ETV Bharat / state

ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯ: ಪ್ರಧಾನಿ ಮೋದಿ, ಕೇಂದ್ರ ಸಚಿವ ಜೋಶಿ ಸೇರಿ ಗಣ್ಯರ ಸಂತಾಪ

author img

By

Published : Jan 3, 2023, 7:03 AM IST

Updated : Jan 3, 2023, 12:16 PM IST

ಇಹಲೋಕ ತ್ಯಜಿಸಿದ ನಡೆದಾಡುವ ದೇವರೆಂದೇ ಖ್ಯಾತರಾದ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಮಹಾಸ್ವಾಮಿಗಳನ್ನು ಸ್ಮರಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್​ ಮಾಡಿ ಸಂತಾಪ ಸೂಚಿಸಿದ್ದಾರೆ. ಶ್ರೀಗಳೊಂದಿಗಿನ ಚಿತ್ರಗಳನ್ನೂ ಹಂಚಿಕೊಂಡಿದ್ದಾರೆ.

prime-minister-modi-condoles
ಪ್ರಧಾನಿ ನರೇಂದ್ರ ಮೋದಿ ಸಂತಾಪ

ಬೆಂಗಳೂರು: ವಯೋಸಹಜ ಅನಾರೋಗ್ಯದಿಂದ ನಿನ್ನೆ ಸಂಜೆ ಲಿಂಗೈಕ್ಯರಾದ ಜ್ಞಾನಯೋಗಿ, ನಡೆದಾಡುವ ದೇವರೆಂದೇ ಖ್ಯಾತರಾದ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಸೇರಿದಂತೆ ವಿವಿಧ ರಾಜಕೀಯ ನಾಯಕರು, ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಕನ್ನಡದಲ್ಲಿ ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, 'ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಸಮಾಜಕ್ಕೆ ನೀಡಿರುವ ಗಣನೀಯ ಸೇವೆಗಾಗಿ ಅವರನ್ನು ಸ್ಮರಿಸಲಾಗುತ್ತದೆ. ಅವರು ಇತರರ ಒಳಿತಿಗಾಗಿ ಅವಿಶ್ರಾಂತವಾಗಿ ಶ್ರಮಿಸಿದ್ದರು. ಜ್ಞಾನೋತ್ಸಾಹಕ್ಕಾಗಿ ವಿಶೇಷ ಗೌರವಕ್ಕೆ ಪಾತ್ರರಾಗಿದ್ದರು. ಈ ದುಃಖದ ಸಮಯದಲ್ಲಿ ಅವರ ಅಸಂಖ್ಯಾತ ಭಕ್ತರೊಂದಿಗೆ ನನ್ನ ಸಂವೇದನೆ ಇದೆ' ಎಂದು ತಿಳಿಸಿದ್ದಾರೆ.

ಇದೇ ವೇಳೆ ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀಗಳೊಂದಿಗೆ ವೇದಿಕೆ ಮೇಲಿದ್ದ ಚಿತ್ರಗಳನ್ನು ಪ್ರಧಾನಿ ಹಂಚಿಕೊಂಡಿದ್ದಾರೆ. ಸುತ್ತೂರು ಶ್ರೀಗಳು ಮೋದಿ ಅವರಿಗೆ ತಾಯಿಯ ಜೊತೆಗಿದ್ದ ಚಿತ್ರದ ಉಡುಗೊರೆ ನೀಡಿದ್ದರು. ಅದನ್ನು ಸಿದ್ದೇಶ್ವರ ಶ್ರೀಗಳ ಸಾನ್ನಿಧ್ಯದಲ್ಲಿ ಪ್ರಧಾನಿಗಳಿಗೆ ಹಸ್ತಾಂತರ ಮಾಡಲಾಗಿತ್ತು.

ಸಿದ್ದೇಶ್ವರ ಸ್ವಾಮೀಜಿ ನಿಧನಕ್ಕೆ ರಾಹುಲ್ ಗಾಂಧಿ ಅವರು ಸಂತಾಪ ವ್ಯಕ್ತಪಡಿಸಿದ್ದು, ಸಿದ್ದೇಶ್ವರ ಸ್ವಾಮೀಜಿ ಜಗತ್ತಿಗೆ ಒಳಿತಿನ ಮಾರ್ಗವನ್ನು ತೋರಿಸಿದ ಚೇತನ. ಅವರು ತಮ್ಮ ಸರಳತೆ, ಜ್ಞಾನಕ್ಕಾಗಿ ಗೌರವಾನ್ವಿತರಾಗಿದ್ದರು. ಸಮಾಜಕ್ಕೆ ಅವರ ಅತ್ಯುತ್ತಮ ಸೇವೆ ಸ್ಮರಣೀಯವಾಗಿದೆ. ಅವರ ಅನುಯಾಯಿಗಳ ದುಃಖದಲ್ಲಿ ಭಾಗಿಯಾಗಿದ್ದೇನೆ. ಅವರ ಬೋಧನೆಗಳು ಜೀವನದಲ್ಲಿ ಅನುಸರಿಸಬೇಕು ಎಂದು ಹೇಳಿದ್ದಾರೆ.

  • ಪರಮಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರು ಸಮಾಜಕ್ಕೆ ನೀಡಿರುವ ಗಣನೀಯ ಸೇವೆಗಾಗಿ ಅವರನ್ನು ಸ್ಮರಿಸಲಾಗುತ್ತದೆ. ಅವರು ಇತರರ ಒಳಿತಿಗಾಗಿ ಅವಿಶ್ರಾಂತವಾಗಿ ಶ್ರಮಿಸಿದ್ದರು ಮತ್ತು ಅವರ ಜ್ಞಾನೋತ್ಸಾಹಕ್ಕಾಗಿ ಅವರು ಗೌರವಗಳಿಸಿದ್ದರು. ಈ ದುಃಖದ ಸಮಯದಲ್ಲಿ ಅವರ ಅಸಂಖ್ಯಾತ ಭಕ್ತರೊಂದಿಗೆ ನನ್ನ ಸಂವೇದನೆ ಇದೆ. ಓಂ. ಶಾಂತಿ pic.twitter.com/7svVGEdSje

    — Narendra Modi (@narendramodi) January 2, 2023 " class="align-text-top noRightClick twitterSection" data=" ">

ಕೇಂದ್ರ ಸಚಿವ ಜೋಶಿ ಸಂತಾಪ: ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು, ಅನಾರೋಗ್ಯದಿಂದ ಬಳಲುತ್ತಿದ್ದ ಮಹಾಚೇತನವನ್ನು ಮೊನ್ನೆಯಷ್ಟೇ ಕಂಡು, ಅವರ ಆರೋಗ್ಯ ವಿಚಾರಿಸಿ ಬಂದಿದ್ದೆವು. ಭಗವಂತ ಅವರಿಗೆ ಇನ್ನಷ್ಟು ಆಯುಷ್ಯ ನೀಡಲಿ ಎಂದು ಪ್ರಾರ್ಥಿಸಿದ್ದೆ‌. ಆದರೆ, ಭಗವಂತನ ಇಚ್ಛೆ ನಮ್ಮೆಲ್ಲರನ್ನೂ ಮೀರಿದ್ದಾಗಿದೆ ಎಂದು ದು:ಖ ವ್ಯಕ್ತಪಡಿಸಿದರು.

ಶ್ರೀಗಳ ಸರಳ ನಡೆ-ನುಡಿ, ಕೋಟ್ಯಂತರ ಹೃದಯತಟ್ಟಿದ ಅವರ ದಿವ್ಯವಾಣಿ,‌ ಜನರಲ್ಲಿ ಆಧ್ಯಾತ್ಮದ ಚಿರಂತನ ಬೆಳಕನ್ನು ತುಂಬಿ‌ ಅವರ ಹೃದಯದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವುದೇ ನಾವು ಅವರಿಗೆ ಸಲ್ಲಿಸಬಹುದಾದ ಅತ್ಯುನ್ನತ ಗೌರವ. ಅವರ ಅಗಲಿಕೆಯ ದುಃಖವನ್ನು ತಡೆಯುವ ಶಕ್ತಿ ಪರಮಾತ್ಮ ಭಕ್ತರೆಲ್ಲರಿಗೆ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ದೇವೇಗೌಡರಿಂದ ಸಂತಾಪ: ಸಿದ್ದೇಶ್ವರ ಸ್ವಾಮೀಜಿ ಅಗಲಿಕೆಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ. ದೇಶ ಕಂಡ ಶ್ರೇಷ್ಠ ಸಂತರು, ಆಧ್ಯಾತ್ಮಿಕ ಪ್ರವಚನಕಾರರಾದ ಸಿದ್ದೇಶ್ವರ ಸ್ವಾಮೀಜಿ ಅವರು ಲಿಂಗೈಕ್ಯರಾದ ಸುದ್ದಿ ತಿಳಿದು ಮನಸ್ಸಿಗೆ ಅತೀವ ದುಃಖ ಉಂಟು ಮಾಡಿದೆ ಎಂದು ದೇವೇಗೌಡರು ಕಂಬನಿ ಮಿಡಿದಿದ್ದಾರೆ.
ಸಚಿವ ಅಶ್ವತ್ಥನಾರಾಯಣ ಕಣ್ಣೀರು: ಸಿದ್ದೇಶ್ವರ ಸ್ವಾಮೀಜಿಗಳ ಲಿಂಗೈಕ್ಯಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ​ನಾರಾಯಣ ಕಣ್ಣೀರು ಹಾಕಿದ್ದಾರೆ. ಸ್ವಾಮೀಜಿಯವರು ತಮ್ಮ ನಿಷ್ಕಾಮ ಕರ್ಮದಿಂದಾಗಿ 'ನಡೆದಾಡುವ ದೇವರು' ಎಂದೇ ಜನಮಾನಸದಲ್ಲಿ ಹೆಸರಾಗಿದ್ದರು. ತಾವು ಪಡೆದದ್ದೆಲ್ಲವನ್ನೂ ಸಮಾಜಕ್ಕೆ ಸಲ್ಲಿಸಬೇಕೆಂಬುದೇ ಅವರ ಬದುಕಿನ ಪರಮ ಧ್ಯೇಯವಾಗಿತ್ತು. ಪ್ರತಿಯೊಂದು ವಸ್ತುವಿನಲ್ಲೂ ಭಗವಂತನ ಚೈತನ್ಯವನ್ನು ಅನುಭವಿಸಿ, ಅದನ್ನು ಬೇರೆಯವರಿಗೂ ಮನ ಮುಟ್ಟುವಂತೆ ವಿವರಿಸುತ್ತಿದ್ದರು ಎಂದು ಅವರು ಸ್ಮರಿಸಿದ್ದಾರೆ.

