ETV Bharat / sukhibhava

Covid-19: ಮನುಷ್ಯರಿಗೆ ಹರಡುವ ಕೊರೊನಾವೈರಸ್​ ಯುಕೆಯ ಬಾವಲಿಗಳಲ್ಲಿ ಪತ್ತೆ

author img

By

Published : Jun 28, 2023, 6:28 PM IST

ಮನುಷ್ಯರಿಗೆ ತಗುಲಬಹುದಾದ ಕೊರೊನಾವೈರಸ್​ಗಳು ಯುಕೆಯ ಬಾವಲಿಗಳಲ್ಲಿ ಕಂಡು ಬಂದಿವೆ ಎಂದು ಸಂಶೋಧಕರ ತಂಡ ಹೇಳಿದೆ.

Coronaviruses in UK bats with potential to spread to humans identified
Coronaviruses in UK bats with potential to spread to humans identified

ಲಂಡನ್ : ಮನುಷ್ಯರಿಗೆ ಹರಡಬಹುದಾದ ಕೊರೊನಾವೈರಸ್​ಗಳು ಯುಕೆಯ ಬಾವಲಿಗಳಲ್ಲಿ ಕಂಡು ಬಂದಿವೆ ಎಂದು ಸಂಶೋಧಕರ ತಂಡವೊಂದು ಹೇಳಿದೆ. ವೈರಸ್​ಗಳ ಬಗ್ಗೆ ನಿಯಮಿತವಾಗಿ ಆನುವಂಶಿಕ ಸಮೀಕ್ಷೆಗಳನ್ನು (genetic surveys) ನಡೆಸುವುದು ಅಗತ್ಯ ಎಂಬುದು ಈ ಸಂಶೋಧನೆಯಿಂದ ಖಾತರಿಯಾಗಿದೆ. ಇಂಪೀರಿಯಲ್ ಕಾಲೇಜ್ ಲಂಡನ್ ಮತ್ತು ಯೂನಿವರ್ಸಿಟಿ ಕಾಲೇಜ್ ಲಂಡನ್ ನೇತೃತ್ವದ ತಂಡವು 16 ಯುಕೆ ಬಾವಲಿಗಳ ಜಾತಿಗಳ ಮಲ ಮಾದರಿಗಳನ್ನು ಕೊರೊನಾವೈರಸ್​ಗಾಗಿ ಪರೀಕ್ಷಿಸಿದೆ.

ನೇಚರ್ ಕಮ್ಯುನಿಕೇಷನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಫಲಿತಾಂಶಗಳ ವರದಿಯ ಪ್ರಕಾರ, ಮಾದರಿಯ 16 ಜಾತಿಗಳಲ್ಲಿ ಎರಡು ಹೊಸಬಗೆಯವು ಆಗಿದ್ದು, ಇವು ಸೇರಿದಂತೆ ನಾಲ್ಕು ಜಾತಿಯ ಕೊರೊನಾವೈಸರ್​ಗಳ ಪ್ರಸರಣ ಕಂಡು ಬಂದಿದೆ. ತಂಡವು ಎರಡು ಜಾತಿಯ ಆಲ್ಫಾ ಕೊರೊನಾವೈರಸ್​ಗಳನ್ನು ಗುರುತಿಸಿದೆ. ಒಂದು ಮಿಡಲ್ ಈಸ್ಟ್​ ರೆಸ್ಪಿರೇಟರಿ ಸಿಂಡ್ರೋಮ್ (MERS)-ಸಂಬಂಧಿತ ಕೊರೊನಾವೈರಸ್​ ಮತ್ತು ಇನ್ನೊಂದು ಸಾರ್ಬೆಕೊವೈರಸ್ ಆಗಿವೆ. ಕೋವಿಡ್-19 ಗೆ ಕಾರಣವಾಗುವ SARS-CoV-2 ವೈರಸ್ ಕೂಡ ಸಾರ್ಬೆಕೊವೈರಸ್ ಆಗಿದೆ.

