ETV Bharat / bharat

AMU ಅಲ್ಪಸಂಖ್ಯಾತ ಸ್ಥಾನಮಾನ: ಸಂಸ್ಥೆ ರಾಷ್ಟ್ರದ ರಚನೆ ಬಿಂಬಿಸುವಂತಿರಬೇಕು.. ಸುಪ್ರೀಂ ಕೋರ್ಟ್​ಗೆ ಕೇಂದ್ರದ ವಿವರಣೆ

author img

By PTI

Published : Jan 31, 2024, 7:45 PM IST

Institute of national importance must reflect national structure: Govt to SC on AMU minority status
Institute of national importance must reflect national structure: Govt to SC on AMU minority status

ರಾಷ್ಟ್ರೀಯ ಪ್ರಾಮುಖ್ಯತೆ ಹೊಂದಿರುವ ದೇಶದ ಪ್ರಮುಖ ಸಂಸ್ಥೆಯು ರಾಷ್ಟ್ರದ ರಚನೆಯನ್ನು ಪ್ರತಿಬಿಂಬಿಸುವಂತಿರಬೇಕು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್​ಗೆ ತಿಳಿಸಿದೆ.

ನವದೆಹಲಿ : ರಾಷ್ಟ್ರೀಯ ಪ್ರಾಮುಖ್ಯತೆ ಹೊಂದಿರುವ ದೇಶದ ಸಂಸ್ಥೆಯೊಂದು ರಾಷ್ಟ್ರದ ರಚನೆಯನ್ನು ಪ್ರತಿಬಿಂಬಿಸಬೇಕು ಎಂದು ಪ್ರತಿಪಾದಿಸಿರುವ ಕೇಂದ್ರ ಸರ್ಕಾರ, ಅಲಿಗಢ ಮುಸ್ಲಿಂ ವಿವಿಯಲ್ಲಿ (ಎಎಂಯು)ದಲ್ಲಿ ವ್ಯಾಸಂಗ ಮಾಡುತ್ತಿರುವ ಶೇ 70ರಿಂದ 80ರಷ್ಟು ವಿದ್ಯಾರ್ಥಿಗಳು ಮುಸ್ಲಿಮರಾಗಿದ್ದು, ಮುಸ್ಲಿಂ ಮೀಸಲಾತಿ ಇಲ್ಲದೆಯೇ ಅಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು ಮಂಗಳವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.

ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಎಎಂಯುನ ಅಲ್ಪಸಂಖ್ಯಾತ ಸ್ಥಾನಮಾನದ ವಿಚಾರಣೆ ನಡೆಸುತ್ತಿರುವ ಸಿಜೆಐ ಡಿ.ವೈ. ಚಂದ್ರಚೂಡ್ ನೇತೃತ್ವದ ಏಳು ನ್ಯಾಯಮೂರ್ತಿಗಳ ಸಂವಿಧಾನ ಪೀಠದ ಮುಂದೆ ವಾದ ಮಂಡಿಸಿ, ಎಎಂಯು ಅಲ್ಪಸಂಖ್ಯಾತ ಸಂಸ್ಥೆ ಎಂದು ಘೋಷಿಸುವುದರಿಂದ ಪರಿಶಿಷ್ಟ ಜಾತಿ (ಎಸ್ಸಿ), ಪರಿಶಿಷ್ಟ ಪಂಗಡ (ಎಸ್ಟಿ) ಮತ್ತು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಕ್ಕೆ (ಎಸ್ಇಬಿಸಿ) ಸೇರಿದವರಿಗೆ ಯಾವುದೇ ಮೀಸಲಾತಿ ಸಿಗಲಾರದು ಎಂದರು.

ಆದ್ದರಿಂದ ನ್ಯಾಯಾಲಯವು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ದೃಷ್ಟಿಕೋನದಿಂದ ವಿಷಯ ಪರಿಶೀಲಿಸಬೇಕು ಎಂದು ಅವರು ಮನವಿ ಮಾಡಿದರು. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಸೂರ್ಯಕಾಂತ್, ಜೆ.ಬಿ. ಪರ್ಡಿವಾಲಾ, ದೀಪಂಕರ್ ದತ್ತಾ, ಮನೋಜ್ ಮಿಶ್ರಾ ಮತ್ತು ಸತೀಶ್ ಚಂದ್ರ ಶರ್ಮಾ ಅವರನ್ನು ಕೂಡ ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಪೀಠ ಒಳಗೊಂಡಿದೆ.

