ETV Bharat / state

ಸಿದ್ದೇಶ್ವರ ಶ್ರೀ ಮಾತು, ಕೃತಿಗಳೆರಡರಲ್ಲೂ ಸಾಮ್ಯತೆ ಕಾಪಾಡಿಕೊಂಡಿದ್ದರು: ಸಂಸದ ತೇಜಸ್ವಿ ಸೂರ್ಯ

author img

By ETV Bharat Karnataka Team

Published : Dec 30, 2023, 2:05 PM IST

Updated : Dec 30, 2023, 2:58 PM IST

ಸಿದ್ದೇಶ್ವರ ಶ್ರೀಗಳ ಗುರುನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಸದ ತೇಜಸ್ವಿ ಸೂರ್ಯ ಅವರು 'ಯುವಕರು ಮತ್ತು ದೇಶಪ್ರೇಮ' ವಿಷಯದ ಕುರಿತು ಮಾತನಾಡಿದರು.

MP Tejaswi Surya
ಸಂಸದ ತೇಜಸ್ವಿ ಸೂರ್ಯ

ಸಂಸದ ತೇಜಸ್ವಿ ಸೂರ್ಯ

ವಿಜಯಪುರ: "ಆಧ್ಯಾತ್ಮ ಅನ್ನೋದು ಕೇವಲ ಮಾತುಗಳಿಗೆ, ಪುಸ್ತಕಗಳ ಬರಹಗಳಿಗೆ ಸೀಮಿತವಾಗಿರುವ ಈ ಸಂದರ್ಭದಲ್ಲಿ ಅನುಷ್ಠಾನಗೊಳಿಸಬಲ್ಲ ಪರಮ ವ್ಯಕ್ತಿಗಾಗಿ ಸಮಾಜ ಹಿಂದಿನಿಂದಲೂ ಹುಡುಕಾಟದಲ್ಲಿ ಇದೆ. ಸಿದ್ದೇಶ್ವರ ಶ್ರೀಗಳು ಮಾತು, ಕೃತಿಗಳೆರಡರಲ್ಲೂ ಸಾಮ್ಯತೆ ಕಾಪಾಡಿಕೊಂಡು ಬಂದಿದ್ದು ಅವರ ಮೇಲಿನ ಗೌರವ ವೃದ್ಧಿಗೆ ಪ್ರೇರಣೆ" ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.

ಪರಮಪೂಜ್ಯ ಜ್ಞಾನಯೋಗಾಶ್ರಮದ ಸಂತ ಶ್ರೇಷ್ಠ ಶ್ರೀ ಸಿದ್ದೇಶ್ವರ ಸ್ವಾಮೀಜಿಯ ಗುರುನಮನ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ನಡೆದ 'ಯುವಕರು ಮತ್ತು ದೇಶಪ್ರೇಮ' ವಿಷಯದ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಜೀವನೋತ್ಸಾಹ ಇರುವ ಪ್ರತಿಯೊಬ್ಬರೂ ಯುವಕರೇ ಎಂಬುದು ಸಿದ್ದೇಶ್ವರ ಶ್ರೀಗಳ ಅಭಿಮತ. ಸದೃಢ ರಾಷ್ಟ್ರ ನಿರ್ಮಾಣಕ್ಕೆ ಭದ್ರ ನೈತಿಕ ತಳಹದಿ, ಅಪರಿಮಿತ ಪರಿಶ್ರಮದ ಅವಶ್ಯಕತೆ ಕುರಿತಾಗಿ ಶ್ರೀಗಳ ಮಾತುಗಳನ್ನು ಇದೇ ಸಂದರ್ಭದಲ್ಲಿ ನೆನೆದು, ಅವರ ಚಿಂತನೆಗಳ ಅಡಿಪಾಯದಲ್ಲಿ ರಾಷ್ಟ್ರ ನಿರ್ಮಾಣದ ಕುರಿತಾಗಿ ಶ್ರೀಗಳ ಆಶ್ರಮದಲ್ಲಿ ಮಾತನಾಡಲು ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ ಎಂದು ಅವರು ತಿಳಿಸಿದರು.

ಸಚಿವ ಶಿವಾನಂದ ಪಾಟೀಲ್‌ ಪುತ್ರ ಸತ್ಯಜಿತ್‌ ಪಾಟೀಲ್‌ ಕೂಡ ಗೋಷ್ಠಿಯಲ್ಲಿ ಪಾಲ್ಗೊಂಡು ಮನೋಜ್ಞವಾಗಿ ಮಾತನಾಡಿ ಗಮನ ಸೆಳೆದರು. ಪ್ರತಿದಿನದಂತೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಶ್ರೀಗಳ ಆಶ್ರಮಕ್ಕೆ ಭೇಟಿ ನೀಡಿದರು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಗೋಷ್ಠಿಯಲ್ಲಿ ಪಾಲ್ಗೊಂಡು ಯುವ ಸಮೂಹದ ಮಾತುಗಳನ್ನಾಲಿಸಿದರು. ಸಂಸದ ತೇಜಸ್ವಿ ಸೂರ್ಯ ಮತ್ತು ಸತ್ಯಜಿತ್‌ ಪಾಟೀಲ್​ ಅವರನ್ನು ಆಶ್ರಮದ ವತಿಯಿಂದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಂಸದ ತೇಜಸ್ವಿ ಸೂರ್ಯ, "ಒಬ್ಬರನ್ನೊಬ್ಬರು ಬೈಯುವವರು, ಹಾವು ಮುಂಗುಸಿಗಳಂತೆ ಆಡುವವರು ಎಲ್ಲಾ ಸೇರಿ ಅಲಯನ್ಸ್​ ಮಾಡಿಕೊಂಡಿದ್ದಾರೆ. ದಿನಬೆಳಗಾದರೆ ಆಮ್​ ಆದ್ಮಿ, ಟಿಎಂಸಿಯವರು ಕಾಂಗ್ರೆಸ್​ಗೆ ಬೈತಾರೆ. ಇಂತಹವರೆಲ್ಲ ಸೇರಿಕೊಂಡು I.N.D.I.A ಅಲಯನ್ಸ್‌ನಲ್ಲಿ ಮಾಡಿದ್ದಾರೆ. ಅಲಯನ್ಸ್ ಪಾರ್ಟ್​ನರ್‌ಗಳ ಸಂಬಂಧ ಇದು" ಎಂದು INDIA ಅಲಯನ್ಸ್ ವಿರುದ್ಧ ತೇಜಸ್ವಿ ಸೂರ್ಯ ವಾಗ್ದಾಳಿ ನಡೆಸಿದ್ದಾರೆ.

