ETV Bharat / state

ಗುತ್ತಿಗೆಯಲ್ಲಿ ಎಲ್​ಒಸಿ ನೀಡಲು ಹಣ ಪಡೆದಿದ್ದರೆ ರಾಜಕೀಯ ನಿವೃತ್ತಿ: ಸಿದ್ದರಾಮಯ್ಯ

author img

By

Published : Feb 23, 2023, 10:48 PM IST

Updated : Feb 24, 2023, 8:14 AM IST

ಗುತ್ತಿಗೆಯಲ್ಲಿ ಎಲ್​ಒಸಿ ನೀಡಲು ಹಣ ಪಡೆದಿದ್ದರೆ ರಾಜಕೀಯ ನಿವೃತ್ತಿ ಹೊಂದುವೆ ಎಂದ ಸಿದ್ದರಾಮಯ್ಯ ಹೇಳಿದ್ದಾರೆ.

siddaramaiah-slams-state-bjp-govt
ಗುತ್ತಿಗೆಯಲ್ಲಿ ಎನ್ಓಸಿ ನೀಡಲು ಹಣ ಪಡೆದಿದ್ದರೆ ರಾಜಕೀಯ ನಿವೃತ್ತಿ : ಸಿದ್ದರಾಮಯ್ಯ

ವಿಜಯಪುರ : ರಾಜ್ಯ ಬಿಜೆಪಿಯ 40 ಪರ್ಸೆಂಟ್ ಸರ್ಕಾರ ಲೂಟಿ ಹೊಡೆಯುತ್ತಿದೆ. ಈ ಬಗ್ಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರಧಾನಿಗೆ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜಿಲ್ಲೆಯ ಬಬಲೇಶ್ವರ ಕ್ಷೇತ್ರದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನಾಗಲೀ, ಎಂ.ಬಿ.ಪಾಟೀಲ್ ಆಗಲೀ ಎಲ್​ಒಸಿ ಬಿಡುಗಡೆ ಮಾಡಲು ಐದು ಪೈಸೆ ತಗೊಂಡಿದ್ದರೆ ರಾಜಕೀಯ ನಿವೃತ್ತಿ ಪಡೆದು, ಸನ್ಯಾಸತ್ವ ತೆಗೆದುಕೊಳ್ಳುವುದಾಗಿ ಸವಾಲು ಹಾಕಿದರು.‌

ಈ ಸರ್ಕಾರದ ಒಂದು ಕಾಮಗಾರಿ ಗುತ್ತಿಗೆ ಪಡೆದರೆ,‌ ಕೆಲಸ ಮಾಡುವಾಗ ಅಥವಾ ಬಿಲ್ ತೆಗೆದುಕೊಳ್ಳುವಾಗ 40 ಪರ್ಸೆಂಟ್ ಕಮಿಷನ್ ಕೊಡಬೇಕು. ಈ ಬಗ್ಗೆ ಪ್ರಧಾನಿಗಳಿಗೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಪ್ರಧಾನಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬೊಮ್ಮಾಯಿ ಸರ್ಕಾರ 40 ಪರ್ಸೆಂಟ್ ಕಮಿಷನ್​​ ಕೇಳಿ ನಮ್ಮ ರಕ್ತ ಕುಡಿಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾನು 12 ವರ್ಷ ಹಣಕಾಸಿನ‌ ಮಂತ್ರಿಯಾಗಿದ್ದೆ. ಐದು ವರ್ಷ ಎಂಬಿಪಿ ನೀರಾವರಿ ಮಂತ್ರಿಯಾಗಿದ್ದರು. ನಾವ್ಯಾರೂ ಇದುವರೆಗೂ ಐದು ಪೈಸೆ ತೆಗೆದುಕೊಂಡಿಲ್ಲ. ಒಂದು ವೇಳೆ ಹಣ ತೆಗೆದುಕೊಂಡಿದ್ದರೆ, ರಾಜಕೀಯ ನಿವೃತ್ತಿ ಹೊಂದುವುದಲ್ಲದೇ ಯಾವುದೇ ಶಿಕ್ಷೆಗೂ ಸಿದ್ಧ ಎಂದು ಹೇಳಿದರು.

ಈ ಸರ್ಕಾರದಲ್ಲಿ ಯಾವುದೇ ಕೆಲಸಕ್ಕೂ ಲಂಚ, ಲಂಚ ಎನ್ನುವಂತಾಗಿದೆ.‌ ರಾಜ್ಯ ಬಿಜೆಪಿ ಸರ್ಕಾರ ಅಲಿಬಾಬಾ ಮತ್ತು 40 ಕಳ್ಳರು ಎಂಬಂತೆ ಆಗಿದೆ. ನಾನು 40 ವರ್ಷದಿಂದ ರಾಜಕಾರಣದಲ್ಲಿ ಇದ್ದೇನೆ. ಬಿಜೆಪಿಯಂಥ ಭ್ರಷ್ಟ ಸರ್ಕಾರವನ್ನು ನನ್ನ ಜೀವನದಲ್ಲಿ ನೋಡೇ ಇರಲಿಲ್ಲ. ದುಡ್ಡನ್ನೆಲ್ಲ‌ ತಿನ್ನೋಕೆ ಶುರು ಮಾಡಿದ ಮೇಲೆ ಎಲ್ಲಿಂದ ನೀರು ಕೊಡುತ್ತಾರೆ ಎಂದರು.

