ಚಳಿಗಾಲದಲ್ಲಿ ಸ್ಟೀಮ್ ತೆಗೆದುಕೊಳ್ಳುವುದು ಹೇಗೆ ಪ್ರಯೋಜನಕಾರಿ?

author img

By

Published : Jan 8, 2022, 8:01 PM IST

Benefits Of Steaming

Benefits of Steamingಸ್ಟೀಮ್ ಥೆರಪಿಯು ಕೇವಲ ಶ್ವಾಸಕೋಶ ಅಥವಾ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಮಾತ್ರ ರಾಮಬಾಣವಲ್ಲ. ಚರ್ಮದ ಆರೋಗ್ಯಕ್ಕೆ ಸಹ ಪ್ರಯೋಜನಕಾರಿಯಾಗಿದೆ.

ಚಳಿಗಾಲದಲ್ಲಿ ಅನೇಕ ಸಣ್ಣಪುಟ್ಟ ಕಾಯಿಲೆಗಳು ನಮ್ಮನ್ನು ಹುಡುಕಿಕೊಂಡು ಬರುತ್ತವೆ. ಈ ವೇಳೆ ಎಲ್ಲಾ ವಯಸ್ಸಿನ ಜನರಲ್ಲಿ ಶೀತ ಮತ್ತು ಜ್ವರ ಸಾಮಾನ್ಯವಾಗಿರುತ್ತದೆ. ಅದರಲ್ಲಿಯೂ ಶೀತವು ಕೋವಿಡ್​ನ ಸಾಮಾನ್ಯ ಲಕ್ಷಣವಾಗಿರುವುದರಿಂದ ವೈರಸ್ ತಡೆಗಟ್ಟಲು ವೈದ್ಯರು ಸ್ಟೀಮಿಂಗ್​ ಅಥವಾ ಉಗಿ ಚಿಕಿತ್ಸೆಯನ್ನು ಶಿಫಾರಸು ಮಾಡುತ್ತಾರೆ. ಇದಲ್ಲದೆ, ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹ ಸ್ಟೀಮ್ ಥೆರಪಿ ಒಳ್ಳೆಯದು ಎಂಬುದನ್ನು ನಾವಿಲ್ಲಿ ಗಮನಿಸಬೇಕಾಗಿದೆ. ಯಾವ್ಯಾವ ಸಮಸ್ಯೆಗಳ ವಿರುದ್ಧ ಸ್ಟೀಮಿಂಗ್ ಹೋರಾಡುತ್ತದೆ ನೋಡೋಣ ಬನ್ನಿ..

ಸೈನಸೈಟಿಸ್​ಗೂ ರಾಮಬಾಣ..

ಡೆಹ್ರಾಡೂನ್ ಮೂಲದ ವೈದ್ಯ ಡಾ. ಸುರ್ಜಿತ್ ಸಿಂಗ್ ಈ ಬಗ್ಗೆ ಒಂದಿಷ್ಟು ಮಾಹಿತಿ ನೀಡಿದ್ದಾರೆ. ಚಳಿಗಾಲದಲ್ಲಿ ನೆಗಡಿ ಮತ್ತು ಕೆಮ್ಮಿನ ಸಮಸ್ಯೆಗಳು ಸಾಮಾನ್ಯವಾಗಿ ಇರುವುದರಿಂದ ಮೂಗು ಕಟ್ಟಿಕೊಳ್ಳುತ್ತದೆ. ಸ್ಟೀಮ್ ತೆಗೆದುಕೊಳ್ಳುವುದರಿಂದ ಸರಿಯಾಗಿ ಉಸಿರಾಡಲು ಸಹಾಯ ಮಾಡುತ್ತದೆ. ಅಲ್ಲದೇ ಸೈನಸೈಟಿಸ್ ಸಮಸ್ಯೆಗೂ ಇದು ಪರಿಹಾರವಾಗಿದೆ. ಸಿಹಿನೀರಿನ ಹಬೆಯು ಸೈನಸ್ ದಟ್ಟಣೆ ಮತ್ತು ಅದರೊಂದಿಗೆ ಆಗಾಗ್ಗೆ ಬರುವ ತಲೆನೋವುಗಳನ್ನು ನಿವಾರಿಸಲು ಸಹಕಾರಿ ಎಂದು ಸಿಂಗ್​ ಹೇಳುತ್ತಾರೆ.

