ETV Bharat / bharat

ಅಜಿತ್ ಪವಾರ್​ ಬಣವೇ ನಿಜವಾದ ಎನ್​ಸಿಪಿ-ಚುನಾವಣಾ ಆಯೋಗ; ಶರದ್​ ಪವಾರ್‌ಗೆ ಹಿನ್ನಡೆ

author img

By ETV Bharat Karnataka Team

Published : Feb 6, 2024, 9:46 PM IST

Updated : Feb 7, 2024, 2:45 PM IST

ಎನ್​ಸಿಪಿಯ ಬಣ ರಾಜಕೀಯದಲ್ಲಿ ಶರದ್‌ ಪವಾರ್‌ ಅವರಿಗೆ ಭಾರಿ ಹಿನ್ನಡೆಯಾಗಿದೆ. ಇವರ ಸಂಬಂಧಿ ಅಜಿತ್‌ ಪವಾರ್‌ ಬಣ ಮೇಲುಗೈ ಸಾಧಿಸಿದೆ.

ajit-pawars-faction-is-real-ncp-ec-murder-of-democracy-says-sharad-pawar-camp
ಅಜಿತ್​ ಬಣವೇ ನಿಜವಾದ ಎನ್​ಸಿಪಿ ಎಂದ ಗಡಿಯಾರ ನೀಡಿದ ಚುನಾವಣಾ ಆಯೋಗ

ನವದೆಹಲಿ: ಮಹಾರಾಷ್ಟ್ರ ರಾಜಕಾರಣದಲ್ಲಿ ಕುತೂಹಲಕರ ಬೆಳವಣಿಗೆ ನಡೆದಿದೆ. ಹಾಲಿ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಬಣವೇ ನಿಜವಾದ ಎನ್​ಸಿಪಿ ಎಂದು ಕೇಂದ್ರ ಚುನಾವಣಾ ಆಯೋಗ ಮಂಗಳವಾರ ಘೋಷಿಸಿದೆ. ಅಲ್ಲದೇ, ಪಕ್ಷದ ಚಿಹ್ನೆಯಾದ 'ಗೋಡೆ ಗಡಿಯಾರ'ವನ್ನೂ ಅಜಿತ್​ ಬಣಕ್ಕೆ ಹಂಚಿಕೆ ಮಾಡಿದೆ. ಇದರಿಂದ ಪಕ್ಷದ ಸಂಸ್ಥಾಪಕರಾಗಿದ್ದ ಹಿರಿಯ ರಾಜಕಾರಣಿ ಶರದ್‌ ಪವಾರ್‌ ಅವರಿಗೆ ಭಾರಿ ಹಿನ್ನಡೆಯಾಗಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಶರದ್‌ ಬಣ ಆಕ್ರೋಶ ವ್ಯಕ್ತಪಡಿಸಿದೆ.

ಉಭಯ ಬಣಗಳು ಪಕ್ಷದ ಸಂವಿಧಾನ ಮತ್ತು ಸಾಂಸ್ಥಿಕ ಚುನಾವಣೆಗಳ ಹೊರತಾಗಿ ಕೆಲಸ ಮಾಡುತ್ತಿರುವುದು ಕಂಡುಬಂದಿದೆ. ಬಹುಮತ ಪರೀಕ್ಷೆಯ ಸಂದರ್ಭದಲ್ಲಿ ಸದನದಲ್ಲಿ ಬಣದ ಬಹುಮತವನ್ನು ಪರಿಗಣಿಸಿ ಈ ಆದೇಶ ನೀಡಲಾಗಿದೆ ಎಂದು ಆಯೋಗ ತಿಳಿಸಿದೆ. ಇದೇ ವೇಳೆ, ಮುಂಬರುವ ರಾಜ್ಯಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬುಧವಾರ ಮಧ್ಯಾಹ್ನದ ವೇಳೆಗೆ ತನ್ನ ರಾಜಕೀಯ ಸಂಘಟನೆಗೆ ಹೆಸರು ಸೂಚಿಸುವ ಮೂರು ಪ್ರಸ್ತಾವಗಳನ್ನು ಸಲ್ಲಿಸಲು ಶರದ್ ಪವಾರ್ ನೇತೃತ್ವದ ಬಣಕ್ಕೆ ಆಯೋಗ ಅವಕಾಶ ನೀಡಿದೆ.

