ETV Bharat / bharat

ಅಧಿಕಾರಿಗಳು, ಪೊಲೀಸರ ಎದುರೇ ಮತಯಂತ್ರ ನೆಲಕ್ಕೆ ಕುಕ್ಕಿ ಹಾಳುಗೆಡವಿದ ವೈಎಸ್​ಆರ್​ಸಿಪಿ ಶಾಸಕ - MLA Knocks down VVPAT

author img

By ETV Bharat Karnataka Team

Published : May 22, 2024, 3:34 PM IST

Updated : May 22, 2024, 4:58 PM IST

ಆಂಧ್ರಪ್ರದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯ ವೇಳೆ ವೈಎಸ್​ಆರ್​ಸಿಪಿ ಶಾಸಕರೊಬ್ಬರು ಮತಗಟ್ಟೆಗಳಿಗೆ ಬಂದು ಮತಯಂತ್ರ ಹಾಳು ಮಾಡಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ ಕ್ರಮಕ್ಕೆ ಸೂಚಿಸಿದೆ.

ಮತಯಂತ್ರ ನೆಲಕ್ಕೆ ಕುಕ್ಕಿ ಹಾಳುಗೆಡವಿದ ವೈಎಸ್​ಆರ್​ಸಿಪಿ ಶಾಸಕ
ಮತಯಂತ್ರ ನೆಲಕ್ಕೆ ಕುಕ್ಕಿ ಹಾಳುಗೆಡವಿದ ವೈಎಸ್​ಆರ್​ಸಿಪಿ ಶಾಸಕ (ETV Bharat)

ಮತಯಂತ್ರ ನೆಲಕ್ಕೆ ಕುಕ್ಕಿದ ವೈಎಸ್​ಆರ್​ಸಿಪಿ ಶಾಸಕ ಪಿನ್ನೆಲ್ಲಿ ರಾಮಕೃಷ್ಣ ರೆಡ್ಡಿ (ETV Bharat)

ಅಮರಾವತಿ (ಆಂಧ್ರಪ್ರದೇಶ): ಆಂಧ್ರಪ್ರದೇಶದ ಆಡಳಿತಾರೂಢ ವೈಎಸ್‌ಆರ್‌ಸಿಪಿ ಹಾಲಿ ಶಾಸಕರೊಬ್ಬರು ಮಾರ್ಚ್​ 13 ರಂದು ನಡೆದ ಚುನಾವಣೆಯ ವೇಳೆ 7 ಮತಯಂತ್ರಗಳನ್ನು ನೆಲಕ್ಕೆ ಬಿಸಾಡಿ ಛಿದ್ರ ಮಾಡಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗ ರಾಜ್ಯ ಪೊಲೀಸ್​ ಮುಖ್ಯಸ್ಥರಿಗೆ ಸೂಚಿಸಿದೆ.

ವೈಎಸ್‌ಆರ್‌ಸಿಪಿ ಶಾಸಕ ಪಿನ್ನೆಲ್ಲಿ ರಾಮಕೃಷ್ಣ ರೆಡ್ಡಿ ಅವರು ಈ ಕೃತ್ಯ ನಡೆಸಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚುನಾವಣೆಗೆ ಅಡ್ಡಿ ಮತ್ತು ಕಾನೂನು ಮೀರಿದ ಆರೋಪದ ಮೇಲೆ ಅವರ ವಿರುದ್ಧ ಕ್ರಿಮಿನಲ್​ ಕೇಸ್​ ದಾಖಲಿಸಿ ಕ್ರಮ ಜರುಗಿಸುವಂತೆ ಚುನಾವಣಾ ಆಯೋಗ ಹೇಳಿದೆ.

ಮತಯಂತ್ರ ನೆಲಕ್ಕೆ ಕುಕ್ಕಿದ ಶಾಸಕ: ಮಾಚರ್ಲಾ ಕ್ಷೇತ್ರದ ಹಾಲಿ ಮತ್ತು ಮೂರು ಬಾರಿ ಶಾಸಕರಾಗಿರುವ ಪಿನ್ನೆಲ್ಲಿ ರಾಮಕೃಷ್ಣ ರೆಡ್ಡಿ ಅವರು ರೆಂಟಚಿಂತಲ ಮಂಡಲದ ಪಲ್ವೊಯ್ಗೇಟ್ ಮತಗಟ್ಟೆ ಕೇಂದ್ರದ ಬೂತ್ 202 ರಲ್ಲಿ ನೇರವಾಗಿ ಬಂದು ವಿವಿ-ಪ್ಯಾಟ್​ ಯಂತ್ರವನ್ನು ಎತ್ತಿ ನೆಲಕ್ಕೆ ಕುಕ್ಕಿ ಛಿದ್ರ ಮಾಡಿದ್ದಾರೆ. ಪೊಲೀಸರು ಮತ್ತು ಬೂತ್​ ಚುನಾವಣಾಧಿಕಾರಿಗಳ ಸಮ್ಮುಖದಲ್ಲೇ ಈ ಘಟನೆ ನಡೆದಿದೆ.