ಆದಾಗ್ಯೂ, ಪ್ರಸ್ತುತ ಈ ವೈರಸ್​ಗಳು ಯಾವುದೇ ವ್ಯಕ್ತಿಗೆ ಸೋಂಕು ತಗುಲಿಸುವ ಸಾಮರ್ಥ್ಯವನ್ನು ಹೊಂದಿಲ್ಲ. ಬಾವಲಿಗಳು ಯುಕೆಯಲ್ಲಿ ಸಂರಕ್ಷಿತ ಜಾತಿಗಳಾಗಿವೆ. ಆದ್ದರಿಂದ ಸಂರಕ್ಷಣಾ ಸಂಸ್ಥೆಗಳೊಂದಿಗೆ ಕೆಲಸ ಮಾಡುವುದು ಈ ಪ್ರಯತ್ನಕ್ಕೆ ನಿರ್ಣಾಯಕವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಪ್ರಪಂಚದ ಅನೇಕ ಭಾಗಗಳಲ್ಲಿ, ಮಾನವರು ಮತ್ತು ಸಾಕುಪ್ರಾಣಿಗಳಲ್ಲಿ ಹರಡುವ ರೋಗಕಾರಕಗಳ ಬಗ್ಗೆ ನಾವು ಸೂಕ್ತ ಕಣ್ಗಾವಲು ಹೊಂದಿದ್ದೇವೆ. ಆದರೆ ವನ್ಯಜೀವಿಗಳಲ್ಲಿ ಈ ರೀತಿಯ ಕಣ್ಗಾವಲು ಇಲ್ಲ ಎಂದು ಯುಸಿಎಲ್ ಜೆನೆಟಿಕ್ಸ್ ಇನ್​ಸ್ಟಿಟ್ಯೂಟ್​ನ ನಿರ್ದೇಶಕರಾದ ಸಹ-ಲೇಖಕ ಪ್ರೊಫೆಸರ್ ಫ್ರಾಂಕೋಯಿಸ್ ಬಲೂಕ್ಸ್ ಹೇಳಿದರು. ಹೆಚ್ಚಿದ ಕಣ್ಗಾವಲು ಸಾರ್ವಜನಿಕ ಆರೋಗ್ಯ ಸನ್ನದ್ಧತೆ ಮತ್ತು ಆಹಾರ ಭದ್ರತೆಯನ್ನು ಸುಧಾರಿಸಬೇಕು ಮತ್ತು ಇದು ಜೀವವೈವಿಧ್ಯ ಸಂರಕ್ಷಣೆಗೆ ಸಹ ಪ್ರಯೋಜನಕಾರಿಯಾಗಿದೆ ಎಂದು ಅವರು ತಿಳಿಸಿದರು.

ವೈರಸ್‌ಗಳು ವೇಗವಾಗಿ ಹರಡುವ ಮತ್ತು ಮನುಷ್ಯರಿಗೆ ಸೋಂಕು ತಗುಲಿಸುವ ಸಾಧ್ಯತೆಯನ್ನು ಸಂಶೋಧಕರು ಅಧ್ಯಯನ ಮಾಡಿದ್ದಾರೆ. ಇದಕ್ಕಾಗಿ ಅವರು 'ಸೂಡೋವೈರಸ್'ಗಳನ್ನು ರಚಿಸಿದರು. ಇದು ವೈರಸ್ ಹೋಸ್ಟ್ ಜೀವಕೋಶಗಳಿಗೆ ಬೈಂಡ್​ ಆಗಲು ಬಳಸುವ ಯಾವುದೇ ಪ್ರೋಟೀನ್ ಅನ್ನು ಹೊಂದಿರುತ್ತದೆ, ಆದರೆ ವೈರಸ್​ಗಳು ದ್ವಿಗುಣವಾಗಲು ಸಾಧ್ಯವಿಲ್ಲ.

ಈ ಸಾರ್ಬೆಕೊವೈರಸ್ ACE2 ನ ಮಿತಿಮೀರಿದ ಸಂದರ್ಭದಲ್ಲಿ ಮಾತ್ರ ಪ್ರಯೋಗಾಲಯದಲ್ಲಿ ಮಾನವ ಜೀವಕೋಶಗಳನ್ನು ಪ್ರವೇಶಿಸಬಹುದು. ಮನುಷ್ಯರಿಗೆ ಸೋಂಕು ತಗುಲಬೇಕಾದರೆ ಅದಕ್ಕೆ ಮತ್ತಷ್ಟು ರೂಪಾಂತರಗಳು ಬೇಕಾಗುತ್ತವೆ ಎಂಬುದನ್ನು ಇದು ಸೂಚಿಸುತ್ತದೆ. ಕಾಡು ಪ್ರಾಣಿಗಳು ಮನುಷ್ಯರ ಸಂಪರ್ಕಕ್ಕೆ ಬಂದಾಗ ವೈರಾಣುಗಳು ಮನುಷ್ಯರಿಗೆ ಹರಡುವ ಸಾಧ್ಯತೆ ಹೆಚ್ಚು ಎಂದು ವರದಿ ಹೇಳಿದೆ.

ಕೊರೊನಾವೈರಸ್‌ಗಳು ವೈರಸ್‌ಗಳ ಪ್ರಭೇದವಾಗಿದ್ದು, ಇವು ಸಾಮಾನ್ಯ ಶೀತ, ತೀವ್ರವಾದ ಉಸಿರಾಟದ ಸಿಂಡ್ರೋಮ್ (SARS) ಮತ್ತು ಮಿಡಲ್ ಈಸ್ಟ್​ ಉಸಿರಾಟದ ಸಿಂಡ್ರೋಮ್ (MERS) ನಂತಹ ಕಾಯಿಲೆಗಳನ್ನು ಉಂಟುಮಾಡಬಹುದು. ವೈರಸ್​ ತಗುಲಿದ 2 ರಿಂದ 14 ದಿನಗಳ ನಂತರ ಕೋವಿಡ್​-19 ನ ಚಿಹ್ನೆಗಳು ಮತ್ತು ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು.

ಇದನ್ನೂ ಓದಿ : Bank Holiday: ಜುಲೈನಲ್ಲಿ ಅರ್ಧ ತಿಂಗಳು ಬ್ಯಾಂಕ್‌ಗಳಿಗೆ ರಜಾ! ಇಲ್ಲಿದೆ ರಜಾದಿನಗಳ ಪಟ್ಟಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.