ಅಸ್ತಮಾ ರೋಗಿಗಳಿಗೂ ಉತ್ತಮ ಮಾರ್ಗ..

ಇದಲ್ಲದೆ, ಸ್ಟೀಮ್ ಥೆರಪಿ ಗಂಟಲಿನ ಸ್ನಾಯುಗಳಿಗೆ ವಿಶ್ರಾಂತಿ ನೀಡಲು ಸಹಾಯ ಮಾಡುತ್ತದೆ. ಆದ್ದರಿಂದ ಕೆಮ್ಮಿಗೂ ಇದು ಪರಿಹಾರವನ್ನು ನೀಡುತ್ತದೆ. ಮೂಗಿನ ದಟ್ಟಣೆಯ ಜೊತೆಗೆ, ಇದು ಶ್ವಾಸಕೋಶದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಆದ್ದರಿಂದ ಬ್ರಾಂಕೈಟಿಸ್ ಮತ್ತು ಅಸ್ತಮಾದಿಂದ ಬಳಲುತ್ತಿರುವ ಜನರು ವಾರಕ್ಕೊಮ್ಮೆ ಅಥವಾ ಆಗಾಗ್ಗೆ, ವಿಶೇಷವಾಗಿ ಚಳಿಗಾಲದಲ್ಲಿ ಸ್ಟೀಮ್​​ ತೆಗೆದುಕೊಳ್ಳಲು ಡಾ. ಸುರ್ಜಿತ್ ಸಿಂಗ್ ಸಲಹೆ ನೀಡುತ್ತಾರೆ.

ಅಲರ್ಜಿ ಸಮಸ್ಯೆಗೂ ಮದ್ದು..

ಬೆಚ್ಚಗಿನ ಆವಿಯನ್ನು ತೆಗೆದುಕೊಂಡು ಉಸಿರಾಡಿದಾಗ, ಆ ಆವಿ ಮೂಗಿನ ಮಾರ್ಗದ ಮೂಲಕ ಶ್ವಾಸಕೋಶವನ್ನು ತಲುಪುವಾಗ ಗಂಟಲು ಮತ್ತು ಶ್ವಾಸಕೋಶದಲ್ಲಿ ಅಂಟಿಕೊಂಡಿರುವ ಲೋಳೆಯನ್ನು ತಿಳಿಗೊಳಿಸಿ, ಕಫವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಗಂಟಲು ಅಲರ್ಜಿ ತೊಂದರೆಗೂ ಇದು ಮದ್ದು.

ಇದನ್ನೂ ಓದಿ: ಸಾಮಾನ್ಯ ಶೀತಕ್ಕೂ ಒಮಿಕ್ರಾನ್​ಗೂ ಇರುವ ವ್ಯತ್ಯಾಸ ಗೊತ್ತೇ?

ಚರ್ಮಕ್ಕೆ ಆಗುವ ಪ್ರಯೋಜನಗಳೇನು?

ಸ್ಟೀಮ್ ಥೆರಪಿಯು ಕೇವಲ ಶ್ವಾಸಕೋಶ ಅಥವಾ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಮಾತ್ರ ರಾಮಬಾಣವಲ್ಲ. ಚರ್ಮದ ಆರೋಗ್ಯಕ್ಕೂ ಸಹ, ಅದರಲ್ಲಿಯೂ ಚಳಿಗಾಲದಲ್ಲಿ ಪ್ರಯೋಜನಕಾರಿಯಾಗಿದೆ. ಮುಖದ ಚರ್ಮದ ರಂಧ್ರದೊಳಗೆ ಬೆಚ್ಚಗಿನ ಆವಿ ಹೋಗಿ ಆಳವಾಗಿ ಸ್ವಚ್ಛಗೊಳಿಸುವುದರಿಂದ ಮುಖದಲ್ಲಿ ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ.