ಪ್ರಸ್ತುತ ಮಹಾರಾಷ್ಟ್ರದ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ) ಮತ್ತು ಎನ್​ಸಿಪಿಯನ್ನೊಳಗೊಂಡ ಸಮ್ಮಿಶ್ರ ಸರ್ಕಾರದಲ್ಲಿ ಹಾಲಿ ಡಿಸಿಎಂ ಆಗಿರುವ ಅಜಿತ್‌ ಪವಾರ್‌ ಬಣದ ನಾಯಕರು ಆಯೋಗದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಮತ್ತೊಂದೆಡೆ, ಶರದ್‌ ಪವಾರ್​ ಬಣದ ನಾಯಕ ಅನಿಲ್​ ದೇಶಮುಖ್, ''ಇದು ಪ್ರಜಾಪ್ರಭುತ್ವದ ಕಗ್ಗೊಲೆ ಮತ್ತು ದುರದೃಷ್ಟಕರ'' ಎಂದು ಅಸಮಾಧಾನ ಹೊರಹಾಕಿದ್ದಾರೆ.

ಉದ್ಧವ್​ ನಂತರ ಪವಾರ್​​ಗೆ ಶಾಕ್​: 2019ರ ನವೆಂಬರ್​ನಲ್ಲಿ ನಡೆದ ವಿಧಾನಸಭಾ ಚುನಾವಣೆ ಬಳಿಕ ಕ್ಷಿಪ್ರ ರಾಜಕೀಯ ಬೆಳವಣಿಗೆಯನ್ನು ಮಹಾರಾಷ್ಟ್ರ ಕಂಡಿದೆ. ಇದರಲ್ಲಿ ರಾಜ್ಯದ ಎರಡು ಪ್ರಬಲ ಪಕ್ಷಗಳಾದ ಶಿವಸೇನೆ ಮತ್ತು ಎನ್​ಸಿಪಿ ಎರಡು ಭಾಗಗಳಾಗಿ ಒಡೆದುಹೋಗಿವೆ. ಉದ್ಧವ್​ ಠಾಕ್ರೆ ನೇತೃತ್ವದ ಶಿವಸೇನೆಯು ಬಿಜೆಪಿಯೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿತ್ತು. ಈ ಮೈತ್ರಿಗೆ ಬಹುಮತವೂ ಸಿಕ್ಕಿತ್ತು.

ಆದರೆ, ನಂತರದಲ್ಲಿ ಅಧಿಕಾರ ಹಂಚಿಕೆ ವಿಷಯವಾಗಿ ಶಿವಸೇನೆ ತನ್ನ ದೀರ್ಘಕಾಲದ ಮಿತ್ರಪಕ್ಷವಾಗಿದ್ದ ಬಿಜೆಪಿಯೊಂದಿಗೆ ಸಂಬಂಧ ಮುರಿದುಕೊಂಡಿತ್ತು. ಇದರ ಬಳಿಕ ರಾಜಭವನದಲ್ಲಿ ನಡೆದ ಗೌಪ್ಯ ಸಮಾರಂಭದಲ್ಲಿ ಬಿಜೆಪಿಯ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿ ಮತ್ತು ಎನ್​ಸಿಪಿಯ ಅಜಿತ್ ಪವಾರ್​ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ, ಈ ಸರ್ಕಾರವು ಕೇವಲ 80 ಗಂಟೆಗಳಲ್ಲಿ ಪತನವಾಗಿತ್ತು.

