ಜಾಗತಿಕ ಪಿಸಿ ಮಾರಾಟ ಶೇ 14 ರಷ್ಟು ಕುಸಿತ; ಅಧ್ಯಯನ ವರದಿ

author img

By ETV Bharat Karnataka Desk

Published : Jan 21, 2024, 6:03 PM IST

Global PC market sees 14% shipment decline in 2023

ಜಾಗತಿಕ ಪಿಸಿ ಮಾರುಕಟ್ಟೆ ಶೇ 14ರಷ್ಟು ಇಳಿಕೆಯಾಗಿದೆ ಎಂದು ಹೊಸ ವರದಿ ತಿಳಿಸಿದೆ.

ನವದೆಹಲಿ: ಜಾಗತಿಕ ಪಿಸಿ ಮಾರುಕಟ್ಟೆ 2023 ರಲ್ಲಿ ಶೇಕಡಾ 14 ರಷ್ಟು (ವರ್ಷದಿಂದ ವರ್ಷಕ್ಕೆ) ಕುಸಿತ ಕಂಡಿದೆ ಎಂದು ಹೊಸ ವರದಿ ತಿಳಿಸಿದೆ. ವಾಣಿಜ್ಯ ಮತ್ತು ಗ್ರಾಹಕ ಕ್ಷೇತ್ರಗಳಲ್ಲಿನ ಮಂದಗತಿಯಿಂದಾಗಿ ಪಿಸಿ ಮಾರಾಟದಲ್ಲಿ ಇಳಿಕೆಯಾಗಿದೆ. ಜಾಗತಿಕ ಪಿಸಿ ಮಾರುಕಟ್ಟೆಯು 2023 ರ ನಾಲ್ಕನೇ ತ್ರೈಮಾಸಿಕವನ್ನು (ಕ್ಯೂ 4) ಶೇಕಡಾ 0.2 ರಷ್ಟು (ವರ್ಷದಿಂದ ವರ್ಷಕ್ಕೆ) ಮಾರಾಟ ಕುಸಿತದೊಂದಿಗೆ ಕೊನೆಗೊಳಿಸಿದೆ. ಕೌಂಟರ್ ಪಾಯಿಂಟ್ ರಿಸರ್ಚ್ ಪ್ರಕಾರ, ಇದು ವರ್ಷದಿಂದ ವರ್ಷಕ್ಕೆ ರಫ್ತು ಕುಸಿತದ ಸತತ ಎಂಟನೇ ತ್ರೈಮಾಸಿಕವಾಗಿದೆ.

"ವರ್ಷಾಂತ್ಯದ ರಜಾಕಾಲದಲ್ಲಿ ಕೂಡ ಮಾರಾಟ ಚೇತರಿಕೆಯಾಗಿಲ್ಲ. ಒಇಎಂಗಳು ಮತ್ತು ಒಡಿಎಂಗಳು 2024 ರ 2 ಮತ್ತು 3ನೇ ತ್ರೈಮಾಸಿಕದಲ್ಲಿ ಮಾರಾಟ ಮತ್ತೆ ಚೇತರಿಸಿಕೊಳ್ಳಲಿದೆ ಎಂದು ನಿರೀಕ್ಷಿಸಿವೆ" ಎಂದು ವಿಶ್ಲೇಷಕರು ಹೇಳಿದ್ದಾರೆ. ವರದಿಯ ಪ್ರಕಾರ, ಪಿಸಿ ಒಇಎಂಗಳ (ಮೂಲ ಉಪಕರಣ ತಯಾರಕ) ಮಾರಾಟ ಪ್ರಮಾಣ 2023 ರಾದ್ಯಂತ ಬದಲಾಗದೆ ಉಳಿದಿವೆ. ಕಡಿಮೆ ಬೇಡಿಕೆ ಮತ್ತು ಹೆಚ್ಚಿನ ದಾಸ್ತಾನುಗಳು ಮಾರುಕಟ್ಟೆಯಾದ್ಯಂತ ಮಾರಾಟ ಹೆಚ್ಚಳಕ್ಕೆ ಅಡ್ಡಿಯಾಗಿರುವುದೇ ಇದಕ್ಕೆ ಕಾರಣವಾಗಿದೆ.

