ETV Bharat / bharat

ಚಂಡೀಗಢದ ನೂತನ ಮೇಯರ್​ ಸ್ಥಾನಕ್ಕೆ ಮನೋಜ್​ ಸೋಂಕರ್​ ರಾಜೀನಾಮೆ

author img

By ETV Bharat Karnataka Team

Published : Feb 19, 2024, 9:21 AM IST

ಸುಪ್ರೀಂ ಕೋರ್ಟ್​ನಲ್ಲಿ ಚುನಾವಣಾ ವಿವಾದದ ಪ್ರಕರಣ ವಿಚಾರಣೆಗೂ ಮುನ್ನ, ಮೇಯರ್​ ಮನೋಜ್​ ಸೋಂಕರ್​ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

Chandigarh new mayor Manoj Sonkar resigned
ಚಂಡೀಗಢದ ನೂತನ ಮೇಯರ್​ ಬಿಜೆಪಿಯ ಮನೋಜ್​ ಸೋಂಕರ್​ ರಾಜೀನಾಮೆ

ಚಂಡೀಗಢ: ಸುಪ್ರೀಂ ಕೋರ್ಟ್​ನಲ್ಲಿ ಚಂಡೀಗಢ ಮೇಯರ್​ ಚುನಾವಣೆ ವಿವಾದದ ಬಗ್ಗೆ ವಿಚಾರಣೆ ನಡೆಯುತ್ತಿದೆ. ಇದಕ್ಕೂ ಒಂದು ದಿನ ಮೊದಲು, ಭಾನುವಾರ ರಾತ್ರಿ ಬಿಜೆಪಿಯ ನೂತನ ಮೇಯರ್​ ಮನೋಜ್​ ಸೋಂಕರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮನೋಜ್​ ಅವರು ಮಹಾನಗರ ಪಾಲಿಕೆ ಆಯುಕ್ತರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.

ಚಂಡೀಗಢ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಕ್ರಮ, ವಂಚನೆ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸೋಮವಾರ ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆಗೆ ನಡೆಯಲಿದೆ. ಆದರೆ, ನ್ಯಾಯಾಲಯದಲ್ಲಿ ವಿಚಾರಣೆ ಕೈಗೆತ್ತಿಕೊಳ್ಳುವ ಮೊದಲೇ ನೂತನವಾಗಿ ಆಯ್ಕೆಯಾಗಿದ್ದ ಬಿಜೆಪಿಯ ಮನೋಜ್​ ಸೋಂಕರ್​ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಮನೋಜ್​ ಸೋಂಕರ್​ ರಾಜೀನಾಮೆ ಸಲ್ಲಿಸಿರುವ ಬಗ್ಗೆ ಪಂಜಾಬ್​ ಬಿಜೆಪಿ ಅಧ್ಯಕ್ಷ ಜೀತೇಂದ್ರ ಮಲ್ಹೋತ್ರಾ ದೃಢಪಡಿಸಿದ್ದಾರೆ.

ವಿರೋಧ ಪಕ್ಷ ಎಎಪಿಯ ಮೂವರು ಕೌನ್ಸಿಲರ್​ಗಳು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ. ಇದರಿಂದ ಆಪ್​ಗೆ ದೊಡ್ಡ ಹೊಡೆತ ಬೀಳಬಹುದು ಎನ್ನುವ ವದಂತಿ ಹರಿದಾಡುತ್ತಿರುವ ಬೆನ್ನಲ್ಲೇ ಮನೋಜ್​ ಅವರು ರಾಜೀನಾಮೆ ನೀಡಿದ್ದಾರೆ. ಪೂನಂ, ನೇಹಾ ಮುಸಾವತ್​ ಹಾಗೂ ಗುರುಚರಣ್​ ಸಿಂಗ್​ ಕಾಲಾ ಅವರ ಹೆಸರುಗಳು ಬಾರೀ ಚರ್ಚೆಯಲ್ಲಿವೆ. ಕೌನ್ಸಿಲರ್​ಗಳು ದೆಹಲಿ ಅಥವಾ ಗುರುಗ್ರಾಮದಲ್ಲಿ ಹರ್ಯಾಣ ಮುಖ್ಯಮಂತ್ರಿ ಮನೋಹರ್​ ಲಾಲ್​ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಲಿದ್ದಾರೆ ಎಂದು ಮೂಲಗಳು ಹೇಳಿವೆ. ರಾಜೀನಾಮೆ ನೀಡಿರುವುದರಿಂದ ಮತ್ತೊಮ್ಮೆ ಚುನಾವಣೆ ನಡೆಸುವ ಸಾಧ್ಯತೆ ಇದೆ. ಆಪ್​ನ ಮೂವರು ಕೌನ್ಸಿಲರ್​ಗಳು ಬಿಜೆಪಿ ಸೇರ್ಪಡೆಯಾದಲ್ಲಿ, ಮರುಚುನಾವಣೆಯಲ್ಲಿ ಬಿಜೆಪಿಗೆ ಸಂಪೂರ್ಣ ಬಹುಮತ ಸಿಗುತ್ತದೆ. ಪ್ರಸ್ತುತ 13 ಕೌನ್ಸಿಲರ್​ಗಳು ಆಮ್​ ಆದ್ಮಿ ಪಕ್ಷದಲ್ಲಿ, 7 ಮಂದಿ ಕಾಂಗ್ರೆಸ್​ನಲ್ಲಿದ್ದಾರೆ. ಬಿಜೆಪಿ 14 ಕೌನ್ಸಿಲರ್​ಗಳನ್ನು ಹೊಂದಿದೆ.