ರಾಮಕೃಷ್ಣ ರೆಡ್ಡಿ ಹೀಗೆ 7 ಮತಗಟ್ಟೆ ಕೇಂದ್ರಗಳಿಗೆ ತೆರಳಿ ಇವಿಎಂಗಳನ್ನು ಧ್ವಂಸಗೊಳಿಸಿದ್ದಾರೆ. ಅವರ ಈ ಎಲ್ಲಾ ಕೃತ್ಯಗಳು ಬೂತ್​​ನಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ದೃಶ್ಯ ಸೆರೆಯಾಗಿದೆ. ಶಾಸಕರ ದುಷ್ಕೃತ್ಯವನ್ನು ತಡೆಯಲು ಮತಕೇಂದ್ರಕ್ಕೆ ಭದ್ರತೆ ನೀಡಬೇಕಿದ್ದ ಪೊಲೀಸ್​ ಸಿಬ್ಬಂದಿ ವಿಫಲವಾಗಿದ್ದು, ಅವರ ವಿರುದ್ಧವೂ ಕ್ರಮ ಜರುಗಿಸುವಂತೆ ಆಯೋಗ ತಾಕೀತು ಮಾಡಿದೆ. ಶಾಸಕರ ಈ ಬೂಟಾಟಿಕೆಯ ವಿರುದ್ಧ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸಿದ್ದು, ರೆಡ್ಡಿ ಅವರು ತಪ್ಪು ಎಸಗಿರುವುದು ಸಾಬೀತಾಗಿದೆ. ವೈಎಸ್​ಆರ್​ಸಿಪಿ ಶಾಸಕನ ಈ ದುರ್ನಡತೆಗೆ ವ್ಯಾಪಕ ಟೀಕೆ ಕೂಡ ವ್ಯಕ್ತವಾಗಿದೆ.

ಶಾಸಕರ ವಿರುದ್ಧ ಕ್ರಮ ಜರುಗಿಸಿ: "ಮಾಚರ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಬೂತ್​ ಸಂಖ್ಯೆ 202 ಸೇರಿದಂತೆ 7 ಮತಗಟ್ಟೆಗಳಲ್ಲಿ ಇವಿಎಂಗಳು ಹಾನಿಗೀಡಾಗಿದ್ದು, ಹಾಲಿ ಶಾಸಕ ಪಿ. ರಾಮಕೃಷ್ಣ ರೆಡ್ಡಿ ಅವರು ಅವೆಲ್ಲವನ್ನೂ ಛಿದ್ರ ಮಾಡಿದ ಘಟನೆ ವೆಬ್ ಕ್ಯಾಮೆರಾದಲ್ಲಿ ದಾಖಲಾಗಿದೆ" ಎಂದು ಮುಖ್ಯ ಚುನಾವಣಾಧಿಕಾರಿ ಮುಖೇಶ್ ಕುಮಾರ್ ಮೀನಾ ಅವರು ಮಂಗಳವಾರ ತಿಳಿಸಿದ್ದಾರೆ.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಮತಯಂತ್ರಗಳನ್ನು ಹಾಳು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಂಧ್ರಪ್ರದೇಶ ಪೊಲೀಸ್ ಮಹಾನಿರ್ದೇಶಕರಿಗೆ ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ರಾಜ್ಯ ಚುನಾವಣಾಧಿಕಾರಿ ಮುಖೇಶ್ ಕುಮಾರ್ ಮೀನಾ ಅವರು ಆಗ್ರಹಿಸಿದ್ದಾರೆ.

ಆಂಧ್ರಪ್ರದೇಶದಲ್ಲಿ ಮೇ 13 ರಂದು ಪಲ್ನಾಡು, ತಿರುಪತಿ ಮತ್ತು ಅನಂತಪುರ ಸೇರಿದಂತೆ ಹಲವೆಡೆ ಚುನಾವಣಾ ಸಂಬಂಧಿತ ಹಿಂಸಾಚಾರದ ವರದಿಗಳು ಬಂದಿವೆ. ಅಂದು ಏಕಕಾಲದಲ್ಲಿ ಲೋಕಸಭೆ ಮತ್ತು ವಿಧಾನಸಭೆಗೆ ಚುನಾವಣೆಗಳು ನಡೆದಿವೆ. ಚುನಾವಣೆ ಸಂದರ್ಭದಲ್ಲಿ ಆಡಳಿತ ಪಕ್ಷದ ನಾಯಕರ ದೌರ್ಜನ್ಯವನ್ನು ಈ ದೃಶ್ಯಗಳು ಸಾಬೀತು ಮಾಡುತ್ತವೆ. ಪೊಲೀಸರು ಆಡಳಿತರೂಢ ಪಕ್ಷದ ಶಾಸಕರ ದೌರ್ಜನ್ಯ ತಡೆಯುವಲ್ಲಿ ವಿಫಲವಾಗಿದ್ದು, ಹಿಂಸಾಚಾರಕ್ಕೆ ಇಂಬು ನೀಡಿದಂತಾಗಿದೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಪುರಿ ಜಗನ್ನಾಥನೂ ಮೋದಿ ಭಕ್ತ ಎಂದ ಸಂಬಿತ್ ಪಾತ್ರಾ: ಬಿಜೆಪಿ ವಿರುದ್ಧ ಕಾಂಗ್ರೆಸ್​ ಟೀಕಾಪ್ರಹಾರ - Lord Jagannath Modis Devotee

Last Updated : May 22, 2024, 4:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.