ನಡೆದಾಡುವ ದೇವರು, ವಿಜಯಪುರದ ಜ್ಞಾನಯೋಗಾಶ್ರಮದ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿ ಅವರ ಅಗಲುವಿಕೆಯಿಂದ ಅತೀವ ದುಃಖವಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸಂತಾಪ ಸೂಚಿಸಿದ್ದಾರೆ.

(ಓದಿ: ವಿರಮಿಸಿದ ವಿಜಯಪುರದ ವಿರಾಗಿ.. ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀ ಅಗಲಿಕೆಯಿಂದ ಬಡವಾದ ಕರುನಾಡು )

ಆಧ್ಯಾತ್ಮಿಕ ಕೊಂಡಿ: ನಿಸ್ವಾರ್ಥ ಸೇವೆ, ಮಮಕಾರಗಳಿಲ್ಲದೆ, ಯಾರ ಹಂಗಿಗೂ ಒಳಗಾಗದೆ ಸರ್ವಜನರಿಂದಲೂ ಪ್ರೀತಿ, ವಿಶ್ವಾಸದ ಖನಿಜವಾಗಿದ್ದ ಪರಮ ಪೂಜ್ಯ ಸಿದ್ಧೇಶ್ವರ ಸ್ವಾಮೀಜಿ ಅವರ ಪ್ರವಚನ ಕೇಳಿದವರು ಅದರಲ್ಲೇ ಅನುರಕ್ತರಾಗಿ ಬಿಡುತ್ತಿದ್ದರು. ಅವರ ಪ್ರವಚನ ಕಾರ್ಯಕ್ರಮ ಎಲ್ಲಿ ಏರ್ಪಡಿಸಿದರೂ ಸಹ ಅಲ್ಲಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು. ಒಂದು ಗಂಟೆಯ ಅವರ ಪ್ರವಚನದುದ್ದಕ್ಕೂ ಸೇರಿದ ಅಷ್ಟು ತುಂಬು ತನ್ಮಯತೆಯಿಂದ ಕುಳಿತು ಪ್ರವಚನ ಆಲಿಸುತ್ತಿದ್ದರು. ನಿಸರ್ಗವನ್ನು ಅತ್ಯಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಗುರುಗಳು ಇಂದು ನಮ್ಮನ್ನು ಅಗಲಿರುವುದು ಅಪಾರ ದುಃಖ ತಂದಿದೆ. ಅವರ ಅಗಲುವಿಕೆಯಿಂದ ನಾಡಿನ ಆಧ್ಯಾತ್ಮಿಕ ಕೊಂಡಿಯೊಂದು ಕಳಚಿದಂತಾಗಿದೆ ಎಂದು ಸಚಿವ ಗೋವಿಂದ ಕಾರಜೋಳ ಕಂಬನಿ ಮಿಡಿದಿದ್ದಾರೆ.