ಸುಪ್ರೀಂ ಕೋರ್ಟ್​ನಲ್ಲಿರುವ ಪ್ರಕರಣ: ಚಂಡೀಗಢದ ಮಹಾನಗರ ಪಾಲಿಕೆಗೆ ಜನವರಿ 30ರಂದು ನಡೆದ ಚುನಾವಣೆಯಲ್ಲಿ ಮೇಯರ್​, ಹಿರಿಯ ಉಪ ಮೇಯರ್​ ಹಾಗೂ ಉಪಮೇಯರ್​ ಸ್ಥಾನಗಳನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಚುನಾವಣೆಯಲ್ಲಿ ಮೈತ್ರಿಯಾಗಿ ಪ್ರತಿನಿಧಿಸಿದ್ದ ಆಪ್​ ಹಾಗೂ ಕಾಂಗ್ರೆಸ್​ಗೆ ಹಿನ್ನಡೆಯಾಗಿತ್ತು. ಸೋಲನುಭವಿಸಿದ್ದ ಆಮ್​ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್​ ಚುನಾವಣೆ ಪ್ರಕ್ರಿಯೆಯಲ್ಲಿ ಅಕ್ರಮ, ವಂಚನೆ ನಡೆದಿದೆ ಎಂದು ಆರೋಪಿಸಿದ್ದವು. ಚುನಾಚಣಾಧಿಕಾರಿ ಅನಿಲ್​ ಮಸಿಹ್​ ಅವರು ಮತಪತ್ರಗಳನ್ನು ವಿರೂಪಗೊಳಿಸಿ, ನಂತರ ಅವುಗಳನ್ನು ಅಮಾನ್ಯವೆಂದು ಘೋಷಿಸಿದ್ದಾರೆ. ಹಾಗಾಗಿ ಚುನಾವಣೆಯನ್ನು ಅನೂರ್ಜಿತಗೊಳಿಸಬೇಕು ಎಂದು ಆಪ್​ ಹಾಗೂ ಕಾಂಗ್ರೆಸ್​ ಕೋರ್ಟ್​ ಮೊರೆ ಹೋಗಿದ್ದವು.

ಫೆಬ್ರವರಿ 5ರಂದು ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್​, ಪಾಲಿಕೆ ಚುನಾವಣೆಯನ್ನು ನಡೆಸಿದ್ದ ಚುನಾವಣೆ ಅಧಿಕಾರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಚುನಾವಣೆಯಲ್ಲಿ ಬ್ಯಾಲೆಟ್​ ಪೇಪರ್​ಗಳನ್ನು ವಿರೂಪಗೊಳಿಸಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ. ಚುನಾವಣಾಧಿಕಾರಿಯ ಕೃತ್ಯವನ್ನು "ಪ್ರಜಾಪ್ರಭುತ್ವದ ಕಗ್ಗೊಲೆ" ಎಂದು ಕೋರ್ಟ್​ ಕಟುವಾಗಿ ಹೇಳಿತ್ತು. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್​ ಹಾಗೂ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಮನೋಜ್​ ಮಿಶ್ರಾ ಅವರ ಪೀಠ ಅರ್ಜಿಯ ವಿಚಾರಣೆ ನಡೆಸಿತ್ತು. ಚುನಾವಣಾ ಪ್ರಕ್ರಿಯೆಗಳ ವಿಡಿಯೋ ವೀಕ್ಷಿಸಿದ ಪೀಠ ಬೇಸರ ವ್ಯಕ್ತಪಡಿಸಿತ್ತು. ಇಂದು ನಡೆಯುವ ವಿಚಾರಣೆಗೆ ಚುನಾವಣಾಧಿಕಾರಿ ಅನಿಲ್​ ಮಸಿಹ್​ ಅವರನ್ನು ಖುದ್ದು ಹಾಜರಾಗುವಂತೆ ಸುಪ್ರೀಂ ಕೋರ್ಟ್​ ಈಗಾಗಲೇ ಸೂಚಿಸಿದೆ.

ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಒಟ್ಟು 20 ಸಂಖ್ಯಾಬಲ ಹೊಂದಿದ್ದ ಆಮ್​ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್ ಮೈತ್ರಿಕೂಟ, ಚುನಾವಣಾಧಿಕಾರಿ ಎಂಟು ಮತಗಳನ್ನು ಅಸಿಂಧುವೆಂದು ಘೋಷಿಸಿದ ನಂತರ ಮೇಯರ್​ ಸ್ಥಾನ, 16 ಬಲ ಹೊಂದಿದ್ದ ಬಿಜೆಪಿ ಪಾಲಾಗಿತ್ತು.​ ಜನವರಿ 30 ರಂದು ನಡೆದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಅನಿಲ್​ ಮಸಿಹ್​ ಅವರು ಎಂಟು ಮತಪತ್ರಗಳನ್ನು ತಿರುಚುತ್ತಿರುವುದು ವಿಡಿಯೋದಲ್ಲಿ ರೆಕಾರ್ಡ್​ ಆಗಿತ್ತು.

ಇದನ್ನೂ ಓದಿ: 'ಪ್ರಜಾಪ್ರಭುತ್ವದ ಕಗ್ಗೊಲೆ': ಚಂಡೀಗಢ ಮೇಯರ್ ಚುನಾವಣೆ ಬಗ್ಗೆ ಸುಪ್ರೀಂ ಕೋರ್ಟ್​ ಅಸಮಾಧಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.