ETV Bharat / state

ಬಿಎಸ್​​ವೈ ಬಗ್ಗೆ ಅಪಾರವಾದ ಗೌರವ ಇದೆ.. ಅವರ ಬಗ್ಗೆ ಮಾತಾಡಬೇಡ ಎಂದಿದ್ದಾರೆ, ನೀವೂ ಪ್ರಶ್ನೆ ಕೇಳಬೇಡಿ: ಯತ್ನಾಳ್​

author img

By

Published : Jan 26, 2023, 7:45 PM IST

Updated : Jan 26, 2023, 7:52 PM IST

ಸಿಎಂ ಬದಲಾವಣೆ ಮಾಡಲು 70 ಶಾಸಕರು ಸಹಿ‌ ಮಾಡಿದ್ದಾರೆ ಎನ್ನುವುದು ಸುಳ್ಳು ; ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿಕೆ - ಪಕ್ಷದ ಶಿಸ್ತು ಸಮಿತಿಯಿಂದ ನಮಗೆ ಯಾವುದೇ ನೋಟಿಸ್ ಬಂದಿಲ್ಲ - ಬಸವನಗೌಡ ಸ್ಪಷ್ಟನೆ

ಶಾಸಕ ಬಸನಗೌಡ ಪಾಟೀಲ ಯತ್ನಾಳ್
ಶಾಸಕ ಬಸನಗೌಡ ಪಾಟೀಲ ಯತ್ನಾಳ್

ಬಿಎಸ್​ವೈ ಬಗ್ಗೆ ಗೌರವವಿದೆ ಎಂದ ಶಾಸಕ ಬಸನಗೌಡ ಪಾಟೀಲ ಯತ್ನಾಳ್

ವಿಜಯಪುರ: ತಮಗೆ ಹೈಕಮಾಂಡ್​ನಿಂದ ಯಾವುದೇ ನೋಟಿಸ್ ಬಂದಿಲ್ಲ. ಇದೊಂದು ಮಾಧ್ಯಮ‌ ಸೃಷ್ಟಿಯಾಗಿದೆ. ನಾನು ಶಾಸಕನಾಗಿರುವ ಕಾರಣ ಕೇಂದ್ರ ಶಿಸ್ತು ಸಮಿತಿ ವಿಚಾರಿಸಬೇಕು. ರಾಜ್ಯ ನಾಯಕರು ವಿಚಾರಿಸುವ ಹಕ್ಕಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಸ್ಪಷ್ಟಪಡಿಸಿದ್ದಾರೆ.

ಬಿಎಸ್​ವೈ ಬಗ್ಗೆ ಗೌರವವಿದೆ: ಸದಾ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರನ್ನು ಟಾರ್ಗೆಟ್ ಮಾಡುತ್ತಿದ್ದ ಯತ್ನಾಳ್​, ಅವರ ಬಗ್ಗೆ ಅಪಾರ ಗೌರವ ಇದೆ ಎನ್ನುವ ಮೂಲಕ ಅಚ್ಚರಿ ಮೂಡಿಸಿದರು. ಕೇಂದ್ರ ನಾಯಕರು ತಮ್ಮ ಜತೆ ಮಾತನಾಡಿದ್ದಾರೆ. ನಿಮ್ಮದೇ ಆದ ಗೌರವವಿದೆ. ಅದನ್ನು ಕಾಪಾಡಿಕೊಳ್ಳಿ. ಬಿಎಸ್​ವೈ ಹಿರಿಯ ನಾಯಕರು. ಅವರ ಬಗ್ಗೆ ಅನಾವಶ್ಯಕವಾಗಿ ಮಾತನಾಡಬೇಡಿ ಎಂದಿದ್ದಾರೆ. ಇನ್ನು ಮುಂದೆ ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ನೀವೂ ಸಹ ಅವರ ಬಗ್ಗೆ ಪ್ರಶ್ನೆ ಕೇಳಬೇಡಿ ಎಂದು ಮಾಧ್ಯಮದವರಿಗೆ ಮನವಿ ಮಾಡಿದರು.

ಸಿಎಂ ಬದಲಾವಣೆಗೆ ಯಾರೂ ಪತ್ರ ಬರೆದಿಲ್ಲ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬದಲಾವಣೆ ಕೇವಲ ಊಹಾಪೋಹವಷ್ಟೇ ಅವರನ್ನು ಬದಲಿಸುವ ಚಿಂತನೆ ಎಲ್ಲಿಯೂ ನಡೆದಿಲ್ಲ. ಮುಂದಿನ ಚುನಾವಣೆ ಸಾಮೂಹಿಕ‌ ನಾಯಕತ್ವದಲ್ಲಿ ನಡೆಯಲಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಅವರು ಹೇಳಿದ್ದಾರೆ. ವಿಜಯಪುರದಲ್ಲಿ‌ ಮಾತನಾಡಿದ ಅವರು, ಸಿಎಂ ಬದಲಾವಣೆ ಮಾಡಲು 70 ಶಾಸಕರು ಸಹಿ‌ ಮಾಡಿದ್ದಾರೆ ಎನ್ನುವುದು ಸುಳ್ಳು. ಇನ್ನೇನು ಎರಡು ತಿಂಗಳಲ್ಲಿ ವಿಧಾನಸಭೆ ಚುನಾವಣೆ ಬರಲಿದೆ. ಈ ಸಮಯದಲ್ಲಿ ಸಿಎಂ ಬದಲಾವಣೆ ಮಾಡಲು ಯಾರೂ ಹೋಗುವುದಿಲ್ಲ. ರಾಷ್ಟ್ರೀಯ ನಾಯಕರ ಮಾರ್ಗದರ್ಶನದಲ್ಲಿ ಮುಂದಿನ ಚುನಾವಣೆಯನ್ನು ಸಾಮೂಹಿಕ‌ ನಾಯಕತ್ವದಲ್ಲಿ ಎದುರಿಸಲಾಗುವುದು ಎಂದರು.‌

ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಸಿಎಂ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿದರು

ಮೊದಲು‌‌ ಕ್ಷೇತ್ರ ಗಟ್ಟಿ ಮಾಡಿಕೊಳ್ಳಲಿ: ಪದೇ ಪದೆ ಪ್ರಧಾನಿ ಮೋದಿಯನ್ನು ರಾಜ್ಯಕ್ಕೆ ಕರೆಯಿಸಿಕೊಂಡು ಅವರ ಮುಖಾಂತರ ಬಿಜೆಪಿ ನಾಯಕರು ಮತಯಾಚಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಯತ್ನಾಳ್, ಅವರು ದೇಶದ ಪ್ರಧಾನಿ ಅವರನ್ನು‌ ಕರೆಯಿಸಿ ಕೊಳ್ಳುವುದರಲ್ಲಿ ಏನು ತಪ್ಪಿದೆ?. ಸಿದ್ದರಾಮಯ್ಯ ಅವರು ಮೊದಲು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವುದನ್ನು ದೃಢಪಡಿಸಿಕೊಳ್ಳಲಿ.

ಐದು ವರ್ಷ ಸಿಎಂ ಆದವರು, ಹಿರಿಯ ರಾಜಕಾರಣಿಗಳಾದ ಸಿದ್ದರಾಮಯ್ಯ ಕ್ಷೇತ್ರ ಹುಡುಕುವ ಪರಿಸ್ಥಿತಿ ಬಂದಿದೆ. ಸ್ವಂತ ನೆಲೆ ಇಲ್ಲ, ಒಮ್ಮೆ ಕೋಲಾರ ಎನ್ನುತ್ತಾರೆ, ಇನ್ನೊಮ್ಮೆ ಅವರ ಪುತ್ರನ ಕ್ಷೇತ್ರ ವರುಣಾ ಎನ್ನುತ್ತಿದ್ದಾರೆ. ಅವರಿಗೆ ನೆಲೆ ಇಲ್ಲ, ಇನ್ನೂ ಅವರನ್ನು ಸೋಲಿಸಲು ಡಿಕೆಶಿ ಟೀಮ್ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದೆ. ಸಿಎಂ ಆಗುವ ಸ್ಪರ್ಧೆ ಅವರಲ್ಲಿ ಹೆಚ್ಚಾಗಿದೆ ಎಂದು ಲೇವಡಿ‌ ಮಾಡಿದರು.

ಎಲ್ಲರೂ ಮೆಚ್ಚುವಂತಹ ನಿರ್ಣಯ ತೆಗೆದುಕೊಳ್ಳಲಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಕುರಿತು ಕೇಂದ್ರ ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ. ಶೀಘ್ರ ಸಿಹಿ ಸುದ್ದಿ ದೊರೆಯಲಿದೆ ಎಂದು ಯತ್ನಾಳ್​ ವಿಶ್ವಾಸ ವ್ಯಕ್ತಪಡಿಸಿದರು. ಸೂಕ್ತ ಕಾಲದಲ್ಲಿ ಮೀಸಲಾತಿ ಬಗ್ಗೆ ಎಲ್ಲ ಸಮುದಾಯದವರಿಗೂ ಮೆಚ್ಚುವಂತಹ ನಿರ್ಣಯ ತೆಗೆದುಕೊಳ್ಳಲಿದೆ. ಅದಕ್ಕಾಗಿ ನಾವು ಕಾಯುತ್ತಿದ್ದೇವೆ. ಸಿಹಿ ಸುದ್ದಿ ದೊರೆಯುವ ವಿಶ್ವಾಸವಿದೆ ಎಂದರು.

ಸಿಬಿಐ ತನಿಖೆಯಾಗಲಿ : ಮತದಾರರಿಗೆ 6ಸಾವಿರ ರೂ. ನೀಡಿ ಎನ್ನುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆಗೆ ಧ್ವನಿಗೂಡಿಸಿದ ಯತ್ನಾಳ್​, ಅವರೇ ಹೇಳಿದ್ದಾರೆ ಪ್ರಕರಣ ಸಿಬಿಐಗೆ ನೀಡಿ ಎಂದು. ನಾನು ಸಹ ಒತ್ತಾಯ ಮಾಡುವುದಾಗಿ ಹೇಳಿದರು. ತಾವು ಸಹ ಸಿಎಂಗೆ ಹಿಂದೆ ಪತ್ರ ಬರೆದಿದ್ದೆ. ಆದರೆ ಅದಕ್ಕೆ ಇನ್ನೂ ಸಿಎಂ ಉತ್ತರ ನೀಡಿಲ್ಲ ಎಂದರು.

ಓದಿ : ಮೋದಿ ಅಮಿತ್ ಶಾ ಬಂದ ಕಡೆ ಕಮಲ ಅರಳುತ್ತೆ: ಸಚಿವ ಆರ್.ಅಶೋಕ್ ವಿಶ್ವಾಸ

Last Updated :Jan 26, 2023, 7:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.