ಸತ್ತ ಜೀವಕೋಶಗಳು, ಬ್ಯಾಕ್ಟೀರಿಯಾ ಮತ್ತು ಇತರ ಕಲ್ಮಶಗಳನ್ನು ತೊಡೆದುಹಾಕುತ್ತದೆ. ಮೊಡವೆಗಳಂತಹ ಚರ್ಮದ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ. ಚರ್ಮದಲ್ಲಿ ನೈಸರ್ಗಿಕ ಎಣ್ಣೆಯ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಇದು ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದಲ್ಲದೆ ರಂಧ್ರಗಳು ತೆರೆದುಕೊಳ್ಳುವುದರಿಂದ ಕಪ್ಪು ಚುಕ್ಕೆಗಳನ್ನು ತೆಗೆದುಹಾಕಲು ಸುಲಭವಾಗುತ್ತದೆ ಎನ್ನುತ್ತಾರೆ ಚರ್ಮರೋಗ ತಜ್ಞೆ ಡಾ. ಆಶಾ ಸಕ್ಲಾನಿ.

ಸ್ಟೀಮ್ ತೆಗೆದುಕೊಳ್ಳಬೇಕಾದ ವಹಿಸಬೇಕಾದ ಮುನ್ನೆಚ್ಚರಿಕೆಗಳು..

ಸ್ಟೀಮ್ ಥೆರಪಿಗಾಗಿ ಮಾರುಕಟ್ಟೆಯಲ್ಲಿ ವಿದ್ಯುತ್​ ಸ್ಟೀಮರ್​ ಸೇರಿದಂತೆ ಹಲವು ಉಪಕರಣಗಳು ಲಭ್ಯವಿವೆ. ಅದನ್ನು ಬಳಸಿಯಾದರೂ ಸ್ಟೀಮ್​ ತೆಗೆದುಕೊಳ್ಳಬಹುದು ಅಥವಾ ಮನೆಯಲ್ಲಿಯೇ ಪಾತ್ರೆಯನ್ನು ಬಳಸಿ ತೆಗೆದುಕೊಳ್ಳಬಹುದು. ಆದರೆ ಪಾತ್ರೆಯನ್ನು ಬಳಸುವಾಗ ಹೆಚ್ಚು ಎಚ್ಚರಿಕೆ ವಹಿಸಬೇಕು. ಬಿಸಿ ಪಾತ್ರೆಯು ಸುಡುವ ಅಪಾಯವನ್ನು ಹೆಚ್ಚಿಸುವುದರಿಂದ ಮಕ್ಕಳು ಹತ್ತಿರ ಸುಳಿಯದಂತೆ ನೋಡಿಕೊಳ್ಳಿ. ಯಾವುದೇ ಉಪಕರಣಗಳಿಂದ ಸ್ಟೀಮ್​ ತೆಗೆದುಕೊಂಡರೂ ಕೂಡ, ಆ ಉಪಕರಣ ಹಾಗೂ ನಿಮ್ಮ ಮುಖದ ನಡುವೆ ಅಂತರ ಕಾಯ್ದುಕೊಳ್ಳಿ. ಏಕೆಂದರೆ ಅತಿಯಾದ ಬಿಸಿಯಾದ ಆವಿಗಳು ಚರ್ಮವನ್ನು ಹಾನಿಗೊಳಿಸುತ್ತವೆ.

ತಜ್ಞರ ಪ್ರಕಾರ, ಕನಿಷ್ಠ 5 ನಿಮಿಷಗಳ ಕಾಲ ಉಗಿ ತೆಗೆದುಕೊಳ್ಳಬೇಕು. ಅವಧಿಯನ್ನು ಹೆಚ್ಚಿಸಬೇಕೆ ಅಥವಾ ಕಡಿಮೆ ಮಾಡಬೇಕೆ ಎಂದು ತಿಳಿಯಲು ನಿಮ್ಮ ಆರೋಗ್ಯ ಸಲಹೆಗಾರರೊಂದಿಗೆ ಮಾತನಾಡಿ. ಸ್ಟೀಮಿಂಗ್​ ಬಳಿಕ ಅಲೋವೆರಾ ಜೆಲ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.