ಇದಾದ ನಂತರ ಅಚ್ಚರಿ ಬೆಳವಣಿಗೆಯಲ್ಲಿ ಕಾಂಗ್ರೆಸ್​, ಎನ್​ಸಿಪಿ ಹಾಗೂ ಎನ್​ಸಿಪಿ ಮೂರು ಪಕ್ಷಗಳು ಒಟ್ಟಾಗಿ ಮಹಾ ವಿಕಾಸ್​ ಅಘಾಡಿ ಎಂಬ ಮೈತ್ರಿಕೂಟವನ್ನು ಹುಟ್ಟುಹಾಕಿದ್ದವು. ಈ ಮೈತ್ರಿಕೂಟದಲ್ಲಿ ಉದ್ಧವ್​ ಠಾಕ್ರೆ ಮುಖ್ಯಮಂತ್ರಿಯಾಗಿದ್ದರು. ಆದರೆ, 2022ರಲ್ಲಿ ಪಕ್ಷದ ಪ್ರಬಲ ನಾಯಕ ಏಕನಾಥ್ ಶಿಂಧೆ ದಿಢೀರ್​ ಬಂಡಾಯವೆದ್ದಿದ್ದರು. ಶಿವಸೇನೆಯ ಸುಮಾರು 40 ಶಾಸಕರನ್ನು ತಮ್ಮೊಂದಿಗೆ ಶಿಂಧೆ ಕರೆದುಕೊಂಡು ಹೋಗಿದ್ದರು.

ಇದರಿಂದ ಉದ್ಧವ್​ ಠಾಕ್ರೆ ತಮ್ಮ ಸಿಎಂ ಸ್ಥಾನ ಕಳೆದುಕೊಂಡಿದ್ದರು. ಇತ್ತ, ಬಿಜೆಪಿಯೊಂದಿಗೆ ಸೇರಿ ಶಿಂಧೆ ಸಿಎಂ ಗದ್ದುಗೆ ಏರಿದ್ದರು. ಈ ಮೂಲಕ ಶಿವಸೇನೆ ಪಕ್ಷವು ಇಬ್ಭಾಗಗೊಂಡಿತ್ತು. ಕಳೆದ ವರ್ಷ ಶಿಂಧೆ ಮಾದರಿಯಲ್ಲೇ ಅಜಿತ್‌ ಪವಾರ್‌ ಸಹ ಬಂಡಾಯ ಎದ್ದಿದ್ದರು. ಅಲ್ಲದೇ, ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ) ನೇತೃತ್ವದ ಸರ್ಕಾರದೊಂದಿಗೆ ಕೈ ಜೋಡಿಸಿದ್ದರು. ಈ ಮೂಲಕ ಶಿವಸೇನೆ ರೀತಿಯಲ್ಲಿ ಎನ್​ಸಿಪಿ ವಿಭಜನೆಗೊಂಡಿತ್ತು. ಇದರಲ್ಲಿ ಕುತೂಹಲಕಾರಿ ಸಂಗತಿ ಎಂದರೆ, ಬಂಡಾಯವೆದ್ದ ಗುಂಪುಗಳೇ ಪ್ರಬಲವಾಗಿ ಹೊರಹೊಮ್ಮಿದ್ದು, ಪಕ್ಷದ ಅಧಿಕೃತ ಚಿಹ್ನೆಯನ್ನು ಹೊಂದವಲ್ಲಿ ಯಶ ಕಂಡಿವೆ.

ಇದನ್ನೂ ಓದಿ: Maharashtra Politics: ಅಜಿತ್ ಸಭೆಯಲ್ಲಿ 29, ಶರದ್ ಸಭೆಯಲ್ಲಿ 11 ಶಾಸಕರ ಹಾಜರಿ: 13 ಶಾಸಕರೆಲ್ಲಿ?

Last Updated : Feb 7, 2024, 2:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.