ETV Bharat / sukhibhava

ಅಮೆರಿಕದಲ್ಲಿ ಹೆಚ್ಚಿದ ಕೋವಿಡ್​; ಆಸ್ಪತ್ರೆಗಳಲ್ಲಿ ಮಾಸ್ಕ್​ ಕಡ್ಡಾಯ

author img

By ETV Bharat Karnataka Team

Published : Jan 5, 2024, 3:23 PM IST

ನ್ಯೂಯಾರ್ಕ್​, ಕ್ಯಾಲಿಫೋರ್ನಿಯಾ, ಉತ್ತರ ಕರೊಲಿನಾ ಮತ್ತು ಮೆಸಾಚುಸೆಟ್​​ ಸೇರಿದಂತೆ ಅಮೆರಿಕದ ಹಲವು ರಾಜ್ಯದಲ್ಲಿ ಆಸ್ಪತ್ರೆ ಸಿಬ್ಬಂದಿ, ರೋಗಿಗಳು ಮತ್ತು ಸಂದರ್ಶಕರಿಗೆ ಮಾಸ್ಕ್​ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

Mask compulsory in Many hospitals across several US states
Mask compulsory in Many hospitals across several US states

ನ್ಯೂಯಾರ್ಕ್​: ಅಮೆರಿಕದಲ್ಲಿ ಕೋವಿಡ್​​ 19ನ ಉಪತಳಿ ಜೆಎನ್​.1 ಅಲೆ ಉಲ್ಬಣಗೊಂಡಿದೆ. ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅನೇಕ ಆಸ್ಪತ್ರೆಗಳಲ್ಲಿ ಮಾಸ್ಕ್​ ಧಾರಣೆಯನ್ನು ಕಡ್ಡಾಯ ಮಾಡಲಾಗಿದೆ.

ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ಇತ್ತೀಚಿನ ಮಾಹಿತಿಯಂತೆ, ಕ್ರಿಸ್​ಮಸ್​ ಬಳಿಕ ಅಮೆರಿಕದಲ್ಲಿ ಜೆಎನ್​​.1 ಪ್ರಸರಣ ಹೆಚ್ಚುತ್ತಿದೆ. ಕಳೆದೆರಡು ವಾರದಿಂದ ಜೆಎನ್​.1 ಸೋಂಕಿನ ಪ್ರಕರಣದಲ್ಲಿ ಶೇ.39-50ರಷ್ಟು ಏರಿಕೆಯಾಗಿದೆ. ಪ್ರವಾಸಿಗರು ಹಾಗು ನೀರಿನ ತ್ಯಾಜ್ಯದಿಂದ ಸೋಂಕು ಹರಡುತ್ತಿದೆ. ಜಗತ್ತಿನ ಇತರೆಡೆಗಳಲ್ಲೂ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಕುರಿತು ಗಮನಿಸಲಾಗಿದೆ ಎಂದು ಎಚ್ಚರಿಸಿದೆ.

ಲಾಸ್​ ಏಂಜಲೀಸ್ ಕೌಂಟಿ ಮತ್ತು ನ್ಯೂಯಾರ್ಕ್​ ಸಿಟಿಯಲ್ಲಿ ಆರೋಗ್ಯ ವಲಯದ ಎಲ್ಲಾ ಸಿಬ್ಬಂದಿ ಮಾಸ್ಕ್​ ಧರಿಸುವುದು ಕಡ್ಡಾಯವಾಗಿದೆ ಎಂದು ಎಬಿಸಿ7 ವರದಿ ಮಾಡಿದೆ. ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ನರ್ಸಿಂಗ್​ ಹೋಮ್ಸ್​​ ಮತ್ತು ಎನ್​ವೈಸಿ ಸಾರ್ವಜನಿಕ ಆಸ್ಪತ್ರೆ ವ್ಯವಸ್ಥೆಗಳಲ್ಲಿ ಈ ನಿಯಮ ಪಾಲನೆ ಅತ್ಯವಶ್ಯಕ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಆಸ್ಪತ್ರೆಗಳಲ್ಲಿ ಕೋವಿಡ್​, ಜ್ವರ ಮತ್ತು ಆರ್​ಎಸ್​ವಿಗಳು ಏರಿಕೆಯಾಗುತ್ತಿದೆ. ಈ ಸಂದರ್ಭದಲ್ಲಿ ನಾವು ನಮ್ಮ ರೋಗಿಗಳು, ಸಿಬ್ಬಂದಿ ಮತ್ತು ಸಮುದಾಯವನ್ನು ರಕ್ಷಿಸಬೇಕಿದೆ ಎಂದು ನ್ಯೂಯಾರ್ಕ್​ನ ಹೆಲ್ತ್​​ ಪ್ಲಸ್​ ಆಸ್ಪತ್ರೆ ವಕ್ತಾರರು ಹೇಳಿದ್ದಾರೆ.

ದೀರ್ಘ ಕೋವಿಡ್​ನಿಂದ 3,500 ಮಂದಿ ಸಾವು: 2020ರ ಜನವರಿಯಿಂದ 2022ರ ಜೂನ್​ ಅಂತ್ಯದವರೆಗೆ ದೀರ್ಘ ಕೋವಿಡ್​​ನಿಂದ 3,544 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಮೆರಿಕದ ಸಿಡಿಸಿ ತಿಳಿಸಿದೆ. ಕೋವಿಡ್​ನಿಂದ ಸಾವನ್ನಪ್ಪಿದ 1,021,487 ಪ್ರಕರಣದಲ್ಲಿ ದೀರ್ಘಾವಧಿ ಕೋವಿಡ್​ನಿಂದ ಸಾವನ್ನಪ್ಪಿದವರ ಸಂಖ್ಯೆ ಶೇ.1ರಷ್ಟಿದೆ. ಈ ಮೊದಲೂ ಕೋವಿಡ್​ ಅನಾರೋಗ್ಯದ ಇತಿಹಾಸ ಹೊಂದಿರುವವರು ಕೋವಿಡ್‌ ನಂತರದ ತೀವ್ರ ಪರಿಣಾಮಗಳು ಮತ್ತು ಸಾವಿನ ಅಪಾಯವನ್ನು ಹೆಚ್ಚು ಹೊಂದಿದ್ದಾರೆ ಎಂದು ಹೇಳಿದೆ.

ದೀರ್ಘ ಕೋವಿಡ್​ ಎಂಬುದು ಸಾರ್ಸ್​​ ಕೋವ್​ 2 ಸೋಂಕಿನಿಂದ ಚೇತರಿಸಿಕೊಂಡ ವ್ಯಕ್ತಿ ದೀರ್ಘಾವಧಿ ಪರಿಣಾಮಕ್ಕೆ ಒಳಗಾಗುವ ಪ್ರಕ್ರಿಯೆ. 2021ರಲ್ಲಿ ದೀರ್ಘ ಕೋವಿಡ್​ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಂಡಿತ್ತು. ಇದರಿಂದ ಸಾಕಷ್ಟು ಮಂದಿ ಸಾವನ್ನಪ್ಪಿದ್ದರು ಎಂದು ತಿಳಿಸಿದೆ. (ಐಎಎನ್​ಎಸ್​​)

ಇದನ್ನೂ ಓದಿ: ಕೋವಿಡ್​ ಅಲೆಯನ್ನು ಮುಂಚೆಯೇ ಅಂದಾಜಿಸುವ ಹೊಸ ಎಐ ಮಾದರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.