2023 ರಲ್ಲಿ ಲೆನೊವೊ ಮತ್ತು ಎಚ್​ಪಿ ಕ್ರಮವಾಗಿ 24 ಪ್ರತಿಶತ ಮತ್ತು 21 ಪ್ರತಿಶತ ಮಾರುಕಟ್ಟೆ ಪಾಲಿನೊಂದಿಗೆ ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿವೆ. ಎಚ್​ಪಿ ಉತ್ತರ ಅಮೆರಿಕದ ಮಾರುಕಟ್ಟೆಯಲ್ಲಿ ತುಲನಾತ್ಮಕವಾಗಿ 5 ಪ್ರತಿಶತದಷ್ಟು (ವರ್ಷದಿಂದ ವರ್ಷಕ್ಕೆ) ಮಾರಾಟ ಕುಸಿತ ದಾಖಲಿಸಿದೆ. ಶೇ 16 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿರುವ ಡೆಲ್, ನಿಧಾನಗತಿಯ ವಾಣಿಜ್ಯ ಬೇಡಿಕೆಯಿಂದಾಗಿ ಶೇಕಡಾ 20 ರಷ್ಟು ಮಾರಾಟ ಕುಸಿತ ಅನುಭವಿಸಿದೆ. ಶೇಕಡಾ 14 ರಷ್ಟು ಮಾರಾಟ ಕುಸಿತದೊಂದಿಗೆ ಆ್ಯಪಲ್ 2023 ರಲ್ಲಿ ಸರಿಸುಮಾರು 9 ಪ್ರತಿಶತದಷ್ಟು ಮಾರುಕಟ್ಟೆ ಪಾಲು ಹೊಂದಿದೆ.

ಇದಲ್ಲದೆ, ಇಂಟೆಲ್ ಮತ್ತು ಎಎಂಡಿ ಎರಡೂ ಮುಂದಿನ ಪೀಳಿಗೆಯ ಎಐ ಪಿಸಿಗಳಿಗೆ ಸಿಪಿಯು ಆವಿಷ್ಕಾರಗಳನ್ನು (ಮೆಟಿಯೋರ್ ಲೇಕ್ ಮತ್ತು ಹಾಕ್ ಪಾಯಿಂಟ್) ಹೊಂದಿರುವುದರಿಂದ ಎಐ ಪಿಸಿಗಳು 2024 ರಲ್ಲಿ ಮುನ್ನೆಲೆಗೆ ಬರಲಿವೆ ಎಂದು ವಿಶ್ಲೇಷಕರು ಹೇಳಿದ್ದಾರೆ. 2023 ರ ನಾಲ್ಕನೇ ತ್ರೈಮಾಸಿಕದಲ್ಲಿ, ಪಿಸಿ ಮಾರಾಟಗಾರರು ವಿವಿಧ ವಿಭಾಗಗಳಲ್ಲಿ ಹೊಸ ಎಐ ಪಿಸಿ ಉತ್ಪನ್ನಗಳ ಬಿಡುಗಡೆ ಮುಂದುವರಿಸಿದ್ದಾರೆ.

ಇದಲ್ಲದೆ, 2025 ರ ವೇಳೆಗೆ ಎಐ ಲ್ಯಾಪ್​ಟಾಪ್​ಗಳು ಶೇಕಡಾ 50 ರಷ್ಟು ಮಾರುಕಟ್ಟೆ ಪಾಲು ಪಡೆಯಲಿವೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ. ಪ್ರಾಥಮಿಕ ಸಿಪಿಯು ಮತ್ತು ಜಿಪಿಯು ಜೊತೆಗೆ ಎನ್​ಪಿಯು ಅಥವಾ ಎಐ ಆಕ್ಸಿಲರೇಟರ್ (ಎಐ ಎಂಜಿನ್ ಎಂದೂ ಕರೆಯಲಾಗುತ್ತದೆ) ಹೊಂದಿರುವ ಲ್ಯಾಪ್​ಟಾಪ್​ಗಳನ್ನು ಎಐ ಲ್ಯಾಪ್​ಟಾಪ್ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ : ಎಐ ಚಾಲಿತ ಸುಳ್ಳು ಮಾಹಿತಿ ವಿಶ್ವಕ್ಕೆ ಅತಿದೊಡ್ಡ ಅಪಾಯ: ವಿಶ್ವ ಆರ್ಥಿಕ ವೇದಿಕೆ ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.