ETV Bharat / bharat

2014ರಲ್ಲಿ ಭರವಸೆ, 2019ರಲ್ಲಿ ನಂಬಿಕೆ ಇತ್ತು; 2024ರಲ್ಲಿದೆ ಗ್ಯಾರಂಟಿ: ಪ್ರಧಾನಿ ಮೋದಿ - PM Modi

author img

By PTI

Published : Apr 17, 2024, 5:33 PM IST

ದೇಶಾದ್ಯಂತ ಮೋದಿ ಗ್ಯಾರಂಟಿ ಇದೆ. ಪ್ರತಿ ಗ್ಯಾರಂಟಿಗಳನ್ನು ಈಡೇರಿಸುವ ಭರವಸೆ ನೀಡುತ್ತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

Came with hope in 2014, trust in 2019 and guarantee in 2024: PM Modi
2014ರಲ್ಲಿ ಭರವಸೆ, 2019ರಲ್ಲಿ ನಂಬಿಕೆ ಇತ್ತು; 2024ರಲ್ಲಿದೆ ಗ್ಯಾರಂಟಿ: ಪ್ರಧಾನಿ ಮೋದಿ

ನಲ್ಬರಿ (ಅಸ್ಸೋಂ): 2014ರಲ್ಲಿ ಭರವಸೆಯೊಂದಿಗೆ ಬಂದಿದ್ದೆ. 2019ರಲ್ಲಿ ವಿಶ್ವಾಸ ಹೊಂದಿದ್ದೆ. 2024ರಲ್ಲಿ ಗ್ಯಾರಂಟಿಯೊಂದಿಗೆ ಜನರ ಬಳಿಗೆ ಹೋಗುತ್ತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಸ್ಸೋಂನ ನಲ್ಬರಿಯ ಬೋರ್ಕುರಾ ಮೈದಾನದಲ್ಲಿ ಬುಧವಾರ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶಾದ್ಯಂತ ಮೋದಿ ಗ್ಯಾರಂಟಿ ಇದೆ. ಪ್ರತಿಯೊಂದು ಗ್ಯಾರಂಟಿಯನ್ನು ಈಡೇರಿಸುವ ಭರವಸೆ ನೀಡುತ್ತಿದ್ದೇನೆ ಎಂದು ತಿಳಿಸಿದರು.

ಈಶಾನ್ಯ ಭಾಗವು ಮೋದಿ ಗ್ಯಾರಂಟಿಗೆ ಸಾಕ್ಷಿಯಾಗಿದೆ. ಏಕೆಂದರೆ, ಕಾಂಗ್ರೆಸ್ ಈ ಪ್ರದೇಶಕ್ಕೆ ಸಮಸ್ಯೆಗಳನ್ನು ಮಾತ್ರ ನೀಡಿತ್ತು. ಆದರೆ, ಬಿಜೆಪಿ ಅದನ್ನು ಸಾಧ್ಯತೆಗಳ ಮೂಲವನ್ನಾಗಿ ಮಾಡಿದೆ. ಕಾಂಗ್ರೆಸ್ ಬಂಡಾಯಕ್ಕೆ ಉತ್ತೇಜನ ನೀಡಿತ್ತು. ಆದರೆ, ಮೋದಿ ಜನರನ್ನು ಅಪ್ಪಿಕೊಂಡು ಈ ಪ್ರದೇಶದಲ್ಲಿ ಶಾಂತಿ ತಂದರು. 60 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಏನನ್ನು ಸಾಧಿಸಲಾಗಲಿಲ್ಲವೋ, ಅದನ್ನು ಮೋದಿ ಹತ್ತು ವರ್ಷಗಳಲ್ಲಿ ಸಾಧಿಸಿದ್ದಾರೆ ಎಂದು ಪ್ರಧಾನಿ ಪ್ರತಿಪಾದಿಸಿದರು.

ಇದೇ ವೇಳೆ, 500 ವರ್ಷಗಳ ನಂತರ ಅಯೋಧ್ಯೆಯಲ್ಲಿ 'ಸೂರ್ಯ ತಿಲಕ' ಸಮಾರಂಭದೊಂದಿಗೆ ಭಗವಾನ್ ರಾಮನ ಜನ್ಮ ದಿನಾಚರಣೆಯನ್ನು ನಡೆಸಲಾಗುತ್ತಿದೆ. ನಮಗೆ ಅಯೋಧ್ಯೆಯಲ್ಲಿನ ಆಚರಣೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಆದರೆ, ನಮ್ಮ ಮೊಬೈಲ್ ಟಾರ್ಚ್​ಗಳನ್ನು ಬೆಳೆಗಿಸುವ ಮೂಲಕ ರಾಮನಿಗೆ ಪ್ರಾರ್ಥನೆಗಳನ್ನು ಸಲ್ಲಿಸೋಣ. 500 ವರ್ಷಗಳ ಬಳಿಕ ತನ್ನ ಸ್ವಂತ ದೇವಸ್ಥಾನದಲ್ಲಿ ರಾಮನ ಜನ್ಮದಿನವನ್ನು ಆಚರಿಸುವುದರಿಂದ ಇಡೀ ದೇಶದಲ್ಲಿ ಹೊಸ ವಾತಾವರಣ ನಿರ್ಮಾಣವಾಗಿದೆ. ಇದು ಶತಮಾನಗಳ ಭಕ್ತಿ ಮತ್ತು ಪೀಳಿಗೆಯ ತ್ಯಾಗದ ಪರಾಕಾಷ್ಠೆಯಾಗಿದೆ ಎಂದು ಮೋದಿ ಹೇಳಿದರು.

