ಸುಳ್ಯ: ಗುಂಪಿನಿಂದ ಬೇರ್ಪಟ್ಟು ಒಂಟಿಯಾದ ಮರಿಯಾನೆ

By ETV Bharat Karnataka Desk

Published : Jan 20, 2024, 1:35 AM IST

thumbnail

ಸುಳ್ಯ (ದಕ್ಷಿಣ ಕನ್ನಡ) : ಆಹಾರ ಹುಡುಕುತ್ತಾ ಬಂದ ಕಾಡಾನೆಗಳ ಗುಂಪಿನಲ್ಲಿದ್ದ ಮರಿಯಾನೆಯೊಂದು ಗುಂಪಿನಿಂದ ಬೇರ್ಪಟ್ಟು, ಒಂಟಿಯಾಗಿ ಜನವಸತಿ ಪ್ರದೇಶದಲ್ಲೇ ಬಾಕಿಯಾದ ಘಟನೆ ಸುಳ್ಯ ತಾಲೂಕಿನ ಮಂಡೆಕೋಲಿನಲ್ಲಿ ನಡೆದಿದೆ.

ಇಂದು ಬೆಳಗ್ಗೆ ಗುಂಪಿನಿಂದ ಬೇರ್ಪಟ್ಟ ಮರಿಯಾನೆಯೊಂದು ಮಂಡೆಕೋಲಿನ ಕನ್ಯಾನ ಎಂಬಲ್ಲಿ ಇರುವುದನ್ನು ಸಾರ್ವಜನಿಕರು ಗಮನಿಸಿದ್ದಾರೆ. ನಂತರ ಅರಣ್ಯ ಇಲಾಖಾಧಿಕಾರಿಗಳಿಗೆ ಮಾಹಿತಿಯನ್ನು ನೀಡಿದ್ದಾರೆ. ಈ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ನುರಿತ ಪಶು ವೈದ್ಯಕೀಯ ತಜ್ಞರ ತಂಡವು ಸ್ಥಳಕ್ಕೆ ಆಗಮಿಸಿದ್ದಾರೆ. ರಾತ್ರಿ ವೇಳೆ ತೋಟಗಳಿಗೆ ಲಗ್ಗೆ ಇಟ್ಟ ಕಾಡಾನೆಗಳ ಗುಂಪಿನಿಂದ ಮರಿಯಾನೆ ತಪ್ಪಿಸಿಕೊಂಡು ಬೇರ್ಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಈ ಬಗ್ಗೆ ಈಟಿವಿ ಭಾರತದ ಜೊತೆಗೆ ಮಾತನಾಡಿದ ಸುಳ್ಯ ಅರಣ್ಯ ಇಲಾಖೆ ಎಸಿಎಫ್ ಪ್ರವೀಣ್ ಶೆಟ್ಟಿ ಅವರು, ನಿನ್ನೆ ರಾತ್ರಿ ಆಹಾರ ಅರಸುತ್ತಾ ಬಂದ ಕಾಡಾನೆಗಳ ಹಿಂಡಿನಿಂದ ಪಟಾಕಿ ಸದ್ದು ಅಥವಾ ಇನ್ನಿತರ ಯಾವುದಾದರೂ ರೀತಿಯಲ್ಲಿ ಆನೆಗಳಿಗೆ ಭಯ ಹುಟ್ಟಿಸುವ ಸದ್ದು ಕೇಳಿ ಈ ಮರಿಯಾನೆ ಬೇರ್ಪಟ್ಟಿರಬಹುದು. ಮರಿಯಾನೆಯನ್ನು ಆನೆಗಳ ಗುಂಪಿಗೆ ಸೇರಿಸಲು ಪ್ರಯತ್ನ ನಡೆಯುತ್ತಿದೆ ಎಂದಿದ್ದಾರೆ.

ಆನೆಮರಿ ಪತ್ತೆಯಾದ ಜಾಗದಲ್ಲಿ ಅದನ್ನು ಬಿಟ್ಟು ತನ್ನ ತಂಡದೊಂದಿಗೆ ಸೇರಿಕೊಳ್ಳಲು ಅನುವು ಮಾಡಿಕೊಡಲಾಗುತ್ತದೆ . ಇದನ್ನು ನಿರೀಕ್ಷಿಸಲು ನಮ್ಮ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮಾತ್ರವಲ್ಲದೇ ನುರಿತ ಪಶುವೈದ್ಯಕೀಯ ತಜ್ಞರ ತಂಡವೂ ಮರಿಯಾನೆಯನ್ನು ಗಮನಿಸುತ್ತಿದೆ. ಸದ್ಯ ಮರಿಯಾನೆ ಆರೋಗ್ಯವಾಗಿದೆ. ಬಹುತೇಕ ಇಂದು ರಾತ್ರಿಯೇ ಇದರ ತಾಯಿಯಾನೆ ಮರಿಯಾನೆಯನ್ನು ಕಾಡಿಗೆ ಕರೆದುಕೊಂಡು ಹೋಗಬಹುದು ಎಂದು ನಿರೀಕ್ಷಿಸಲಾಗಿದೆ. ಅದು ಸಾಧ್ಯವಾಗದೇ ಇದ್ದಲ್ಲಿ ಮಾತ್ರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.