ETV Bharat / bharat

ಉತ್ತರಪ್ರದೇಶ: ಭಾರತ್ ಜೋಡೋ ನ್ಯಾಯ ಯಾತ್ರೆಗೆ ಕೈ ಜೋಡಿಸುವಂತೆ ಎಲ್ಲ ಮಿತ್ರಪಕ್ಷಗಳಿಗೆ ಕರೆ ಕೊಟ್ಟ ಕಾಂಗ್ರೆಸ್​​

author img

By ETV Bharat Karnataka Team

Published : Feb 2, 2024, 10:03 PM IST

ಕಾಂಗ್ರೆಸ್​ ಉತ್ತರಪ್ರದೇಶದಲ್ಲಿ ಈಗಾಗಲೇ ಎಸ್​​​ಪಿ ಮತ್ತು ಆರ್​ಎಲ್​ಡಿ ಜತೆ ಮೈತ್ರಿ ಮಾಡಿಕೊಂಡು ಸೀಟು ಹಂಚಿಕೆಯನ್ನು ಪೂರ್ಣಗೊಳಿಸಿದೆ. ಆದರೆ, ಕಾಂಗ್ರೆಸ್​​​ ಬಿಎಸ್​​ಪಿ ಜತೆ ಮೈತ್ರಿ ಮಾಡಿಕೊಳ್ಳುವ ಯೋಚನೆಯಲ್ಲಿದೆ ಎಂದು ಆಂತರಿಕ ವಲಯದ ನಾಯಕರು ಹೇಳುತ್ತಿದ್ದಾರೆ ಎಂದು ವರದಿಯಾಗಿದೆ. ಅಂದ ಹಾಗೆ ಮಾಯಾವತಿ ಇಂಡಿಯಾ ಒಕ್ಕೂಟದ ಜೊತೆ ಮೈತ್ರಿಗೆ ನಿರಾಕರಿಸಿದ್ದರು. - ರಿಪೋರ್ಟ್​ ಅಮಿತ್​ ಅಗ್ನಿಹೋತ್ರಿ

congress-has-invited-up-allies-to-rahul-gandhis-nyay-yatra-to-showcase-opposition-unity
ಉತ್ತರಪ್ರದೇಶ: ಭಾರತ್ ಜೋಡೋ ನ್ಯಾಯ ಯಾತ್ರೆಗೆ ಕೈ ಜೋಡಿಸುವಂತೆ ಎಲ್ಲ ಮಿತ್ರಪಕ್ಷಗಳಿಗೆ ಕರೆ ಕೊಟ್ಟ ಕಾಂಗ್ರೆಸ್​​

ನವದೆಹಲಿ: ಉತ್ತರ ಪ್ರದೇಶದಲ್ಲಿ ಪ್ರತಿಪಕ್ಷಗಳು ಈ ಬಾರಿಯೂ ಒಗ್ಗಟ್ಟಿನ ಮಂತ್ರ ಜಪಿಸಲು ಮುಂದಾಗಿವೆ. ಫೆಬ್ರವರಿ 14 ರಿಂದ ರಾಜ್ಯದಲ್ಲಿ ನಡೆಯಲಿರುವ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ಸಂಪೂರ್ಣ ಬೆಂಬಲ ನೀಡುವಂತೆ ಸಮಾಜವಾದಿ ಪಕ್ಷ (ಎಸ್‌ಪಿ), ಆರ್‌ಎಲ್‌ಡಿ ಮತ್ತು ಕೆಲವು ಸಣ್ಣ ಗುಂಪುಗಳನ್ನು ಕಾಂಗ್ರೆಸ್​​​​​​​​ ಆಹ್ವಾನಿಸಿದೆ. ಈ ಯಾತ್ರೆ ಫೆ.14 ರಿಂದ 25 ರವರೆಗೂ ಉತ್ತರಪ್ರದೇಶದಲ್ಲಿ ಸಂಚರಿಸಲಿದೆ.