ಸಚಿವ ನಿರಾಣಿ ಸಂತಾಪ: ವಿಜಯಪುರದ ಸಿದ್ದೇಶ್ವರ ಸ್ವಾಮೀಜಿ ನಡೆದಾಡುವ ವಿಶ್ವಕೋಶ. ಅವರ ಜ್ಞಾನ ಬೋಧನೆಯ ಲಾಭ ಪಡೆದು ಸನ್ಮಾರ್ಗದಲ್ಲಿ ನಡೆಯಬೇಕು. ಇವರ ಜ್ಞಾನ ಖ್ಯಾತಿ ದೇಶ-ವಿದೇಶಗಳಲ್ಲಿ ಪಸರಿಸಿದೆ. ಇಂತಹ ಮಹಾನ್‌ ಜ್ಞಾನಿಯ ಜ್ಞಾನ ಸುಧೆಯ ಬೆಳಕಿನಲ್ಲಿ ಎಲ್ಲರೂ ಮುನ್ನಡೆಯುವ ಅಗತ್ಯವಿದ್ದು, ಇದುವೇ ಅವರಿಗೆ ನಾವು ಸಲ್ಲಿಸುವ ನಿಜವಾದ ಗೌರವ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ಆರ್ ನಿರಾಣಿ ಕಂಬನಿ ಮಿಡಿದಿದ್ದಾರೆ.

ಅತೀವ ನೋವುಂಟಾಗಿದೆ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರು, ಮಾಜಿ ಸಚಿವರು ಶಾಸಕರು ಹಾಗೂ ಕಾಂಗ್ರೆಸ್​​ನ ಹಿರಿಯ ನಾಯಕರು ಶ್ರೀಗಳ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.

ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯರಾದ ಸುದ್ದಿ ಕೇಳಿ ಮನಸ್ಸಿಗೆ ಬಹಳ ಬೇಸರವಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಗುಣಮುಖರಾಗಲಿ ಎಂದು ನಾನು ಸೇರಿದಂತೆ ಅವರ ಭಕ್ತವೃಂದ ದೇವರಲ್ಲಿ ಪ್ರಾರ್ಥನೆ ಮಾಡಿತ್ತು. ತಮ್ಮ ಪ್ರವಚನಗಳ ಮೂಲಕ ಅಸಂಖ್ಯ ಮಂದಿಯ ಮನಪರಿವರ್ತನೆ ಜತೆಗೆ ಸಮಾಜದ ಬದಲಾವಣೆಗೆ ಕಾರಣರಾಗಿದ್ದ ಸ್ವಾಮೀಜಿಗಳು ಮಹಾನ್ ಮಾನವತಾವಾದಿಗಳು. ಅವರ ಪ್ರವಚನಗಳಿಂದ ಅನೇಕರು ಪ್ರಭಾವಿತರಾಗಿ, ಸ್ಫೂರ್ತಿ ಪಡೆದು ಸಮಾಜಸೇವೆಯಲ್ಲಿ ತಮ್ಮನ್ನೂ ತೊಡಗಿಸಿಕೊಂಡಿದ್ದಾರೆ. ಅವರ ಪ್ರವಚನಗಳಿಂದ ಪ್ರಭಾವಿತನಾಗಿ ನಾನೂ ಸಹ ಅವರ ಭಕ್ತಗಣ ಸೇರಿದ್ದೆ ಎಂದು ಸ್ಮರಿಸಿದ್ದಾರೆ.

ನಿನ್ನೆ ಸಂಜೆ ಶ್ರೀಗಳು ಅಸ್ತಂಗತ: ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ಅವರು ಸೋಮವಾರ ಸಂಜೆ 6.05 ನಿಮಿಷಕ್ಕೆ ಕೊನೆಯುಸಿರೆಳೆದರು. ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದಲ್ಲಿ ಜನಿಸಿದ್ದ ಅವರು ಎರಡನೇ ವಿವೇಕಾನಂದ ಎಂಬ ಖ್ಯಾತಿ ಪಡೆದಿದ್ದರು.

ಅಂತಿಮ ದರ್ಶನಕ್ಕೆ ವ್ಯವಸ್ಥೆ, ಸಂಜೆ ಅಂತ್ಯಸಂಸ್ಕಾರ: ಸಂಜೆ ಇಂದು ಮಧ್ಯಾಹ್ನ 3 ಗಂಟೆಯವರೆಗೂ ಭಕ್ತರಿಗೆ ಅಂತಿಮ ದರ್ಶನ ಮಾಡಿಸಿದ ಬಳಿಕ ಸಂಜೆ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯಲಿದೆ ಎಂದು ವಿಜಯಪುರದ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ವಿರಮಿಸಿದ ಜ್ಞಾನಯೋಗಿ.. ಶ್ರೇಷ್ಠ ಸಂತ ಸಿದ್ದೇಶ್ವರ ಸ್ವಾಮೀಜಿ ಅಸ್ತಂಗತ

Last Updated : Jan 3, 2023, 12:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.