ಮತ್ತೆ ಅಧಿಕಾರಕ್ಕೆ ಬಂದರೆ, ಮುಂದಿನ ಐದು ವರ್ಷಗಳವರೆಗೆ ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ಉಚಿತ ಪಡಿತರ ವಿತರಣೆ ಮುಂದುವರಿಸಲಾಗುವುದು. ಆಯುಷ್ಮಾನ್ ಭಾರತ್ ಅಡಿಯಲ್ಲಿ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಐದು ಲಕ್ಷ ರೂಪಾಯಿಗಳವರೆಗೆ ಉಚಿತ ಚಿಕಿತ್ಸೆ ನೀಡಲಾಗುವುದು. ಇದರಿಂದ ಅದು ಕುಟುಂಬಕ್ಕೆ ಹೊರೆಯಾಗುವುದಿಲ್ಲ. ನಿಮ್ಮ ಈ ಮಗ (ಮೋದಿ) ನಿಮ್ಮ ವೈದ್ಯಕೀಯ ವೆಚ್ಚವನ್ನು ನೋಡಿಕೊಳ್ಳುತ್ತಾನೆ. ಮುಂದಿನ ಐದು ವರ್ಷಗಳಲ್ಲಿ ಬಡವರಿಗಾಗಿ ಮೂರು ಕೋಟಿ ಹೊಸ ಮನೆಗಳನ್ನು ನಿರ್ಮಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಎನ್‌ಡಿಎ ಸರ್ಕಾರವು 'ಸಬ್​ ಕಾ ಸಾಥ್, ಸಬ್​ ಕಾ ವಿಕಾಸ್​ನಲ್ಲಿ ನಂಬಿಕೆ ಹೊಂದಿದೆ. ಯಾವುದೇ ತಾರತಮ್ಯವಿಲ್ಲದೆ ಪ್ರತಿಯೊಬ್ಬ ನಾಗರಿಕರಿಗೂ ಅವರು ಅರ್ಹವಾದ ಪ್ರಯೋಜನಗಳನ್ನು ಪಡೆಯುತ್ತಾರೆ ಎಂದು ಖಚಿತಪಡಿಸುತ್ತದೆ ಎಂದು ಮೋದಿ ತಿಳಿಸಿದರು. ಈ ಸಮಯದಲ್ಲಿ ತ್ರಿವಳಿ ತಲಾಖ್ ರದ್ದತಿಯನ್ನು ಉಲ್ಲೇಖಿಸಿದ ಅವರು, ಇದು ಮುಸ್ಲಿಂ ಮಹಿಳೆಯರಿಗೆ ಮುಕ್ತಿ ನೀಡಿದೆ. ಮುಸ್ಲಿಂ ಸಹೋದರಿಯರಿಗೆ ಮಾತ್ರವಲ್ಲದೆ ಅವರ ಇಡೀ ಕುಟುಂಬಕ್ಕೆ ಲಾಭವಾಗುವಂತೆ ಕಾನೂನು ಮಾಡಿದ್ದೇವೆ ಎಂದರು.

ಕಳೆದ 10 ವರ್ಷಗಳಲ್ಲಿ ಅಸ್ಸೋಂ ಅಭೂತಪೂರ್ವ ಅಭಿವೃದ್ಧಿಗೆ ಸಾಕ್ಷಿಯಾಗಿದೆ. ಉದ್ದೇಶಗಳು ಸರಿಯಾಗಿದ್ದಾಗ ಫಲಿತಾಂಶಗಳು ಸಹ ಉತ್ತಮವಾಗಿರುತ್ತವೆ. ಕಾಂಗ್ರೆಸ್ ತನ್ನ ಸ್ವಂತ ಲಾಭಕ್ಕಾಗಿ ಈ ಪ್ರದೇಶವನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿ, ಭ್ರಷ್ಟಾಚಾರ ಮತ್ತು ಲೂಟಿಯಲ್ಲಿ ತೊಡಗಿದ್ದರು. ಆದಾಗ್ಯೂ, ಈ ಪರಿಸ್ಥಿತಿಯನ್ನು ಬದಲಾಯಿಸಲಾಗಿದೆ. ನಿಮ್ಮ ಕನಸುಗಳೇ ನನ್ನ ಭರವಸೆಗಳು. ಪ್ರತಿ ಕ್ಷಣವೂ ನಿಮಗೆ, ನಿಮ್ಮ ಕನಸುಗಳು ಮತ್ತು ದೇಶಕ್ಕಾಗಿ ಸಮರ್ಪಿತವಾಗಿದೆ ಎಂದು ಮೋದಿ ಹೇಳಿದರು.

ಇದನ್ನೂ ಓದಿ: ಚುನಾವಣಾ ಬಾಂಡ್​ ವಿಶ್ವದ ದೊಡ್ಡ ಹಗರಣ, ಬಿಜೆಪಿ 150 ಸೀಟಿಗೆ ಸೀಮಿತವಾಗುತ್ತೆ: ರಾಹುಲ್​ ಗಾಂಧಿ ಭವಿಷ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.