"ನಾವು ನಮ್ಮ ಎಲ್ಲಾ ಮಿತ್ರರನ್ನು ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದ್ದೇವೆ. ಇದು ಏಕತೆಯ ಸಂದೇಶವನ್ನು ಕಳುಹಿಸುತ್ತದೆ" ಎಂದು ಉತ್ತರ ಪ್ರದೇಶದ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಉಸ್ತುವಾರಿ ಅವಿನಾಶ್ ಪಾಂಡೆ ಈಟಿವಿ ಭಾರತ್‌ಗೆ ಮಾಹಿತಿ ನೀಡಿದ್ದಾರೆ. ಪಕ್ಷದ ಆಂತರಿಕ ಮೂಲಗಳ ಪ್ರಕಾರ, ಎಸ್‌ಪಿ ಮತ್ತು ಆರ್‌ಎಲ್‌ಡಿಯೊಂದಿಗೆ ವಿಶಾಲವಾದ ಚುನಾವಣಾ ಮೈತ್ರಿ ಇದ್ದರೂ, ಭಾರತ ಮೈತ್ರಿಕೂಟಕ್ಕೆ ಸೇರಲು ನಿರಾಕರಿಸಿರುವ ಬಿಎಸ್‌ಪಿ ವರಿಷ್ಠೆ ಮಾಯಾವತಿ ಅವರನ್ನು ಮನವೊಲಿಸಲು ಕಾಂಗ್ರೆಸ್​ ನಾಯಕರು ಹವಣಿಸುತ್ತಿದ್ದು, ಮತ್ತೊಮ್ಮೆ ಆಹ್ವಾನವನ್ನು ಕಳುಹಿಸಬಹುದು ಎನ್ನಲಾಗಿದೆ.

ಕಳೆದ ವರ್ಷವೂ ರಾಹುಲ್ ಗಾಂಧಿಯವರ 'ಭಾರತ್ ಜೋಡೋ ಯಾತ್ರೆ' ಪಶ್ಚಿಮ ಉತ್ತರ ಪ್ರದೇಶದ ಮೂಲಕ ಹಾದುಹೋಗಿತ್ತು, ಆದರೆ ಕೇವಲ ಮೂರು ದಿನಗಳ ಕಾಲ ಯಾತ್ರೆ ರಾಜ್ಯದಲ್ಲಿ ಸಂಚಾರ ನಡೆಸಿತ್ತು. ಆಗಲೂ ಕಾಂಗ್ರೆಸ್ ಈ ಎಲ್ಲಾ ಪಕ್ಷಗಳನ್ನು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿತ್ತು. ಈ ಬಾರಿ, ಉತ್ತರ ಪ್ರದೇಶದಲ್ಲಿ 11 ದಿನಗಳ ಸುದೀರ್ಘ ಯಾತ್ರೆ ನಡೆಯಲಿದೆ. 22 ಲೋಕಸಭಾ ಕ್ಷೇತ್ರಗಳ ಮೂಲಕ 'ನ್ಯಾಯ ಯಾತ್ರೆ' ಹಾದು ಹೋಗಲಿದೆ. ಹೀಗಾಗಿ ಕಾಂಗ್ರೆಸ್ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ.

"ಈ ಯಾತ್ರೆಯು ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪುನರುಜ್ಜೀವನಗೊಳಿಸಲು ಸಹಾಯ ಮಾಡುತ್ತದೆ ಮತ್ತು ಮೈತ್ರಿ ಬಲ ನೀಡುತ್ತದೆ ಎಂದು ನಾವು ಭಾವಿಸುತ್ತೇವೆ" ಎಂದು ಪಾಂಡೆ ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಎಐಸಿಸಿ ಉಸ್ತುವಾರಿ ಜನವರಿ 30 ಮತ್ತು 31 ರಂದು ಲಖನೌದಲ್ಲಿ ಯಾತ್ರೆ, ಲೋಕದ ಸಿದ್ಧತೆಗಳನ್ನು ಪರಿಶೀಲನೆ ನಡೆಸಿಯಾಗಿದೆ.