"ಕಾಂಗ್ರೆಸ್ ಪಾರ್ಟಿಯಲ್ಲೂ ಒಗ್ಗಟ್ಟಿಲ್ಲ. ಟಿಎಂಸಿಯವರು ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಆಗಲಿ ಅಂತಾರೆ. ಆದರೆ ಕಾಂಗ್ರೆಸ್ ಮಾತ್ರ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆಂಬಲ ಕೊಡ್ತಿಲ್ಲ. ಹಾವು ಮುಂಗುಸಿ ಒಗ್ಗಟ್ಟಿಗೆ ಬಂದರೆ ಸಮ್ಮಿಶ್ರ ಪಡೆ ಕಟ್ಟಲಿಕ್ಕಾಗತ್ತಾ? ಇದೊಂದು ಅನ್ ನ್ಯಾಚುರಲ್ ಅಲಯನ್ಸ್. ಶುರುವಾದಾಗಿನಿಂದಲೇ ಸ್ಟಾರ್ಟಿಂಗ್ ಪ್ರಾಬ್ಲಂ ಇದೆ. ಇಂಥವರು ದೇಶದ ಒಗ್ಗಟ್ಟು ಹೇಗೆ ತರೋಕೆ ಸಾಧ್ಯ?" ಎಂದು ಪ್ರಶ್ನಿಸಿದ್ದಾರೆ.

"ಪ್ರಧಾನಿ ಪಟ್ಟಕ್ಕೆ ಟಿಎಂಸಿ, ಶಿವಸೇನೆ ಖರ್ಗೆ ಅವರ ಹೆಸರನ್ನು ಸೂಚಿಸಿದ್ದಾರೆ. ಆದರೆ ಸೋನಿಯಾ ಗಾಂಧಿ, ಸಿದ್ದರಾಮಯ್ಯ ಅವರ ಮೂಲಕ ರಾಹುಲ್ ಗಾಂಧಿ ಪ್ರಧಾನಿಯಾಗಲಿ ಎಂದು ಹೇಳಿಕೆ‌ ಕೊಡಿಸುವ ಹಿಂದಿನ ಪಾರುಪತ್ಯ ಮುಂದುವರೆಸುತ್ತಿದ್ದಾರೆ. ಅಲಯನ್ಸ್​ಗೆ ಹಳ್ಳಿಗಳಲ್ಲಿ ಕೇಡರ್ ಇಲ್ಲ, ಮೇಲ್ಮಟ್ಟದಲ್ಲಿ ಲೀಡರ್ ಇಲ್ಲ" ಎಂದು ಹೇಳಿದರು.

ಬಿಎಸ್​ವೈ ವಿರುದ್ಧ ಯತ್ನಾಳ್ 40 ಸಾವಿರ‌ ಕೋಟಿ ರೂ. ಕೋವಿಡ್ ಹಗರಣ ಆರೋಪ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ, "ಇದು ರಾಜಕೀಯ ಕಾರ್ಯಕ್ರಮ ಅಲ್ಲ" ಎಂದು ನಯವಾಗಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಬಿಜೆಪಿ ಶಾಸಕ ಬಸನಗೌಡ ಯತ್ನಾಳ್​ ಅವರನ್ನು ಪಕ್ಷದಿಂದ ಉಚ್ಚಾಟಿಸುತ್ತಾರಾ ಎನ್ನುವ ಪ್ರಶ್ನೆಗೆ "ನಂತರದಲ್ಲಿ ಎಲ್ಲದಕ್ಕೂ ಉತ್ತರ ಕೊಡುವೆ" ಎಂದು ತೇಜಸ್ವಿ ಹೇಳಿದರು.

ಇದನ್ನೂ ಓದಿ: ಸಿದ್ದೇಶ್ವರ ಶ್ರೀಗಳ ತತ್ವಾದರ್ಶ ಪಠ್ಯಪುಸ್ತಕದಲ್ಲಿ ಅಳವಡಿಸಬೇಕು: ಸ್ವೀಕರ್​ ಯು.ಟಿ. ಖಾದರ್‌

Last Updated : Dec 30, 2023, 2:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.