ಕುಂದಾನಗರಿಯಲ್ಲಿ ಗಣೇಶನಿಗೆ ಅದ್ಧೂರಿ ಸ್ವಾಗತ ಕೋರಿದ ಜನ
ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಅದ್ಧೂರಿಯಾಗಿ ವಿಘ್ನ ವಿನಾಯಕನನ್ನು ಭಕ್ತರು ಬರಮಾಡಿಕೊಂಡಿದ್ದು, ಹಬ್ಬದ ಸಂಭ್ರಮ ನಗರದಲ್ಲಿ ಕಳೆಗಟ್ಟಿದೆ. ಸಾಂಪ್ರದಾಯಿಕ ವೇಷಭೂಷಣ ತೊಟ್ಟು ಮಹಿಳೆಯರು, ಮಕ್ಕಳು ಮತ್ತು ಪುರುಷರು ಎಲ್ಲರ ಗಮನ ಸೆಳೆದರು. ನಗರದಲ್ಲಿ ಅತ್ಯಂತ ವಿಜೃಂಭಣೆಯಿಂದ ಗಣೇಶ ಚುತುರ್ಥಿಯನ್ನು ಆಚರಿಸಲಾಗುತ್ತದೆ. ಇಂದು ಬೆಳಗ್ಗೆ ಮಾರುಕಟ್ಟೆಗೆ ಆಗಮಿಸಿ ಗಣೇಶ ಮೂರ್ತಿಯನ್ನು ಪಟಾಕಿ ಸಿಡಿಸಿ, ಬ್ಯಾಂಡ್ ಸದ್ದಿನೊಂದಿಗೆ ತಮ್ಮ ಮನೆಗಳಿಗೆ ಅದ್ಧೂರಿಯಾಗಿ ಬರಮಾಡಿಕೊಂಡರು.
ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ರೀನಾ ಪಟೇಲ್ ಎಂಬುವರು, ಗಣೇಶನನ್ನು ಮನೆಗೆ ಕರೆದುಕೊಂಡು ಹೋಗಲು ಕುಟುಂಬಸ್ಥರೊಂದಿಗೆ ಬಂದಿದ್ದೇನೆ. ಮಹಾರಾಷ್ಟ್ರಕ್ಕಿಂತಲೂ ಬೆಳಗಾವಿಯಲ್ಲಿ ವಿಶೇಷ ಮತ್ತು ಅದ್ಧೂರಿಯಾಗಿ ಗಣೇಶ ಹಬ್ಬ ಆಚರಿಸಲಾಗುತ್ತದೆ. ಇದೆಲ್ಲಾ ನೋಡಿ ತುಂಬಾ ಖುಷಿಯಾಗುತ್ತಿದೆ ಎಂದರು. ಇದೇ ವೇಳೆ ಅವರ ಸಹೋದರಿ ಕಶಿಶ್ ಪಟೇಲ್ ಕೂಡ ಸಂತಸ ವ್ಯಕ್ತಪಡಿಸಿದರು. ಗಣೇಶ ಮೂರ್ತಿಯನ್ನು ಕೊಂಡೊಯ್ಯಲು ಆಗಮಿಸಿದ ಶಾಹಪುರದ ನಿವಾಸಿ ಶಿವಾನಂದ ಮಾತನಾಡಿ, ಐವತ್ತು ವರ್ಷಗಳಿಂದ ಗಣೇಶೋತ್ಸವ ಬೆಳಗಾವಿಯಲ್ಲಿ ನೋಡಿಕೊಂಡು ಬಂದಿದ್ದೇವೆ. ನಮ್ಮ ಮನೆಯಲ್ಲಿ ಗಣೇಶನ ಪ್ರತಿಷ್ಠಾಪಿಸಿ ಪೂಜಿಸುತ್ತೇವೆ ಎಂದು ತಿಳಿಸಿದರು.
ಶ್ರೀಪಾದ ಎನ್ನುವವರು ಮಾತನಾಡಿ, ಗಣಪತಿ ಹಬ್ಬ ಎಂದರೆ ಎಲ್ಲರಿಗೂ ಹೊಸ ಉತ್ಸಾಹ ಬರುತ್ತದೆ. ವಿಘ್ನ ವಿನಾಯಕ ಎಲ್ಲರಿಗೂ ಒಳ್ಳೆಯದು ಮಾಡಲಿ. ಒಟ್ಟಾರೆ ಗಣೇಶೋತ್ಸವದ ಸಂಭ್ರಮ ಬೆಳಗಾವಿಯಲ್ಲಿ ಇಮ್ಮಡಿಗೊಂಡಿದ್ದು, ಸಂಜೆ ಸಾರ್ವಜನಿಕ ಮಂಡಳಿಗಳು ಬೃಹದಾಕಾರದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಿದ್ದಾರೆ.
ಇದನ್ನೂ ಓದಿ: 'ವಿಶ್ವ ಶಾಂತಿ' ಸಂದೇಶದೊಂದಿಗೆ ಪುರಿ ಬೀಚ್ನಲ್ಲಿ ಆಕರ್ಷಕ ಮರಳಿನ ಗಣಪ: ವಿಡಿಯೋ