ETV Bharat / bharat

ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ನೇಮಕಾತಿ: ಕನ್ನಡದಲ್ಲೂ ಪರೀಕ್ಷೆ ಬರೆಯಲು ಅವಕಾಶ

author img

By PTI

Published : Feb 11, 2024, 3:58 PM IST

Updated : Feb 11, 2024, 9:01 PM IST

ಫೆಬ್ರವರಿ 10 ರಿಂದ ಕೇಂದ್ರ ಸಶಸ್ತ್ರ ಪಡೆಗಳ ನೇಮಕಾತಿ ಪರೀಕ್ಷೆ ಆರಂಭವಾಗಿದ್ದು, ಕನ್ನಡ ಸೇರಿ 13 ಪ್ರಾದೇಶಿಕ ಭಾಷೆಗಳಲ್ಲಿ ಅಭ್ಯರ್ಥಿಗಳು ಪರೀಕ್ಷೆ ಎದುರಿಸಲು ಅವಕಾಶ ನೀಡಲಾಗಿದೆ.

ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ನೇಮಕಾತಿ
ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ನೇಮಕಾತಿ

ನವದೆಹಲಿ: ಫೆಬ್ರವರಿ 10 ರಿಂದ ಆರಂಭವಾಗಿರುವ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ನೇಮಕಾತಿ ಪರೀಕ್ಷೆ ಮಾರ್ಚ್​ 7ರ ವರೆಗೆ ನಡೆಯಲಿದೆ. ಇದೇ ಮೊದಲ ಬಾರಿಗೆ ಕನ್ನಡ, ತೆಲುಗು, ತಮಿಳು ಸೇರಿ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಇದರಿಂದ ಕರ್ನಾಟಕದ ಅಭ್ಯರ್ಥಿಗಳು ಮೊದಲ ಆದ್ಯತೆಯಾಗಿ ಕನ್ನಡದಲ್ಲಿಯೇ ಪರೀಕ್ಷೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಭಾಷಾ ಸಮಸ್ಯೆ ಮತ್ತು ದೇಶದ ಎಲ್ಲ ಭಾಗಗಳಿಂದ ಸಶಸ್ತ್ರ ಪಡೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕೇಂದ್ರ ಸರ್ಕಾರ ಇಂಗ್ಲಿಷ್​​, ಹಿಂದಿಯಲ್ಲಿದ್ದ ಪರೀಕ್ಷೆಯನ್ನು 13 ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಅವಕಾಶ ಮಾಡಿಕೊಡಲು ನಿರ್ಧರಿಸಿತು. ಪ್ರಧಾನಿ ನರೇಂದ್ರ ಮೋದಿ ಅವರ ಆಶಯ, ಗೃಹ ಸಚಿವ ಅಮಿತ್​ ಶಾ ಅವರ ಶಿಫಾರಸಿನ ಮೇರೆಗೆ ಗೃಹ ಸಚಿವಾಲಯವು ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆಗೆ ಅವಕಾಶ ನೀಡಿದೆ.

ಕೇಂದ್ರ ಸಶಸ್ತ್ರ ಪಡೆಗಳಾದ ಸಿಆರ್‌ಪಿಎಫ್, ಬಿಎಸ್‌ಎಫ್ ಮತ್ತು ಸಿಐಎಸ್‌ಎಫ್‌, ಐಟಿಬಿಪಿ, ಎಸ್​ಎಸ್​ಬಿ ಮತ್ತು ಎನ್​ಎಸ್​​ಜಿ ಹುದ್ದೆಗಳ ಕಾನ್ಸ್​ಟೇಬಲ್​ ನೇಮಕಾತಿ ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತದೆ. ಮಾರ್ಚ್ 7 ರ ವರೆಗೆ ಪರೀಕ್ಷೆ ನಿಗದಿಯಾಗಿದೆ. ದೇಶಾದ್ಯಂತ 128 ನಗರಗಳಲ್ಲಿ ಸುಮಾರು 48 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ಯಾವೆಲ್ಲಾ ಭಾಷೆಯಲ್ಲಿ ಪರೀಕ್ಷೆ: ಹಿಂದಿ ಮತ್ತು ಇಂಗ್ಲಿಷ್ ಪ್ರಧಾನ ಮಾಧ್ಯಮವಾಗಿದ್ದರೆ, ಇವುಗಳ ಜೊತೆಗೆ ಪ್ರಶ್ನೆ ಪತ್ರಿಕೆಗಳನ್ನು ಪ್ರಾದೇಶಿಕ ಭಾಷೆಗಳಾದ ಅಸ್ಸಾಮಿ, ಬಂಗಾಳಿ, ಗುಜರಾತಿ, ಮರಾಠಿ, ಮಲಯಾಳಂ, ಕನ್ನಡ, ತಮಿಳು, ತೆಲುಗು, ಒಡಿಯಾ, ಉರ್ದು, ಪಂಜಾಬಿ, ಮಣಿಪುರಿ ಮತ್ತು ಕೊಂಕಣಿಯಲ್ಲೂ ತಯಾರಿಸಲಾಗುತ್ತದೆ.

ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಯುವಕರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಮತ್ತು ಪ್ರಾದೇಶಿಕ ಭಾಷೆಗಳನ್ನು ಉತ್ತೇಜಿಸಲು ಗೃಹ ಸಚಿವರ ಮಾರ್ಗದರ್ಶನದ ಮೇರೆಗೆ ಈ ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಸಶಸ್ತ್ರ ಪಡೆಗಳ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯನ್ನು ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ) ನೇತೃತ್ವದಲ್ಲಿ ನಡೆಸಲಾಗುತ್ತದೆ. ಕೇಂದ್ರ ಗೃಹ ಸಚಿವಾಲಯದ ಆದೇಶದ ಮೇರೆಗೆ ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆಯನ್ನು ನಡೆಸುವ ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿದೆ. ಅದರಂತೆ ಎಸ್​ಎಸ್​ಸಿ ಈ ಸಂಬಂಧ ಅಧಿಸೂಚನೆ ಹೊರಡಿಸಿದೆ.

ಏನು ಲಾಭ?: ಪ್ರಾದೇಶಿಕ ಭಾಷೆಗಳಲ್ಲಿ ಕೇಂದ್ರ ಪಡೆಗಳಿಗೆ ನೇಮಕಾತಿ ಪರೀಕ್ಷೆ ನಡೆಸುವುದರಿಂದ ದೇಶದ ಎಲ್ಲ ಭಾಗದ ಯುವಕರು ದೇಶ ಸೇವೆಗೆ ಲಭ್ಯರಾಗಲಿದ್ದಾರೆ. ತಮ್ಮ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತದೆ. ಇದರಿಂದ ಭಾಷಾ ಸಮಸ್ಯೆ ನೀಗುತ್ತದೆ. ಪರೀಕ್ಷೆಯ ವ್ಯಾಪ್ತಿಯು ಹೆಚ್ಚಾಗಿ, ಉದ್ಯೋಗದಲ್ಲಿ ಎಲ್ಲರಿಗೂ ಸಮಾನ ಅವಕಾಶ ಸಿಕ್ಕಂತಾಗುತ್ತದೆ.

ಇದನ್ನೂ ಓದಿ: ಜೆಇಇ ಮೇನ್ 2024 ಸೆಷನ್‌ 1 ಪರೀಕ್ಷೆಯ ಆನ್ಸರ್ ಕೀ​​​ ಬಿಡುಗಡೆ

Last Updated : Feb 11, 2024, 9:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.