ವಾಮಮಾರ್ಗದಿಂದ ಅಧಿಕಾರ: ವಾಮ‌ ಮಾರ್ಗದಿಂದ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರ ಹಿಡಿದಿದೆ. ಕಳೆದ ಬಾರಿ ಯಾವ ಪಕ್ಷಕ್ಕೂ ಬಹುಮತ ಇರಲಿಲ್ಲ. ಬಿಜೆಪಿ 104 ಸ್ಥಾನವನ್ನಷ್ಟೇ ಗೆದ್ದಿತ್ತು. ಆದರೆ ಆಪರೇಷನ್ ಕಮಲ ಮಾಡಿ ಅಧಿಕಾರ ಹಿಡಿದರು. 2008ರಲ್ಲಿ ಆಪರೇಷನ್​ ಕಮಲ ಆರಂಭವಾಗಿದ್ದು, ಇದನ್ನು ಪರಿಚಯಿಸಿದವರು ಬಿಜೆಪಿಯವರು ಎಂದು ಸಿದ್ದು ವಾಗ್ದಾಳಿ ನಡೆಸಿದರು.

ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಅಧಿಕಾರಕ್ಕೆ ಬಂದ್ರಲ್ಲ. ಅದು ಯಾವ ದುಡ್ಡು? ಲೂಟಿ ಮಾಡಿದ ದುಡ್ಡು. ವ್ಯಾಪಾರ ಆಗಿದ್ದ ಎಂಎಲ್ಎಗಳನ್ನು ಮಿನಿಸ್ಟರ್​ಗಳನ್ನಾಗಿ ಮಾಡಿದರು. ಬಳಿಕ ಅವರೆಲ್ಲ ಲೂಟಿ ಮಾಡಲು ಶುರು ಮಾಡಿದರು ಎಂದು ಟೀಕಿಸಿದರು.

ಅವತ್ತು ಯಡಿಯೂರಪ್ಪ ಅವರು ಕಣ್ಣೀರು ಹಾಕಿದರು. ಆದರೆ ಯಡಿಯೂರಪ್ಪ ಸತ್ಯ ಹೇಳಿಲ್ಲ. ಆರ್​ಎಸ್​​ಎಸ್​ನ ಕೈಗೊಂಬೆಯಾದ ಬೊಮ್ಮಾಯಿ ಕೂಡ ಏನೂ ಮಾಡಲಿಲ್ಲ. ನೀವೆಲ್ಲಾ ಒಂದು ಸಲ ಯೋಚನೆ ಮಾಡಿ. ಇವರು ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ಮಾಡೋಕೆ ಪ್ರಯತ್ನ ಮಾಡಿದ್ದಾರಾ ಎಂದು ಪ್ರಶ್ನಿಸಿದರು.

ನೀರಾವರಿ‌ ಯೋಜನೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಕ್ಕೆ ಈ ಭಾಗದಲ್ಲಿಎಂಬಿ ಪಾಟೀಲ್ ಅವರನ್ನು ಆಧುನಿಕ ಭಗೀರಥ ಎಂದು ಕರೆಯುತ್ತಾರೆ. ನನ್ನನ್ನು ಈ ರೀತಿ ಕರೆದಿಲ್ಲ, ಅವರನ್ನು ಕರೆದಿರುವುದಕ್ಕೆ ನನಗೆ ಹೆಮ್ಮೆ ಇದೆ‌. ನನ್ನ ಮಂತ್ರಿ ಮಂಡಲದ ಓರ್ವನಿಗೆ ಆಧುನಿಕ ಭಗೀರಥ ಎಂದು ಕರೆಯುತ್ತಾರಲ್ಲ ಇದಕ್ಕಿಂತ ಹೆಮ್ಮೆ ನನಗೆ ಏನಿದೆ ಎಂದು ಹೇಳಿದರು.

ಸಿದ್ದೇಶ್ವರ ಶ್ರೀಗಳ ಆಶಯದಂತೆ ನೀರಾವರಿ: ಮಾಜಿ ಸಚಿವ ಎಂ.ಬಿ ಪಾಟೀಲ‌ ಮಾತನಾಡಿ, ನಡೆದಾಡುವ ದೇವರು‌ ಲಿಂಗೈಕ್ಯ ಸಿದ್ಧೇಶ್ವರ ಸ್ವಾಮೀಜಿ ಆಶೀರ್ವಾದ, ನನ್ನ ತಂದೆಯ ಆಶೀರ್ವಾದ ಹಾಗೂ ಸಿದ್ದರಾಮಯ್ಯ ಅವರ ಆಶೀರ್ವಾದದಿಂದ ನಾನು ಎಲ್ಲೆಡೆ ನೀರಾವರಿ ಮಾಡಿದ್ದೇನೆ. ವಿಜಯಪುರ ಜಿಲ್ಲೆಯಲ್ಲಿ 14 ಕಿಲೊಮೀಟರ್ ಅಕ್ವಾಡೆಕ್ಟ್ ಮಾಡಿದ್ದೇವೆ. ವರುಣಾದಲ್ಲಿ ನಾಲ್ಕೈದು ಕಿಲೋ ಮೀಟರ್ ಅಕ್ವಾಡೆಕ್ಟ್ ಇದೆ. ವರುಣಾದವರು ಬಂದು ನಮ್ಮ ಅಕ್ವಾಡೆಕ್ಟ್ ನೋಡುವಂತಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಇದನ್ನೂ ಓದಿ : ರಂಗ ಪ್ರವೇಶ ಮಾಡಿದ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಗಳು: ರಾತ್ರಿ ಅಮಿತ್ ಶಾ ನೇತೃತ್ವದಲ್ಲಿ ಮಹತ್ವದ ಸಭೆ

Last Updated :Feb 24, 2023, 8:14 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.