"ನಾವು ಎಲ್ಲಾ 80 ಲೋಕಸಭಾ ಸ್ಥಾನಗಳ ಬಗ್ಗೆಯೂ ಮಾಹಿತಿ ಪಡೆದುಕೊಂಡಿದ್ದೇವೆ. ಹಿರಿಯ ರಾಜ್ಯ ನಾಯಕರಿಗೆ ಜವಾಬ್ದಾರಿಗಳನ್ನು ಹಂಚಿಕೆ ಕೂಡಾ ಮಾಡಿದ್ದೇವೆ, ಅವರು ಲೋಕಸಭೆ ಚುನಾವಣೆ ನಿಯಂತ್ರಣ ಕೊಠಡಿಗಳನ್ನು ನೋಡಿಕೊಳ್ಳುತ್ತಾರೆ. ನಾನು ಬಹಳಷ್ಟು ಹಿರಿಯ ನಾಯಕರು ಮತ್ತು ಮಾಜಿ ಲೋಕಸಭಾ ಸದಸ್ಯರನ್ನು ಭೇಟಿ ಮಾಡಿ ಯಾತ್ರೆ ಯಶಸ್ವಿಗೆ ಸಹಕರಿಸುವಂತೆ ಕೇಳಿಕೊಂಡಿದ್ದೇನೆ ಎಂದು ಉತ್ತರಪ್ರದೇಶ ಎಐಸಿಸಿ ಉಸ್ತುವಾರಿ ಪಾಂಡೆ ಹೇಳಿದರು.

"ಸಮಾಜವಾದಿ ಪಕ್ಷ ಏಕಪಕ್ಷೀಯ ಅಭ್ಯರ್ಥಿಗಳ ಘೋಷಣೆ ಕುರಿತು ನಾನು ಮಾತನಾಡಿದ್ದೆ. ಸಾಮಾನ್ಯವಾಗಿ ಸೀಟು ಹಂಚಿಕೆಯ ಮಾತುಕತೆ ಮುಗಿದ ನಂತರ ಜಂಟಿಯಾಗಿ ಪಕ್ಷಗಳು ಈ ಬಗ್ಗೆ ಸುದ್ದಿಗೋಷ್ಠಿ ಮಾಡುತ್ತವೆ. ಪ್ರಸ್ತುತ ಎಸ್‌ಪಿ ಜೊತೆ ಸೀಟು ಹಂಚಿಕೆ ಮಾತುಕತೆ ನಡೆಯುತ್ತಿದೆ. ಮತ್ತು ಶೀಘ್ರದಲ್ಲೇ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು. ಮುಂಬರುವ ಚುನಾವಣೆಯಲ್ಲಿ ಒಟ್ಟಾಗಿ ಹೋರಾಡಲು ವಿಶಾಲವಾದ ತಳಹದಿಯ ಹೊಂದಾಣಿಕೆ ಮುಖ್ಯ. ಅದೇ ತಳಹದಿಯ ಮೇಲೆಯೇ ಸೀಟುಗಳ ಹಂಚಿಕೆ ನಡೆಯುತ್ತಿದೆ ಎಂದು ಪಾಂಡೆ ಇದೇ ವೇಳೆ, ತಿಳಿಸಿದರು.

"ಗಾಂಧಿ ಕುಟುಂಬದ ಸಾಂಪ್ರದಾಯಿಕ ಭದ್ರಕೋಟೆಗಳಾದ ಅಮೇಥಿ ಮತ್ತು ರಾಯ್ ಬರೇಲಿಗೆ ಕೂಡ ಯಾತ್ರೆ ಹೋಗಲಿದೆ. ಜನರು ಭಾರತ್ ಜೋಡೋ ನ್ಯಾಯ್ ಯಾತ್ರೆಗಾಗಿ ಕಾಯುತ್ತಿದ್ದಾರೆ" ಎಂದು ರಾಜ್ಯದ ಹಿರಿಯ ನಾಯಕ ಅಖಿಲೇಶ್ ಪ್ರತಾಪ್ ಸಿಂಗ್ ಈಟಿವಿ ಭಾರತ್‌ಗೆ ತಿಳಿಸಿದ್ದಾರೆ.

ಇದನ್ನು ಓದಿ:"ಅಬ್ ಕಿ ಬಾರ್ ಚಾರ್​​ಸೌ ಪರ್ ಹೋ ರಹಾ...": ಮಲ್ಲಿಕಾರ್ಜುನ ಖರ್ಗೆ ಮಾತಿಗೆ ನಕ್ಕ ಪ್ರಧಾನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.