ETV Bharat / bharat

ಉತ್ತರ ಪ್ರದೇಶ: ಮತದಾನ ಮುಗಿದ ಮರು ದಿನವೇ ಮೊರಾದಾಬಾದ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಿಧನ - Kunwar Sarvesh Kumar

author img

By PTI

Published : Apr 20, 2024, 11:01 PM IST

ಉತ್ತರ ಪ್ರದೇಶದ ಮೊರಾದಾಬಾದ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕುನ್ವರ್ ಸರ್ವೇಶ್ ಕುಮಾರ್ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

Etv Bharat
Etv Bharat

ಲಖನೌ (ಉತ್ತರ ಪ್ರದೇಶ): ಲೋಕಸಭೆ ಚುನಾವಣೆಗೆ ಮೊದಲ ಹಂತದ ಮತದಾನ ಮುಗಿದ ಮರು ದಿನವೇ ಉತ್ತರ ಪ್ರದೇಶದ ಮೊರಾದಾಬಾದ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕುನ್ವರ್ ಸರ್ವೇಶ್ ಕುಮಾರ್ ಶನಿವಾರ ನಿಧನ ಹೊಂದಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಕುನ್ವರ್ ಸರ್ವೇಶ್ ಕುಮಾರ್ ಅವರಿಗೆ 72 ವರ್ಷ ವಯಸ್ಸಾಗಿತ್ತು. ಅವರ ಗಂಟಲಿನಲ್ಲಿ ಸ್ವಲ್ಪ ಸಮಸ್ಯೆ ಇತ್ತು. ಇದರಿಂದ ಆಪರೇಷನ್ ಮಾಡಲಾಗಿತ್ತು. ನಿನ್ನೆ (ಶುಕ್ರವಾರ) ಅವರು ತಪಾಸಣೆಗಾಗಿ ಏಮ್ಸ್‌ಗೆ ದಾಖಲಾಗಿದ್ದರು ಎಂದು ಉತ್ತರ ಪ್ರದೇಶದ ಬಿಜೆಪಿ ಅಧ್ಯಕ್ಷ ಭೂಪೇಂದ್ರ ಚೌಧರಿ ಮಾಹಿತಿ ನೀಡಿದ್ದಾರೆ.

18ನೇ ಲೋಕಸಭೆ ಚುನಾವಣೆಗೆ ಏಳು ಹಂತಗಳಲ್ಲಿ ಮತದಾನ ನಿಗದಿಯಾಗಿದೆ. ಶುಕ್ರವಾರ 21 ರಾಜ್ಯಗಳ 102 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ಮುಕ್ತಾಯವಾಗಿದೆ. ಇದರಲ್ಲಿ ಉತ್ತರ ಪ್ರದೇಶದ ಮೊರಾದಾಬಾದ್ ಕ್ಷೇತ್ರಕ್ಕೂ ಮತದಾನ ಜರುಗಿದೆ. ಕುನ್ವರ್ ಸರ್ವೇಶ್ ಅವರ ನಿಧನವು ಮತ ​​ಎಣಿಕೆ ಮತ್ತು ಚುನಾವಣಾ ಪ್ರಕ್ರಿಯೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಮತ ಎಣಿಕೆ ನಡೆಯಲಿದ್ದು, ದಿವಂಗತ ಸರ್ವೇಶ್ ಗೆದ್ದರೆ, ಈ ಸ್ಥಾನವನ್ನು ಖಾಲಿ ಎಂದು ಘೋಷಿಸಲಾಗುತ್ತದೆ. ಆದರೆ, ಮರುಚುನಾವಣೆ ನಡೆಸಬೇಕಾಗುತ್ತದೆ. ಒಂದು ವೇಳೆ ಇವರು ಸೋತರೆ, ವಿಜೇತ ಅಭ್ಯರ್ಥಿಗೆ ಸಂಸದ ಎಂದು ಪ್ರಮಾಣಪತ್ರವನ್ನು ನೀಡಲಾಗುತ್ತದೆ.

ಕುನ್ವರ್ ಸರ್ವೇಶ್ ಕುಮಾರ್ ಅವರನ್ನು ರಾಕೇಶ್ ಸಿಂಗ್ ಎಂದೂ ಕರೆಯಲಾಗುತ್ತದೆ. ಇವರು ಉತ್ತರ ಪ್ರದೇಶದ ಅನುಭವಿ ರಾಜಕಾರಣಿಯಾಗಿದ್ದು, ಠಾಕೂರ್ (ರಜಪೂತ) ಜಾತಿಗೆ ಸೇರಿದ್ದರು. 1991ರಿಂದ 2007ರ ವರೆಗೆ ಮತ್ತು 2012ರಿಂದ 2014ರ ವರೆಗೆ ಐದು ಬಾರಿ ಠಾಕೂರ್ ದ್ವಾರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ಎಸ್‌ಪಿ-ಬಿಎಸ್‌ಪಿ ಮೈತ್ರಿ ಅಭ್ಯರ್ಥಿ ಎಸ್‌ಟಿ ಹಸನ್‌ ವಿರುದ್ಧ ಇವರು ಸೋಲು ಕಂಡಿದ್ದರು. ಪುತ್ರ ಕುನ್ವರ್ ಸುಶಾಂತ್ ಸಿಂಗ್ ಪ್ರಸ್ತುತ ಬರ್ಹಾಪುರದ ಬಿಜೆಪಿ ಶಾಸಕರಾಗಿದ್ದಾರೆ.

ಇದನ್ನೂ ಓದಿ: ಕೇದಾರನಾಥ ಧಾಮದಲ್ಲಿ ಶಿವಸ್ತೋತ್ರ ಪಠಿಸುತ್ತಿದ್ದ ಮೃತ್ಯುಂಜಯ ಹಿರೇಮಠ ಹಠಾತ್​ ನಿಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.