ಸಂವಿಧಾನದ 93ನೇ ತಿದ್ದುಪಡಿಯ ಮೂಲಕ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಎಸ್ಸಿ, ಎಸ್ಟಿ ಮತ್ತು ಎಸ್ಇಬಿಸಿಗೆ ಮೀಸಲಾತಿ ಅನ್ವಯಿಸುವುದರಿಂದ ವಿನಾಯಿತಿ ನೀಡುವ ನಿಬಂಧನೆ ಒದಗಿಸಲಾಗಿದೆ ಎಂದು ಸಿಜೆಐ ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ಮೆಹ್ತಾ, ಇದನ್ನು ನಿರ್ಧರಿಸುವುದು (ಅದು ಅಲ್ಪಸಂಖ್ಯಾತರೇ ಅಥವಾ ಅಲ್ಲವೇ ಎಂದು ನಿರ್ಧರಿಸಲು) ತುಂಬಾ ಕಠಿಣವಾಗಿರುತ್ತದೆ ಎಂದು ಮಾತ್ರ ನಾನು ಹೇಳುತ್ತಿದ್ದೇನೆ ಮತ್ತು ಇದನ್ನು ನಿರ್ಧರಿಸುವಲ್ಲಿ ಸಾಮಾಜಿಕ ನ್ಯಾಯವು ಬಹಳ ನಿರ್ಣಾಯಕ ಅಂಶವಾಗಿದೆ ಎಂದರು. 93 ನೇ ತಿದ್ದುಪಡಿಯ ಹಿನ್ನೆಲೆಯಲ್ಲಿ ಅಲಹಾಬಾದ್ ಹೈಕೋರ್ಟ್​ನಲ್ಲಿ ಅರ್ಜಿಗಳನ್ನು ಸಲ್ಲಿಸಲಾಗಿದೆ ಮತ್ತು ಎಎಂಯು ಅಲ್ಪಸಂಖ್ಯಾತ ಸಂಸ್ಥೆ ಅಲ್ಲ ಎಂದು ಘೋಷಿಸುವಂತೆ ಕೋರಲಾಗಿದೆ ಎಂದು ಮೆಹ್ತಾ ಹೇಳಿದರು.

ಮೀಸಲಾತಿ ಇಲ್ಲದೆಯೂ ಎಎಂಯುನಲ್ಲಿನ ಸುಮಾರು ಶೇಕಡಾ 70 ರಿಂದ 80 ರಷ್ಟು ವಿದ್ಯಾರ್ಥಿಗಳು ಮುಸ್ಲಿಮರಾಗಿದ್ದಾರೆ ಎಂದು ಅವರು ನ್ಯಾಯಾಲಯದ ಗಮನ ಸೆಳೆದರು.

ಫೆಬ್ರವರಿ 12, 2019 ರಂದು ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ಏಳು ನ್ಯಾಯಾಧೀಶರ ಪೀಠಕ್ಕೆ ವರ್ಗಾಯಿಸಿತ್ತು. 2006ರ ಹೈಕೋರ್ಟ್ ಆದೇಶದ ವಿರುದ್ಧ ಕೇಂದ್ರದಲ್ಲಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಆಗ ಮೇಲ್ಮನವಿ ಸಲ್ಲಿಸಿತ್ತು. ಇದರ ವಿರುದ್ಧ ವಿಶ್ವವಿದ್ಯಾಲಯವು ಪ್ರತ್ಯೇಕ ಅರ್ಜಿಯನ್ನೂ ಸಹ ಸಲ್ಲಿಸಿತ್ತು. ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರವು ಹಿಂದಿನ ಯುಪಿಎ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಹಿಂತೆಗೆದುಕೊಳ್ಳುವುದಾಗಿ 2016 ರಲ್ಲಿ ಸುಪ್ರೀಂ ಕೋರ್ಟ್​ಗೆ ತಿಳಿಸಿತ್ತು.

ಇದನ್ನೂ ಓದಿ : ಜ್ಞಾನವಾಪಿ ಮಸೀದಿ ಆವರಣದಲ್ಲಿನ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಹಿಂದೂಗಳಿಗೆ ಕೋರ್ಟ್​ ಅವಕಾಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.