ಖೇರಾ, ಅಜಯ್ ಮಾಕೇನ್​ ಸುದ್ದಿಗೋಷ್ಠಿ ನಡೆಸಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದರು.

ಮೊದಲ ಪಟ್ಟಿಯಲ್ಲಿ ಛತ್ತೀಸ್​ಗಢದ 6 , ಕರ್ನಾಟಕದ 7, ಕೇರಳದ 16 ಕ್ಷೇತ್ರ, ಲಕ್ಷದ್ವೀಪದ 1, ಮೇಘಾಲಯದ 2 , ನಾಗಾಲ್ಯಾಂಡ್​ನ 1 ಕ್ಷೇತ್ರ, ಸಿಕ್ಕಂನ 1, ತೆಲಂಗಾಣದ 4 ಹಾಗೂ ತ್ರಿಪುರದ 1 ಕ್ಷೇತ್ರಕ್ಕೆ ಕಾಂಗ್ರೆಸ್​ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಈ 39 ಅಭ್ಯರ್ಥಿಗಳಲ್ಲಿ 15 ಜನ ಸಾಮಾನ್ಯ ವರ್ಗದವರು, ಉಳಿದ 24 ಮಂದಿ ಎಸ್‌ಸಿ, ಎಸ್‌ಟಿ, ಒಬಿಸಿ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು. 12 ಅಭ್ಯರ್ಥಿಗಳು 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ಯುವಕರು ಮತ್ತು ಅನುಭವಿಗಳ ಉತ್ತಮ ಮಿಶ್ರಣದ ಪಟ್ಟಿಯಾಗಿದೆ ಎಂದು ವೇಣುಗೋಪಾಲ್ ಮತ್ತು ಮಾಕೇನ್ ತಿಳಿಸಿದರು.

ಕರ್ನಾಟಕದಲ್ಲಿ ಡಿ.ಕೆ.ಸುರೇಶ್ (ಬೆಂಗಳೂರು ಗ್ರಾಮೀಣ), ಹೆಚ್​.ಆರ್.ಆಲಗೂರ್ - (ರಾಜು) (ವಿಜಯಪುರ), ಆನಂದಸ್ವಾಮಿ ಗಡ್ಡದೇವರ ಮಠ (ಹಾವೇರಿ), ಗೀತಾ ಶಿವರಾಜ್​ ಕುಮಾರ್ (ಶಿವಮೊಗ್ಗ), ಶ್ರೇಯಸ್ ಪಟೇಲ್ (ಹಾಸನ), ಮುದ್ದಹನುಮೇಗೌಡ (ತಮಕೂರು), ವೆಂಕಟರಾಮೇಗೌಡ (ಸ್ಟಾರ್​ ಚಂದ್ರು) (ಮಂಡ್ಯ) ಹೆಸರನ್ನು ಘೋಷಿಸಲಾಗಿದೆ.

ಕೇರಳದಲ್ಲಿ ಹಿರಿಯ ನಾಯಕರಾದ ಕೆ.ಸಿ.ವೇಣುಗೋಪಾಲ್ (ಅಲಪ್ಪುಳ), ಶಶಿ ತರೂರ್ (ತಿರುವನಂತಪುರ), ಛತ್ತೀಸ್‌ಗಢದಲ್ಲಿ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ (ರಾಜನಂದಗಾಂವ್‌), ಜ್ಯೋತ್ಸ್ನಾ ಮಹಂತ್ (ಕೊರ್ಬಾ), ತಾಮ್ರಧ್ವಜ್ ಸಾಹು (ಮಹಾಸಮುಂಡ್‌), ತೆಲಂಗಾಣದಲ್ಲಿ ಕೇಂದ್ರದ ಮಾಜಿ ಸಚಿವ ಬಲರಾಮ್ ನಾಯಕ್ (ಮೆಹಬೂಬಬಾದ್), ಸುರೇಶ್ ಕುಮಾರ್ ಶೆಟ್ಕರ್ (ಜಹೀರಾಬಾದ್), ಸಿ.ವಂಶಿ ಚಂದ್ ರೆಡ್ಡಿ (ಮೆಹಬೂಬ್​ನಗರ) ಮತ್ತು ರಘುವೀರ್ ಕುಂದೂರು (ನಲ್ಗೊಂಡ) ಹೆಸರನ್ನು ಪ್ರಕಟಿಸಲಾಗಿದೆ.

ಇದನ್ನು ಓದಿ: ಕರ್ನಾಟಕದ ಏಳು ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ: ಗೀತಾ ಶಿವರಾಜ್​ ಕುಮಾರ್, ಶ್ರೇಯಸ್ ಪಟೇಲ್ ಕಣಕ್ಕೆ

Last Updated : Mar 8, 2024, 8:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.